ಕೊರೊನ ಎರಡನೇ ಅಲೆಯ ಲಾಕ್ಡೌನ್ ಮುಗಿದಿದ್ದು ಇನ್ನು ಮುಂದೆ ಎಲ್ಲಾ ಕಾರ್ಮಿಕ ವರ್ಗದವರು ತಮ್ಮ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಅಸಂಘಟಿತ ಕಾರ್ಮಿಕರ ವಲಯವು ಪೂರ್ಣ ಪ್ರಮಾಣದಲ್ಲಿ ತಮ್ಮ ಕಾಯಕದಲ್ಲಿ ದಿನ ನಿತ್ಯದ ಕೆಲಸ ಪ್ರಾರಂಭಿಸಲಿದ್ದಾರೆ ಆದ್ದರಿಂದ ಈ ಅಸಂಘಟಿತ ವಲಯದ ಕಾರ್ಮಿಕ ವರ್ಗದ ಪ್ರತಿಯೊಬ್ಬ ಕಾರ್ಮಿಕರಿಗೂ ಸರ್ಕಾರ ತಕ್ಷಣಕ್ಕೆ ಉಚಿತ ಲಸಿಕೆ ನೀಡುವ ವ್ಯವಸ್ಥೆ ಮಾಡಬೇಕು ಎಂದು ಅಸಂಘಟಿತ ಕಾರ್ಮಿಕ ಕಾಂಗ್ರೆಸ್ ನ ಜಿಲ್ಲಾ ಕಾರ್ಯಾಧ್ಯಕ್ಷ ಲಿಯಾಖತ್ ಅಲಿ ಆಗ್ರಹಿಸಿದ್ದಾರೆ.
ಅಸಂಘಟಿತ ಕಾರ್ಮಿಕ ವರ್ಗಕ್ಕೆ ಸೇರಿದ ಅಗಸರು,ಅಕ್ಕಸಾಲಿಗರು,ಕಮ್ಮಾರರು,ಕ್ಷೌರಿಕರು,ಭಟ್ಟಿ ಕಾರ್ಮಿಕರು,ಗೃಹ ನಿರ್ಮಾಣ ಕಾರ್ಮಿಕರು,ಕೂಲಿ ಕಾರ್ಮಿಕರು,ಹಮಾಲರು,ಮತ್ತು ಮೆಕ್ಯಾನಿಕ್ ಗಳು,ಚಾಲಕರು,ನಿರ್ವಾಹಕರು,ಕ್ಲೀನರ್ ಮುಂತಾದ ಕಾರ್ಮಿಕರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗಿ ಹಲವಾರು ಜನಗಳ ಮಧ್ಯೆ ಬೆರೆತು ತಮ್ಮ ಕೆಲಸವನ್ನ ನಿರ್ವಹಿಸಬೇಕಾಗುತ್ತದೆ ಇದರಿಂದಾಗಿ ಅಪಾಯದ ಪ್ರಮಾಣ ಹೆಚ್ಚಾಗಿರುತ್ತದೆ ಹಾಗೂ ಈ ವರ್ಗದವರಲ್ಲಿ ಅತ್ಯಂತ ಬಡವರು ಅನಕ್ಷರಸ್ಥರು ಸೇರಿರುತ್ತಾರೆ ಅಂಥವರಿಗೆ ಲಸಿಕೆ ನೀಡಿದರೆ ನಿರ್ಭಯವಾಗಿ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಬಹುದಾಗಿದೆ.
ಹಲವಾರು ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳು ತಮ್ಮ ತಮ್ಮ ಸಿಬ್ಬಂಧಿ ವರ್ಗದವರಿಗೆ ಈಗಾಗಲೇ ಲಸಿಕೆಯನ್ನು ಕೊಡಿಸಿದ್ದು ಅವರೆಲ್ಲರೂ ನಿರ್ಭಯವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ ನಮ್ಮ ಅಸಂಘಟಿತ ಕಾರ್ಮಿಕ ವರ್ಗಕ್ಕೆ ಯಾವುದೇ ಮಾರ್ಗದರ್ಶನವಿಲ್ಲದೆ ಇನ್ನು ಹಲವಾರು ಕಾರ್ಮಿಕರು ವದಂತಿಗಳಿಗೆ ಹೆದರಿ ಇನ್ನೂ ಸಹ ಲಸಿಕೆ ಪಡೆದುಕೊಂಡಿರುವುದಿಲ್ಲ ಆದ್ದರಿಂದ ಈ ವರ್ಗದ ಕಾರ್ಮಿಕರಿಗೆ ವಿಶೇಷ ವಾಗಿ ಲಸಿಕಾ ಅಭಿಯಾನ ಪ್ರಾರಂಭಿಸಬೇಕೆಂದು ಮನವಿ ಮಾಡಿದ್ದಾರೆ.
ಸರ್ಕಾರ ಈ ಕೊರೊನ ಎರಡನೇ ಅಲೆಯಲ್ಲಿ ಅಸಂಘಟಿತ ಕಾರ್ಮಿಕರ ವಲಯಕ್ಕೆ ಯಾವುದೇ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿರುವುದಿಲ್ಲ ಹೀಗಾಗಿ ಅವರ ಜೀವನ ನಡೆಯುವುದು ಅತ್ಯಂತ ಕಷ್ಟಕರವಾಗಿದೆ ಅಂಥದ್ರಲ್ಲಿ ಕೊರೊನಾ ದಂತಹ ಭಯಾನಕ ರೋಗಗಳು ಅವರಿಸಿದರೆ ಅವರ ಬದುಕು ಸರ್ವನಾಶವಾಗುತ್ತದೆ ಆದ್ದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಸರ್ಕಾರ ಈ ಕೂಡಲೇ ಮೊದಲು ಅಸಂಘಟಿತ ಕಾರ್ಮಿಕ ವರ್ಗದವರಿಗೆ ಲಸಿಕೆಯನ್ನು ನೀಡುವ ಕಾರ್ಯ ಪ್ರಾರಂಭಿಸಬೇಕು ಹಾಗೂ ಈ ವರ್ಗಕ್ಕೆ ಲಸಿಕೆ ಕಡ್ಡಾಯ ಎಂದು ಘೋಷಿಸಬೇಕು ಎಂದು ಈ ಮೂಲಕ ವಿನಂತಿಸಿಕೊಂಡಿದ್ದಾರೆ.