ದಾವಣಗೆರೆ: ಕ್ರೀಡಾ ಸಾಧನೆಗೆ ಯಾವುದೇ ಜಾತಿ, ಧರ್ಮ, ಬಡವ, ಶ್ರೀಮಂತನೆಂಬ ಬೇಧವಿಲ್ಲ. ನಿರಂತರ ಪ್ರಯತ್ನದಿಂದ ಎಂತಹವರೂ ಸಹ ಸಾಧನೆ ಮೆಟ್ಟಿಲು ಏರಬಹುದು ಎಂದು ದಾವಣಗೆರೆ ಜಿಲ್ಲಾ ಮಡಿವಾಳ ಮಾಚಿದೇವ ಸಂಘದ ಕಾರ್ಯಾಧ್ಯಕ್ಷ, ಕಾರ್ಮಿಕ ಮುಖಂಡ ಆವರಗೆರೆ ಹೆಚ್.ಜಿ.ಉಮೇಶ್ ಅಭಿಪ್ರಾಯಪಟ್ಟರು.

ಭಾನುವಾರ ನಗರದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಿಲ್ಲಾ ಪಂಚಾಯತಿ ಎದುರು ಇರುವ ಮಡಿಕಟ್ಟೆ(ಧೋಭಿಘಾಟ್)ಯಲ್ಲಿ ಜಿಲ್ಲಾ ಮಾಚಿದೇವ ಮಡಿಕಟ್ಟೆ ಯುವಕರ ಸಂಘದಿಂದ ಆಯೋಜಿಸಲಾಗಿದ್ದ ಸರಳ ಸನ್ಮಾನ ಕಾರ್ಯಕ್ರಮದಲ್ಲಿ ಉಕ್ಕಿನ ಕ್ರೀಡೆಗಳಲ್ಲಿ ಈ ಹಿಂದೆ ಸಾಧನೆ ಮಾಡಿದ್ದ ಬಿ.ರವಿಕುಮಾರ್ ಹಾಗೂ ವೈ.ಕೃಷ್ಣಮೂರ್ತಿ ಇವರಿಗೆ ಸನ್ಮಾನಿಸಿದ ನಂತರ ಮಾತನಾಡಿದರು.

ಮಡಿವಾಳ ಸಮುದಾಯದ ಕುಲಕಸುಬಾದ ಬಟ್ಟೆತೊಳೆಯುವ ಜೊತೆಯಲ್ಲೇ ಈ ಇಬ್ಬರು ಉಕ್ಕಿನೆ ಕ್ರೀಡೆಗಳಲ್ಲಿ ತೊಡಗಿ ವಿವಿಧ ಹಂತದಲ್ಲಿ ಭಾಗವಹಿಸಿ ಜಿಲ್ಲೆ ಮತ್ತು ರಾಜ್ಯಕ್ಕೆ ಕೀರ್ತಿ ತಂದಿದ್ದರು. ಆದರೆ, ಇದೀಗ ಕ್ರೀಡೆಗಳನ್ನು ಪಾಲ್ಗೊಳ್ಳುವುದನ್ನು ಬಿಟ್ಟು ಕೇವಲ ಬಟ್ಟೆ ತೊಳೆಯುವ ಕೆಲಸದಲ್ಲಿ ನಿರತರಾಗಿದ್ದಾರೆ. ಕಾರಣ ಇವರು, ತಮ್ಮ ವೃತ್ತಿಯ ಜೊತೆಗೆ ಉಕ್ಕಿನ ಕ್ರೀಡೆಗಳತ್ತ ಗಮನ ಹರಿಸಿ ಉನ್ನತ ಸಾಧನೆ ಮಾಡಬೇಕು. ಆ ಮೂಲಕ ರಾಜ್ಯ, ರಾಷ್ಟ್ರಮಟ್ಟದಲ್ಲೂ ಹೆಸರು ಮಾಡಬೇಕೆಂದು ಕರೆ ನೀಡಿದರು.

ಈ ಇಬ್ಬರನ್ನು ಈಚೆಗೆ ದಾವಣಗೆರೆಯಲ್ಲಿ ನಡೆದ ಗ್ರೂಪ್ಸ್ ಆಫ್ ಐರನ್ಸ್‍ಗೇಮ್ಸ್‍ನ ಪದಾಧಿಕಾರಿಗಳು ಈ ಹಿಂದೆ ಮಾಡಿದ್ದ ಸಾಧನೆಯನ್ನು ಗುರುತಿಸಿ ಸನ್ಮಾನಿಸಿದ್ದರು. ಈ ನಿಟ್ಟಿನಲ್ಲಿ ಸಮಾಜದ ವತಿಯಿಂದ ಭಾನುವಾರ ಮಡಿಕಟ್ಟೆಯಲ್ಲೇ ಅವರ ಕೆಲಸದ ಸ್ಥಳದಲ್ಲೇ ಗೌರವಿಸಲಾಯಿತು.

ಪತ್ರಕರ್ತ, ಸಮಾಜದ ಮುಖಂಡ ಎಂ.ವೈ.ಸತೀಶ್ ಮಾತನಾಡಿ, ಉಕ್ಕಿನ ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕವಾಗಿ ಮಾತ್ರವಲ್ಲದೇ, ಮಾನಸಿಕವಾಗಿಯೂ ಬಲಾಢ್ಯರಾಗಬಹುದು. ಈ ನಿಟ್ಟನಲ್ಲಿ ಯಾವುದೇ ದುಶ್ಚಟಗಳಿಗೆ ದಾಸರಾಗದೇ ವೃತ್ತಿಯ ಜೊತೆ ಪ್ರವೃತ್ತಿಯನ್ನಾಗಿ ಉಕ್ಕಿನ ಕ್ರೀಡೆಗಳನ್ನು ಮೈಗೂಡಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಸಮಾಜದ ಹಿರಿಯ ಮುಖಂಡರಾದ ಎಂ.ಮಲ್ಲೇಶಪ್ಪ, ದೊಡ್ಡಾಳು ನಿಂಗಪ್ಪ, ಕೃಷ್ಣಪ್ಪ, ಶಿವಮೂರ್ತಪ್ಪ, ಮಡಿಕಟ್ಟೆಯ ಅಧ್ಯಕ್ಷ ಫಕ್ಕೀರಪ್ಪ, ಗೌ.ಅಧ್ಯಕ್ಷ ಅಡಿವೆಪ್ಪ, ಕಾರ್ಯದರ್ಶಿ ಎಂ.ರವಿಕುಮಾರ್, ಎಂ.ವೈ.ರಮೇಶ್, ಹೆಚ್.ಬಿ.ಬಸವರಾಜು, ಎಂ.ನಾಗರಾಜ, ಮಂಜುನಾಥ್, ನಿಂಗರಾಜು, ಹನುಮಂತಪ್ಪ, ಮಾಲತೇಶ್, ಮಂಜುನಾಥ್ ಇತರರು ಇದ್ದರು.

Leave a Reply

Your email address will not be published. Required fields are marked *