ಪದವಿ ಪ್ರಧಾನ

ಏ.08 ರಂದು ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ

8ನೇ ಘಟಿಕೋತ್ಸವ

ದಾವಣಗೆರೆ ವಿಶ್ವವಿದ್ಯಾನಿಲಯ 8ನೇ ಘಟಿಕೋತ್ಸವವನ್ನು
ಏ.8 ರ ಬೆಳಿಗ್ಗೆ 11 ಗಂಟೆಗೆ ವಿಶ್ವವಿದ್ಯಾನಿಲಯದ ಆವರಣದಲ್ಲಿ
ಏರ್ಪಡಿಸಲಾಗಿದ್ದು, ಈ ಬಾರಿಯ  ಘಟಿಕೋತ್ಸವದಲ್ಲಿ ಒಟ್ಟು 13,207
ವಿದ್ಯಾರ್ಥಿಗಳಿಗೆ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ
ಪ್ರಧಾನ ಮಾಡಲಾಗುತ್ತಿದೆ. ಅಲ್ಲದೆ 44 ವಿದ್ಯಾರ್ಥಿಗಳು 74
ಚಿನ್ನದ ಪದಕಗಳನ್ನು ಪಡೆಯಲಿದ್ದಾರೆ ಎಂದು ಕುಲಪತಿ
ಪ್ರೊ. ಶರಣಪ್ಪ ವಿ.ಹಲಸೆ ತಿಳಿಸಿದರು.
ಗುರುವಾರ ವಿಶ್ವವಿದ್ಯಾನಿಲಯದಲ್ಲಿ ನಡೆದ
ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, 2019-20 ನೇ ಸಾಲಿನ
ಚಿನ್ನದ ಪದಕ ಗಳಿಕೆಯಲ್ಲಿ ಮಹಿಳಾ ವಿದ್ಯಾರ್ಥಿಗಳು
ಮುನ್ನಡೆ ಸಾಧಿಸಿದ್ದು, 34 ವಿದ್ಯಾರ್ಥಿನಿಯರು ಪದಕಗಳನ್ನು
ಪಡೆದಿದ್ದಾರೆ. ಗಣಿತ ವಿಭಾಗದ ವಿದ್ಯಾರ್ಥಿನಿ ಮೇಘ ಎನ್.ಎಸ್. 4
ಪದಕಗಳೊಂದಿಗೆ ಚಿನ್ನದ ಹುಡುಗಿ ಗೌರವಕ್ಕೆ
ಪಾತ್ರರಾಗಿದ್ದಾರೆ. ಹಾಗೂ ಈ ಬಾರಿ ವಿವಿಧ ವಿಭಾಗಗಳಲ್ಲಿ 7 ಜನರಿಗೆ
ಪಿಎಚ್.ಡಿ ಹಾಗೂ ಇಬ್ಬರಿಗೆ ಎಂ.ಫಿಲ್ ಪದವಿಯನ್ನು ಪ್ರಧಾನ
ಮಾಡಲಾಗುತ್ತಿದೆ ಎಂದರು. 
ಈ ಬಾರಿ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳ
ಒಟ್ಟು 74 ಸ್ವರ್ಣ ಪದಕಗಳನ್ನು 43 ವಿದ್ಯಾರ್ಥಿಗಳು
ಹಂಚಿಕೊಂಡಿದ್ದಾರೆ. ಸ್ನಾತಕ ವಿಭಾಗದಲ್ಲಿ 19 ಸ್ವರ್ಣ
ಪದಕಗಳನ್ನು 12 ವಿದ್ಯಾರ್ಥಿಗಳು ಪಡೆಯಲಿದ್ದಾರೆ. ಅವರಲ್ಲಿ
3 ಪುರುಷ ಮತ್ತು 9 ಮಹಿಳಾ ವಿದ್ಯಾರ್ಥಿಗಳಿದ್ದಾರೆ.
ಸ್ನಾತಕೋತ್ತರ ಪದವಿಯಲ್ಲಿ 29 ವಿದ್ಯಾರ್ಥಿಗಳು 52
ಪದಕಗಳನ್ನು ಗಳಿಸಿದ್ದಾರೆ. ಇವರಲ್ಲಿ 7 ಪುರುಷ ಹಾಗೂ 22
ಮಹಿಳಾ ವಿದ್ಯಾರ್ಥಿಗಳು ಇದ್ದಾರೆ. ಸ್ನಾತಕ ಪದವಿಯ 11 ಹಾಗೂ
ಸ್ನಾತಕೋತ್ತರ ಪದವಿಯ 24 ಸೇರಿ ಒಟ್ಟು 35 ವಿದ್ಯಾರ್ಥಿಗಳು
ಪ್ರಥಮ ರ್ಯಾಂಕ್ ಗಳಿಸಿದ್ದಾರೆ ಎಂದು ಮಾಹಿತಿ ನೀಡಿದರು.
ವಿಶ್ವವಿದ್ಯಾನಿಲಯವು 2019-20ರ ಅವಧಿಯಲ್ಲಿ ನಡೆಸಿದ
ಪರೀಕ್ಷೆಯಲ್ಲಿ ತೇರ್ಗಡೆಯಾದ 11,193 ಪದವಿಯ ಹಾಗೂ
2,014 ಸ್ನಾತಕೋತ್ತರ ವಿದ್ಯಾರ್ಥಿಗಳು ಪದವಿ ಪಡೆಯಲಿದ್ದಾರೆ.
ಈ ಬಾರಿ ಪದವಿಯಲ್ಲಿ 6,873 ಮಹಿಳೆಯರು ಹಾಗೂ 4,319
ಪುರುಷ ವಿದ್ಯಾರ್ಥಿಗಳು ಬಿಎ, ಬಿಕಾಂ, ಬಿಬಿಎಂ, ಬಿಎಸ್ಸಿ, ಬಿಸಿಎ,
ಬಿಎಸ್‍ಡಬ್ಲ್ಯೂ, ಬಿವಿಎ, ಬಿ.ಇಡಿ ಹಾಗೂ ಬಿಬಿಇಡಿ ಪರೀಕ್ಷೆಯಲ್ಲಿ
ತೇರ್ಗಡೆಯಾಗಿ ಪದವಿ ಪುರಸ್ಕಾರಕ್ಕೆ ಅರ್ಹರಾಗಿದ್ದಾರೆ.

ಸ್ನಾತಕೋತ್ತರ ವಿಭಾಗದಲ್ಲಿ 1,189 ಮಹಿಳಾ ಮತ್ತು 824
ಪುರುಷ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿಯನ್ನು
ಪಡೆಯುವರು.
ಗೌರವ ಡಾಕ್ಟರೇಟ್ ಪದವಿ : ವಿವಿಧ ಕ್ಷೇತ್ರಗಳಲ್ಲಿ
ಗಮನಾರ್ಹ ಸಾಧನೆ ಮಾಡಿದ ಇಬ್ಬರು ಗಣ್ಯರಾದ ಸಂಸದ
ಜಿ.ಎಂ.ಸಿದ್ದೇಶ್ವರ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ
ಗಮನಾರ್ಹ ಸೇವೆ ಸಲ್ಲಿಸಿದ ಬೆಂಗಳೂರು ವೈದ್ಯಕೀಯ
ಕಾಲೇಜು ಮತ್ತು ಆಸ್ಪತ್ರೆಯ ಪ್ರಾಧ್ಯಾಪಕ  ಡಾ. ಎಂ.ಕೆ.
ರಮೇಶ್ ಅವರಿಗೆ ಗೌರವ ಡಾಕ್ಟರೇಟ್ ಪುರಸ್ಕಾರ
ನೀಡಲಾಗುವುದು ಎಂದರು.
ಡಾ.ಗುರುರಾಜ ಕರಜಗಿ ಅವರಿಂದ ಘಟೀಕೋತ್ಸವ ಭಾಷಣ : ಈ
ಬಾರಿಯ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ
ಅತಿಥಿಗಳಾಗಿ ಅಕಾಡೆಮಿ ಫಾರ್ ಕ್ರಿಯೇಟಿವ್ ಟೀಚಿಂಗ್‍ನ ಸಂಸ್ಥಾಪಕ
ಅಧ್ಯಕ್ಷರು ಹಾಗೂ ಶಿಕ್ಷಣ ತಜ್ಞರಾದ ಡಾ. ಗುರುರಾಜ್ ಕರಜಗಿ
ಅವರು ಘಟಿಕೋತ್ಸವ ಭಾಷಣ ಮಾಡಲಿದ್ದಾರೆ.
ಕೊರೊನಾ ಸಂಕಷ್ಟದ ದಿನಗಳಲ್ಲೂ ಸುಸಜ್ಜಿತವಾಗಿ
ಪರೀಕ್ಷೆ ನಡೆಸಿದ್ದು, ಈ ಸಂದರ್ಭದಲ್ಲಿ ಹಾಜರಾಗಲು
ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಹಾಗೂ ಅನುತ್ತಿರ್ಣರಾದ
ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಸಿ ಫಲಿತಾಂಶ ಪ್ರಕಟಿಸಿ
ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿ ಮಾಡಿಕೊಟ್ಟಿದೆ.
ಈ ಸಾಲಿನಲ್ಲಿ ನಡೆದ ಪರೀಕ್ಷೆಯಲ್ಲಿ ಸ್ನಾತಕ ಪದವಿಯಲ್ಲಿ
ಶೇ.60.57 ಹಾಗೂ ಸ್ನಾತಕೋತ್ತರ ಪದವಿಯಲ್ಲಿ
ಶೇ.95.31ರಷ್ಟು ಫಲಿತಾಂಶ ಬಂದಿದೆ. ವಿದ್ಯಾರ್ಥಿಗಳ ಶೈಕ್ಷಣಿಕ
ಪ್ರಗತಿಗೆ ಪೂರಕವಾಗಿ ವಿವಿಯ ಎಲ್ಲಾ ಪ್ರಾಧ್ಯಾಪಕ
ವೃಂದದವರು ಶ್ರಮಿಸಿದ್ದು, ಪಠ್ಯ ಮತ್ತು ಪ್ರಾಯೋಗಿಕ
ತರಗತಿಗಳನ್ನು ಮುಗಿಸಿ ವಿದ್ಯಾರ್ಥಿಗಳನ್ನು ಪರೀಕ್ಷೆಗೆ
ಸಜ್ಜು ಮಾಡಿರುವುದು ವಿಶೇಷ ಎಂದರು.
ಕೊರೊನಾ ಸಂದರ್ಭದಲ್ಲಿ ವಿಶ್ವವಿದ್ಯಾನಿಲಯದ 173
ಶಿಕ್ಷಕರು ಆನ್‍ಲೈನ್ ಮೂಲಕ ಒಟ್ಟು 4176 ತರಗತಿಗಳು, 63
ಕಾರ್ಯಾಗಾರ, 21 ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ
ಮಟ್ಟದ ವಿಚಾರ ಸಂಕಿರಣಗಳನ್ನು ಹಮ್ಮಿಕೊಳ್ಳಲಾಗಿದ್ದು, 154
ವಿಶ್ವವಿದ್ಯಾನಿಲಯ ಮಟ್ಟದ ವಿಚಾರಗೋಷ್ಠಿಗಳನ್ನು
ನಡೆಸಲಾಗಿದೆ. ದಾವಣಗೆರೆ ವಿಶ್ವವಿದ್ಯಾನಿಲಯದ ಸಾಮಾಜಿಕ ಜಾಲತಾಣ
ಹಾಗೂ ಆನ್‍ಲೈನ್ ಪೋರ್ಟಲ್ ಮೂಲಕ ವಿದ್ಯಾರ್ಥಿಗಳ ಅಭ್ಯಾಸಕ್ಕೆ
ಅನುಕೂಲವಾಗಲು ಸುಮಾರು 2100 ಮಾಹಿತಿ ಮತ್ತು
ಪಾಠಗಳ ಟಿಪ್ಪಣಿಗಳನ್ನು ಒದಗಿಸಲಾಗಿತ್ತು.
ಇದೆಲ್ಲದರ ಪ್ರತಿಫಲದಿಂದಾಗಿ ದಾವಣಗೆರೆ ವಿಶ್ವವಿದ್ಯಾನಿಲಯವು
ದೇಶದ ವಿಶ್ವವಿದ್ಯಾನಿಲಯಗಳ ಶೈಕ್ಷಣಿಕ ಇತಿಹಾಸದಲ್ಲಿ ದಾಖಲೆ
ನಿರ್ಮಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ ಎಂದು
ಸಂತಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮೌಲ್ಯಮಾಪನ ಕುಲಸಚಿವರಾದ
ಪ್ರೊ. ಅನಿತಾ ಹೆಚ್.ಎಸ್, ಕುಲಸಚಿವ ಪ್ರೊ. ಗಾಯತ್ರಿ ದೇವರಾಜ,
ಹಣಕಾಸು ಅಧಿಕಾರಿ ಪ್ರಿಯಾಂಕ.ಡಿ, ಸಿಂಡಿಕೇಟ್ ಸದಸ್ಯರಾದ
ವಿಜಯಲಕ್ಷ್ಮೀ, ವೀರಭದ್ರಯ್ಯ, ಶ್ರೀಧರ್.ಎಸ್,
ಹೆಚ್.ಜಿ.ಕೃಷ್ಣಮೂರ್ತಿ, ವೀರಣ್ಣ ಗೌಡರ್, ಪ್ರಶಾಂತ್ ಬಣಕಾರ್,
ಜ್ಯೋತಿ.ಎಮ್, ಇನಾಯತ್ ವುಲ್ಲಾ ಸೇರಿದಂತೆ ಇನ್ನಿತರರು
ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *