ಬೆಂಗಳೂರು: ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಗೊಂದಲ ಸದ್ಯಕ್ಕೆ ಬಗೆಹರಿದಂತಿದೆ. ಜನವರಿವರೆಗೂ ರಕ್ಷಾ ರಾಮಯ್ಯ ಅವರು ಅಧ್ಯಕ್ಷರಾಗಿದ್ದರೆ ನಂತರದಲ್ಲಿ ಮಹಮ್ಮದ್ ನಲಪಾಡ್ ಅಧ್ಯಕ್ಷ ಸ್ಥಾನ ಹೊಂದಲಿದ್ದಾರೆ ಎಂದು ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಪತ್ರಿಕಾ ಪಕಟಣೆ ಹೊರಡಿಸಿದ್ದಾರೆ.
ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನಲಪಾಡ್ ಅತಿ ಹೆಚ್ಚು ಮತಗಳನ್ನು ಪಡೆದುಕೊಂಡಿದ್ದರು. ಆದರೆ ಈ ಹಿಂದಿನ ಪಬ್ ಗಲಾಟೆ ವಿಚಾರ ಮತ್ತೆ ಮುನ್ನೆಲೆಗೆ ಬಂದು ಪಕ್ಷದ ಇಮೇಜ್ ಡ್ಯಾಮೇಜ್ ಆಗಲಿದೆ ಎಂಬ ಕಾರಣಕ್ಕೆ ಅಧ್ಯಕ್ಷ ಸ್ಥಾನಕ್ಕೆ ರಕ್ಷಾ ರಾಮಯ್ಯ ಅವರನ್ನು ಆಯ್ಕೆ ಮಾಡಲಾಯಿತು. ನಲಪಾಡ್ ನಂತರ ಅತಿ ಹೆಚ್ಚು ಮತಗಳನ್ನು ರಕ್ಷಾ ರಾಮಯ್ಯ ಪಡೆದಿದ್ದರು.
ಜನವರಿ ನಂತರ ಅಧ್ಯಕ್ಷ ಸ್ಥಾನ ಸಿಗುವುದಕ್ಕೆ ನಲಪಾಡ್ ಸಂತಸ ವ್ಯಕ್ತಪಡಿಸಿದ್ದಾರೆ. ಐವೈಸಿ ಆದೇಶದಿಂದ ತುಂಬಾ ಸಂತೋಷವಾಗಿದೆ. ಪಕ್ಷ ಯಾವುದೇ ಅಧಿಕಾರ, ಕರ್ತವ್ಯ ಕೊಟ್ರು ನಿರ್ವಹಿಸುತ್ತೇನೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನನ್ನ ತಾಯಿ ಇದ್ದಂತೆ, ಕಾಂಗ್ರೆಸ್ ಪಕ್ಷ ಕಟ್ಟುವ ಕೆಲಸ ಮಾಡ್ತೀನಿ. ಯುವಕರನ್ನು ಕಾಂಗ್ರೆಸ್ ಬಳಿ ಸೇರಿಸಲು ಈ ಯುವ ಕಾಂಗ್ರೆಸ್ ಹುದ್ದೆ ಬೇಕಿತ್ತು. ನನ್ನ ಕೆಲಸ ನೋಡಿ ಪಕ್ಷ ಕಟ್ಟುವ ಕೆಲಸ ನೀಡಿದೆ, ನಾನು ಇದನ್ನ ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಹೋಗುವೆ. ಈಗ ಅಧ್ಯಕ್ಷ ಸ್ಥಾನ ನೀಡಿರೋದು ಖುಷಿ ತಂದಿದೆ ಎಂದು ಹೇಳಿದ್ದಾರೆ.
ನಾನು ಅಧ್ಯಕ್ಷ ಆಗುವ ತನಕ
ಕಾಂಗ್ರೆಸ್ ಪಕ್ಷ ಐವೈಸಿ ಜನರಲ್ ಸೆಕ್ರೆಟರಿ ಮಾಡೋದಾಗಿ ಹೇಳಿದೆ. ಸಿದ್ದರಾಮಯ್ಯ ಭೇಟಿ ಮಾಡಿದ್ದು, ಎಲ್ಲರನ್ನೂ ಜೊತೆಗೂಡಿ ಒಟ್ಟಿಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ. ನನ್ನ ತಂದೆ, ತಾಯಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯನವರು ಒಂದು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.