ಸಮರ್ಥನಂ ಅಂಗವಿಕಲರ ಸಂಸ್ಥೆಯು ಸರ್ವಿಸ್ ಮ್ಯಾಕ್ಸ್
ಮತ್ತು ಇಂಡಸ್ ಬ್ಯಾಂಕ್ ಸಹಯೋಗದೊಂದಿಗೆ ಸಿಎಸ್‍ಆರ್ ಫಂಡ್
ನಲ್ಲಿ ಸುಮಾರು ರೂ. 48.25 ಲಕ್ಷ ಮೌಲ್ಯದ ಆಸ್ಪತ್ರೆ
ಪರಿಕರಗಳನ್ನು ಜಿಲ್ಲಾ ಆಸ್ಪತ್ರೆಗೆ ಕೊಡುಗೆ ನೀಡಿದ್ದು, ವಿಶ್ವ
ಕುರುಡು ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರು ಹಾಗೂ
ಸಮರ್ಥನಂ ಅಂಗವಿಕಲರ ಸಂಸ್ಥೆಯ ವ್ಯವಸ್ಥಾಪಕ
ನಿರ್ದೇಶಕರಾದ ಮಹಾಂತೇಶ್ ಜಿ.ಕೆ ಅವರನ್ನು
ಅಭಿನಂದಿಸುತ್ತೇನೆ ಎಂದು ಸಂಸದ ಡಾ.ಜಿ.ಎಂ ಸಿದ್ದೇಶ್ವರ
ಹೇಳಿದರು.
ಸಮರ್ಥನಂ ಅಂಗವಿಕಲರ ಸಂಸ್ಥೆಯು ಪಿಪಿಇ ಕಿಟ್, ಆರ್‍ಟಿಪಿಸಿಆರ್
ಟೆಸ್ಟ್ ಕಿಟ್ಸ್, ಆಕ್ಸಿಜನ್ ಸಾಂದ್ರಕಗಳು, 3ಪ್ಲೇ ಮಾಸ್ಕ್, ಹ್ಯಾಂಡ್
ಸ್ಯಾನಿಟೈಸರ್, ಐಸಿಯು ಬೆಡ್ಸ್, ಮತ್ತು ಇತರೆ ಆರೋಗ್ಯ
ಪರಿಕರಗಳನ್ನು ನಮ್ಮ ಆಸ್ಪತ್ರೆಗೆ ನೀಡುತ್ತಿದ್ದಾರೆ.
ಈಗಾಗಲೇ ಸಿಎಸ್‍ಆರ್ ನಿಧಿ ಮತ್ತು ದಾನಿಗಳಿಂದ ಅನೇಕ
ಕೊಡುಗೆಗೆಳು ಜಿಲ್ಲಾ ಆಸ್ಪತ್ರೆ ಮತ್ತು ಜಿಲ್ಲಾಡಳಿತಕ್ಕೆ
ನೀಡಿದ್ದಾರೆ. ಸರ್ಕಾರವೇ ಎಲ್ಲಾ ಕೆಲಸವನ್ನು ಮಾಡಲು
ಆಗುವುದಿಲ್ಲ ಸಂಘ ಸಂಸ್ಥೆಗಳು ಸಹಾಯ ಮಾಡಿದಲ್ಲಿ
ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಿಸಲು ಸಮರ್ಥವಾಗಿ ಕೆಲಸ
ಮಾಡಲು ಅನುಕೂಲವಾಗುತ್ತದೆ. ಈಗಾಗಲೇ ಜಿಲ್ಲಾಧಿಕಾರಿಗಳ
ತಂಡ, ಆರೋಗ್ಯ ಇಲಾಖೆ ಸೇರಿ ಕೋವಿಡ್ ಅನ್ನು
ನಿಯಂತ್ರಿಸಿದ್ದಾರೆ. ಕೋವಿಡ್ ಶೇಕಡವಾರು ಪ್ರಮಾಣ
ಎರಡರಷ್ಟಿದ್ದು, ಶೂನ್ಯ ಸ್ಥಿತಿಗೆ ತರುವಂತಹ
ಪ್ರಯತ್ನದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಜಿಲ್ಲೆಯಲ್ಲಿ ಸೋಂಕಿನ ಪ್ರಕರಣಗಳು
ಕಡಿಮೆಯಾಗುತ್ತಿದ್ದು, ಕೇವಲ ಜಿಲ್ಲಾಧಿಕಾರಿಗಳು ಮತ್ತು
ವೈದ್ಯರಿಂದ ಸೋಂಕು ನಿವಾರಣೆ ಮಾಡಲು
ಸಾದ್ಯವಿಲ್ಲ. ಸಾರ್ವಜನಿಕರು ಸೋಂಕು ನಿಯಂತ್ರಣಕ್ಕೆ
ಕೈಜೋಡಿಸಿದರೆ ಜಿಲ್ಲೆಯನ್ನು ಸೋಂಕು
ಮುಕ್ತವನ್ನಾಗಿಸಲು ಸಹಾಯವಾಗುತ್ತದೆ. ರಾಜ್ಯದಲ್ಲಿ ಮಿಸ್ಸಿ
ಮತ್ತು ಡೆಲ್ಟಾ ಪ್ಲಸ್‍ನಂತಹ ಹೊಸ ಸೋಂಕಿನ ಲಕ್ಷಣಗಳು
ಕಂಡು ಬಂದಿದ್ದು, ಜನರು ಸೋಂಕಿನ ಬಗ್ಗೆ ನಿರ್ಲಲಕ್ಷ್ಯ
ವಹಿಸದೇ ಬಹಳಷ್ಟು ಎಚ್ಚರಿಕೆ ವಹಿಸಬೇಕು ಎಂದರು.
ದಾವಣಗೆರೆ ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕರಾದ
ಎಸ್. ಎ ರವೀಂದ್ರನಾಥ್ ಮಾತನಾಡಿ ಸಮರ್ಥನಂ ಸಂಸ್ಥೆಯ
ಕೊಡುಗೆ ಶ್ಲಾಘನೀಯ, ಸಂಸ್ಥೆಗೆ ಇನ್ನೂ ಹೆಚ್ಚಿನ ರೀತಿಯಲ್ಲಿ
ದಾನ ನೀಡುವ ಶಕ್ತಿ ದೊರೆಯಲಿ. ಈಗಾಗಲೇ ನೀಡಿರುವ
ಪರಿಕರಗಳು ಮತ್ತು ವೆಂಟಿಲೇಟರ್‍ಗಳನ್ನು ಉತ್ತಮ
ರೀತಿಯಲ್ಲಿ ಸದ್ಬಳಕೆ ಮಾಡಿಕೊಂಡು, ಅವುಗಳು
ಹಾಳಾಗದಂತೆ ನೋಡಿಕೊಳ್ಳಬೇಕು. ಸಾರ್ವಜನಿಕರಿಗೆ ಇದರ
ಸದುಪಯೋಗ ಪಡೆದುಕೊಳ್ಳುವಂತಾಗಲಿ ಎಂದರು.
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ, ನಿಜಗುಣದಿಂದ
ಮಾಡುವ ಗುಣ ನಮ್ಮಲ್ಲಿದ್ದರೆ ನಾವು ಜೀವನದಲ್ಲಿ
ಏನನ್ನನಾದರೂ ಸಾಧಿಸಬಹುದು, ಮಾಡಿದ್ದನ್ನು ನಾವು
ತೋರ್ಪಡಿಕೆಗಾಗಿ ಮಾಡಿದರೆ ಅದಕ್ಕೆ ಯಾವುದೇ
ಅರ್ಥವಿರುವುದಿಲ್ಲ. ಕಳೆದ ವರ್ಷ ರೂ.25 ಕೋಟಿ ನಿಧಿಯನ್ನು
ಸಂಗ್ರಹಿಸಿ ಅದರಲ್ಲಿ ಈ ಸಾಕಷ್ಟು ಪರಿಕರಗಳನ್ನು ಜಿಲ್ಲೆಗಳಿಗೆ
ಮತ್ತು ತಾಲ್ಲೂಕುಗಳಿಗೆ ದಾನ ಮಾಡಿದ್ದಾರೆ. ಈ ಬಾರಿ ರೂ.15
ಕೋಟಿ ಹಣವನ್ನು ಸಿಆರ್‍ಎಫ್ ನಿಧಿಯಿಂದ ಸಂಗ್ರಹಿಸಿ ಇಂತಹ
ಅರ್ಥಪೂರ್ಣ ಕಾರ್ಯವನ್ನು ಮಾಡುತ್ತಿರುವುದು
ಬಹಳಷ್ಟು ಹರ್ಷದ ಸಂಗತಿ. ಮನುಷ್ಯ
ಇರುವುದರಲ್ಲಿಯೇ ಸಮಾಜಕ್ಕೆ ಸಾಕಷ್ಟು
ಕೊಡುಗೆಗಳನ್ನು ನೀಡಬಹುದು. ಸಮಾಜದಿಂದ
ಗಳಿಸಿರುವುದನ್ನ ಸಮಾಜಕ್ಕೆ ಕೊಡುಗೆಯಾಗಿ
ನೀಡುದರಲ್ಲೇ ಖುಷಿ ಎಂದು ತೋರಿಸಿಕೊಟ್ಟ ಸಮರ್ಥನಂ
ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಮಹಾಂತೇಶ್ ಜಿ.ಕೆ
ಅವರನ್ನು ಜಿಲ್ಲಾಡಳಿತದ ಪರವಾಗಿ ಅಭಿನಂದಿಸಿದರು.
ಜಿ.ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ. ವಿಜಯ
ಮಹಾಂತೇಶ್ ದಾನಮ್ಮನವರ್ ಮಾತನಾಡಿ, ಸಮರ್ಥನಂ
ಸಂಸ್ಥೆಯನ್ನು 1997 ರಲ್ಲಿ ಸ್ಥಾಪಸಿದರು. ವಿಕಲಚೇತನ
ಎಂಬುದು ಒಂದು ಮಾನಸಿಕ ರೋಗ. ಯಾವುದೇ ಒಬ್ಬ ವ್ಯಕ್ತಿ
ಮನಸ್ಸು ಮಾಡಿದರೆ ಅಂಗವೈಕಲ್ಯ ಯಾವುದೇ ರೀತಿಯ
ಸಾಧನೆಗೆ ಅಡಿಯಾಗುವುದಿಲ್ಲ ಎಂಬುದನ್ನು ಅವರನ್ನು
ಮೊದಲ ಬಾರಿ ಭೇಟಿ ಮಾಡಿದಾಗ ನನಗೆ ಅರ್ಥವಾಯಿತು. ಅವರು
ಉತ್ತಮ ಕುಟುಂಬದಲ್ಲಿ ಜನಿಸಿದರು, ಎಲ್ಲಾ ಸೌಕರ್ಯವನ್ನು
ಹೊಂದಿದ್ದರು ಕೂಡ ವಿಕಲಚೇತನರ ತೊಂದರೆಗಳನ್ನು
ಮನಗಂಡು ಅವರಿಗಾಗಿ ಸಮರ್ಥನಂ ಅಂಗವಿಕಲರ
ಸಂಸ್ಥೆಯನ್ನು ಸ್ಥಾಪಿಸಿದ್ದಾರೆ ಎಂದರು.
ಸಮರ್ಥನಂ ಅಂಗವಿಕಲರ ಸಂಸ್ಥೆಯು
ವಿಕಲಚೇತನರು ಮತ್ತು ಅವಕಾಶ ವಂಚಿತರ
ಸಬಲೀಕರಣಕ್ಕಾಗಿ ಕಾರ್ಯನಿರ್ವಹಿಸುತ್ತಾ ಬಂದಿದೆ. ಈ ಸಂಸ್ಥೆಯು
ಉತ್ತಮ ಗುಣಮಟ್ಟದ ಶಿಕ್ಷಣ, ವಸತಿ ಸೌಲಭ್ಯ, ಪೌಷ್ಟಿಕ ಆಹಾರ,
ವೃತ್ತಿಪರ ತರಬೇತಿ ಮತ್ತು ಪುನರ್ವಸತೀಕರಣದ
ಸೌಲಭ್ಯಗಳನ್ನು ಒದಗಿಸುವ ಮೂಲಕ ವಿಕಲಚೇತನರು
ವೈಯಕ್ತಿಕ ಸ್ವಾವಲಂಬನೆಯನ್ನು ಸಾಧಿಸಬೇಕು ಎಂಬುದು ಈ
ಸಂಸ್ಥೆಯ ಮುಖ್ಯ ಉದ್ದೇಶ. ಸಂಸ್ಥೆಯ ವತಿಯಿಂದ ಕೋವಿಡ್
ಸಂದರ್ಭದಲ್ಲಿ ವಿವಿಧ ಆಸ್ಪತ್ರೆಗಳಿಗೆ ವೈದ್ಯಕೀಯ
ಪರಿಕರಗಳನ್ನು ನೀಡಿದ್ದು, ಈ ವರ್ಷ ಏಪ್ರೀಲ್‍ನಿಂದ ರೂ.15
ಕೋಟಿ ವೆಚ್ಚದ ಪರಿಕರಗಳನ್ನು ನೀಡಿದ್ದಾರೆ. ಮೇ.25
ರಂದು ಅವರಿಗೆ ಪತ್ರ ಬರೆದು ಗ್ರಾಮೀಣ ಭಾಗದಲ್ಲಿ
ಲಸಿಕೆಯನ್ನು ಪಡೆಯುವಲ್ಲಿ ಜನರು ನಿರಾಸಕ್ತಿ
ವಹಿಸುತಿದ್ದಾರೆ, ನಿಮ್ಮ ಸಂಸ್ಥೆಯಿಂದ ಗ್ರಾಮೀಣ ಭಾಗದಲ್ಲಿ
ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು
ಯೋಜಿಸಬೇಕು ಹಾಗೂ ಪರಿಕರಗಳನ್ನು ಕೊಡುಗೆ
ನೀಡಲು ಸಾಧ್ಯತೆಗಳಿದ್ದರೆ ನೀಡಬೇಕು ಎಂದು ಅವರಲ್ಲಿ
ಮನವಿ ಸಲ್ಲಿಸಿದ್ದೆವು. ಪತ್ರ ಬರೆದ 1 ತಿಂಗಳ ಒಳಗಾಗಿಯೇ
ರೂ. 48 ಲಕ್ಷ ವೆಚ್ಚದ ವೈದ್ಯಕೀಯ ಪರಿಕರಗಳನ್ನು
ನಮ್ಮ ಜಿಲ್ಲೆಗೆ ಕೊಡುಗೆ ನೀಡಿರುವುದು ಸಂತೋಷದ
ಸಂಗತಿ ಎಂದು ಜಿಲ್ಲಾಡಳಿತ ವತಿಯಿಂದ ಅವರಿಗೆ
ಧನ್ಯವಾದಗಳನ್ನು ಸಲ್ಲಿಸಿದರು.
ವಿಶ್ವ ಕುರುಡು ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಹಾಗೂ
ಸಮರ್ಥನಂ ಅಂಗವಿಕಲರ ಸಂಸ್ಥೆಯ ವ್ಯವಸ್ಥಾಪಕ
ನಿರ್ದೇಶಕರಾದ ಮಹಾಂತೇಶ್ ಜಿ.ಕೆ ಮಾತನಾಡಿ, ವೈದರು
ಮತ್ತು ಜಿಲ್ಲಾಡಳಿತ ಕೋವಿಡ್ ನಿಯಂತ್ರಣಕ್ಕೆ ತರಲು
ಸಾಕಷ್ಟು ಶ್ರಮವಹಿಸಿದ್ದಾರೆ. ನಾವೆಲ್ಲಾ ಇಂದು ಕ್ಷೇಮವಾಗಿರಲು
ವೈದ್ಯರೇ ಕಾರಣ. ವಿಕಲಚೇತನರು ಸಮಾಜದ ಪ್ರಮುಖ
ಅಂಗ ಸಮರ್ಥನಂ ಅಂಗವಿಕಲರ ಸಂಸ್ಥೆಯು ಪ್ರಮುಖವಾಗಿ
ವಿಕಲಚೇತನರ ಏಳಿಗೆಗಾಗಿ ಕಾರ್ಯ ನಿರ್ವಹಿಸುತಿದ್ದು, ಅವರ
ಅಭಿವೃದ್ಧಿಗೆ ಶ್ರಮಿಸುತ್ತದೆ. ನಾವು ನಮ್ಮನ್ನು ಸಾಮಾಜದಲ್ಲಿ
ತೊಡಗಿಸಿಕೊಳ್ಳಬೇಕು ಅದೇ ನಮ್ಮ ಮುಖ್ಯ
ಗುರಿಯಾಗಿದ್ದು, ಸಂಸ್ಥೆಯಲ್ಲಿ ಕೆಲಸ ಮಾಡುವುದರ
ಮೂಲಕ ಸಮಾಜದಲ್ಲಿರುವ ಸಮಸ್ಯೆಗಳಿಗೆ ಸ್ಪಂದಿಸುವುದೇ
ನಮ್ಮ ಮುಖ್ಯ ಉದ್ದೇಶ ಎಂದರು.
ಸರ್ಕಾರವು ಒಂದೇ ಎಲ್ಲಾ ಕೆಲಸ ಮಾಡಲು ಸಾಧ್ಯವಿಲ್ಲ
ನಾವೆಲ್ಲರೂ ಸಮಾಜದಲ್ಲಿ ಇರುವುದರಿಂದ ಸಮಾಜಕ್ಕಾಗಿ
ಸಕ್ರಿಯವಾಗಿ ಕೆಲಸಮಾಡಬೇಕು. ಸಂಸ್ಥೆಯು
ವಿಕಲಚೇತನರ ಶಿಕ್ಷಣ, ತರಬೇತಿ, ಕ್ರೀಡೆ, ಸಾಂಸ್ಕøತಿಕ ರಂಗ
ಹಾಗೂ ಪರಿಸರ ರಂಗದಲ್ಲಿ ಕೆಲಸ ಮಾಡುತ್ತದೆ. ಸಂಸ್ಥೆಯು
ಭಾರತದ್ಯಾಂತ 7 ರಾಜ್ಯಗಳಲ್ಲಿ, ಕರ್ನಾಟಕದ 13 ಜಿಲ್ಲೆಗಳಲ್ಲಿ
ಕಾರ್ಯ ನಿರ್ವಹಿಸುತ್ತಿದೆ ಮತ್ತು ಅಮೇರಿಕಾ, ಯುಕೆ ಸ್ಟೇಟ್ಸ್
ಗಳಲ್ಲಿ ಸಂಸ್ಥೆಯನ್ನು ನೋಂದಾಯಿಸಲಾಗಿದೆ.
ಸರ್ವಿಸ್ ಮ್ಯಾಕ್ಸ್ ಮತ್ತು ಇಂಡಸ್ ಬ್ಯಾಂಕ್ ಎಂಬ ಎರಡು
ಕಂಪನಿಗಳು ಸಿಎಸ್‍ಆರ್ ಫಂಡ್ ನಿಂದ ದಾನ ನೀಡಿದ್ದು ಅವರ
ಸಹಯೋಗದೊಂದಿಗೆ ಜಿಲ್ಲಾಸ್ಪತ್ರೆ ಮತ್ತು ಜಿಲ್ಲಾಡಳಿತಕ್ಕೆ
ಕೋವಿಡ್ ತರಬೇತಿ, ಚಿಕಿತ್ಸೆಗೆ ಪರಿಕರಗಳನ್ನು ಕೊಡುಗೆ
ನೀಡುತ್ತಿದ್ದೇವೆ. ಹಾಗೂ ಸಹಕರಿಸಿದ ಎಲ್ಲರಿಗೂ ಧನ್ಯವಾದ
ಅರ್ಪಿಸುತ್ತೇನೆ ಎಂದರು.
ಸಂಸ್ಥೆಯ ಪರವಾಗಿ ವೈದ್ಯರು, ಆಶಾ ಕಾರ್ಯಕರ್ತರು,
ದಾದಿಯರು, ಆಸ್ಪತ್ರೆಯ ಎಲ್ಲಾ ಸಿಬ್ಬಂದಿಗಳು, ಹಾಗೂ
ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾಡಳಿತವು ಕೋವಿಡ್‍ಗೆ
ಹೆದರಿಕೊಳ್ಳದೆ ಎದುರಿಸಿ ಕೆಲಸ ಮಾಡುತ್ತಿದ್ದಾರೆ. ನಾವು ನಮ್ಮ
ಸಂಸ್ಥೆಯಿಂದ ಸಾಧ್ಯವಾದಷ್ಟು ಪರಿಕರಗಳನ್ನು
ನೀಡುತ್ತಿದೇವೆ ಆದರೆ ಆರೋಗ್ಯ ಕಾರ್ಯಕರ್ತರು, ಪೋಲಿಸ್,
ಜಿಲ್ಲಾಡಳಿತವು ಗಡಿನಾಡಿನಲ್ಲಿ ಸೈನಿಕರಂತೆ ಪ್ರಾಣದ ಹಂಗು
ತೊರೆದು ಹೋರಾಡಿ ಕೋವಿಡ್‍ನಿಂದ ನಮ್ಮನ್ನು ರಕ್ಷಿಸುವ
ಕಾರ್ಯ ಮಾಡುತಿದ್ದಾರೆ ಅವರಿಗೆ ಕೃತಜ್ಞರಾಗಿರೊಣ ಆದಷ್ಟು
ಬೇಗ ಕೋವಿಡ್ ತೊಲಗಿ ನಾವು ಮೊದಲಿನಂತೆ ಆರೋಗ್ಯವಾಗಿ
ಇರೋಣ ಎಂದರು.
ಕಾರ್ಯಕ್ರಮದಲ್ಲಿ ಡಿಹೆಚ್‍ಒ ಡಾ.ನಾಗರಾಜ್, ಜಿಲ್ಲಾ ಚಿಗಟೇರಿ
ಆಸ್ಪತ್ರೆಯ ಸರ್ಜನ್ ವೈದ್ಯ ಡಾ.ಜಯಪ್ರಕಾಶ್, ಡಾ.ಸಂಜಯ್
ಡಾ.ಮೃದುಲ ಯಲ್ಲಪ್ಪ, ಸಂಸ್ಥೆಯ ಸಿಬ್ಬಂದಿಗಳು ಹಾಗೂ
ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು.