ಗುರುಪೂರ್ಣಿಮೆ ನಿಮಿತ್ತ ಪೂರ್ವಭಾವಿಯಾಗಿ ಹಿಂದೂ ಜನಜಾಗೃತಿ ಸಮಿತಿಯು ಆಯೋಜಿಸಿದ್ದ ‘ಸಂತರ ಅಮೂಲ್ಯ ಸತ್ಸಂಗ’ !
ಶಿಷ್ಯನ ಆಧ್ಯಾತ್ಮಿಕ ಉನ್ನತಿ ಮತ್ತು ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿಗೆ
ಗುರು ಶಿಷ್ಯ ಪರಂಪರೆಯು ಅನಿವಾರ್ಯವಾಗಿದೆ. – ಪೂ ರಮಾನಂದ ಗೌಡ, ಸನಾತನ ಸಂಸ್ಥೆ.
ಇದೇ ಶುಕ್ರವಾರ, ಜುಲೈ 23 ರಂದು ಆಷಾಢ ಹುಣ್ಣಿಮೆ ಅಂದರೆ ಗುರುಪೂರ್ಣಿಮೆಯಿದೆ, ಈ ನಿಮಿತ್ತ ಗುರುಗಳ ಮಹತ್ವವನ್ನು ಸಮಾಜಕ್ಕೆ ತಿಳಿಸಲೆಂದು ಹಿಂದೂ ಜನಜಾಗೃತಿ ಸಮಿತಿಯು ಆನ್ಲೈನ್ ಮೂಲಕ ಸಂತರ ಅಮೂಲ್ಯ ಸತ್ಸಂಗವನ್ನು ಆಯೋಜಿಸಿತ್ತು. ಈ ಸತ್ಸಂಗದಲ್ಲಿ ಸನಾತನದ ಧರ್ಮಪ್ರಚಾರಕ ಸಂತರಾದ ಪೂ. ರಮಾನಂದ ಗೌಡ ಇವರು ಕರ್ನಾಟಕ ರಾಜ್ಯದ ಭಾವಿಕರಿಗೆ ಆನ್‌ಲೈನ್ ಮೂಲಕ ಮಾರ್ಗದರ್ಶನ ಮಾಡಿದರು. ‘ಗುರು-ಶಿಷ್ಯ ಪರಂಪರೆಯು ಸನಾತನ ಹಿಂದೂ ಧರ್ಮದ ರತ್ನ ಕಚಿತ ವಜ್ರವಾಗಿದೆ. ಸ್ವಾಮಿ ವಿವೇಕಾನಂದರಿಗೆ ವಿದೇಶಿಗರೊಬ್ಬರು, ಭಾರತದ ವೈಶಿಷ್ಟ್ಯವನ್ನು ಎರಡು ಶಬ್ದಗಳಲ್ಲಿ ವರ್ಣಿಸಿ ಎಂದಾಗ, ಸ್ವಾಮೀಜಿಯವರು ಭಾರತದ ವೈಶಿಷ್ಯ ಗುರು-ಶಿಷ್ಯ ಪರಂಪರೆ ಎಂದು ಹೇಳಿದರು. ಗಂಗೆಯು ಪಾಪವನ್ನು, ಚಂದ್ರನು ತಾಪವನ್ನು, ಕಲ್ಪವೃಕ್ಷವು ದಾರಿದ್ರ್ಯವನ್ನು ಮಾತ್ರ ನಾಶ ಮಾಡುತ್ತಾರೆ. ಆದರೆ ಗುರುಗಳು ಇವೆಲ್ಲವನ್ನು ಹೋಗಲಾಡಿಸುತ್ತಾರೆ. ಯತಿ ಶ್ರೇಷ್ಠ ಭಗವಾನ್ ಶ್ರೀಧರ ಸ್ವಾಮಿಗಳು ಗುರುಗಳ ಮಹಿಮೆ ಬಗ್ಗೆ ಹೇಳುತ್ತಾ ಕಾಮದೇನು, ಚಿಂತಾಮಣಿ, ಸಾಗರ, ಕಲ್ಪವೃಕ್ಷ, ಮೇರು ಪರ್ವತ ಇವೆಲ್ಲವುಗಳಿಗಿಂತ ಗುರುಗಳು ಮಿಗಿಲಾಗಿದ್ದಾರೆ. ಯಾಕೆಂದರೆ ಇವರೆಲ್ಲರೂ ಕೇವಲ ಕೇಳಿದ್ದನ್ನು ಮಾತ್ರ ಕೊಡುತ್ತಾರೆ. ಆದರೆ ಗುರುಗಳು ಶಿಷ್ಯನಿಗೆ ಯಾವುದರ ಅವಶ್ಯಕತೆ ಇದೆಯೋ ಅದನ್ನು ಕೇಳದೆಯೇ ಕೊಡುತ್ತಾರೆ ಎಂದು ಹೇಳಿದರು. ಈ ಸತ್ಸಂಗದ ಉದ್ದೇಶವನ್ನು ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಶ್ರೀ. ಕಾಶಿನಾಥ ಪ್ರಭುರವರು ತಿಳಿಸಿದರು. ಈ ಸತ್ಸಂಗವನ್ನು ರಾಜ್ಯದ ವಿವಿಧ ಜಿಲ್ಲೆಗಳಿಂದ 10 ಸಾವಿರಕ್ಕೂ ಅಧಿಕ ಜನರು ವೀಕ್ಷಣೆ ಮಾಡಿದರು. ಅವರೆಲ್ಲರಿಗೂ ಈ ಗುರುಪೂರ್ಣಿಮಾ ಮಹೋತ್ಸವದಲ್ಲಿ ಉತ್ಸಾಹದಲ್ಲಿ ಗುರು ಸೇವೆ ಮಾಡಲು ಪ್ರೇರಣೆ ದೊರೆಯಿತು.

ಗುರುಕೃಪೆಯಿಂದಲೇ ಶಿಷ್ಯನ ಪರಮಂಗಲವಾಗುತ್ತದೆ ಎಂದು ವೇದದಲ್ಲಿ ಹೇಳಲಾಗಿದೆ. ಗುರು-ಶಿಷ್ಯರ ಸಂಬಂಧ ಆಧ್ಯಾತ್ಮಿಕ ಸ್ವರೂಪದ್ದಿರುತ್ತದೆ. ಗುರುಗಳು ಶಿಷ್ಯನನ್ನು ಎಲ್ಲಾ ಬಂಧನಗಳಿಂದ ಮುಕ್ತ ಮಾಡಿ, ಅವನಿಗೆ ಆತ್ಮಜ್ಞಾನವನ್ನು ನೀಡಿ ಅವನಿಗೆ ಭಗವಂತನ ಭೇಟಿಯನ್ನು ಮಾಡಿಸುತ್ತಾರೆ. ಗುರುವಿನ ಗುಲಾಮನಾಗದ ತನಕ ದೊರೆಯದಣ್ಣ ಮುಕುತಿ ಹೀಗೆ ದಾಸಶ್ರೇಷ್ಟ ಪುರಂದರ ದಾಸರು ಗುರುಗಳ ಮಹಿಮೆಯನ್ನು ಹಾಡಿ ಹೊಗಳಿದ್ದಾರೆ. ಸಂತ ಕಬೀರರು ಸಹ ‘ಶಿಷ್ಯನನ್ನು ಮಾಯೆಯ ಭವಸಾಗರದಿಂದ ಹೊರತಂದು ಅವನಿಗೆ ಮೋಕ್ಷದ ದಾರಿಯನ್ನು ತೋರಿಸುವವರು ಗುರುಗಳೇ ಆಗಿರುತ್ತಾರೆ ಎಂದು ಹೇಳಿದ್ದಾರೆ. ಶಿಷ್ಯನ ಜೀವನದಲ್ಲಿ ಗುರುಗಳ ಮಹತ್ವ ಅನನ್ಯ ಅಸಾಧಾರಣವಾಗಿದೆ. ಅದಕ್ಕಾಗಿ ಶಿಷ್ಯನು ಗುರುಗಳಿಗೆ ಸರ್ವಸ್ವವನ್ನು ಸಹ ತ್ಯಾಗ ಮಾಡಬೇಕು. ಆಗ ಗುರುಗಳು ಶಿಷ್ಯನ ಮೂಲಕ ಶಿಷ್ಯನ ಉದ್ದಾರದ ಜೊತೆಗೆ, ಅವನ ಮೂಲಕ ಧರ್ಮ ಸಂಸ್ಥಾಪನೆಯ ಕಾರ್ಯವನ್ನು ಸಹ ಮಾಡಿಸುತ್ತಾರೆ. ರಾಮಕೃಷ್ಣ ಪರಮಹಂಸರು ಸ್ವಾಮಿ ವಿವೇಕಾನಂದರ ಮೂಲಕ ಧರ್ಮ ಜಾಗೃತಿ, ಸಮರ್ಥ ರಾಮದಾಸರು ಶಿವಾಜಿ ಮಹಾರಾಜರ ಮೂಲಕ ಹಿಂದವೀ ಸ್ವರಾಜ್ಯದ ಸ್ಥಾಪನೆ ಮಾಡಿಸಿಕೊಂಡರು.
ಇಂದು ಭಾರತಕ್ಕೆ ಬಂದಿರುವ ಧರ್ಮಗ್ಲಾನಿಯನ್ನು ದೂರಮಾಡಲು ಇದೇ ಗುರು ಶಿಷ್ಯ ಪರಂಪರೆಯ ಆದರ್ಶದಲ್ಲಿ ರಾಮರಾಜ್ಯದ ಸ್ಥಾಪನೆಯನ್ನು ಮಾಡಲು ಪ್ರಯತ್ನ ಮಾಡಬೇಕು. ಅದಕ್ಕಾಗಿ ಗುರುಪೂರ್ಣಿಮೆಯ ನಿಮಿತ್ತ ಗುರುಗಳ ಕೃಪೆಯನ್ನು ಪಡೆದು ತನು, ಮನ, ಧನ ದಿಂದ ಗುರುಸೇವೆಯನ್ನು ಮಾಡಬೇಕು ಮತ್ತು ಗುರುಗಳ ಆಜ್ಞಾಪಾಲನೆಯೆಂದು ಧರ್ಮ ಜಾಗೃತಿ, ಹಿಂದೂ ಸಂಘಟನೆ ಕಾರ್ಯವನ್ನು ಮಾಡುವುದೇ ನಿಜವಾಗಿ ಗುರುಗಳಿಗೆ ನೀಡುವ ಗುರುದಕ್ಷಿಣೆಯಾಗಿದೆ. ಈ ಉದ್ದೇಶದಿಂದ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಜುಲೈ 23 ರಂದು ಸಾಯಂಕಾಲ 5.30ಕ್ಕೆ ಆನ್‌ಲೈನ್‌ನಲ್ಲಿ ಗುರುಪೂರ್ಣಿಮಾ ಮಹೋತ್ಸವವನ್ನು ಆಯೋಜನೆ ಮಾಡಲಾಗಿದೆ. ಸಮಸ್ತ ಹಿಂದೂಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಪೂ. ರಮಾನಂದ ಗೌಡ ಇವರು ಕರೆ ನೀಡಿದರು.

Leave a Reply

Your email address will not be published. Required fields are marked *