ದಾವಣಗೆರೆ . ಮಾ.05
ರಾಜೀ ಅಥವಾ ಸಂಧಾನದ ಮೂಲಕ ಪ್ರಕರಣಗಳನ್ನು
ಸುಲಭವಾಗಿ, ಶೀಘ್ರವಾಗಿ ಮತ್ತು ಶುಲ್ಕರಹಿತವಾಗಿ
ಇತ್ಯರ್ಥಪಡಿಸಿಕೊಳ್ಳಲು ಅವಕಾಶ ನೀಡುವ ‘ಬೃಹತ್ ಲೋಕ್
ಅದಾಲತ್’ ಇದೇ ಮಾರ್ಚ್ 27 ರಂದು ಜಿಲ್ಲೆಯಾದ್ಯಂತ
ನಡೆಯಲಿದ್ದು, ಸಾರ್ವಜನಿಕರು ಇದರ ಸದುಪಯೋಗ
ಪಡೆಯಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ
ನ್ಯಾಯಾಧೀಶರಾದ ಗೀತಾ.ಕೆ.ಬಿ ತಿಳಿಸಿದರು.
ಶುಕ್ರವಾರ ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಬೃಹತ್
ಲೋಕ್ ಅದಾಲತ್ ಕುರಿತು ಮಾಧ್ಯಮದವರಿಗೆ ಮಾಹಿತಿ ನೀಡಲು
ಕರೆಯಲಾಗಿದ್ದ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ
ಮಾತನಾಡಿದ ಅವರು, ಮಾರ್ಚ್ 27 ರಂದು ಬೃಹತ್ ಲೋಕ್ ಅದಾಲತ್
ಮೂಲಕ ಅತಿ ಹೆಚ್ಚು ಪ್ರಕರಣಗಳನ್ನು ವಿಲೇವಾರಿ ಮಾಡಿ
ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂಬ ಉದ್ದೇಶದಿಂದ
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ
ಜಿಲ್ಲೆಯಲ್ಲಿರುವ ಎಲ್ಲಾ ತಾಲ್ಲೂಕು ಕಾನೂನು ಸೇವಾ
ಸಮಿತಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಜಿಲ್ಲಾ ಮತ್ತು
ತಾಲ್ಲೂಕು ಮಟ್ಟದಲ್ಲಿ ಲೋಕ ಅದಾಲತ್ ನಡೆಸಲು ಎಲ್ಲ ಸಿದ್ದತೆ
ಮಾಡಿಕೊಂಡಿವೆ ಎಂದರು.
ಲೋಕ್ ಅದಾಲತ್ ಮೂಲಕ ತೀವ್ರತರವಾದ ಕ್ರಿಮಿನಲ್
ಪ್ರಕರಣಗಳನ್ನು ಹೊರತುಪಡಿಸಿ ಎಲ್ಲ ರೀತಿಯ
ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುವುದು. ಒಂದು
ಪ್ರಕರಣಕ್ಕೆ ಸಂಬಂಧಿಸಿದ ಎರಡೂ ಪಕ್ಷಗಾರರು ಒಪ್ಪಿ, ರಾಜೀ
ಸಂಧಾನದ ಮೂಲಕ ಪ್ರಕರಣಗಳನ್ನು
ಇತ್ಯರ್ಥಪಡಿಸಲಾಗುವುದರಿಂದ ಸೌಹಾರ್ದತೆ ಮತ್ತು ಸಾಮಾಜಿಕ
ಆರೋಗ್ಯ ವೃದ್ದಿಯಾಗುತ್ತದೆ. ಜೊತೆಗೆ ಕೋರ್ಟಿಗೆ
ಅಲೆದಾಡದೇ ಸಮಯ ಉಳಿತಾಯದೊಂದಿಗೆ ಕಟ್ಟಲಾದ ಶುಲ್ಕ
ಸಹ ಮರುಪಾವತಿಯಾಗುತ್ತದೆ. ಹಾಗೂ ಲೋಕ್ ಅದಾಲತ್ನಲ್ಲಿ
ಆದ ಆದೇಶದ ಮೇಲೆ ಯಾವುದೇ ಮೇಲ್ಮನವಿ ಮತ್ತು ರಿವಿಜನ್
ಅರ್ಜಿ ಹಾಕಲು ಬರುದಿಲ್ಲವಾಗಿದ್ದು ಈ ತೀರ್ಪು ಅಂತಿಮವಾಗಿರುತ್ತದೆ.
ಸೆ.19 ರಂದು ಕೊರೊನಾ ಹಿನ್ನೆಲೆಯಲ್ಲಿ ನಡೆಸಲಾಗದ ಇ-
ಲೋಕ್ ಅದಾಲತ್(ಆನ್ಲೈನ್)ನಲ್ಲಿ ಕೂಡ ಅತ್ಯಂತ ಹೆಚ್ಚಿನ
ಪ್ರಕರಣಗಳು ಅಂದರೆ ಜಿಲ್ಲೆಯಲ್ಲಿ 4921
ಪ್ರಕರಣಗಳನ್ನು ಇತ್ಯರ್ಥಪಡಿಸಿ ರೂ.4,47,22,331 ಪರಿಹಾರ
ಮೊತ್ತವನ್ನು ಒದಗಿಸಲಾಗಿರುತ್ತದೆ.
ಡಿ.19 ರಂದು ನಡೆದ ಇ-ಲೋಕ್ ಅದಾಲತ್ನಲ್ಲಿ 3988
ಪ್ರಕರಣಗಳು ಇತ್ಯರ್ಥಗೊಂಡು ರೂ.10,16,32,218 ಪರಿಹಾರ
ಮೊತ್ತ ಒದಗಿಸಲಾಗಿರುತ್ತದೆ. ಈ ಬೃಹತ್ ಲೋಕ್ ಅದಾಲತ್ಗಳಿಗೆ
ಸಾರ್ವಜನಿಕರು, ವಕೀಲರು ಮತ್ತು ಕಕ್ಷಿದಾರರು ತುಂಬಾ
ಸಹಕಾರ ನೀಡಿದ್ದು ಅವರನ್ನು ಈ ಸಂಧರ್ಭದಲ್ಲಿ
ಅಭಿನಂದಿಸುತ್ತೇನೆ ಎಂದರು.
ಈ ಲೋಕ್ ಅದಾಲತ್ನ ಪ್ರತಿಯೊಂದು ಪೀಠದಲ್ಲಿ ಒಬ್ಬರು ಹಾಲಿ
ನ್ಯಾಯಾಧೀಶರು ಹಾಗೂ ಒಬ್ಬರು ಪರಿಣಿತ ವಕೀಲರು
ಸಂಧಾನಕಾರರಾಗಿರುತ್ತಾರೆ. ನ್ಯಾಯಾಲಯದಲ್ಲಿ ಚಾಲ್ತಿಯಲ್ಲಿ
ಇರುವ ಹಾಗೂ ಇನ್ನೂ ದಾಖಲು ಮಾಡದೇ ಇರುವ
ರಾಜಿಯಾಗುವಂತಹ ಎಲ್ಲಾ ಪ್ರಕರಣಗಳಲ್ಲಿ ಪಕ್ಷಗಾರರು
ಈ ಪೀಠಗಳ ಮೂಲಕ ತಮ್ಮ ಪ್ರಕರಣಗಳನ್ನು
ಇತ್ಯರ್ಥಪಡಿಸಿಕೊಳ್ಳಬಹುದು.
ಈಗಲೂ ಸಹ ಪಕ್ಷಗಾರರು ತಮ್ಮ ಮನೆಯಿಂದ ಅಥವಾ
ತಮ್ಮ ವಕೀಲರ ಕಚೇರಿಯ ಮೂಲಕ ಪ್ರಕರಣಗಳಲ್ಲಿ
ವೀಡಿಯೋ ಕಾನ್ಫರೆನ್ಸಿಂಗ್ನ ಮೂಲಕ ಹಾಜರಾಗಿ ತಮ್ಮ ತಮ್ಮ
ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಬಹುದು.
- ಗೀತಾ.ಕೆ.ಬಿ, ಪ್ರಧಾನ ಜಿಲ್ಲಾ ಮತ್ತು ಸತ್ರ
ನ್ಯಾಯಾಧೀಶರಾದ
ಕೊರೊನಾ ನಿಯಂತ್ರಣಕ್ಕೆ ಬಂದರೂ ಮಾಸ್ಕ್ ಧರಿಸುವುದು,
ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮಾತ್ರ
ಪಾಲಿಸಬೇಕಾಗಿದೆ. ಇಂತಹ ಸಂದರ್ಭದಲ್ಲಿ ಪಕ್ಷಗಾರರು
ನ್ಯಾಯಲಯಕ್ಕೆ ಬಂದು ಅಥವಾ ಬಾರದೆಯೂ ಕೂಡಾ ತಮ್ಮ
ಪ್ರಕರಣಗಳನ್ನು ಸುಲಭವಾಗಿ ಇತ್ಯರ್ಥ
ಪಡಿಸಿಕೊಳ್ಳಬಹುದು ಎಂದರು.
ಈ ಬಾರಿಯ ಬೃಹತ್ ಲೋಕ್ ಅದಾಲತ್ನಲ್ಲಿ ವಾಹನ ಅಪಘಾತಕ್ಕೆ
ಸಂಬಂಧಿಸಿದ ಪರಿಹಾರ ಪ್ರಕರಣಗಳು, ಪಾಲುವಿಭಾಗ ಕೋರಿ
ಸಲ್ಲಿಸಿರುವ ದಾವೆಗಳು, ಹಣ ವಾಪಾಸಾತಿ ದಾವೆಗಳು, ಬಾಡಿಗೆದಾರ
ಮತ್ತು ಮಾಲೀಕರ ನಡುವಿನ ದಾವೆಗಳು, ಇತರೆ ಸಿವಿಲ್
ವ್ಯಾಜ್ಯಗಳು ಹಾಗೂ ರಾಜಿ ಮಾಡಿಕೊಳ್ಳಬಹುದಾದಂತಹ
ಕ್ರಿಮಿನಲ್ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣಗಳು,
ಜೀವನಾಂಶದ ಅರ್ಜಿ ಪ್ರಕರಣಗಳು, ಕೌಟುಂಬಿಕ
(ವಿಚ್ಛೇದನವನ್ನು ಹೊರತುಪಡಿಸಿ) ಕಲಹಗಳು, ಹಾಗೂ
ವ್ಯಾಜ್ಯ ಪೂರ್ವ ಪ್ರಕರಣಗಳು ಇತ್ಯರ್ಥಪಡಿಸಿಕೊಳ್ಳಬಹುದು.
ಈ ಬಾರಿ ಲೋಕ್ ಅದಾಲತ್ನಲ್ಲಿ ಹೆಚ್ಚಿನ ಪ್ರಕರಣಗಳನ್ನು
ಇತ್ಯರ್ಥಪಡಿಸುವ ಉದ್ದೇಶದಿಂದ ಮೋಟಾರ್ ವಾಹನ ಕಾಯ್ದೆ
ಪ್ರಕರಣಗಳ ಕುರಿತಂತೆ ಅರ್ಜಿದಾರರ ಪರ ಹಾಗೂ ವಿಮಾ
ಕಂಪನಿಯ ಪರ ವಕೀಲರ ಹಾಗೂ ವಿಮಾ ಕಂಪನಿಗಳ
ಅಧಿಕಾರಗಳ ಜೊತೆಯಲ್ಲಿ ನಿರಂತರ ಸಭೆಗಳನ್ನು
ಆಯೋಜಿಸಲಾಗುತ್ತಿದೆ. ಚೆಕ್ ಅಮಾನ್ಯ ಪ್ರಕರಣಗಳ
ಕುರಿತಂತೆ ಕಕ್ಷಿದಾರರು, ವಕೀಲರು, ಹಾಗೂ ಹಣಕಾಸಿನ
ಸಂಸ್ಥೆಗಳ ಜೊತೆಯಲ್ಲಿ ಸಭೆಗಳನ್ನು ಹಾಗೂ ಕ್ರಿಮಿನಲ್
ರಾಜಿ ಮಾಡಿಕೊಳ್ಳಬಹುದಾದ ಪ್ರಕರಣಗಳಲ್ಲಿ ಪೊಲೀಸ್
ಅಧಿಕಾರಿಗಳ ಸಭೆಗಳನ್ನು ಆಯೋಜಿಸಲಾಗುತ್ತಿದೆ. ಇಂತಹ
ಪ್ರಕರಣಗಳಲ್ಲಿ ಎಂ.ಎಂ.ಡಿ.ಆರ್ ಪ್ರಕರಣಗಳು ಸಹ
ಸೇರಿರುತ್ತವೆ. ಎಲ್ಎಸಿ ಪ್ರಕರಣಗಳಲ್ಲಿ ಅದರಲ್ಲೂ ಮುಖ್ಯವಾಗಿ
ತುಂಗಾ ಮೇಲ್ದಂಡೆ ಯೋಜನೆ ಪ್ರಕರಣಗಳಲ್ಲಿ ಅಧಿಕಾರಿಗಳ
ಸಭೆಯನ್ನು ಈಗಾಗಲೇ ಕರೆಯಲಾಗಿರುತ್ತದೆ. ಲೋಕ್
ಅದಾಲತ್ ನಲ್ಲಿ ಬ್ಯಾಂಕ್ ಪ್ರಕರಣಗಳನ್ನು, ಕೌಟುಂಬಿಕ ಕಲಹದ
ಪ್ರಕರಣಗಳನ್ನು, ಜನನ ಮತ್ತು ಮರಣ
ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಗುರಿಯನ್ನು
ಹೊಂದಲಾಗಿದೆ.
ಕಳೆದ ಬಾರಿಯಂತೆ ಮಾ.27 ರಂದು ಸಹ ಲೋಕ್ಅದಾಲತ್ನ
ಉಪಯೋಗವನ್ನು ಸಾರ್ವಜನಿಕರು, ಕಕ್ಷಿದಾರರು
ಪಡೆದುಕೊಂಡು ಅತೀ ಹೆಚ್ಚು ಪ್ರಕರಣಗಳನ್ನು
ಪರಿಹರಿಸಿಕೊಳ್ಳಬೇಕೆಂದು ಈ ಮೂಲಕ ವಿನಂತಿಸುತ್ತಿದ್ದೇನೆ
ಎಂದರು.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಇಮೇಲ್ ಮೂಲಕ ಮತ್ತು
ದೂರವಾಣಿ ಮೂಲಕ ದಾವಣಗೆರೆ ಜಿಲ್ಲೆಯ ಕಾನೂನು
ಸೇವೆಯ ಪ್ರಾಧಿಕಾರದ ಕಚೇರಿಯನ್ನು ಹಾಗೂ ಇ-ಮೇಲ್
ವಿಳಾಸ ಜಟsಚಿಜಚಿvಚಿಟಿgeಡಿe@gmಚಿiಟ.ಛಿom . ನ್ನು ಮತ್ತು ಜಿಲ್ಲಾ ಕಾನೂನು
ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರ
ದೂರವಾಣಿ ಸಂಖ್ಯೆ 08192-296364, 9964924792 ನ್ನು
ಸಂಪರ್ಕಿಸಬಹುದೆಂದು ಅವರು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು
ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ
ಕಾರ್ಯದರ್ಶಿ ಪ್ರವೀಣ್ ನಾಯಕ್ ಮಾತನಾಡಿ, ಲೋಕ ಅದಾಲತ್ಗೆ
ಬ್ಯಾಂಕ್, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು
ಸಹಕರಿಸುವಂತೆ ಮನವಿ ಮಾಡಿದ ಅವರು ಹೆಚ್ಚೆಚ್ಚು
ಪ್ರಕರಣಗಳನ್ನು ಇತ್ಯರ್ಥಪಡಿಸುವ ಮೂಲಕ ಲೋಕ್
ಅದಾಲತ್ ಯಶಸ್ವಿಗೊಳಿಸೋಣ ಎಂದರು.