ಬಾಬು ಜಗಜೀವನರಾಂ ಜಯಂತಿ ಸರಳ ಆಚರಣೆ
ಕೋವಿಡ್ ನಿಯಮಾವಳಿಗಳ ಪಾಲನೆಯೊಂದಿಗೆ ಜಿಲ್ಲಾಡಳಿತ
ಭವನದ ತುಂಗಭದ್ರ ಸಭಾಂಗಣದಲ್ಲಿ ಏಪ್ರಿಲ್ 14 ರಂದು
ಡಾ.ಬಿ.ಆರ್ ಅಂಬೇಡ್ಕರ್ ಜಯಂತಿಯ ವೇದಿಕೆ
ಕಾರ್ಯಕ್ರಮವನ್ನು ಹಾಗೂ ಏಪ್ರಿಲ್ 05 ರಂದು ಡಿಸಿ ಕಚೇರಿ
ಸಭಾಂಗಣದಲ್ಲಿ ಡಾ.ಬಾಬು ಜಗಜೀವನರಾಂ ಜಯಂತಿಯನ್ನು
ಸರಳವಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ
ಮಹಾಂತೇಶ ಬೀಳಗಿ ತಿಳಿಸಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಮಂಗಳವಾರ
ಏರ್ಪಡಿಸಲಾಗಿದ್ದ ಡಾ.ಬಾಬು ಜಗಜೀವನ್ ರಾಂ ರವರ 114ನೇ ಜನ್ಮ
ದಿನಾಚರಣೆ ಮತ್ತು ಡಾ.ಬಿ.ಆರ್. ಅಂಬೇಡ್ಕರ್‍ರವರ 130ನೇ ಜನ್ಮ
ದಿನಾಚರಣೆಯನ್ನು ಜಿಲ್ಲಾ ಕೇಂದ್ರದಲ್ಲಿ ಆಚರಣೆ ಮಾಡುವ
ಕುರಿತು ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ
ವಹಿಸಿ ಅವರು ಮಾತನಾಡಿದರು.
ಸಾಂಪ್ರದಾಯಿಕವಾಗಿ ಎಲ್ಲ ಜಯಂತಿಗಳನ್ನು ಅತ್ಯಂತ
ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಆದರೆ ಪ್ರಾಕೃತಿಕ
ವಿಕೋಪ, ಚುನಾವಣೆ ಸಮಯದಲ್ಲಿ ಜಯಂತಿಗಳನ್ನು
ಸರಳವಾಗಿ ಆಚರಿಸಲಾಗುತ್ತದೆ. ಕೊರೊನಾ ಹಿನ್ನೆಲೆಯಲ್ಲಿ
ಕಳೆದ ಬಾರಿಯೂ ಅಂಬೇಡ್ಕರ್ ಜಯಂತಿಯನ್ನು ಅತ್ಯಂತ
ಸರಳವಾಗಿ ಆಚರಿಸಲಾಗಿತ್ತು. ಆದರೆ ಪ್ರಸ್ತುತ 62 ಸಕ್ರಿಯ
ಕೊರೊನಾ ಪ್ರಕರಣ ಇರುವ ಪ್ರಯುಕ್ತ ಪರಿಸ್ಥಿತಿ
ನಾಜೂಕಾಗಿದೆ. ಕೊರೊನಾ ಎರಡನೇ ಅಲೆಯ
ಭೀತಿಯಲ್ಲಿದ್ದೇವೆ. ಇನ್ನೂ ನಾವು ಕೊರೊನಾ ಯುದ್ದದಿಂದ
ಹೊರಬಂದಿಲ್ಲ. ಈ ಹಿನ್ನೆಲೆಯಲ್ಲಿ ಬಾಬು ಜಗಜೀವನರಾಂ ಮತ್ತು
ಅಂಬೇಡ್ಕರ್‍ರವರ ಜಯಂತಿಗಳನ್ನು ಹೇಗೆ ಆಚರಿಸಬೇಕೆಂಬ
ಬಗ್ಗೆ ದಲಿತ ಸಂಘಟನೆಗಳ ಪದಾಧಿಕಾರಿಗಳು ಮತ್ತು
ಮುಖಂಡರು ಸಲಹೆ-ಸೂಚನೆಗಳನ್ನು ನೀಡಬೇಕೆಂದರು.
ದಲಿತ ಕಾರ್ಮಿಕರ ಜಿಲ್ಲಾ ಸಂಘದ ಅಧ್ಯಕ್ಷ ಎಸ್.ಎನ್. ಬಾಲಾಜಿ
ಮಾತನಾಡಿ, ಕೃಷಿಗೆ ಮತ್ತು ಸಂವಿಧಾನ ರಚನೆಗೆ ಒತ್ತನ್ನು
ನೀಡಿದಂತಹ ಮಹಾನ್ ಚೇತನರನ್ನು ಸ್ಮರಿಸುವಂತಹ
ಜಯಂತಿಗಳನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ದಲಿತ
ಸಮುದಾಯಗಳ ಆರ್ಥಿಕ ಸಬಲೀಕರಣದಲ್ಲಿ ಹಿನ್ನೆಲೆಯಲ್ಲಿ ಈ
ವರ್ಷ ಅಂಬೇಡ್ಕರ್ ಜಯಂತಿಯಂದು ದಲಿತರ ಬೇಡಿಕೆಯ
ದಿನವನ್ನಾಗಿ ಆಚರಿಸಬೇಕು. ಶಾಸಕರು, ಸಂಸದರು,
ಜನಪ್ರತಿನಿಧಿಗಳು ಮತ್ತು ತಾಲ್ಲೂಕು, ಜಿಲ್ಲಾ ಮಟ್ಟದ
ಮುಖಂಡರುಗಳನ್ನು ಕರೆತಂದು ಅವರ ಸಮ್ಮುಖದಲ್ಲಿ
ತಮ್ಮ ಬೇಡಿಕೆಯನ್ನು ಇಟ್ಟು ಸರ್ಕಾರಕ್ಕೆ ಈ ಬೇಡಿಕೆಗಳನ್ನು
ಸಲ್ಲಿಸುವಂತೆ ಆಚರಿಸಬೇಕೆಂದು ಮನವಿ ಮಾಡಿದರು.
ಡಿಎಸ್‍ಎಸ್ ರಾಜ್ಯ ಸಂಚಾಲಕ ಮಲ್ಲೇಶಪ್ಪ ಮಾತನಾಡಿ,
ಅಂಬೇಡ್ಕರ್ ಜಯಂತಿ ಆಚರಣೆಗೆ ಸಾಮಾನ್ಯವಾಗಿ
ಚುನಾವಣೆಗಳು ಅಡ್ಡಿ ಮಾಡುತ್ತಿದ್ದು, ಕಳೆದ ವರ್ಷ
ಕೊರೊನಾದಿಂದ ಸರಳ ಆಚರಣೆ ಮಾಡಲಾಗಿತ್ತು. ಇದರಿಂದಾಗಿ
ಅಂಬೇಡ್ಕರ್‍ರವರ ಚಿಂತನೆ, ಆದರ್ಶಗಳು, ವಿಚಾರಗಳು
ಜನಸಾಮಾನ್ಯರಿಗೆ ತಲುಪುತ್ತಿಲ್ಲ. ದಾವಣಗೆರೆ ನಗರದಲ್ಲಿ
ಅಂಬೇಡ್ಕರ್ ಭವನ ನಿರ್ಮಿಸಲು ಅನೇಕ ವರ್ಷಗಳಿಂದ ಬೇಡಿಕೆ
ಇಟ್ಟಿದ್ದೇವೆ. ಈ ವರ್ಷ ಜಯಂತಿಯ ವೇಳೆಗಾದರೂ ಶಂಕು
ಸ್ಥಾಪನೆ ಮಾಡಲು ಕ್ರಮ ಕೈಗೊಳ್ಳಬೇಕು. ದಲಿತ
ಚಳುವಳಿಗೆ ಚೈತನ್ಯ ತುಂಬಿದ ಕರ್ನಾಟಕದ
ಪ್ರೊ.ಬಿ.ಕೃಷ್ಣಪ್ಪ ರವರ ಸಮುದಾಯ ಭವನ ಹರಿಹರದ
ಮೈತ್ರಿವನದಲ್ಲಿದ್ದು ಇದನ್ನು ಟ್ರಸ್ಟ್‍ಗೆ ವಹಿಸಿರುವುದು
ಸರಿಯಲ್ಲ. ಈ ಬಗ್ಗೆ ನಮ್ಮ ಆಕ್ಷೇಪ ಇದ್ದು, ಈ ಭವನವನ್ನು
ಸರ್ಕಾರ ವಹಿಸಿಕೊಂಡು ಸಾರ್ವಜನಿಕರಿಗೆ ಮುಕ್ತವಾಗಿ ಅವಕಾಶ
ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಡಿಎಸ್‍ಎಸ್ ದಾವಣಗೆರೆ ಜಿಲ್ಲಾಧ್ಯಕ್ಷರಾದ ದುಗ್ಗಪ್ಪ ಮಾತನಾಡಿ,
ಸತತವಾಗಿ 3 ವರ್ಷಗಳಿಂದ ಚುನಾವಣೆ ಮತ್ತಿತರೆ
ಕಾರಣಗಳಿಂದ ಮೆರವಣಿಗೆ ನಡೆಯದೇ ಸರಳವಾಗಿ
ಜಯಂತಿಯನ್ನು ಆಚರಿಸಲಾಗಿದೆ. ಆವರಗೆರೆಯಲ್ಲಿ ಅಂಬೇಡ್ಕರ್
ಪ್ರತಿಮೆ ಸ್ಥಾಪಿಸಬೇಕು. ಹಾಗೂ ಜಯಂತಿಯ ಸಂದರ್ಭದಲ್ಲಿ
ಅಂಬೇಡ್ಕರ್ ಭವನ ಶಂಕುಸ್ಥಾಪನೆ ನೆರವೇರಿಸಬೇಕೆಂದು
ಮನವಿ ಮಾಡಿದರು.
ಡಿಎಸ್‍ಎಸ್ ತಾಲ್ಲೂಕು ಕಾರ್ಯದರ್ಶಿ ವಿಶ್ವನಾಥ್ ಮಾನತಾಡಿ,
ಹರಿಹರದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಜಾಗದ
ತೊಂದರೆಯಿದ್ದು, ದಲಿತ ಜನಾಂಗದವರು ಸಭೆ,
ಸಮಾರಂಭಗಳನ್ನು ಮಾಡಬೇಕಾದರೆ ಬಾಡಿಗೆ ಕಟ್ಟಡ
ತೆಗೆದುಕೊಂಡು ಮಾಡುವಂತಹ ಪರಿಸ್ಥಿತಿಯಿದ್ದು ಅಂಬೇಡ್ಕರ್
ಭವನದ ಅವಶ್ಯಕತೆ ಇದೆ. ಹಾಗೂ ಅಂಬೇಡ್ಕರ್ ಮತ್ತು
ಪ್ರೊ. ಬಿ.ಕೃಷ್ಣಪ್ಪರವರ ಪುತ್ಥಳಿಗಳನ್ನು
ಸ್ಥಾಪಿಸಬೇಕೆಂದು ಮನವಿ ಮಾಡಿದರು.
ಮುಖಂಡರಾದ ಮಂಜುನಾಥ್ ಮಾತನಾಡಿ,
ಅಂಬೇಡ್ಕರ್‍ರವರು ದಲಿತರಿಗೆ ಮಾತ್ರ ಸೀಮಿತ ಅಲ್ಲ.
ಡಾ.ಅಂಬೇಡ್ಕರ್‍ರವರ ಜೀವನಯಾನ ಬಿಂಬಿಸುವ “ಭಾರತ
ಭಾಗ್ಯ ವಿಧಾತ” ಕಿರುಚಿತ್ರವನ್ನು ಜಯಂತಿಯಂದು
ಪ್ರದರ್ಶಿಸಬೇಕೆಂದರು.
ದಾವಣಗೆರೆ ವಿಶ್ವವಿದ್ಯಾನಿಲಯದ ಕನ್ನಡ ಪ್ರಾಧ್ಯಾಕರು
ಹಾಗೂ ಡಾ.ಬಾಬು ಜಗಜೀವನರಾಂ ರೀಸರ್ಚ್ ಸ್ಟಡಿ ಸೆಂಟರ್‍ನ ಛೇರ್ಮನ್
ಹೆಚ್.ವಿಶ್ವನಾಥ್ ಮಾತನಾಡಿ, ರಾಷ್ಟ್ರ ಕಂಡ ಎರಡು
ಧ್ರುವತಾರೆಗಳ ಜಯಂತಿಗಳನ್ನು ಅರ್ಥಪೂರ್ಣವಾಗಿ
ಆಚರಿಸಬೇಕು. ಬಾಬು ಜಗಜೀರಾಂರವರ ಮೌಲ್ಯಗಳ ಬಗ್ಗೆ
ಅನೇಕರಿಗೆ ತಿಳಿದಿಲ್ಲ. ಪ್ರಬುದ್ದ ಭಾರತದ ಕನಸು
ಅವರದ್ದಾಗಿತ್ತು. ಅಂಬೇಡ್ಕರ್ ಮತ್ತು ಜಗಜೀವನರಾಂರವರ
ಇಬ್ಬರ ಜಯಂತಿಗಳೂ ಒಂದೇ ವೇದಿಕೆಯಲ್ಲಿ ಆಚರಿಸಿದರೆ
ಸೂಕ್ತ. ಅಂಬೇಡ್ಕರ್‍ರವರು ಒಂದೇ ಸಮುದಾಯದ
ಆಸ್ತಿಯಲ್ಲ. ಇಡೀ ದೇಶದ ಆಸ್ತಿ ಅವರಾಗಿದ್ದು ಎಲ್ಲರೂ ಕೈಜೋಡಿಸಿ
ಜಯಂತಿಗಳ ಆಚರಣೆಯನ್ನು ಅರ್ಥಪೂರ್ಣಗೊಳಿಸಬೇಕು.
ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ
ಅಂಬೇಡ್ಕರ್ ಭವನದ ನಿರ್ಮಾಣ ಕುರಿತು ಎಂಎಲ್‍ಎ ಮತ್ತು
ಜನಪ್ರತಿನಿಧಿಗಳ ಸಭೆ ಕರೆದು ಶಂಕುಸ್ಥಾಪನೆ ಕುರಿತು
ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ಜಿಲ್ಲಾಧಿಕಾರಿಗಳು
ಹೇಳಿದಂತೆ ಬೇರೆ ಜಿಲ್ಲೆಗಳಿಗೆ ಮಾದರಿಯಾಗುವಂತೆ ಜಯಂತಿ
ಆಚರಣೆ ಆಗಬೇಕು ಎಂದರು,
ಆದಿಜಾಂಬವ ಸಂಘದ ಅಧ್ಯಕ್ಷರಾದ ಟಿ.ರಮೇಶ್ ಮಾತನಾಡಿ,
ಎಸ್‍ಸಿ/ಎಸ್‍ಟಿ ಸಮುದಾಯಕ್ಕೆ ಸೇರಿದ ಪ್ರತಿಭಾವಂತ
ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಸಹಾಯಧನ ನೀಡಿದರೆ
ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ ಎಂದು ಹೇಳಿದರು.
ಮುಖಂಡರಾದ ಹೆಚ್.ಹುಲಿಗೇಶ್ ಮಾತನಾಡಿ, ಅಂಬೇಡ್ಕರ್ ದಲಿತ
ಸಮುದಾಯಕ್ಕೆ ಮಾತ್ರ ಸೀಮಿತ ಅಲ್ಲ. ಅವರೊಬ್ಬ
ವಿಶ್ವನಾಯಕ. ಅಂಬೇಡ್ಕರ್ ಸಂವಿದಾನ ರಚಿಸದಿದ್ದರೆ, ಪ್ರೊ
ಬಿ.ಕೃಷ್ಣಪ್ಪ ಹೋರಾಡದಿದ್ದರೆ ನಾವಿಂದು ತಲೆ ಎತ್ತಿ ಓಡಾಡಲಿಕ್ಕೆ
ಸಾಧ್ಯವಾಗುತ್ತಿರಲಿಲ್ಲ. ಇಂತಹ ಮಹಾನ್‍ವ್ಯಕ್ತಿಗಳ
ಜಯಂತಿಯ ಸಭೆಗೆ ಕೇವಲ ದಲಿತ ಮುಖಂಡರನ್ನು
ಆಹ್ವಾನಿಸಿದರೆ ಸಾಲದು. ಶಾಸಕರು, ಎಲ್ಲ ಜನಪ್ರತಿನಿಧಿಗಳನ್ನು
ಕರೆಯಬೇಕು. ಹಾಗೂ ಎಲ್ಲರೂ ಒಳಗೊಂಡು ಜಯಂತಿ
ಆಚರಿಸಬೇಕೆಂದರು.
ಮುಖಂಡರು ಹಾಗೂ ಸಿಪಿಐ ಪಕ್ಷದ ಉಮೇಶ್ ಮಾತನಾಡಿ, ಎಲ್ಲಾ
ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು
ಜಯಂತಿಯಲ್ಲಿ ಪಾಲ್ಗೊಳ್ಳಬೇಕು. ವೇತನ ಸಹಿತ ರಜೆ
ತೆಗೆದುಕೊಂಡು ರಜೆ ಅನುಭವಿಸುವುದು ಸಲ್ಲದು.
ಕೋವಿಡ್ ನೆಪ ಮಾಡಿಕೊಂಡು ಕೇವಲ ಫೋಟೊ ಇಟ್ಟು
ಪೂಜಿಸುವುದು ಬೇಡ. ಹಾಗೂ ಗಾಂಧಿನಗರ, ಆವರಗೆರೆ,
ಭರತ್ ಕಾಲೋನಿ ಇಲ್ಲಿಂದ ಮೆರವಣಿಗೆ ಎಂಬ ಕಟ್ಟುಪಾಡು
ಹೋಗಬೇಕು. ನಗರದ ಯಾವುದೇ ಭಾಗದಲ್ಲಿ ಅಂಬೇಡ್ಕರ್
ಮೆರವಣಿಗೆ ಹೊರಡಬೇಕು. ಅವರು ಎಲ್ಲರಿಗೂ ಸಲ್ಲುವ
ಚೇತನವಾಗಿದ್ದು ಎಲ್ಲರೂ ಕೂಡಿ ಜಯಂತಿ ಆಚರಿಸಬೇಕು.
ಹಾಗೂ ಅವರ ಜೀವನ ಚರಿತ್ರೆ ಬಿಂಬಿಸುವ ವಾರ್ತಾ ಇಲಾಖೆ
ಪ್ರಸ್ತುತಪಡಿಸಿದ “ಭಾರತ ಭಾಗ್ಯ ವಿಧಾತ” ಕಿರುಚಿತ್ರ
ಗ್ರಾ.ಪಂ ಮಟ್ಟದಲ್ಲಿ ಪ್ರದರ್ಶನ ಮಾಡಬೇಕು. ಹಾಗೂ
ಅಂಬೇಡ್ಕರ್‍ರವರ ಮಹಾನಾಯಕ ಧಾರಾವಾಹಿಯನ್ನು ಸಂಜೆ
ಹೊತ್ತು ಚಂದನವಾಹಿನಿಯಲ್ಲಿ ಪ್ರಸಾರ ಮಾಡಬೇಕೆಂಬ ತಮ್ಮ
ಹಕ್ಕೊತ್ತಾಯವನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಬೇಕೆಂದರು.
ಮುಖಂಡರಾದ ಸೋಮ್ಲಾಪುರ ಹನುಮಂತಪ್ಪ
ಮಾತನಾಡಿ, ಯಾವುದೇ ಸಭೆ ಸಮಾರಂಭಗಳಲ್ಲಿ ದಲಿತರ
ಸಮಸ್ಯೆಗಳು ಇದುವರೆಗೆ ಪರಿಹಾರ ಕಂಡಿಲ್ಲ. ಈ ನಿಟ್ಟಿನಲ್ಲಿ
ಅರ್ಥಪೂರ್ಣ ಕೆಲಸಗಳು ಮತ್ತು ಎಸ್‍ಸಿಎಸ್‍ಟಿ ಅನುದಾನ,
ಯೋಜನೆಗಳು ಸಮರ್ಪಕ ಬಳಕೆ ಆಗಬೇಕು. ಹಾಗೂ
ಅಂಬೇಡ್ಕರ್‍ರ ಬಗ್ಗೆ ತಿಳಿದ ಪಂಡಿತರನ್ನು ಕರೆಸಿ ಅವರ
ವಿಚಾರಧಾರೆಯನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಕೆಲಸ
ಆಗಬೇಕು ಎಂದರು.
ಮುಖಂಡರಾದ ಹೆಗ್ಗೆರೆ ರಂಗಪ್ಪ ಮಾತನಾಡಿ, ಅಂಬೇಡ್ಕರ್
ಭವನ ನಿರ್ಮಾಣ ವಿಚಾರ 11 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು,
ಈ ಬಗ್ಗೆ ಜಿಲ್ಲಾಧಿಕಾರಿಗಳು ವಿಶೇಷ ಅಧಿಕಾರ ಬಳಸಿ ಕ್ರಮ
ಕೈಗೊಳ್ಳಬೇಕೆಂದರು. ಎಸಿ ಕಚೇರಿ ಜಾಗದಲ್ಲಿ ಅಂಬೇಡ್ಕರ್
ಭವನ ಸ್ಥಾಪನೆಯಾದರೆ ಅನುಕೂಲವಾಗುತ್ತದೆ ಎಂದ
ಅವರು ನಗರದ ಬಾಬು ಜಗಜೀವನರಾಂ ಭವನ ನಿರ್ವಹಣೆ
ಇಲ್ಲದೇ ಪಾಳು ಬಿದ್ದಿದೆ. ಕಿಟಕಿ ಇಲ್ಲ, ಪಕ್ಷಿಗಳು ಗೂಡು
ಕಟ್ಟಿಕೊಂಡಿವೆ. ಭವನ ನಿರ್ವಹಿಸಲು ಉಸ್ತುವಾರಿ ಸಮಿತಿ
ನೇಮಿಸಬೇಕೆಂದು ಅವರೊಂದಿಗೆ ಇತರೆ ಸದಸ್ಯರೂ
ಒತ್ತಾಯಿಸಿದರು.
ಅನೀಸ್ ಪಾಷಾ ಮಾತನಾಡಿ, ಅಂಬೇಡ್ಕರ್ ಜಯಂತಿ ಒಂದು ದಿನಕ್ಕೆ
ಸೀಮಿತ ಆಗಬಾರದು. ಒಂದು ತಿಂಗಳು ನಿರಂತರವಾಗಿ ಶಾಲೆ-
ಹಾಸ್ಟೆಲ್‍ಗಳಲ್ಲಿ ಅವರ ವಿಚಾರಧಾರೆ ತಿಳಿಸುವಂತಾಗಬೇಕು.
ಹಾಗೂ ಅಂಬೇಡ್ಕರ್ ಜಯಂತಿ ನಮಗೆ ಹಬ್ಬದ ರೀತಿಯಾಗಿದ್ದು
ನಾವು ಮಾಂಸಾಹಾರ ಮಾಡಿ ಸಂಭ್ರಮಿಸುವುದು ಇಷ್ಟ. ಆದರೆ
ಅಂದು ಮಾಂಸ ನಿಷೇಧಿಸಲಾಗಿದೆ. ಈ ನಿಷೇಧ ಯಾವ ಕಾರಣಕ್ಕೆ
ಎಂಬ ಸ್ಪಷ್ಟನೆ ನೀಡಬೇಕೆಂದು ಮನವಿ ಮಾಡಿದರು.
ಸಂತೋಷ್ ಮಾತನಾಡಿ, ಜಯಂತಿಯ ಅದ್ದೂರಿ ಆಚರಣೆಗೆ
ಅವಕಾಶ ಮಾಡಿಕೊಡಬೇಕು. ಹಾಗೂ ಹರಿಹರದಲ್ಲಿ ಅಂಬೇಡ್ಕರ್
ಭವನ ಜಾಗ ನಿಗದಿಪಡಿಸಲು ಖುದ್ದು ಡಿಸಿಯವರೇ
ಬರಬೇಕೆಂದು ಮನವಿ ಮಾಡಿದರು. ಎಸ್.ಶೇಖರಪ್ಪ ಮಾತನಾಡಿ
ನಗರದ ಕೆಇಬಿ ವೃತ್ತದ ಅಂಬೇಡ್ಕರ್ ಪುತ್ಥಳಿ ಸಣ್ಣದಿದ್ದು,
ಆಳೆತ್ತರದ ಪುತ್ಥಳಿ ಸ್ಥಾಪಿಸಬೇಕೆಂದರು.
ಸುಭಾಷ್‍ಚಂದ್ರ ಭೋಸ್ ಮಾತನಾಡಿ, ಜಿಲ್ಲಾಡಳಿತ ಕಚೇರಿ
ಆವರಣದಲ್ಲಿ ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಂ
ಪುತ್ಥಳಿಯನ್ನು ಸ್ಥಾಪಿಸಬೇಕೆಂದು ಮನವಿ ಮಾಡಿದರು.
ಡಿಎಸ್‍ಎಸ್ ಚನ್ನಗಿರಿ ತಾಲ್ಲೂಕು ಅಧ್ಯಕ್ಷ ಅಂಬೇಡ್ಕರ್ ಜಯಂತಿ
ಪ್ರತಿ ಬಾರಿ ಚುನಾವಣೆಯಿಂದ ಸರಳ ಆಚರಣೆ ಆಗುತ್ತಿದ್ದು
ಏಪ್ರಿಲ್‍ನಲ್ಲಿ ಬರುವ ಚುನಾವಣೆಯನ್ನು ಮೇಯಲ್ಲಿ
ನಡೆಸುವಂತೆ ಚುನಾವಣಾ ಆಯೋಗಕ್ಕೆ ಪ್ರಸ್ತಾವನೆ
ಸಲ್ಲಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.
ಮುಖಂಡರಾದ ತಿಪ್ಪೇಸ್ವಾಮಿ ಮಾತನಾಡಿ, ಜಿಲ್ಲಾಡಳಿತ
ಏರ್ಪಡಿಸುವ ಜಯಂತಿಗಳಿಗೆ ಸಮುದಾಯದವರು ಕೂಡ
ಜನರನ್ನು ಕರೆತಂದು ಜಯಂತಿಯನ್ನು ಅರ್ಥಪೂರ್ಣವಾಗಿ
ಆಚರಿಸಲು ಸಹಕರಿಸಬೇಕೆಂದರು.
ಡಿಸಿಯವರು ಪ್ರತಿಕ್ರಿಯಿಸಿ, ಮುಖಂಡರು ಸಭೆಯಲ್ಲಿ ನೀಡಿದ
ಸಲಹೆಯಂತೆ ಅಂಬೇಡ್ಕರ್‍ರವರ ಜಯಂತಿಯನ್ನು ಕೋವಿಡ್
ನಿಯಮಗಳನ್ನು ಅನುಸರಿಸಿ ತುಂಗಭದ್ರ ಸಭಾಂಗಣದಲ್ಲಿ
ಏಪ್ರಿಲ್ 14 ರಂದು ಅಂಬೇಡ್ಕರ್ ಜಯಂತಿಯನ್ನು ಆಚರಿಸಲು
ಕ್ರಮ ವಹಿಸಲಾಗುವುದು. ಶಿಷ್ಟಾಚಾರದಂತೆ ಆಹ್ವಾನ ಪತ್ರಿಕೆ
ಮತ್ತು ಕಾರ್ಯಕ್ರಮದ ಸಿದ್ದತೆ ಮಾಡಲಾಗುವುದು.
ಹಾಗೂ ಡಾ.ಅಂಬೇಡ್ಕರ್ ಜೀವನ, ಮೌಲ್ಯ ಮತ್ತು
ತತ್ವಗಳನ್ನು ಅಧ್ಯಯನ ಮಾಡಿರುವ ಓರ್ವ ವಾಗ್ಮಿಯನ್ನು
ಗುರುತಿಸಿ ಅಂದು ಉಪನ್ಯಾಸ ಕಾರ್ಯಕ್ರಮ
ಏರ್ಪಡಿಸಲಾಗುವುದು. ಹಾಗೂ ಇಬ್ಬರು ಪ್ರೌಢಶಾಲಾ
ಮಕ್ಕಳಿಂದ ಅಂಬೇಡ್ಕರ್‍ವರ ಕುರಿತು ಭಾಷಣ
ಏರ್ಪಡಿಸಲಾಗುವುದು.
ಅತಿ ಹೆಚ್ಚು ಅಂಕ ಪಡೆದ ಎಸ್‍ಸಿ/ಎಸ್‍ಟಿ ಸಮುದಾಯಕ್ಕೆ ಸೇರಿದ
ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಗುವುದು. ಹಾಗೂ
ಡಿಡಿಪಿಐ ರವರು ಪ್ರೌಢಶಾಲೆ, ಪಿಯು ಮತ್ತು ಪದವಿ-
ಸ್ನಾತಕೋತ್ತರ ಪದವಿ ಮೂರು ವಿಭಾಗಗಳಲ್ಲಿ ಅಂಬೇಡ್ಕರ್
ಜೀವನ ಸಾಧನೆ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸುವಂತೆ
ಸೂಚಿಸಿದರು.
ಮುಖಂಡರು ಡಾ.ಅಂಬೇಡ್ಕರ್‍ರವರ ಜಯಂತಿ ಯಾವಾಗಲೂ
ಚುನಾವಣೆ ಕಾರಣದಿಂದ ಅದ್ದೂರಿಯಾಗಿ ಆಚರಿಸಲು
ಅಡಚಣೆಯಾಗುತ್ತಿರುವ ಪ್ರಯುಕ್ತ ಈ ಬಾರಿ ಅದ್ದೂರಿಯಾಗಿ
ಆಚರಿಸಬೇಕು ಹಾಗೂ ಮೆರವಣಿಗೆ ಮಾಡಬೇಕೆಂದು
ಒತ್ತಾಯಿಸಿದ್ದು, ಕೊರೊನಾ ಎರಡನೇ ಅಲೆ ಭೀತಿಯಲ್ಲಿದ್ದೇವೆ.
ಕೊರೊನಾ ಪ್ರಕರಣಗಳು ಕಡಿಮೆಯಾದಾಗ ಅದ್ದೂರಿಯಾಗಿ
ಮೆರವಣಿಗೆ ಜೊತೆಗೆ ರಕ್ತದಾನ ಶಿಬಿರ, ಸ್ವಚ್ಚತಾ
ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗುವುದು
ಎಂದರು.
ಅಂಬೇಡ್ಕರ್ ಭವನ ಶಂಕುಸ್ಥಾಪನೆಗೆ ಕ್ರಮ :
ಜಿಲ್ಲಾಧಿಕಾರಿಗಳು, ಅಂಬೇಡ್ಕರ್ ಭವನದ ನಿರ್ಮಾಣ
ಮುಖಂಡರೆಲ್ಲರ ಒಕ್ಕೊರಲಿನ ಆಗ್ರಹ ಆಗಿದೆ. ಭವನ
ನಿರ್ಮಾಣಕ್ಕೆ ರೂ.2.10 ಕೋಟಿ ಬಿಡುಗಡೆ ಆಗಿದ್ದು ಆಡಳಿತಾತ್ಮಕ
ಅನುಮೋದನೆಗೆ ಕಡತ ಕಾರ್ಯದರ್ಶಿಗಳ
ಕಚೇರಿಯಲ್ಲಿದೆ. ಎಸಿಎಸ್‍ರವರೊಂದಿಗೆ ಮಾತನಾಡಿ ಅಂಬೇಡ್ಕರ್
ಜಯಂತಿಯೊಳಗೆ ಮಂಜೂರಾತಿ ಪಡೆಯುವ ಭರವಸೆ
ವ್ಯಕ್ತಪಡಿಸಿದರು.
ಮುಖಂಡರಾದ ಮಲ್ಲಿಕಾರ್ಜುನ, ಐರಣಿ ಚಂದ್ರು ಇತರೆ
ಮುಖಂಡರು ಮಾತನಾಡಿದರು. ದಲಿತ ಸಂಘಟನೆಗಳ
ಮುಖಂಡರು ಹಾಜರಿದ್ದರು.