ದಾವಣಗೆರೆ: ಪೆಟ್ರೋಲ್-ಡಿಸೇಲ್ ಮತ್ತು ಅಡುಗೆ ಅನಿಲ ದರ ಹೆಚ್ಚಳ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಪಕ್ಷದಿಂದ ನಾಳೆ ಅಂದರೆ ಜುಲೈ 7ರಂದು ಏರ್ಪಡಿಸಿರುವ ಸೈಕಲ್ ಜಾಥಾದಲ್ಲಿ ಮಾಜಿ ಕೇಂದ್ರ ಸಚಿವ ಕೆ.ಹೆಚ್.ಮುನಿಯಪ್ಪನವರು ಮತ್ತು ಮಾಜಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಭಾಗವಹಿಸಲಿದ್ದಾರೆ.
ನಾಳೆ ಬೆಳಿಗ್ಗೆ 10-30ಕ್ಕೆ ನಗರದ ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ಹೊರ್ಲಸೇಲ್ ತರಕಾರಿ ವ್ಯಾಪಾರಸ್ಥರಿಗೆ ಶಾಮನೂರು ಶಿವಶಂಕರಪ್ಪ ಮತ್ತು ಎಸ್.ಎಸ್.ಮಲ್ಲಿಕಾರ್ಜುನ್ ಅವರು ಏರ್ಪಡಿಸಿರುವ ಉಚಿತ ಲಸಿಕಾ ಶಿಬಿರಕ್ಕೆ ಭೇಟಿ ನೀಡುವ ಕೆ.ಹೆಚ್.ಮುನಿಯಪ್ಪನವರು ಮತ್ತು ಎಸ್.ಎಸ್.ಮಲ್ಲಿಕಾರ್ಜುನ್ ಅವರುಗಳು ನಂತರ ಕರೋನಾದಿಂದ ಮೃತಪಟ್ಟ ಮನೆಗಳಿಗೆ ಭೇಟಿ ನೀಡಿ ಮೃತ ವ್ಯಕ್ತಿಯ ಕುಟುಂಬಗಳಿಗೆ ಸಾಂತ್ವನ ಹೇಳುವರು.
ನಂತರ ಪೆಟ್ರೋಲ್-ಡಿಸೇಲ್ ಮತ್ತು ಅಡುಗೆ ಅನಿಲ ದರ ಹೆಚ್ಚಳ ಖಂಡಿಸಿ ಬೆಳಿಗ್ಗೆ 11-30 ಗಂಟೆಗೆ ನಗರದೇವತೆ ಶ್ರೀದುರ್ಗಾಂಬಿಕಾ ದೇವಸ್ಥಾನದ ಆವರಣದಿಂದ ಜಿಲ್ಲಾ ಕಾಂಗ್ರೆಸ್ ಏರ್ಪಡಿಸಿರುವ ಸೈಕಲ್ ಜಾಥಾದಲ್ಲಿ ಪಾಲ್ಗೊಳ್ಳಲಿದ್ದಾರೆ. ಸೈಕಲ್ ಜಾಥಾವು ವೀರಮದಕರಿ ನಾಯಕ ವೃತ್ತ, ಕಿತ್ತೂರು ರಾಣಿ ಚನ್ನಮ್ಮ ವೃತ್ತ, ಪಿ.ಬಿ.ರಸ್ತೆ ಮೂಲಕ ಮಹಾತ್ಮಗಾಂಧಿ ವೃತ್ತದ ಮೂಲಕ ಜಯದೇವ ವೃತ್ತಕ್ಕೆ ಆಗಮಿಸಲಿದೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಮಂಜಪ್ಪನವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮಗಳು ನಡೆಯಲಿವೆ.
ಆದ ಕಾರಣ ಪಕ್ಷದ ಎಲ್ಲಾ ಜನಪ್ರತಿನಿಧಿಗಳು, ಮುಖಂಡರುಗಳು, ಕಾರ್ಯಕರ್ತರು, ಪಕ್ಷದ ವಿವಿಧ ಘಟಕಗಳಾದ ಎನ್ಎಸ್ಯುಐ, ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್, ಜಿಲ್ಲಾ ಸೇವಾದಳ, ಕಿಸಾನ್ ಕಾಂಗ್ರೆಸ್, ಕಾರ್ಮಿಕ ವಿಭಾಗ, ಪರಿಶಿಷ್ಟ ಜಾತಿ, ಪಂಗಡ, ಓ.ಬಿ.ಸಿ. ಅಲ್ಪಸಂಖ್ಯಾತ ವಿಭಾಗದ ಎಲ್ಲಾ ಅಧ್ಯಕ್ಷರು, ಮಾಜಿ ಅಧ್ಯಕ್ಷರು, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ, ಎಪಿಎಂಸಿ ಸದಸ್ಯರುಗಳು ಮತ್ತು ಮಹಾನಗರ ಪಾಲಿಕೆ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಮಾಸ್ಕ್ ಧರಿಸಿ, ಅಂತರ ಕಾಪಾಡಿಕೊಂಡು ಭಾಗವಹಿಸಬೇಕೆಂದು ಕೋರಲಾಗಿದೆ.