ಗ್ರಾಮ ವಾಸ್ತವ್ಯ

ಬಗರ್‍ಹುಕುಂ ಸಾಗುವಳಿ ಮತ್ತು ಮನೆಗಳಿಗೆ

ಹಕ್ಕುಪತ್ರ ನೀಡಿಕೆಗೆ ಕ್ರಮ : ಡಿಸಿ

ಬಹುದಿನಗಳಿಂದ ಸಿಗದ ಸರ್ಕಾರಿ ಸೌಲಭ್ಯ ಮತ್ತು
ಸಮಸ್ಯೆಗಳ ಪರಿಹಾರಕ್ಕಾಗಿ ಕಾದು ಕುಳಿತಿದ್ದ ಗ್ರಾಮಸ್ಥರಲ್ಲಿ
ಪರಿಹಾರದ ನಿರೀಕ್ಷೆ ಮತ್ತು ಭರವಸೆಯ ಭಾವ ಮೂಡಿತ್ತು.
ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯಕ್ಕೆ ಸಕಲ ರೀತಿಯಲ್ಲೂ
ಸಜ್ಜುಗೊಂಡು ಶೋಭಿತವಾಗಿದ್ದ ಗ್ರಾಮಗಳಲ್ಲಿ ಹಬ್ಬದ
ವಾತಾವರಣವಿತ್ತು.
      ಶನಿವಾರದಂದು ಚನ್ನಗಿರಿ ತಾಲ್ಲೂಕಿನ ತಿಪ್ಪಗೊಂಡನಹಳ್ಳಿ
ಮತ್ತು ರಾಜಗೊಂಡನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ
ಗ್ರಾಮಗಳಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ನೇತೃತ್ವದ
ಅಧಿಕಾರಿಗಳ ತಂಡದೊಂದಿಗೆ ಶಾಸಕರಾದ ಕೆ.ಮಾಡಾಳ್
ವಿರೂಪಾಕ್ದಪ್ಪನವರು ಸಹ ಸಾಥ್ ನೀಡಿ ಗ್ರಾಮ ವಾಸ್ತವ್ಯ
ಕಾರ್ಯಕ್ರಮವನ್ನು ಸಂಪನ್ನಗೊಳಿಸಿದರು.
   ಮೊದಲಿಗೆ ಮಲ್ಲಿಗೆರೆಯಲ್ಲಿ ಗ್ರಾಮ ವಾಸ್ತವ್ಯದ
ಉದ್ಘಾಟನೆಯನ್ನು ಚನ್ನಗಿರಿ ಕ್ಷೇತ್ರದ ಶಾಸಕರು ಹಾಗೂ
ಕೆಎಸ್‍ಡಿಎಲ್ ಅಧ್ಯಕ್ಷರಾದ ಮಾಡಾಳ್ ವಿರೂಪಾಕ್ಷಪ್ಪ, ಜಿಲ್ಲಾಧಿಕಾರಿ
ಮಹಾಂತೇಶ ಬೀಳಗಿ, ಜಿ.ಪಂ ಸಿಇಓ ಡಾ.ವಿಜಯ ಮಹಾಂತೇಶ
ದಾನಮ್ಮನವರ್, ಜಿ.ಪಂ ಉಪಾಧ್ಯಕ್ಷೆ ಸಾಕಮ್ಮ ಗಂಗಾಧರ
ನಾಯ್ಕ ಸೇರಿದಂತೆ ಮತ್ತಿತರ ಗಣ್ಯರು ನೆರವೇರಿಸಿದರು.
      ಈ ವೇಳೆ ಶಾಸಕರು ಮಾತನಾಡಿ, ತಿಪ್ಪಗೊಂಡನಹಳ್ಳಿ
ಗ್ರಾ.ಪಂ ವ್ಯಾಪ್ತಿಯ ಮಲ್ಲಿಗೆರೆಯ ಅನೇಕ ಗ್ರಾಮಸ್ಥರು
ಸುಮಾರು ವರ್ಷಗಳಿಂದ ಬಗರ್‍ಹುಕುಂ ಸಾಗುವಳಿ
ಮಾಡುತ್ತಿದ್ದು, ಇವರಿಗೆ ಹಕ್ಕು ಪತ್ರ ನೀಡಿಲ್ಲ. ಯಾವಾಗ
ತಮ್ಮನ್ನು ಅರಣ್ಯ ಇಲಾಖೆಯವರು, ಪೊಲೀಸರು
ಒಕ್ಕಲೆಬ್ಬಿಸುತ್ತಾರೋ ಎಂಬ ಭಯದಲ್ಲಿ ಜನರು ಇದ್ದಾರೆ.
ಇವರಿಗೆ ಹಕ್ಕು ಪತ್ರ ನೀಡಿದಲ್ಲಿ ನೆಮ್ಮದಿಯಿಂದ ಬದುಕುತ್ತಾರೆ.

      ಲಂಬಾಣಿ, ಕುರುಬ, ಲಿಂಗಾಯತ, ಪ್ರವರ್ಗ-1 ಮತ್ತು
ಮುಸ್ಲಿಂ ಸಮುದಾಯಕ್ಕೆ ಸೇರಿದ ಒಟ್ಟು 149 ಜನರು ಹಕ್ಕು
ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಹಿಂದೆ ಇದು ಗೋಮಾಳವಾಗಿದ್ದು
ಅರಣ್ಯ ಇಲಾಖೆಯವರು ಇಲ್ಲಿ ಅಕೇಶಿಯಾ ಇನ್ನಿತರೆ ಗಿಡ ಮರ
ಬೆಳೆದು ತಮ್ಮ ಇಲಾಖೆಗೆ ಸೇರಿಸಿಕೊಂಡಿದ್ದು ಈಗ ಇದು ಮೈನರ್
ಅರಣ್ಯ ಇಲಾಖೆಗೆ ಸೇರಿದೆ. ಇವರಿಗೆ ಹಕ್ಕು ಪತ್ರ ನೀಡಲು
ಕೇಂದ್ರದ ನೀತಿಯನ್ವಯ ದಾಖಲಾತಿಗಳನ್ನು ಉಪ ಅರಣ್ಯ
ಸಂರಕ್ಷಣಾಧಿಕಾರಿಗಳು ಕೇಳುತ್ತಿದ್ದಾರೆ ಎಂದರು.
    ಸುಮಾರು 112 ವಯೋಮಾನದ ರಾಮಾನಾಯ್ಕ ಎಂಬ
ವಯೋವೃದ್ದರು ಮೊದಲು ಇಲ್ಲಿ ಊರು ಇತ್ತು ಎಂದು ದಾಖಲೆ
ನೀಡಿದ್ದಾರೆ. ಇದರ ಆಧಾರದ ಮೇಲೆ ಹಕ್ಕು ಪತ್ರ
ನೀಡಬೇಕೆಂದರು.
    ಈ ಭಾಗದಲ್ಲಿ ಸುಮಾರು 68 ಜನರು ಮನೆ ಕಟ್ಟಿಕೊಂಡು
ಹಲವಾರು ವರ್ಷಗಳಿಂದ ವಾಸಿಸುತ್ತಿದ್ದಾರೆ. ಈ ಮನೆಗಳು
ಕೂಡ ಅರಣ್ಯ ವ್ಯಾಪ್ತಿಯಲ್ಲಿ ಬರಲಿವೆ ಎಂಬ ಕಾರಣಕ್ಕೆ ಈ ಮನೆಗಳಿಗೆ
ಇದುವರೆಗೆ ಖಾತೆ ನೀಡಿಲ್ಲ. ಜಿಲ್ಲಾಧಿಕಾರಿಗಳಿಗೆ ಇದನ್ನು
ಡಿನೋಟಿಫೈ ಮಾಡುವ ಅಧಿಕಾರ ಇದ್ದು, ಹಿರಿಯರ
ದಾಖಲೆಗಳನ್ನು ಕೇಳಿಕೊಂಡು ಅರಣ್ಯ ಭೂಮಿಯನ್ನು
ಡಿನೋಟಿಫೈ ಮಾಡಿ ಇವರಿಗೆ ಇ-ಸ್ವತ್ತು ಆಗುವಂತೆ
ಸಹಕರಿಸಬೇಕೆಂದರು.
   ಮನೆ ಮನೆಗೆ ಕುಡಿಯುವ ನೀರು ಒದಗಿಸುವ ಜಲ ಜೀವನ್
ಮಿಷನ್ ಯೋಜನೆಯಡಿ ನಲ್ಲಿಗೆ ಮೀಟರ್ ಹಾಕಲಾಗುತ್ತಿದೆ.
ತೋಟಗಳಿಗೆ ಕಾಡಾನೆ ಮತ್ತು ಇತರೆ ಕಾಡು ಪ್ರಾಣಿಗಳು
ನುಗ್ಗಿ ಬೆಳೆ ಹಾನಿಯಾಗದಂತೆ ಕಾಡು ಪ್ರಾಣಿ ತಡೆ ಯೋಜನೆಗೆ
ಈಗಾಗಲೇ ಟೆಂಡರ್ ಆಗಿದೆ. ಹಾಗೂ ತಿಪ್ಪನಗೊಂಡನಹಳ್ಳಿ
ಮತ್ತು ರಾಜಗೊಂಡನಹಳ್ಳಿ ಗ್ರಾ.ಪಂ ವ್ಯಾಪ್ತಿಯಲ್ಲಿ ಅನೇಕ
ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.
ಗ್ರಾಮಸ್ಥರು ಮನೆ ಬಾಗಿಲಿಗೆ ಸೌಲಭ್ಯ ಒದಗಿಸುವ ಈ ವಿನೂತನ
ಕಾರ್ಯಕ್ರಮವಾದ ಜಿಲ್ಲಾಧಿಕಾರಿಗಳ ಗ್ರಾಮವಾಸ್ತವ್ಯವನ್ನು
ಸದುಪಯೋಗಪಡಿಸಿಕೊಳ್ಳಬೇಕು ಎಂದರು.
     ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ
ಮಹಾಂತೇಶ್ ಬೀಳಗಿ ಮಾತನಾಡಿ, ಜನರಿಗೆ ಸರ್ಕಾರ ನೀಡಿರುವ
ಸೌಲಭ್ಯಗಳು ಯಾವುದೇ ಮಧ್ಯವರ್ತಿಗಳು ಮತ್ತು
ಏಜೆಂಟರ ಹಾವಳಿ ಇಲ್ಲದೇ ಹಾಗೂ ಯಾವುದೇ ಅಡೆತಡೆ ಇಲ್ಲದೇ
ಸಿಗುವಂತಾಗಬೇಕು. ಅನಗತ್ಯವಾಗಿ ತಾಲ್ಲೂಕು ಮತ್ತು
ಜಿಲ್ಲೆಯ ಕಚೇರಿಗಳಿಗೆ ಜನರು ಅಲೆದಾಡುವುದನ್ನು
ತಪ್ಪಿಸಲು ಸರ್ಕಾರ ಜಿಲ್ಲಾಧಿಕಾರಿಗಳ ನಡೆ-ಹಳ್ಳಿಗಳ ಕಡೆಗೆ
ಎಂಬ ವಿನೂತನ ಮತ್ತು ಅತ್ಯುತ್ತಮವಾದ
ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
     ನಾನು, ಸಿಇಓ, ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಈ
ಕ್ಷೇತ್ರದ ಜನಪ್ರಿಯ ಶಾಸಕರ ನಡೆ ಜನರ ಕಡೆಗೆ ಇದೆ.
ನಿಮ್ಮ ನಿರೀಕ್ಷೆಯನ್ನು ಹುಸಿಗೊಳಿಸುವುದಿಲ್ಲ. ಜಿಲ್ಲೆಯಲ್ಲಿ
ಜನಪ್ರತಿನಿಧಿಗಳ, ಶಾಸಕರ ಪ್ರೋತ್ಸಾಹ ಮತ್ತು ಬೆಂಬಲ
ಉತ್ತಮವಾಗಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ
ಸಮನ್ವಯದಲ್ಲಿ ಅಭಿವೃದ್ದಿ ಕೆಲಸಗಳಾಗುತ್ತಿವೆ.

      ಸರ್ಕಾರದಿಂದ ನೀಡುವ ವಿವಿಧ ಪಿಂಚಣಿ ಮತು
ವೇತನವನ್ನು ಅನೇಕರು ಪಡೆಯುತ್ತಿದ್ದು, ಇನ್ನೂ
ಕೆಲವರು ಅವಕಾಶ ವಂಚಿತರಾಗಿದ್ದರು. ಅಂತಹವರಿಂದ ಖುದ್ದು
ಅಧಿಕಾರಿಗಳೇ ಅರ್ಜಿ ಪಡೆದು ಸೌಲಭ್ಯವನ್ನು ಇಂದು ಅವರಿಗೆ
ವಿತರಿಸಲಾಗುತ್ತಿದೆ. ಮಾವಿನಹೊಳೆಯಲ್ಲಿ ಇಂದು ಹೊಸದಾಗಿ 115
ಜನರಿಗೆ ಸೌಲಭ್ಯ ವಿತರಣೆ ಮಾಡಲಾಗುತ್ತಿದೆ. ಯಾವುದೇ
ಮಧ್ಯವರ್ತಿಗಳ ಹಾವಳಿ ಮತ್ತು ಅಡೆತಡೆ ಇಲ್ಲದೇ
ಜಿಲ್ಲಾಡಳಿತವೇ ತಮ್ಮ ಮನೆ ಬಾಗಿಲಿಗೆ ಸೌಲಭ್ಯ ನೀಡಲು ಮತ್ತು
ಸಮಸ್ಯೆ ಆಲಿಸಲು ಮುಂದಾಗಿರುವ ಈ ಗ್ರಾಮವಾಸ್ತವ್ಯ
ಕಾರ್ಯಕ್ರಮದ ಪ್ರಯೋಜನವನ್ನು ಅರ್ಹರೆಲ್ಲರೂ
ಪಡೆಯಬೇಕು.
     ಉಳ್ಳವರು ಮನೆಯ ಯಜಮಾನ ತೀರಿದ ತಕ್ಷಣ ತಮ್ಮ
ಹೆಸರಿಗೆ ಖಾತೆ ಮಾಡಿಸುತ್ತಾರೆ. ಆದರೆ ಬಡವರು, ಅರಿವಿನ ಕೊರತೆ
ಇರುವವರು ಮರಿ ಮಕ್ಕಳು ಬಂದರೂ ಪೌತಿ ಖಾತೆ ಬದಲಾವಣೆ
ಮಾಡಿಕೊಂಡಿಲ್ಲ. ಈ ಭಾಗದಲ್ಲಿ ಇಂತಹ 13 ಪೌತಿ ಖಾತೆಗಳ ಪೈಕಿ 10
ಖಾತೆಯನ್ನು ವಿಲೇವಾರಿ ಮಾಡಲಾಗಿದೆ.
    ಅರಣ್ಯ ಹಕ್ಕುಗಳಿಗೆ ಸಂಬಂಧಿಸಿದಂತೆ ಬಹಳಷ್ಟು ಕೆಲಸ
ಆಗಬೇಕಿದ್ದು, ಇಲ್ಲಿನ 68 ಮನೆಗಳಿಗೆ ಸಂಬಂಧಿಸಿದಂತೆ
ಪ್ರಕರಣ ಉಪವಿಭಾಗಾಧಿಕಾರಿಗಳ ಬಳಿ ಇದ್ದು ಈ ಬಗ್ಗೆ ಡಿಸಿಎಫ್
ರವರು ಎಸಿಎಫ್‍ರವರಿಗೆ ಸೂಚನೆ ನೀಡಿ ಪರಿಶೀಲಿಸಲು ತಿಳಿಸಿದ್ದೇನೆ.
ಬಹಳಷ್ಟು ವರ್ಷಗಳ ಸಮಸ್ಯೆಗಳನ್ನು ಪರಿಹರಿಸುವ
ವೇದಿಕೆಯಾಗಿ ಗ್ರಾಮವಾಸ್ತವ್ಯ ಕೆಲಸ ಮಾಡುತ್ತಿರುವುದು
ವಿಶಿಷ್ಟವಾಗಿದೆ. ಸ್ಮಶಾನ, ಮನೆ, ನಿವೇಶನಕ್ಕಾಗಿ ಅರ್ಜಿಗಳು
ಬಂದಿದ್ದು, ಇಲ್ಲಿನ ಶಾಸಕರು ಸಹ ಅತ್ಯಂತ ಉತ್ಸುಕತೆಯಿಂದ,
ಆಸಕ್ತಿಯಿಂದ ಕೆಲಸ ಮಾಡುವ ಮೂಲಕ ನಮಗೆ
ಬೆಂಬಲವಿತ್ತಿದ್ದು ಎಲ್ಲ ಅಧಿಕಾರಿಗಳು ಶ್ರದ್ದೆಯಿಂದ ಕೆಲಸ
ಮಾಡುತ್ತೇವೆ ಎಂದರು.
     ಗ್ರಾಮದ ಮುಖಂಡರು ಮಾತನಾಡಿ, ಅರಣ್ಯ ವ್ಯಾಪ್ತಿಯಲ್ಲಿವೆ
ಎನ್ನಲಾಗಿರುವ 68 ಮನೆಗಳಿಗೆ ಹಕ್ಕು ಪತ್ರ ನೀಡಲು ಹಿರಿಯ
ರಾಮಾನಾಯ್ಕರಿಂದ ಸೋಮವಾರ ಹೇಳಿಕೆ ಪಡೆಯಲು
ಶಾಸಕರು ಸೂಚಿಸಿರುತ್ತಾರೆ. ಆದರೆ ಇದು 1978 ರ ಪೂರ್ವದ
ಪ್ರಕರಣ ಆಗಿರುವುದರಿಂದ ಕಡತ ಅಡೆತಡೆರಹಿತವಾಗಿದೆ.
ಹಕ್ಕುಪತ್ರವನ್ನು ತಕ್ಷಣವೇ ನೀಡಬಹುದೆಂದು ಸಲಹೆ
ನೀಡಿದರು.
      ಜಿ.ಪಂ ಸಿಇಓ ವಿಜಯ ಮಹಾಂತೇಶ ದಾನಮ್ಮನವರ್ ಮಾತನಾಡಿ,
ಆಡಳಿತ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಬಹಳಷ್ಟು
ಸೌಲಭ್ಯಗಳು ಆನ್‍ಲೈನ್ ಆಗಿದ್ದರೂ ಸಹ ಜನರು ತಾಲ್ಲೂಕು
ಮತ್ತು ಜಿಲ್ಲಾಡಳಿತದ ಕಚೇರಿಗಳಿಗೆ ಅಲೆಯುವುದು
ತಪ್ಪಿಲ್ಲ. ಜನರು ಅನಾವಶ್ಯಕವಾಗಿ ಕಚೇರಿಗಳಿಗೆ
ಅಲೆದಾಡುವುದು ಹಾಗೂ ಮಧ್ಯವರ್ತಿಗಳ ಹಾವಳಿ ತಪ್ಪಿಸುವ
ಉದ್ದೇಶದಿಂದ ಸರ್ಕಾರ, ಜಿಲ್ಲಾಧಿಕಾರಿಗಳ ತಂಡವೇ ಗ್ರಾಮಕ್ಕೆ
ಬಂದು ಗ್ರಾಮವಾಸ್ತವ್ಯದಂತಹ ಉತ್ತಮ ಕಾರ್ಯಕ್ರಮ
ತಂದಿದ್ದು, ಇಲ್ಲಿ ಜನರ ಪ್ರಸ್ತಾವಿತ ಸಮಸ್ಯೆಗಳ ಮೇಲೆ
ಬೆಳಕು ಚೆಲ್ಲಿ ಶೀಘ್ರ ಪರಿಹಾರ ಮತ್ತು ಅರ್ಹರಿಗೆ
ಸೌಲಭ್ಯವನ್ನು ತಕ್ಷಣವೇ ನೀಡಲಾಗುವುದು. ಶಾಸಕರು
ಹೇಳಿದ 68 ಮನೆಗಳ ಕುರಿತಂತೆ ಸಂಪೂರ್ಣ ಮಾಹಿತಿ ಪಡೆದು

ಡಿನೋಟಿಫೈ ಮಾಡುವ ಬಗ್ಗೆ ತುರ್ತಾಗಿ ಕ್ರಮ
ಕೈಗೊಳ್ಳುತ್ತೇವೆ ಎಂದರು.
      2020-21  ನೇ ಸಾಲಿನಲ್ಲಿ ಪ್ರಧಾನಮಂತ್ರಿ ಆವಾಸ್
ಯೋಜನೆಯಡಿ ಚನ್ನಗಿರಿಗೆ ಇದ್ದ ಗುರಿ 17 ಆದರೂ 32
ಅರ್ಜಿಗಳನ್ನು ಗುರುತಿಸಿ ರಾಜೀವ್ ಗಾಂಧಿ ವಸತಿ ನಿಗಮಕ್ಕೆ
ಕಳುಹಿಸಿಕೊಡಲಾಗಿದೆ. 2020-21 ನೇ ಸಾಲಿನಲ್ಲಿ ನರೇಗಾ
ಯೋಜನೆಯಡಿ 11 ಸಾವಿರ ಮಾನವ ದಿನಗಳ ಸೃಜನೆ ಗುರಿ
ಪೂರ್ಣಗೊಂಡಿದ್ದು ಮುಂದಿನ ಸಾಲಿಗೆ 344 ವೈಯಕ್ತಿಕ
ಕಾಮಗಾರಿ ಬೇಡಿಕೆ ಇದೆ. ಹಾಗೂ ದುಡಿಯೋಣ ಬಾರಾ ಎಂಬ
ಕಾರ್ಯಕ್ರಮದಡಿ ಸತತವಾಗಿ 60 ದಿನಗಳ ಕೂಲಿಗೆ
ರೂ.16500 ವೇತನವನ್ನು ಜೂನ್ ವೇಳೆಗೆ ನೀಡಲಾಗುವುದು.
ಇದರಿಂದ ಮಕ್ಕಳ ಶಿಕ್ಷಣಕ್ಕೆ ಸಹಾಯವಾಗಲಿದ್ದು
ಗ್ರಾಮಸ್ಥರು ಇದರ ಸದುಪಯೋಗ
ಪಡೆಯಬೇಕೆಂದರು.
       ಸ್ವಚ್ಚ ಭಾರತ್ ಯೋಜನೆಯಡಿ ಘನ ಮತ್ತು ದ್ರವ
ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಮನೆ ಮನೆ
ಬಾಗಿಲಿಗೆ ವಾಹನದ ಮೂಲಕ ದ್ರವ ಮತ್ತು ಘನ
ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ತ್ಯಾಜ್ಯ ಘಟಕದಲ್ಲಿ
ರಿಸೈಕಲ್ ಮಾಡಿ ಮಾಲಿನ್ಯ ತಡೆ ಉದ್ದೇಶದಿಂದ ತ್ಯಾಜ್ಯ ವಿಲೇವಾರಿ
ಘಟಕಗಳನ್ನು ನಿರ್ವಹಣೆ ಮಾಡಲಾಗುತ್ತಿದ್ದು ಜನರು
ಇದಕ್ಕೆ ಸಹಕರಿಸಬೇಕು. ಜನಾಂದೋಲನದಿಂದ ಮಾತ್ರ ಇದು
ಸಾಧ್ಯ ಎಂದ ಅವರು ಸ್ವಚ್ಚ ಭಾರತ್ ಯೋಜನೆಯಡಿ
ಶೌಚಾಲಯ, ಜಲಜೀವನ್ ಮಿಷನ್ ಅಡಿ ಮನೆ ಮನೆಗೆ ಕುಡಿಯುವ
ನೀರು ನೀಡುವ ಕಾಮಗಾರಿಗಳು ಸಹ ಪ್ರಗತಿಯಲ್ಲಿದೆ
ಎಂದರು.
ಸೌಲಭ್ಯ ವಿತರಣೆ ವಿವರ: ತಿಪ್ಪಗೊಂಡನಹಳ್ಳಿ ಮತ್ತು
ರಾಜಗೊಂಡನಹಳ್ಳಿ ಗ್ರಾ.ಪಂ ವ್ಯಾಪ್ತಿಯ ಗ್ರಾಮಸ್ಥರಿಗೆ
ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಿಮಿತ್ತ ಸಂಧ್ಯಾ ಸುರಕ್ಷಾ
ಯೋಜನೆ, ವೃದ್ದಾಪ್ಯ, ವಿಧವಾ ವೇತನ ಸೇರಿದಂತೆ ಸಾಮಾಜಿಕ
ಭದ್ರತಾ ಯೋಜನೆಯಡಿ ಒಟ್ಟು 115 ಜನರಿಗೆ ಸೌಲಭ್ಯ ವಿತರಣೆ
ಮಾಡಲಾಯಿತು. 10 ಪೌತಿ ಖಾತೆ ವಿಲೇವಾರಿ. ರಾಜಗೊಂಡನಳ್ಳಿ ಸರ್ವೇ
ನಂ.2 ರಲ್ಲಿ 2 ಎಕರೆ ಸ್ಮಶಾನ ಉದ್ದೇಶಕ್ಕೆ ಭೂಮಿ
ಕಾಯ್ದಿರಿಸಲಾಗಿದೆ. ದಂಡಿಗೇನಹಳ್ಳಿ ಸರ್ವೇ ನಂ 7 ರಲ್ಲಿ 1 ಎಕರೆ
ಮತ್ತು ಮಾವಿನಹೊಳೆ ಸರ್ವೇ ನಂ 10 ರಲ್ಲಿ 2 ಎಕರೆ ಜಮೀನು
ಸ್ಮಶಾನಕ್ಕೆ ಮೀಸಲು.  16 ಜನರಿಗೆ ಅತಿವೃಷ್ಟಿ ಪರಿಹಾರ ವಿತರಣೆ
ಮಾಡಲಾಯಿತು.
     ಚನ್ನಗಿರಿ ತಾಲ್ಲೂಕಿನ ತಿಪ್ಪಗೊಂಡನಹಳ್ಳಿ ಮತ್ತು
ರಾಜಗೊಂಡನಹಳ್ಳಿ ಗ್ರಾ.ಪಂ ವ್ಯಾಪ್ತಿಯ ಮಲ್ಲಿಗೆರೆ,
ಲಕ್ಷ್ಮೀಸಾಗರ, ಮಹಾತ್ಮಾಗಾಂಧಿನಗರ, ರಾಜಗೊಂಡನಹಳ್ಳಿ,
ಟಿ,ಗೊಲ್ಲರಹಟ್ಟಿ, ದಿಗ್ಗೇನಹಳ್ಳಿ, ರೊಪ್ಪದಹಟ್ಟಿ,
ದಂಡಿಗೇನಹಳ್ಳಿಗಳಿಗೆ ಶಾಸಕರು ಹಾಗೂ ಜಿಲ್ಲಾಧಿಕಾರಿಗಳ
ತಂಡ ಭೇಟಿ ನೀಡಿ, ಜನರಿಂದ ಅರ್ಜಿಗಳನ್ನು ಸ್ವೀಕರಿಸಿ,
ಫಲಾನುಭವಿಗಳಿಗೆ ಮಾವಿನಹೊಳೆಯಲ್ಲಿ ಅರ್ಹ
ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು
ವಿತರಿಸಲಾಗುವುದು ಎಂದು ತಿಳಿಸಿದರು. ಹಾಗೂ ಕೊರೊನಾ

ನಿಯಂತ್ರಣಕ್ಕಾಗಿ ಎಲ್ಲರೂ ಮಾಸ್ಕ್, ಸಾಮಾಜಿಕ ಅಂತರ ಮತ್ತು
ಲಸಿಕೆಯನ್ನು ಹಾಕಿಸಿಕೊಳ್ಳಬೇಕೆಂದು ಕಿವಿ ಮಾತು ಹೇಳಿದರು.
    ಜಿ.ಪಂ ಸದಸ್ಯೆ ಮಂಜುಳಾ ಟಿ.ವಿ.ರಾಜು ಮಾತನಾಡಿ, ಈ ಭಾಗದಲ್ಲಿ
ಶಾಸಕರು, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ
ಸಹಕಾರದೊಂದಿಗೆ ಉತ್ತಮ ಅಭಿವೃದ್ದಿ ಕಾರ್ಯಗಳು ಆಗಿವೆ.
ಇನ್ನೂ ಹೆಚ್ಚಿನ ಅಭಿವೃದ್ದಿ ಕಾರ್ಯಗಳು ಆಗಲಿ ಎಂದು
ಆಶಿಸಿದರು.
ಕೆಎಸ್‍ಆರ್‍ಟಿಸಿ ಬಸ್‍ನಲ್ಲಿ ಜಿಲ್ಲಾಡಳಿತ ಅಧಿಕಾರಿಗಳ ತಂಡದ ಪಯಣ
: ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಇವರ ನೇತೃತ್ವದಲ್ಲಿ
ಕೆಎಸ್‍ಆರ್‍ಟಿಸಿ ಬಸ್‍ನಲ್ಲಿ ಅಧಿಕಾರಿಗಳು ದಾವಣಗೆರೆಯ ಜಿಲ್ಲಾಡಳಿತ
ಕಚೇರಿಯಿಂದ ಚನ್ನಗಿರಿಯ ಮಾವಿನಹೊಳೆ ಗ್ರಾಮ
ವಾಸ್ತವ್ಯಕ್ಕೆ ಆಗಮಿಸಿದರು.
ತಳಿರು-ತೋರಣದಿಂದ ಸಿಂಗಾರಗೊಂಡಿದ್ದ ಗ್ರಾಮಗಳು :
ಗ್ರಾಮ ವಾಸ್ತವ್ಯದ ನಿಮಿತ್ತ ತಿಪ್ಪಗೊಂಡನಹಳ್ಳಿ ಮತ್ತು
ರಾಜಗೊಂಡನಹಳ್ಳಿ ವ್ಯಾಪ್ತಿಯ ಗ್ರಾಮಗಳು ತಳಿರು-
ತೋರಣಗಳಿಂದ ಸಿಂಗಾರಗೊಂಡು ಹಬ್ಬದಂತೆ ಸಂಭ್ರಮಿಸಿದ
ದೃಶ್ಯ ಕಂಡುಬಂದಿತು.
     ಕಾರ್ಯಕ್ರಮದಲ್ಲಿ ಜಿ.ಪಂ ಉಪಾಧ್ಯಕ್ಷೆ ಸಾಕಮ್ಮ
ಗಂಗಾಧರ ನಾಯ್ಕ, ಜಿ.ಪಂ ಸದಸ್ಯರಾದ ಯಶೋಧಮ್ಮ
ಮರುಳಪ್ಪ, ಚನ್ನಗಿರಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ
ಕವಿತಾ, ಜನಪ್ರತಿನಿಧಿಗಳು, ಜಿಲ್ಲಾ ಮಟ್ಟದ ಮತ್ತು ತಾಲ್ಲೂಕು
ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು

Leave a Reply

Your email address will not be published. Required fields are marked *