ಎಸ್ಸೆಸ್
ದಾವಣಗೆರೆ: ಇಂದಿನ ದೇಶದ ಆರ್ಥಿಕ ಮತ್ತು
ಆರೋಗ್ಯ ಕ್ಷೇತ್ರದ ಸಂಕಷ್ಟ ಸಮಯದಲ್ಲಿ
ದೇಶವನ್ನು ಉಳಿಸಿ ಬೆಳೆಸುವಲ್ಲಿ ವೈದ್ಯರು ಮತ್ತು
ಲೆಕ್ಕಪರಿಶೋಧಕರ ಕೆಲಸ ಮಹತ್ವದ್ದಾಗಿದ್ದು ಈ
ನಿಟ್ಟಿನಲ್ಲಿ ಎರಡು ಕ್ಷೇತ್ರದವರು ಹೆಚ್ಚಿನ ಜವಾಬ್ದಾರಿಯುತ
ಕೆಲಸ ಮಾಡಬೇಕಾಗಿದೆ ಎಂದು ದಾವಣಗೆರೆ ದಕ್ಷಿಣ
ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ|| ಶಾಮನೂರು
ಶಿವಶಂಕರಪ್ಪನವರು ತಿಳಿಸಿದರು.
ನಗರದ ರೋಟರಿ ಬಾಲಭವನದಲ್ಲಿ ವೈದ್ಯರ ಮತ್ತು
ಲೆಕ್ಕಪರಿಶೋಧಕರ ದಿನದ ಅಂಗವಾಗಿ ಏರ್ಪಡಿಸಿದ್ದ
ಕಾರ್ಯಕ್ರಮದಲ್ಲಿ ವೈದ್ಯರು ಮತ್ತು
ಲೆಕ್ಕಪರಿಶೋಧಕರನ್ನು ಸನ್ಮಾನಿಸಿ ಅವರು
ಮಾತನಾಡಿದರು.
ದೇಶದ ಆರೋಗ್ಯ ಮತ್ತು ಆರ್ಥಿಕ ಕ್ಷೇತ್ರದಲ್ಲಿ
ಸಾಕಷ್ಟು ಸಮಸ್ಯೆಗಳು ಉಂಟಾಗಿವೆ. ಇಂತಹ ಸಂಕಷ್ಟದ
ಸಮಯದಲ್ಲಿ ಕಳೆದ 15 ತಿಂಗಳಿನಿಂದ ವೈದ್ಯರು ಹಗಲು
ರಾತ್ರಿಯೆನ್ನದೇ ಕಾರ್ಯನಿರ್ವಹಿಸುತ್ತಿದ್ದಾರೆ.
ಲೆಕ್ಕಪರಿಶೋಧಕರು ಸಹ ಕಾರ್ಯನಿರ್ವಹಿಸುತ್ತಿದ್ದು,
ದೇಶ ಆರೋಗ್ಯದ ಜೊತೆ ಆರ್ಥಿಕ ಸಂಕಷ್ಟದಿಂದಲೂ
ಹೊರಬರಬೇಕಾಗಿದೆ ಎಂದರು.
ಲೆಕ್ಕಪರಿಶೋಧಕರು, ಉದ್ಯಮಿಗಳೂ ಆದ ಅಥಣಿ
ವೀರಣ್ಣನವರು ಮಾತನಾಡಿ ಡಾ|| ಶಾಮನೂರು
ಶಿವಶಂಕರಪ್ಪನವರು ಮತ್ತು ಮಲ್ಲಿಕಾರ್ಜುನ್ ಅವರ
ದೂರದೃಷ್ಟಿಯಿಂದ ದಾವಣಗೆರೆ ಜನರ ಜೀವ ಉಳಿಸುವ ಕೆಲಸ
ನಡೆಯುತ್ತಿದೆ. ಅನೇಕ ಅಡೆತಡೆಗಳು ಬಂದರೂ ಸಹ
ಅವುಗಳನ್ನು ಎದುರಿಸಿ ದಾವಣಗೆರೆ ಜನತೆಗೆ ಲಸಿಕೆ
ನೀಡುತ್ತಿದ್ದಾರೆ ಎಂದು ಪ್ರಶಂಶಿಸಿದರು.
ಇದೇ ವೇಳೆ ಹಿರಿಯ ಲೆಕ್ಕಪರಿಶೋಧಕರಾದ ಅಥಣಿ
ವೀರಣ್ಣ ಹಾಗೂ ವೈದ್ಯರ ಪರವಾಗಿ ಡಾ|| ಎಸ್.ಬಿ.ಮುರುಗೇಶ್,
ಡಾ|| ವಾಮನ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ
ದಿನೇಶ್ ಕೆ. ಶೆಟ್ಟಿ, ಲೆಕ್ಕಪರಿಶೋಧಕರ ಸಂಘದ
ಅಧ್ಯಕ್ಷರಾದ ಉಮೇಶ್ ಶೆಟ್ಟಿ ಹಾಗೂ ಪದಾಧಿಕಾರಿಗಳು
ಉಪಸ್ಥಿತರಿದ್ದರು.