ರಾಜ್ಯ ಸರ್ಕಾರವು ಒಕ್ಕಲಿಗ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವ ಮೂಲಕ ಸಣ್ಣಪುಟ್ಟ ಜಾತಿ, ಪಶುಪಾಲನಾ ಬುಡಕಟ್ಟು ಜನಾಂಗಗಳನ್ನು ನಿರ್ಮಾಣ ಮಾಡುವಂತ ನಿರ್ಣಯವನ್ನು ರಾಜ್ಯ ಸರ್ಕಾರ ಮಾಡಿರುವುದಕ್ಕೆ ಕರ್ನಾಟಕ ರಾಜ್ಯ ಕುಂಚಿಟಿಗ ಮೀಸಲಾತಿ ಹೋರಾಟ ಮತ್ತು ಕ್ಷೇಮಾಭಿವೃದ್ಧಿ ಸಂಘ ಹಾಗೂ ಜಿಲ್ಲಾ ಕುಂಚಿಟಿಗ ಸಂಘ ಜಂಟಿಯಾಗಿ ಖಂಡಿಸುತ್ತವೆ.

ರಾಜ್ಯ ಸರ್ಕಾರದ ಹಿಂದುಳಿದ ವರ್ಗಗಳ ಅಧೀನ ಕಾರ್ಯದರ್ಶಿಯವರು ಜು.17 ರಂದು ಸುತ್ತೋಲೆ ಹೊರಡಿಸಿದ್ದು ಪ್ರವರ್ಗ-3ಎ ಅಡಿಯಲ್ಲಿ ಬುರವಂತ ಒಕ್ಕಲಿಗ ಜಾತಿಯನ್ನು ಪ್ರದಾನವಾಗಿ ಬಿಂಬಿಸಿ ಅದರಡಿಯಲ್ಲಿರುವ ಬರುವಂತ ಬುಡಕಟ್ಟು ಕುಂಚಿಟಿಗ ಜಾತಿಯನ್ನು ಒಕ್ಕಲಿಗ ಜಾತಿಯ ಉಪ ಜಾತಿ ಎಂದು ಆದೇಶ ಮಾಡಲಾಗಿದೆ. ಇದು ಅತ್ಯಂತ ಖಂಡನೀಯವಾಗಿದೆ.

1921ರ ಜಾತಿ ಜನಗಣತಿಯಲ್ಲಿ ಕುಂಚಿಟಿಗ ಜಾತಿಯನ್ನು ಒಕ್ಕಲಿಗ ಜಾತಿಯಿಂದ ಪ್ರತ್ಯೇಕಿಸಿ ಗಣತಿ ಮಾಡಲಾಗಿದೆ. ಜೊತೆಗೆ ಇತರೆ ಹಿಂದುಳಿದ ಜಾತಿಗಳ ಪಟ್ಟಿಯಲ್ಲಿ ಸೇರ್ಪಡೆ ಮಾಡಲು ಅಂದಿನ ಮೈಸೂರು ಮಹಾರಾಜರ ಮೈಸೂರು ಸರ್ಕಾರದ ಅಂದಿನ ಸರ್ಕಾರದ ಮುಖ್ಯ ಕಾರ್ಯದರ್ಶಿ ಎನ್.ಮಾಧವ ರಾವ್ ಅವರು ದಿನಾಂಕ-17-8-1028ರಲ್ಲಿ ಆದೇಶ ಹೊರಡಿಸಿದ್ದಾರೆ.

ಕುಂಚಿಟಿಗ ಒಂದು ಹಿಂದುಳಿದ ಜಾತಿಯಾಗಿದ್ದು ಒಕ್ಕಲಿಗ ಜಾತಿಯ ಉಪ ಜಾತಿಯಲ್ಲ. ರಾಜ್ಯ ಸರ್ಕಾರಕ್ಕೆ ಕುಂಚಿಟಿಗ ಜನಾಂಗದ ಬಗ್ಗೆ ಕನಿಷ್ಠ ಕಾಳಜಿ ಇದ್ದರೆ ಮೈಸೂರು ವಿಶ್ವ ವಿದ್ಯಾಲಯವು ಕುಂಚಿಟಿಗ ಜಾತಿಯ ಕುಲಶಾಸ್ತ್ರೀಯ ಅಧ್ಯಯನ ಮಾಡಿ 2016ರಲ್ಲೇ ಸರ್ಕಾರ ವರದಿ ನೀಡಿದೆ. ಕೂಡಲೇ ಆ ವರದಿಯನ್ನು ಸಂಪುಟಕ್ಕೆ ತಂದು ಅಧ್ಯಯನ ವರದಿಯ ಶಿಫಾರಸುಗಳನ್ನು ಯಥಾವತ್ ಜಾರಿ ಮಾಡುವಂತೆ ಕುಂಚಿಟಿಗ ಜನಾಂಗದ ಆಗ್ರಹವಾಗಿದೆ.

ಕುಂಚಿಟಿಗ ಜಾತಿಯ ಸ್ವಾಮೀಜಿ ಒಬ್ಬರ ಚಿತಾವಣೆಯಿಂದಾಗಿ ಕುಂಚಿಟಿಗ ಜಾತಿಯ ಬದಲಾಗಿ ಒಕ್ಕಲಿಗ ಜಾತಿ ಎಂದು ಶಾಲಾ ದಾಖಲಾತಿಗಳಲ್ಲಿ ಬರೆಸುತ್ತಿರುವುದರಿಂದ ಭವಿಷ್ಯದಲ್ಲಿ ಸರ್ಕಾರಿ ಉದ್ಯೋಗಕ್ಕೆ ಸೇರ್ಪಡೆ ಆಗುವ ಸಂದರ್ಭದಲ್ಲಿ ಸಿಂಧುತ್ವವನ್ನು ಸರ್ಕಾರ ನೀಡುತ್ತಿಲ್ಲ. ಕುಂಚಿಟಿಗ ಜಾತಿ ಒಕ್ಕಲಿಗ ಜಾತಿಯ ಉಪ ಜಾತಿಯಾಗಿದ್ದರೆ ಕೇಂದ್ರ ಸರ್ಕಾರದಲ್ಲಿ ಒಕ್ಕಲಿಗರಿಗೆ ಒಬಿಸಿ ಮೀಸಲಾತಿ ಸೌಲಭ್ಯವಿದೆ. ಅಲ್ಲದೆ ಒಕ್ಕಲಿಗ ಜಾತಿಯ ಇತರೆ ಎಲ್ಲ ಉಪ ಜಾತಿಗಳಿಗೂ ಕೇಂದ್ರದ ಒಬಿಸಿ ಮೀಸಲಾತಿ ಇದೆ. ಆದರೆ ಕುಂಚಿಟಿಗ ಜಾತಿಗೆ ಏಕೆ ಕೇಂದ್ರ ಒಬಿಸಿ ಮೀಸಲು ಸೌಲಭ್ಯ ನೀಡಿಲ್ಲ ಎನ್ನುವುದನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳೇ ಉತ್ತರ ನೀಡಬೇಕಿದೆ ಎಂದು ನಾವು ಆಗ್ರಹ ಮಾಡುತ್ತೇವೆ.

ಪ್ರವರ್ಗ-3ಎ ಗುಂಪಿಗೆ ರಾಜ್ಯ ಸರ್ಕಾರ 500 ಕೋಟಿ ರೂ.ಗಳನ್ನು ಮೀಸಲಿಟ್ಟು ಒಕ್ಕಲಿಗ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದರೆ ಕೂಡಲೇ ಜನಸಂಖ್ಯೆಗೆ ಅನುಗುಣವಾಗಿ ಕುಂಚಿಟಿಗ ಜಾತಿಗೆ ಸೇರಬೇಕಾದ 500 ಕೋಟಿ ರೂ. ಪಾಲನ್ನು ಕುಂಚಿಟಿಗ ಜಾತಿಗೆ ಪ್ರತ್ಯೇಕವಾಗಿ ಇಟ್ಟು ಕುಂಚಿಟಿಗ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಲಿ ಎನ್ನುವುದು ಜನಾಂಗದ ಕಳಕಳಿಯಾಗಿದೆ.

ಕುಂಚಿಟಿಗ ಜನಾಂಗ ಯಾರ ವಿರೋಧಿಯು ಅಲ್ಲ, ಇದೊಂದು ಹಿಂದುಳಿದ ಬುಡಕಟ್ಟು ಸಮುದಾಯವಾಗಿದೆ. ಮೂಲ ಕಟ್ಟೆಮನೆಗಳು, ಬುಡಕಟ್ಟುಗಳು, ಅಮಾವಾಸ್ಯೆ ದೇವರುಗಳು, ಕುಂಚಿಟಿಗ ಸಾಂಸ್ಕೃತಿಕ ವೀರರ ಇತಿಹಾಸ ಸಮೃದ್ಧಿಯಾಗಿದ್ದು ಇಂದಿಗೂ ಎಲ್ಲ ರೀತಿಯ ಬುಡಕಟ್ಟು ಆಚರಣೆಗಳು ಜೀವಂತವಾಗಿದೆ. ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ಕುಲಶಾಸ್ತ್ರೀಯ ಅಧ್ಯಯನ ವರದಿಯನ್ನು ಯಥಾವತ್ ಜಾರಿ ಮಾಡಬೇಕು, ಒಕ್ಕಲಿಗ ಜಾತಿಯ ಉಪ ಜಾತಿ ಎನ್ನುವ ಆದೇಶವನ್ನು ರದ್ದು ಮಾಡಬೇಕು ಇಲ್ಲವಾದರೆ ರಾಜ್ಯಾದ್ಯಂತ ಹೋರಾಟ ಮಾಡುವುದರ ಜೊತೆಯಲ್ಲಿ ನ್ಯಾಯಾಲಯದ ಕದ ತಟ್ಟಬೇಕಾಗುತ್ತದೆ.

ವಂದನೆಗಳೊಂದಿಗೆ ಇಂತಿ ವಿಶ್ವಾಸಿಗಳು

ಸಹಿ ಸಹಿ

ಹರಿಯಬ್ಬೆ ಸಿ.ಹೆಂಜಾರಪ್ಪ ರಾಜ್ಯಾಧ್ಯಕ್ಷರು, ಡಾ.ದೇವರಾಜ್ ಪ್ರ.ಕಾರ್ಯದರ್ಶಿ

ಕರ್ನಾಟಕ ರಾಜ್ಯ ಕುಂಚಿಟಿಗ ಮೀಸಲಾತಿ ಹೋರಾಟ

ಮತ್ತು ಕ್ಷೇಮಾಭಿವೃದ್ಧಿ ಸಂಘ.

Leave a Reply

Your email address will not be published. Required fields are marked *

You missed