ಸಿದ್ದೇಶ್ವರ ತಾಕೀತು

ದಾವಣಗೆರೆ ನಗರ ವ್ಯಾಪ್ತಿಯಲ್ಲಿ 247 ಶುದ್ಧ ನೀರು ಪೂರೈಸುವ ಜಲಸಿರಿ ಯೋಜನೆ ಅನುಷ್ಠಾನದಲ್ಲಿ ಆಗುತ್ತಿರುವ ವಿಳಂಬಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಂಸದ ಜಿ.ಎಂ. ಸಿದ್ದೇಶ್ವರ ಅವರು, 97589 ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸುವ ಗುರಿಯನ್ನು 2022 ರ ಫೆಬ್ರವರಿ ವೇಳೆಗೆ ಸಾಧಿಸುವಂತಾಗಲು, ನಿತ್ಯ 500 ರಿಂದ 600 ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸುವಂತೆ ಗುತ್ತಿಗೆ ಪಡೆದಿರುವ ಕಂಪನಿಯ ಅಧಿಕಾರಿಗಳಿಗೆ ತಾಕೀತು ಮಾಡಿದರು. ಜಲಸಿರಿ ಯೋಜನೆ ಕುರಿತು ಜಿಎಂಐಟಿ ಸಭಾಂಗಣದಲ್ಲಿ ಶುಕ್ರವಾರ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ನಗರ ವ್ಯಾಪ್ತಿಯಲ್ಲಿ 247 ನೀರು ಪೂರೈಕೆ ಮಾಡುವ ಜಲಸಿರಿ
ಯೋಜನೆಯಡಿ 681.92 ಕೋಟಿ ರೂ. ವೆಚ್ಚದಲ್ಲಿ 18 ಓವರ್‍ಹೆಡ್ ಟ್ಯಾಂಕ್‍ಗಳ
ನಿರ್ಮಾಣ ಹಾಗೂ 97589 ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಿ ಎಂಟು
ವರ್ಷಗಳ ಕಾಲ ನಿರ್ವಹಣೆ ಮಾಡುವ ಕಾಮಗಾರಿ ಗುತ್ತಿಗೆಯನ್ನು
ಸುಯೆಜ್ ಪ್ರಾಜೆಕ್ಟ್ ಕಂಪನಿ ಪಡೆದಿದ್ದು, 2022 ರ ಫೆಬ್ರವರಿ ಒಳಗಾಗಿ
ಕಾಮಗಾರಿ ಪೂರ್ಣಗೊಳಿಸಿ, ಅನುಷ್ಠಾನಗೊಳಿಸಲು ಕಾಲಮಿತಿ
ನಿಗದಿಪಡಿಸಲಾಗಿತ್ತು. ಅನುದಾನ ಬಿಡುಗಡೆಯಲ್ಲಿ ಯಾವುದೇ
ತೊಂದರೆ ಉಂಟಾಗಿಲ್ಲ, ಈಗಾಗಲೆ ಗುತ್ತಿಗೆ ಪಡೆದು ನಾಲ್ಕು
ವರ್ಷಗಳಾಗಿದ್ದರೂ ಇದುವರೆಗೂ ಶೇ. 56 ರಷ್ಟು ಮಾತ್ರ ಕಾಮಗಾರಿ
ಪೂರ್ಣಗೊಂಡಿದೆ. ಆದರೂ 97589 ಮನೆಗಳಿಗೆ ಸಂಪರ್ಕ ಕಲ್ಪಿಸುವ
ಗುರಿಯ ಬದಲಿಗೆ ಇದುವರೆಗೂ ಕೇವಲ 22409 ಮನೆಗಳಿಗೆ ಮಾತ್ರ
ಸಂಪರ್ಕ ನೀಡಲಾಗಿದೆ. 18 ಓವರ್‍ಹೆಡ್ ಟ್ಯಾಂಕ್‍ಗಳ ನಿರ್ಮಾಣದಲ್ಲಿ
ಇದುವರೆಗೂ ಯಾವುದೂ ಕೂಡ ಸಂಪೂರ್ಣವಾಗಿ ಪೂರ್ಣಗೊಂಡಿಲ್ಲ.
ನಿಗದಿತ ಕಾಲಮಿತಿಗೆ ಇನ್ನು ಕೇವಲ 06 ತಿಂಗಳು ಮಾತ್ರ ಉಳಿದಿದ್ದು,
ಕಾಮಗಾರಿ ಹೇಗೆ ಪೂರ್ಣಗೊಳಿಸುತ್ತೀರಿ ಎಂದು ಸಂಸದರು ಪ್ರಶ್ನಿಸಿದರು.
ಗುತ್ತಿಗೆ ಪಡೆದಿರುವ ಕಂಪನಿಯ ಕಾರ್ಯವೈಖರಿಗೆ ತೀವ್ರ
ಅಸಮಾಧಾನ ವ್ಯಕ್ತಪಡಿಸಿದ ಸಂಸದರು, ನಿಗದಿತ ಕಾಲಮಿತಿಯೊಳಗೆ
ಕಾಮಗಾರಿ ಪೂರ್ಣಗೊಳಿಸದಿದ್ದರೆ, ನಿಯಮಾನುಸಾರ 20 ರಿಂದ 30 ಕೋಟಿ
ರೂ.ಗಳವರೆಗೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸುಯೆಜ್ ಕಂಪನಿಯ ಯೋಜನಾ ನಿರ್ದೇಶಕ ಸಚಿತ್ ಮಾತನಾಡಿ, ಕೋವಿಡ್

ಸೋಂಕು ಭೀತಿಯಿಂದಾಗಿ ಕಾರ್ಮಿಕರ ಪೂರೈಕೆಯಲ್ಲಿ
ತೊಂದರೆಯಾಗಿದೆ, ಹೀಗಾಗಿ ವಿಳಂಬವಾಗಿದೆ. 2022 ರ ಜೂನ್ ಅಂತ್ಯದೊಳಗೆ
ಕಾಮಗಾರಿ ಪೂರ್ಣಗೊಳಿಸುತ್ತೇವೆ ಎಂದು ಹೇಳಿದರು. ಇದಕ್ಕೆ
ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸಂಸದರು, ಕೋವಿಡ್ ಲಾಕ್‍ಡೌನ್
ಸಂದರ್ಭದಲ್ಲಿ ಯಾವುದೇ ಕಾಮಗಾರಿಗಳನ್ನು ಕೈಗೊಳ್ಳಲು ಹಾಗೂ
ಕಾರ್ಮಿಕರ ಓಡಾಟಕ್ಕೆ ನಿರ್ಬಂಧ ಇರಲಿಲ್ಲ, ಇಂತಹ ಸಬೂಬುಗಳನ್ನು
ಒಪ್ಪಿಕೊಳ್ಳಲಾಗದು. ಹೆಚ್ಚಿನ ಸಂಖ್ಯೆಯಲ್ಲಿ ಮಾನವಸಂಪನ್ಮೂಲ
ಹಾಗೂ ಯಂತ್ರೋಪಕರಣಗಳನ್ನು ಕ್ರೋಢೀಕರಿಸಿ, ನಿಗದಿತ
ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದರು.
ನಗರಪಾಲಿಕೆ ಸದಸ್ಯ ಉಮಾ ಅವರು ಮಾತನಾಡಿ, ಜಲಸಿರಿ ಯೋಜನೆಯಡಿ
ಕಾಮಗಾರಿ ನಡೆಸುವ ವೇಳೆ, ಪಾಲಿಕೆಯ ನೀರು ಪೂರೈಕೆ ಪೈಪ್‍ಲೈನ್
ಹಾಗೂ ರಸ್ತೆಯನ್ನು ಒಡೆದುಹಾಕುತ್ತಾರೆ, ಆದರೆ ಅದನ್ನು
ದುರಸ್ತಿಗೊಳಿಸಲು ವಿಳಂಬ ಮಾಡುತ್ತಾರೆ. ಇದರಿಂದಾಗಿ ಜನರಿಗೆ ನೀರು
ಪೂರೈಕೆಯಲ್ಲಿ ತೊಂದರೆಯಾಗುತ್ತಿದೆ ಎಂದು ಆರೋಪಿಸಿದರು.
ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು, ಪೈಪ್‍ಲೈನ್
ಒಡೆದಲ್ಲಿ ತಕ್ಷಣವೇ ಅದನ್ನು ದುರಸ್ತಿ ಮಾಡುವ ಹೊಣೆ
ಕಂಪನಿಯವರದ್ದು, ಹೀಗಾಗಿ ಮುಂದೆ ಈ ರೀತಿ ಆದಲ್ಲಿ ಸಹಿಸುವುದಿಲ್ಲ.
ಇನ್ನು ಮುಂದೆ ಜಲಸಿರಿ ಯೋಜನೆ ಕುರಿತು ಪ್ರತಿ ತಿಂಗಳು ಪರಿಶೀಲನಾ ಸಭೆ
ನಡೆಸಲಾಗುವುದು ಎಂದರು.
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಮಹಾನಗರಪಾಲಿಕೆ ಮಹಾಪೌರ ಎಸ್.ಟಿ.
ವೀರೇಶ್, ಆಯುಕ್ತ ವಿಶ್ವನಾಥ ಮುದಜ್ಜಿ, ಸ್ಮಾರ್ಟ್ ಸಿಟಿ ಯೋಜನೆ
ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ, ಕರ್ನಾಟಕ ನಗರ
ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ
ಕಾರ್ಯಪಾಲಕ ಅಭಿಯಂತರ ಮಂಜುನಾಥ್, ಸೇರಿದಂತೆ ವಿವಿಧ
ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *