ವಿಜಯಪುರ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಪುತ್ರರ ದೆಹಲಿ ಭೇಟಿ ಬೆನ್ನಲ್ಲೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಕೆಲವರು ದೆಹಲಿಗೆ ಹೋಗಿ 2000 ಕೋಟಿ ಕೊಡುತ್ತೇವೆ ನಮ್ಮನ್ನು ಸಿಎಂ ಮಾಡಿ ಎಂದಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಯತ್ನಾಳ್, ಯಾರ್ಯಾರೋ ದೆಹಲಿಗೆ ಹೋಗುತ್ತಾರೆ ಬೇರೆ ಬೇರೆ ರೀತಿಯ ಆಮಿಷಗಳನ್ನು ಒಡ್ಡಲು ಮುಂದಾಗುತ್ತಾರೆ. ಆದರೆ ಬಿಜೆಪಿಯಲ್ಲಿ ಹಾಗಿಲ್ಲ, ಯಾವುದಕ್ಕೂ ಬಗ್ಗಲ್ಲ. ಕೆಲವರು 2000 ಕೋಟಿ ಕೊಡುತ್ತೇವೆ ನಮ್ಮನ್ನು ಸಿಎಂ ಮಾಡಿ ಎಂದಿದ್ದಾರೆ. ಹೀಗೆಲ್ಲ ಹೇಳಿದರೆ ಪಕ್ಷ ಸುಮ್ಮನಿರುತ್ತಾ ಎಂದು ಕೇಳಿದ್ದಾರೆ.
ಪ್ರಧಾನಿ ಮೋದಿ ತಮ್ಮ ಸಂಪುಟದಲ್ಲಿ ಎಲ್ಲಾ ಸಮುದಾಯದವರನ್ನೂ ಸಚಿವರನ್ನಾಗಿ ಮಾಡಿದ್ದಾರೆ. ದಲಿತರು, ಹಿಂದುಳಿದವರಿಗೆ, ಪ್ರಮುಖವಾಗಿ ಮಹಿಳೆಯರಿಗೆ ಅವಕಾಶ ನೀಡಿದ್ದಾರೆ. ಹೀಗಿರುವಾಗ ಇವರ್ಯಾರೋ ಹೋಗಿ 2000 ಕೋಟಿ ನೀಡುತ್ತೇವೆ ಎಂದು ಹೇಳಿದರೆ ಕಪಾಳಕ್ಕೆ ಬಾರಿಸಿ ಕಳುಹಿಸುತ್ತಾರೆ ಎಂದು ಹೇಳಿದರು.