ಹಿಂದೆ ವಿದೇಶಿಯರು ನಮ್ಮ ದೇಶಕ್ಕೆ ಬಂದಾಗ ಇಲ್ಲಿ ತುಂಬಿ ತುಳುಕುತ್ತಿದ್ದ ಕೃಷಿ ಸಂಪತ್ತು ಅವರಲ್ಲಿ ಅಚ್ಚರಿ ಮೂಡಿಸಿತ್ತು.ಇಷ್ಟು ಸಮೃದ್ದಿಗೆ ಕಾರಣ ಇಲ್ಲಿರುವ ಗೋವುಗಳು ಎಂದು ತಿಳಿದ ನಂತರ ದೇಶದ ಸಂಪತ್ತನ್ನು ದೋಚಿದ್ದಲ್ಲದೆ ಅದೆಷ್ಟೋ ಗೋವುಗಳ ಮಾರಣಹೋಮವನ್ನೂ ನಡೆಸಿದರು. ಇತ್ತೀಚಿನ ದಿನಗಳಲ್ಲಂತೂ ದೇಶೀಯ ತಳಿಯ ಗೋವುಗಳು ವಿನಾಶದ ಅಂಚಿಗೆ ಬಂದು ನಿಂತಿವೆ.

ಉಳುಮೆಗಾಗಿ…
ಗಾಡಿ ಎಳೆಯಲು….
ನೀರಾವರಿಗೆ..
ಗೊಬ್ಬರಕ್ಕಾಗಿ…
ಕೀಟನಾಶಕವಾಗಿ…
ಆಹಾರವಾಗಿ…
ಔಷಧವಾಗಿ…
ಹೀಗೆ ಗೋ ಸಂತತಿ ಕೃಷಿಕರ ಒಡನಾಡಿಯಾಗಿ ಹಿಂದಿನಿಂದಲೂ ಬೆಳೆದುಬಂದಿದೆ.

ಪಂಚಗವ್ಯಗಳಾಗಿ:
ಹಾಲು,
ಮೊಸರು ,
ಗೋಘೃತ(ಹಸುವಿನ ತುಪ್ಪ),
ಗೋಮಯ,
ಗೋಮೂತ್ರ,
ಗೋರೋಚನ,
ಗೊರಸು
ಈ ಎಲ್ಲವೂ ಔಷಧಿರೂಪದಲ್ಲಿ ಉಪಯೋಗಕ್ಕೆ ಬರುವುದರಿಂದ ಹಿಂದಿನವರು ಗೋವನ್ನು “ಕಾಮಧೇನು” ಎಂದು ಕರೆದು ಪೂಜನೀಯ ಸ್ಥಾನವನ್ನು ಕೊಟ್ಟಿದ್ದಾರೆ.

ಗೋವಿನ ಸೆಗಣಿಯನ್ನು ನೋಡಿ ಮೂಗು ಮುಚ್ಚಿಕೊಳ್ಳದಿರಿ. ದೇಶೀ ತಳಿಯ ಹಸುವಿನ ಸೆಗಣಿಯ ಔಷಧೀಯ ಗುಣಗಳನ್ನು ತಿಳಿದರೆ ಅಚ್ಚರಿಯಿಂದ ನೀವೇ ಮೂಗಿನಮೇಲೆ ಬೆರಳಿಡುವಿರಿ.
ಈ ದಿನ ಸೆಗಣಿಯ ಉಪಯೋಗಗಳನ್ನು ತಿಳಿದುಕೊಳ್ಳೋಣ.

1) ಎಳೆ ಮಕ್ಕಳಿಗೆ ಛವಿ ಮತ್ತೆ ಮುಳ್ಳು ಎಂಬ ಎರಡು ರೀತಿಯ ಚರ್ಮದ ತೊಂದರೆ ಕಾಣಿಸಿಕೊಳ್ಳುವುದು. ಛವಿಗೆ ಕೆಲವು ಸೊಪ್ಪುಗಳ ರಸ ಹಚ್ಚಿ ಸ್ನಾನ ಮಾಡಿಸುವುದರಿಂದ ಅದು ಬೇಗನೇ ವಾಸಿಯಾಗುವುದು. ಮುಳ್ಳು ಎನ್ನುವುದು ವಾಸಿಯಾಗಲು ಕೆಲವು ದಿನಗಳು ಬೇಕಾಗುವುದು. ಅದು ವಾಸಿಯಾಗದಿದ್ದರೆ ದೊಡ್ಡವರಾದಂತೆ ಮುಖದಲ್ಲಿ ಚಿಕ್ಕ..ಚಿಕ್ಕ…ತೂತುಗಳಂತೆ ಆಗುವುದೆಂದು ನಮ್ಮೂರಿನ ಅಜ್ಜಿಯೊಬ್ಬರು ಹೇಳುತ್ತಿದ್ದರು. ಅದಕ್ಕೆ ಮಗುವಿಗೆ ಹಸುವಿನ ಸೆಗಣಿ ಹಚ್ಚಿ ಕಂಬಳಿಯಲ್ಲಿ ಸುತ್ತಿ ಒಂದುರಾತ್ರಿ ಮಲಗಿಸುವ ಅಭ್ಯಾಸ ಕೆಲವು ಕಡೆ ಇದೆ.
2) ಹಿಂದೆ ನೆಲವನ್ನು ಮತ್ತು ಗೋಡೆಯನ್ನು ಸೆಗಣಿಯಿಂದ ಸಾರಿಸುತ್ತಿದ್ದರು. ಸಾಂಕ್ರಾಮಿಕ ರೋಗಗಳಿಗೆ ಕಾರಣವಾದ ಮತ್ತು ರೋಗವನ್ನು ಹರಡುವಂತಹ ಕ್ರಿಮಿ ಕೀಟಗಳನ್ನು ನಾಶಮಾಡುವ ಶಕ್ತಿ ಸೆಗಣಿಗೆ ಇದೆ ಎಂಬುದನ್ನು ಆಗಿನವರು ತಿಳಿದುಕೊಂಡಿದ್ದರು. ಮತ್ತು ಧೂಳು ಮೇಲೇಳದಂತೆ ಹಿಡಿದಿಡುವ ಗುಣವು ಸೆಗಣಿಗೆ ಇರುತಿತ್ತು.
3) ಬೀಜೋಪಚಾರದಲ್ಲಿ ಹಣ್ಣು ತರಕಾರಿಯ ಧಾನ್ಯಗಳ ಬೀಜಗಳನ್ನು ಸೆಗಣಿಯೊಂದಿಗೆ ಕಲೆಸಿ ಒಣಗಿಸಿಡುವ ಮತ್ತು ನೆಡುವಾಗಲೂ ಸೆಗಣಿಯ ನೀರಿನಲ್ಲಿ ನೆನೆಸಿ ಬಳಸುತ್ತಾರೆ.
4) ಕಸಿ ಮಾಡುವಾಗ ಕೊಂಬೆಯ ತುದಿಗಳಿಗೆ ನೀರು ಆರದಂತೆ ಮತ್ತು ನೀರು ಹೋಗದಂತೆ ಸೆಗಣಿಯ ಉಂಡೆ ಇಡುವರು.
5)ಧಾನ್ಯಗಳನ್ನು ಸಂಗ್ರಹಿಸಿಡುವ ಕೋಣೆಯನ್ನು ಸೆಗಣಿಯಿಂದ ಸಾರಿಸುತ್ತಿದ್ದರು ಮತ್ತು ಧಾನ್ಯಗಳನ್ನಿಡುವ ಕುಡಿಕೆಗೂ ಸೆಗಣಿ ಬಳಿಯುತ್ತಿದ್ದರು.
6) ಸೆಗಣಿಯ ಗೊಬ್ಬರ ಕೃಷಿ ಭೂಮಿಗೆ ಅತ್ಯುತ್ತಮ ಗೊಬ್ಬರ. ಇದನ್ನು ಬಳಸಿ ಬೆಳೆದಂತಹ ಬೆಳೆಗಳಿಗೆ ರೋಗನಿರೋಧಕ ಶಕ್ತಿಯು ಹೆಚ್ಚು ಮತ್ತು ರುಚಿಯಾಗಿಯೂ ಇರುವುದು. ಸೆಗಣಿಯ ಗೊಬ್ಬರವು ಭೂಮಿಯ ಫಲವತ್ತತೆಯನ್ನು ಹೆಚ್ಚಿಸುವುದರ ಜೊತೆಗೆ ಮಣ್ಣಿನ ತೇವಾಂಶವನ್ನು ಕಾಪಾಡುತ್ತದೆ.
7) ಸೆಗಣಿಯ ಬೆರಣಿ ತಟ್ಟಿ ಆ ಬೆರಣಿಯನ್ನು ತುಪ್ಪ ಮತ್ತು (ಪಾಲೀಶ್ ಆಗಿರದ ಮತ್ತು ತುಂಡಾಗಿರದ) ಅಕ್ಕಿಯ ಜೊತೆ (ಸೂರ್ಯೋದಯ ಮತ್ತು ಸೂರ್ಯಾಸ್ತ ಸಮಯದಲ್ಲಿ) ಉರಿಸುವ ಪದ್ದತಿಗೆ “ಅಗ್ನಿಹೋತ್ರ ಹೋಮ” ಎಂದು ಹೇಳುತ್ತಾರೆ. ದಿನವೂ ಮನೆಯಲ್ಲಿ ಈ ಹೋಮ ಮಾಡುವುದರಿಂದ ತುಂಬಾ ಉಪಯೋಗಗಳಿವೆ. ವಾತಾವರಣವನ್ನು ಶುಚಿಗೊಳಿಸುವ ಶಕ್ತಿಯಿಂದ ಕೂಡಿರುವ ಈ ಹೋಮ ಭೋಪಾಲ್ ದುರಂತದಲ್ಲಿ ಹೊರಸೂಸಿದ ವಿಕಿರಣಗಳಿಂದಲೂ ಯಾವ ತೊಂದರೆಯಾಗದಂತೆ ರಕ್ಷಣೆ ನೀಡಿರುವುದು ಸಾಬೀತಾಗಿದೆ. ಕೊರೊನದಿಂದ ನಮ್ಮ ಅಕ್ಕ ಪಕ್ಕದ ಮನೆಯವರೆಲ್ಲ ಆಸ್ಪತ್ರೆ ಸೇರಿದರು… ಸ್ನೇಹಿತರೂ ಹಾಸಿಗೆ ಹಿಡಿದರು. ಒಬ್ಬರ ಮನೆಗೊಬ್ಬರು ಹೋಗುವಂತಿಲ್ಲ ಎಂದು ಎಷ್ಟು ದಿನ ಮನೆಯಲ್ಲೇ ಕುಳಿತಿರಲು ಸಾಧ್ಯ… ನನ್ನ ಮಗನ ಗೆಳೆಯರೆಲ್ಲ ನಮ್ಮ ಮನೆಯಲ್ಲಿಯೇ ಸೇರಿಕೊಂಡು ಆಡುತ್ತಿದ್ದರು. ಈ ಸಮಯದಲ್ಲಿ ಇಷ್ಟೊಂದು ಜನರನ್ನು ಮನೆಗೆ ಸೇರಿಸ್ತೀರಲ್ಲ ಎಂದು ಎಲ್ಲರೂ ಹೇಳುವವರೇ….. ಇಲ್ಲಿಯವರೆಗೂ ಕೊರೊನ ನಮ್ಮ ಮನೆಗೆ ಕಾಲಿಟ್ಟಿಲ್ಲ ಅದಕ್ಕೆ ಕಾರಣ ಭಾರತೀಯರಾದ ಬ್ರಾಹ್ಮಣರ ಮನೆಯಲ್ಲಿ ಮಾಡುವ ಅಗ್ನಿಹೋತ್ರ ಹೋಮವೇ ಕಾರಣ ಅಂದುಕೊಂಡಿದ್ದೇನೆ. ಆ ಹೋಮದ ಹೊಗೆಯಿಂದ ತಲೆನೋವು ವಾಸಿಯಾಗುವುದು.
8) ಅಗ್ನಿಹೋತ್ರ ಹೋಮದ ನಂತರ ಉಳಿಯುವ ಭಸ್ಮವೂ ಔಷಧೀಯ ಗುಣಗಳಿಂದ ನಮ್ಮ ಬಾಯಿಗೆ ಎರಡು ಚಿಟಿಕೆ ಭಸ್ಮವನ್ನು ಹಾಕಿಕೊಂಡು ನೀರು ಕುಡಿಯುವುದರಿಂದ ದೇಹದಲ್ಲಿರುವ ಕಲ್ಮಷಗಳನ್ನು ಹೊರಹಾಕುವಲ್ಲಿ ಸಹಕಾರಿಯಾಗಿದೆ.
9) ಸ್ನಾನ ಮಾಡುವ ಹತ್ತು ನಿಮಿಷ ಮೊದಲು ಬೆರಣಿಯ ಭಸ್ಮವನ್ನು ನೀರಿನಲ್ಲಿ ಕಲೆಸಿ ತಲೆಗೆ ಹಚ್ಚಿಕೊಂಡರೆ ಕೂದಲು ಉದುರುವುದು ಕಡಿಮೆ ಆಗುವುದು.
10) ಕುರು ಆದಾಗ ಸೆಗಣಿಯ ಭಸ್ಮದಿಂದ ತಯಾರಾದ ವಿಭೂತಿಯನ್ನು (ಬೆಳ್ತಿಗೆ ಅಕ್ಕಿ ತೊಳೆದ ನೀರು=) ಕಲಗಚ್ಚಿನಲ್ಲಿ
ಕಲಸಿ ಕುರುವಿನ ಮೇಲೆ ಲೇಪಿಸಿದರೆ ಬೇಗನೆ ವಾಸಿಯಾಗುವುದು.
11) ಕೈ ಕಾಲು ತಣ್ಣಗಾದಾಗ ಅಥವಾ ದೇಹ ತಣ್ಣಗಾದಾಗ ವಿಭೂತಿಯನ್ನು ಅಂಗೈ ಅಂಗಾಲಿಗೆ ಉಜ್ಜುತ್ತಾರೆ.
12) ಕೈಕಾಲು ಬೆವರುವಂತಹವರು ವಿಭೂತಿ ಪುಡಿ ಸವರಿಕೊಂಡರೆ ಬೆವರುವುದು ಕಡಿಮೆಯಾಗಿ ಬೆವರಿನ ದುರ್ಗಂಧ ಹೋಗುವುದು.
13) ಹಿಮ ಪ್ರದೇಶಗಳಲ್ಲಿ ಕನಿಷ್ಠ ಬಟ್ಟೆ ತೊಟ್ಟು ವಾಸಿಸುವಂತಹ ಸಾಧುಗಳು ಮೈಗೆಲ್ಲ ಭಸ್ಮಲೇಪನ ಮಾಡಿಕೊಂಡಿರುವುದನ್ನು ಎಲ್ಲರೂ ಗಮನಿಸಿರುತ್ತೀರಿ.
ಸೆಗಣಿಯ ಭಸ್ಮ ಹೊರಗಿನ ತೇವಾಂಶ ದೇಹವನ್ನು ಪ್ರವೇಶಿಸದಂತೆ ತಡೆದು ದೇಹದೊಳಗಿನ ಉಷ್ಣತೆಯನ್ನು ಸಮತೋಲನ ಮಾಡುವ ಗುಣವನ್ನು ಹೊಂದಿದೆ. ಈ ಗುಣದಿಂದಲೇ ವಿಭೂತಿಧಾರಣೆಯ ಅಭ್ಯಾಸವೂ ಬೆಳೆದು ಬಂದಿರುತ್ತದೆ.
14) ಮುಖದಲ್ಲಿ ಏಳುವ ಮೊಡವೆಗೆ ವಿಭೂತಿಯನ್ನು ನೀರಿನಲ್ಲಿ ಕಲಸಿ ಹಚ್ಚಿದರೆ ಬೇಗನೇ ವಾಸಿಯಾಗುವುದು ಕಲೆ ಉಳಿಯುವುದಿಲ್ಲ.
15) ಜೀರ್ಕೆ ಕಾಯಿಯನ್ನು ತೆಳ್ಳಗೆ ಕೊಯ್ದು ಸೆಗಣಿ ನೀರಿನಲ್ಲಿ ನೆನೆಸಿ ಒಣಗಿಸಿ ಇಡುತ್ತಾರೆ. ಬೇಕಾದಾಗ ಅದನ್ನು ಶುದ್ದ ನೀರಿನಲ್ಲಿ ತೊಳೆದು ನೆನೆಹಾಕಿ ರಸವನ್ನು ಕಾಯಿಸಿ ಇಟ್ಟುಕೊಳ್ಳುತ್ತಾರೆ. ಎಷ್ಟು ವರ್ಷವಾದರೂ ಕೆಡದ ಈ ಹುಳಿರಸವನ್ನು ಮುಂಡಿ(ಮುರಸಣಿಗೆ), ಸುವರ್ಣಗಡ್ಡೆ (ಕೇನೆ), ಮತ್ತು ಕೆಸುವು , ಇಂತಹ ಹುಳಿ ಜಾಸ್ತಿ ಬೇಕಾಗುವಂತಹ ಅಡಿಗೆಯಲ್ಲಿ ಬಳಸುತ್ತಾರೆ
16) ವಿಭೂತಿ ಪುಡಿ ಸೌತೆಕಾಯಿ ರಸ ನಿಂಬೆರಸದ ಫೇಸ್ ಪ್ಯಾಕ್ ಮುಖದ ಕಾಂತಿ ಹೆಚ್ಚಿಸುವುದು.

ನೆನಪಿಡಿ:
ಇಷ್ಟೆಲ್ಲ ಔಷಧೀಯ ಗುಣಗಳಿಂದ ಕೂಡಿರುವ ಸೆಗಣಿ ಕಾಡು ಮೇಡಲೆದು ಮೇಯುವ ದೇಶಿ ತಳಿಯ ಗೋವುಗಳದ್ದಾಗಿರಬೇಕು.
ಇಷ್ಟೆಲ್ಲ ಉಪಯೋಗವಿರುವ ಗೋ ಸಂತತಿಯನ್ನು ಕಳೆದುಕೊಳ್ಳುವ ಮುನ್ನ ಉಳಿಸಿಕೊಳ್ಳುವ ಪ್ರಯತ್ನ ನಮ್ಮದಾಗಲಿ.

ಲೇಖನ… ✍?:
*ಶ್ರೀ

Leave a Reply

Your email address will not be published. Required fields are marked *