ಸಾರ್ವಜನಿಕರಿಗೆ ಸೂಚನೆ
ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ
ಉತ್ಪತ್ತಿಯಾಗುವ ಘನತ್ಯಾಜ್ಯ ವಸ್ತುಗಳನ್ನು
ಸಮರ್ಪಕವಾಗಿ ನಿರ್ವಹಣೆ ಮಾಡುವ ಸಲುವಾಗಿ, ತ್ಯಾಜ್ಯ
ಉತ್ಪತ್ತಿಯ ಮೂಲದಲ್ಲಿಯೇ ವಿಂಗಡಿಸಿದ ತ್ಯಾಜ್ಯ
ಸಂಗ್ರಹಣೆಯನ್ನು ಕಡ್ಡಾಯಗೊಳಿಸಿದ್ದು, ಸಾರ್ವಜನಿಕರು
ಹಸಿ ಮತ್ತು ಒಣ ತ್ಯಾಜ್ಯವನ್ನು ಮನೆಯಲ್ಲಿಯೇ ವಿಂಗಡಿಸಿ,
ಪ್ರತ್ಯೇಕವಾಗಿ ತ್ಯಾಜ್ಯ ಸಂಗ್ರಹಕಾರರಿಗೆ ನೀಡುವಂತೆ
ಸೂಚನೆ ನೀಡಲಾಗಿದೆ.
ನಗರ ವ್ಯಾಪ್ತಿಯ ಎಲ್ಲ ಗೃಹೋಪಯೋಗಿ ತ್ಯಾಜ್ಯ
ಉತ್ಪಾದಕರು ತಮ್ಮಲ್ಲಿ ಪ್ರತಿನಿತ್ಯ ಉತ್ಪತ್ತಿಯಾಗುವ
ತ್ಯಾಜ್ಯಗಳನ್ನು (1) ಹಸಿ ತ್ಯಾಜ್ಯ (ಕೊಳೆಯುವಂತಹ ತ್ಯಾಜ್ಯ) (2)
ಒಣ ತ್ಯಾಜ್ಯ (ಕೊಳೆಯದ ತ್ಯಾಜ್ಯ) ಮತ್ತು (3)
ಸ್ಯಾನಿಟರಿ/ವೈದ್ಯಕೀಯ ತ್ಯಾಜ್ಯಗಳೆಂದು ಮೂರು ವಿಧದಲ್ಲಿ
ಕಡ್ಡಾಯವಾಗಿ ವಿಂಗಡಿಸಬೇಕು. ಹಸಿ ತ್ಯಾಜ್ಯವನ್ನು ಸಾಧ್ಯವಾದಲ್ಲಿ
ಹೋಂ ಕಾಂಪೋಸ್ಟಿಂಗ್ ಮೂಲಕ ಸಂಸ್ಕರಿಸಬೇಕು, ಇಲ್ಲವಾದಲ್ಲಿ
ಪ್ರತಿನಿತ್ಯ ತಮ್ಮ ಮನೆ ಬಾಗಿಲಿಗೆ ಬರುವ ತ್ಯಾಜ್ಯ
ಸಂಗ್ರಹಕಾರರಿಗೆ ಪ್ರತ್ಯೇಕ ಡಬ್ಬಿ/ಬಕೆಟ್‍ಗಳಲ್ಲಿ
ನೀಡಬೇಕು. ಸ್ಯಾನಿಟರಿ ತ್ಯಾಜ್ಯ (ಸ್ಯಾನಿಟರಿ ನ್ಯಾಪ್ಕಿನ್, ಡೈಪರ್) ಗಳನ್ನು
ಪೌಚ್/ಪೇಪರ್‍ನಲ್ಲಿ ಸುತ್ತಿ ಪ್ರತಿನಿತ್ಯ ಪ್ರತ್ಯೇಕವಾಗಿ
ನೀಡಬೇಕು. ಒಣ ತ್ಯಾಜ್ಯವನ್ನು ಪ್ರತ್ಯೇಕ ಚೀಲ/ಬಕೆಟ್‍ಗಳಲ್ಲಿ
ಸಂಗ್ರಹಿಸಿ ಪ್ರತಿ ಶುಕ್ರವಾರ ತ್ಯಾಜ್ಯ ಸಂಗ್ರಹಕಾರರಿಗೆ
ನೀಡುವ ಮೂಲಕ ನಗರದಲ್ಲಿನ ತ್ಯಾಜ್ಯ ನಿರ್ವಹಣೆ ಮತ್ತು
ಸ್ವಚ್ಛತೆಗೆ ಸಹಕರಿಸುವಂತೆ ಮಹಾನಗರಪಾಲಿಕೆ ಮನವಿ
ಮಾಡಿದೆ.
ಮಹಾನಗರಪಾಲಿಕೆ ವ್ಯಾಪ್ತಿಯ ಎಲ್ಲಾ ಉದ್ದಿಮೆದಾರರು
ತಮ್ಮಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಹಸಿ, ಒಣ ಹಾಗೂ
ಅಪಾಯಕಾರಿ ತ್ಯಾಜ್ಯಗಳೆಂದು ವಿಂಗಡಿಸಿ ಪ್ರತ್ಯೇಕವಾಗಿ ತ್ಯಾಜ್ಯ
ಸಂಗ್ರಹಕಾರರಿಗೆ ನೀಡಬೇಕು ಮತ್ತು ನಿಗದಿತ ತ್ಯಾಜ್ಯ
ಸಂಗ್ರಹಣಾ ಶುಲ್ಕ ಪಾವತಿಸಬೇಕು.
ಕಲ್ಯಾಣ ಮಂಟಪ, ದೊಡ್ಡ ಪ್ರಮಾಣದ ಹೋಟೆಲ್‍ಗಳು,
ವಿದ್ಯಾ ಸಂಸ್ಥೆಗಳು, ಹಾಸ್ಟೆಲ್‍ಗಳು ಹಾಗೂ ಇನ್ನಿತರೆ ಸಾಂಸ್ಥಿಕ
ತ್ಯಾಜ್ಯ ಉತ್ಪಾದಕರು ಹಸಿ ತ್ಯಾಜ್ಯವನ್ನು ತಮ್ಮ ಆವರಣದಲ್ಲಿಯೇ
ಬಯೋಗ್ಯಾಸ್/ಗೊಬ್ಬರ ತಯಾರಿಸುವ ಮೂಲಕ ಸಂಸ್ಕರಿಸಿ
ವಿಲೇವಾರಿ ಮಾಡಬೇಕು, ಒಣತ್ಯಾಜ್ಯವನ್ನು ಮಾತ್ರ ಮಹಾನಗರ
ಪಾಲಿಕೆ ನಿಯೋಜಿಸಿದ ತ್ಯಾಜ್ಯ ಸಂಗ್ರಹಕಾರರಿಗೆ ನೀಡಬೇಕು.
ಬೀದಿ ಬದಿ ವ್ಯಾಪಾರಿಗಳು ಕಡ್ಡಾಯವಾಗಿ 02 ಡಬ್ಬಿಗಳನ್ನು
ಇಟ್ಟು ರಸ್ತೆಗಳಲ್ಲಿ ತ್ಯಾಜ್ಯವನ್ನು ಎಸೆಯದಂತೆ ತಮ್ಮ
ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿರಿಸಬೇಕು.
ವಿವಿಧ ತ್ಯಾಜ್ಯ ಉತ್ಪಾದಕರುಗಳು ಕರ್ನಾಟಕ ಮಹಾನಗರ
ಪಾಲಿಕೆಗಳ ಘನ ತ್ಯಾಜ್ಯ ನಿರ್ವಹಣೆ ಮಾದರಿ ಉಪನಿಯಮಗಳು
2019ನ್ನು ಉಲ್ಲಂಘಿಸಿದಲ್ಲಿ ಅನುಸೂಚಿ (8) ರಲ್ಲಿ ನಿಗದಿಪಡಿಸಿದಂತೆ
ದಂಡಕ್ಕೆ ಅರ್ಹರು. ಹೀಗಾಗಿ ನಗರದಲ್ಲಿನ ಎಲ್ಲಾ ತ್ಯಾಜ್ಯ
ಉತ್ಪಾದಕರು ಮಹಾನಗರ ಪಾಲಿಕೆ ರೂಪಿಸಿರುವ ಘನ ತ್ಯಾಜ್ಯ
ನಿರ್ವಹಣೆ ಯೋಜನೆಗಳಿಗೆ ಸಹಕರಿಸುವ ಮೂಲಕ ನಗರದ
ಸ್ವಚ್ಛತೆಗೆ ಕೈಜೋಡಿಸುವಂತೆ ಮಹಾನಗರಪಾಲಿಕೆ
ಮಹಾಪೌರರಾದ ಎಸ್.ಟಿ.ವೀರೇಶ್ ಹಾಗೂ ಆಯುಕ್ತರಾದ
ವಿಶ್ವನಾಥ ಪಿ ಮುದಜ್ಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.