ಕೋವಿಡ್ ಲಸಿಕಾ ಜಾಗೃತಿ ಕಾರ್ಯಕ್ರಮ

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತಾಲ್ಲೂಕು
ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ಸ್ಥಳೀಯ ಗ್ರಾ.ಪಂ
ಸಹಯೋಗದಲ್ಲಿ ಕೋವಿಡ್ ಲಸಿಕೆ, ಮಾಸ್ಕ್ ಹಾಗೂ ಕೋವಿಡ್ 2ನೇ
ಅಲೆ ತಡೆಯುವ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು
ಕುರಿತು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ನೇತೃತ್ವದಲ್ಲಿ
ಕೋವಿಡ್ ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.
ಶುಕ್ರವಾರ ನಗರದ ಭಾಷಾನಗರ, ಬೀಡಿ ಲೇಔಟ್,
ಆಜಾದ್‍ನಗರ, ಮೆಹಬೂಬ್ ನಗರ, ಶಿವ ನಗರ ಹಾಗೂ
ಸುತ್ತಮುತ್ತಲಿನ ಪ್ರದೇಶಗಳಿಗೆ ಭೇಟಿ ನಿಡಿದ ಜಿಲ್ಲಾಧಿಕಾರಿ
ಮಹಾಂತೇಶ್ ಬೀಳಗಿ, ಎಸಿ ಮಮತ ಹೊಸಗೌಡರ್, ತಹಶೀಲ್ದಾರ್
ಗಿರೀಶ್ ಸೇರಿದಂತೆ ಎಲ್ಲಾ ಕಾರ್ಯಕ್ರಮ ಅನುಷ್ಠಾನಧಿಕಾರಿಗಳು
ಮನೆಮನೆಗೆ ಭೇಟಿ ನೀಡಿ ಕೋವಿಡ್ ಲಸಿಕೆ, ಮಾಸ್ಕ್, ಸಾಮಾಜಿಕ
ಅಂತರದ ಕುರಿತು ಅರಿವು ಮೂಡಿಸಿದರು.
ಈ ವೇಳೆ ಆಶಾ ಕಾರ್ಯಕರ್ತೆಯರು ‘ಜನಸಂದಣಿ
ಪ್ರದೇಶದಿಂದ ದೂರವಿರಿ’, ‘ನಿಮ್ಮ ಕಣ್ಣು, ಮೂಗು,
ಬಾಯಿಗಳನ್ನು ಮುಟ್ಟಿಕೊಳ್ಳಬೇಡಿ’, ‘1977 ಕ್ಕೆ ಮೊದಲು
ಹುಟ್ಟಿದ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು’, ‘ಕೈಗಳನ್ನು
ನೈರ್ಮಲ್ಯದಿಂದ ಕಾಪಾಡಿಕೊಳ್ಳಿ’ ಎಂಬಂತಹ ಘೋಷಣೆಗಳನ್ನು
ಕೂಗುತ್ತ ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತ ಮಾಸ್ಕ್
ವಿತರಿಸಿದರು.
ಜಾಥಾ ಮುಗಿದ ಬಳಿಕ ಆಜಾದ್‍ನಗರ ಪೊಲೀಸ್ ಠಾಣೆಗೆ ಭೇಟಿ
ನೀಡಿ ನಂತರ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಕಳೆದ ವರ್ಷ ಹಳೆ ದಾವಣಗೆರೆ
ಕೊರೊನದಂತಹ ಗಂಡಾಂತರ ಎದುರಿಸಿ, ಅದರಿಂದ ಪಾರಾಗಿದೆ
ಎಂಬುದು ನಮಗೆಲ್ಲ ತಿಳಿದ ವಿಚಾರ. ಈ ದೃಷ್ಟಿಯಿಂದ ನಾವು ಈ
ಭಾಗದಲ್ಲಿ ಹೆಚ್ಚಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ
ಕಾಯ್ದುಕೊಳ್ಳುವುದು, ಲಸಿಕೆ ಹಾಕಿಸಿಕೊಳ್ಳುವುದು ಹೀಗೆ
ಕೋವಿಡ್-19 ಕುರಿತು ಅನೇಕ ಜಾಗೃತಿ
ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ
ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿದ್ದೇವೆ ಎಂದರು.
ಈಗಾಗಲೇ ಜಿಲ್ಲಾದ್ಯಂತ 1 ಲಕ್ಷದ 22 ಸಾವಿರ ಜನರಿಗೆ ಲಸಿಕೆ
ಹಾಕಿಸಿದ್ದು, 45 ವರ್ಷದ ಮೇಲ್ಪಟ್ಟ 93 ಸಾವಿರ ಜನರಿಗೆ ಲಸಿಕೆ
ನೀಡಲಾಗಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಹೆಚ್ಚಾಗಬೇಕು.
ಆದ ಕಾರಣ ಸೈಯದ್ ಚಾರ್ಲಿ ಮಗ, ನೂರ್ ಜಾನ್ ಸೇರಿದಂತೆ ಈ
ಭಾಗದ ಸ್ಥಳೀಯ ಕಾರ್ಪೋರೇಟರ್, ಮುಖಂಡರ

ಸಮ್ಮುಖದಲ್ಲಿ ಲಸಿಕಾ ಅಭಿಯಾನವನ್ನು ಏರ್ಪಡಿಸಿ ಜನರಲ್ಲಿ
ಜಾಗೃತಿ ಮೂಡಿಸುತ್ತೇವೆ.
ಸಾರ್ವಜನಿಕರು ಲಸಿಕಾ ಕಾರ್ಯಕ್ರಮದ ಪ್ರಯೋಜನ
ಪಡೆದುಕೊಂಡು ತಮ್ಮನ್ನ ತಾವು ಕೊರೊನಾದಿಂದ
ಸಂಭವಿಸುವ ಮರಣದಿಂದ ರಕ್ಷಿಸಿಕೊಳ್ಳಬೇಕು ಎಂದು
ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಡಿಹೆಚ್‍ಒ ಡಾ.ನಾಗರಾಜ್ ಮಾತನಾಡಿ, ಪ್ರಾಥಮಿಕ ಆರೋಗ್ಯ
ಕೇಂದ್ರದಡಿ ಈಗಾಗಲೇ 115 ಉಪಕೇಂದ್ರಗಳಲ್ಲಿ
ವ್ಯಾಕ್ಸಿನೇಷನ್ ನೀಡಲಾಗುತ್ತಿದ್ದು, ಪ್ರತಿ ಒಂದು
ಉಪಕೇಂದ್ರಕ್ಕೆ 50 ಜನರನ್ನು ಗುರಿ ಮಾಡಿ ಲಸಿಕೆ
ನೀಡಲಾಗುತ್ತಿದೆ. ಹಾಗೂ ನಗರದಲ್ಲಿ ಒಂದು ದಿನಕ್ಕೆ 10 ಸಾವಿರ
ಜನರಿಗೆ ಲಸಿಕೆ ನೀಡುವ ಗುರಿ ಹೊಂದಿದ್ದು, 6 ಸಾವಿರ ಜನರನ್ನು
ತಲುಪುತ್ತಿದ್ದೇವೆ. ಇಲ್ಲಿಯವರೆಗೂ ಒಟ್ಟು 93 ಸಾವಿರ ಜನರಿಗೆ
ಕೋವಿಡ್ ವ್ಯಾಕ್ಸಿನೇಷನ್ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಈ
ಸಂಖ್ಯೆ ಹೆಚ್ಚಿಸಲು ಎಲ್ಲಾ ಇಲಾಖೆಯ ಪ್ರತಿನಿಧಿಗಳು ಸರ್ವೆ
ನಡೆಸುವ ಮೂಲಕ ಶ್ರಮವಹಿಸುತ್ತಿದ್ದು, ಸಾರ್ವಜನಿಕರಲ್ಲೂ
ಜಾಗೃತಿ ಮೂಡಿಸುತ್ತಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ
ಡಾ.ವೆಂಕಟೇಶ್.ಎಲ್.ಡಿ, ಆರ್.ಎಸ್.ಹೆಚ್ ಅಧಿಕಾರಿ ಡಾ.ಮೀನಾಕ್ಷಿ, ಡಿಎಲ್‍ಒ
ಡಾ.ಮುರುಳೀಧರ್, ಡಿಎಫ್‍ಒ ಡಾ.ರೇಣುಕಾರಾಧ್ಯ, ಡಿಎಂಒ
ಡಾ.ನಟರಾಜ್, ಆರೋಗ್ಯ ಶಿಕ್ಷಣಾಧಿಕಾರಿ ಸುರೇಶ್ ಬಾರ್ಕಿ,
ಡಾ.ಮಂಜುಳ, ಡಾ.ವೇದಮೂರ್ತಿ, ಡಾ.ಸುನಿತ, ಡಾ.ವೆಂಕಟೇಶ್,
ಡಾ.ಉಮಾಪತಿ ಸೇರಿದಂತೆ ಇತರೆ ಎಲ್ಲಾ ಆರೋಗ್ಯ ಅಧಿಕಾರಿಗಳು
ಹಾಗೂ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *