ಜಿಲ್ಲೆಯಲ್ಲಿ ಪ್ರಸ್ತುತ ಕೋವಿಡ್-19 2ನೇ ಅಲೆಯು ಕಡಿಮೆಯಾಗುತ್ತಿದ್ದು, ಮುಂದೆ ಕೋವಿಡ್ 3 ನೇ ಅಲೆ ಕಂಡುಬರುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಈಗಿನಿಂದಲೇ ಅದನ್ನು ಎದುರಿಸಲು ಜಿಲ್ಲಾಡಳಿತ ಹಾಗೂ ವೈದ್ಯಕೀಯ ಇಲಾಖೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಜಿಲ್ಲೆಯಲ್ಲಿನ ಸರ್ಕಾರಿ, ಖಾಸಗಿ ತಜ್ಞ ವೈದ್ಯರಿಗೆ ಮತ್ತು ವೈದ್ಯಾಧಿಕಾರಿಗಳಿಗೆ ಕೋವಿಡ್-19 3ನೇ ಅಲೆಯ ಕುರಿತು ಮಕ್ಕಳ ಆರೈಕೆ, ಮುನ್ನೆಚರಿಕೆ ಕ್ರಮಗಳು ಹಾಗೂ ನಿರ್ವಹಣೆ ಕುರಿತು ಏರ್ಪಡಿಸಿದ ಕಾರ್ಯಾಗಾರ ಉದ್ದೇಶಿಸಿ ಅವರು ಮಾತನಾಡಿದರು.
ಕೋವಿಡ್ 1 ಮತ್ತು 2 ನೇ ಅಲೆಯನ್ನು ಜಿಲ್ಲಾ ಮಟ್ಟದ ಎಲ್ಲ ಅಧಿಕಾರಿಗಳು ತಮ್ಮದೇ ಜವಾಬ್ದಾರಿಯಿಂದ ಮುತುವರ್ಜಿವಹಿಸಿ ಸಮಗ್ರವಾಗಿ ನಿಭಾಯಿಸಿದ್ದು, 3ನೇ ಅಲೆ ಎದುರಿಸಲು ಅಗತ್ಯವಿರುವ ವೈದ್ಯಕೀಯ ಮೂಲ ಸೌಕರ್ಯಗಳನ್ನು ಸಿದ್ದವಾಗಿಟ್ಟುಕೊಂಡು ನಿರ್ವಹಿಸಬೇಕು ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು, ಜಿಲ್ಲಾ ಮಟ್ಟದ ಖಾಸಗಿ ಮತ್ತು ಸರಕಾರಿ ತಜ್ಞ ವೈದ್ಯರು ಹಾಗೂ ಸಿಬ್ಬಂದಿಗಳಿಗೆ ಸೂಚಿಸಿದರು.
ಕೋವಿಡ್-19 3ನೇ ಅಲೆ ಭಾದಿಸಿದ್ದಲ್ಲಿ, ಈ ಬಗ್ಗೆ ಚಿಕಿತ್ಸೆ ನೀಡಲು ಅಗತ್ಯವಿರುವ ವೈದ್ಯರು, ಸಹಾಯಕ ಸಿಬ್ಬಂದಿಗಳಿಗೆ ಮಕ್ಕಳಿಂದ ಸ್ವ್ಯಾಬ್ ಸಂಗ್ರಹ ಸೇರಿದಂತೆ ಅಗತ್ಯ ತರಬೇತಿ ನೀಡಿ ಸಿದ್ದಪಡಿಸಿಟ್ಟುಕೊಳ್ಳಬೇಕು. 3ನೇ ಅಲೆ ವ್ಯಾಪಿಸುವುದರೊಳಗಾಗಿ ಮಕ್ಕಳಿಗೆ ವ್ಯಾಕ್ಸಿನೇಷನ್ ದೊರೆತರೆ ಕೋವಿಡ್ ಹರಡುವುದನ್ನು ತಡೆಗಟ್ಟಲು ಸುಲಭವಾಗುವುದು. ಅದರಲ್ಲೂ ಅಪೌಷ್ಟಿಕ ಮಕ್ಕಳ ಕುರಿತು ಗಮನಹರಿಸಬೇಕು ಎಂದರು.
ಕೋವಿಡ್ 3 ನೇ ಅಲೆಯ ನಿಯಂತ್ರಣಕ್ಕಾಗಿ ವೈದ್ಯಕೀಯ ತಜ್ಞರಿಂದ ತರಬೇತಿ ಕಾರ್ಯಗಾರ ಏರ್ಪಡಿಸುತ್ತಿದ್ದು, ಎಲ್ಲ ವೈದ್ಯರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಹಾಗೂ ಕೋವಿಡ್-19 3ನೇ ಅಲೆಯ ಸಾಧಕ-ಬಾಧಕಗಳ ಕುರಿತು, ಮಕ್ಕಳ ಆರೈಕೆ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಕುರಿತು ಸಮುದಾಯಕ್ಕೆ ತಲುಪಿಸಬೇಕು. ಈಗಾಗಲೇ ಕೊರೊನದ ಎರಡು ಅಲೆಯನ್ನು ಸಮಗ್ರವಾಗಿ ನಿಭಾಯಿಸಿದ್ದು, ಮುಂದೆ ಬರುವ ಅಲೆಯ ವಿರುದ್ಧ ಹೊರಾಡಲು ಸನ್ನದ್ಧರಾಗಿದ್ದೇವೆ ಎಂದರು.
ಕೋವಿಡ್ 3ನೇ ಅಲೆ ಬರುವ ಎಲ್ಲಾ ಸಾಧ್ಯತೆಗಳಿದ್ದು, ಅನ್‍ಲಾಕ್ ಆಗಿದೆ ಎಂದು ಮೈಮರೆತು ರಸ್ತೆಗಿಳಿಯುವುದು, ಗುಂಪು ಗುಂಪಾಗಿ ಸೇರುವುದು, ಮಾಸ್ಕ್ ಧರಿಸದೇ ಓಡಾಡುವುದು, ಕೋವಿಡ್ ನಿಯಾಮವಳಿಗಳನ್ನು ಗಾಳಿಗೆ ತೂರಿದರೆ ಕೊರೊನ ಸಾಂದ್ರತೆ ಹೆಚ್ಚಾಗಿ ವೇಗವಾಗಿ ಹರಡುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿ. ಅಗತ್ಯವಿದ್ದಲ್ಲಿ ಮಾತ್ರ ಹೊರಗಡೆ ಬರಬೇಕು ಎಂದು ಎಚ್ಚರಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಮಾತನಾಡಿ, ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಕೋವಿಡ್-19 ಸೋಂಕನ್ನು ತಡೆಗಟ್ಟಲು ಸಫಲರಾಗುತ್ತಿದ್ದು, ಆಯಾ ರಾಷ್ಟ್ರಗಳನ್ನು ಮಾದರಿಯಾಗಿಟ್ಟುಕೊಂಡು ಕೋವಿಡ್ ವಿರುದ್ಧ ಹೊರಡಲು ಸನ್ನದ್ಧರಾಗಬೇಕು. ಇದೀಗ ಕೊರೊನ 3ನೇ ಅಲೆ ಬರುವ ಸಾಧ್ಯತೆಗಳು ಹೆಚ್ಚಿದೆ ಎಂದು ವೈದ್ಯಕೀಯ ತಜ್ಞರು ತಿಳಿಸುತ್ತಿದ್ದು, ಅದನ್ನು ನಿಯಂತ್ರಿಸುವಲ್ಲಿ ಬೇಕಾದ ತರಬೇತಿಗಳನ್ನು ಪಡೆದುಕೊಂಡು ಜನರಲ್ಲಿ ಹೆಚ್ಚು ಜಾಗೃತಿ ಮೂಡಿಸಬೇಕು ಎಂದರು.
ಕಾರ್ಯಗಾರದಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್, ಡಿಹೆಚ್‍ಒ ಡಾ.ನಾಗರಾಜ್, ಎಸ್.ಎಸ್.ಐ.ಎಂ ನಿರ್ದೇಶಕ ಡಾ.ಕಾಳಪ್ಪ, ಬಾಪೂಜಿ ಮೆಡಿಕಲ್ ಕಾಲೇಜ್ ಅಧ್ಯಕ್ಷ ಡಾ.ಮುಗನಗೌಡ, ಮಕ್ಕಳ ಮತ್ತು ಹೆರಿಗೆ ಆಸ್ಪತ್ರೆ ಎ.ಎಂ.ಒ ಡಾ.ನೀಲಕಂಠ ನಾಯಕ್, ಆರ್.ಸಿ.ಹೆಚ್ ಅಧಿಕಾರಿ ಡಾ.ಮೀನಾಕ್ಷಿ, ಡಾ.ರೇಣುಕಾರಾಧ್ಯ, ಡಾ.ರಾಘವನ್, ಡಾ.ಮುರುಳೀಧರ, ಡಾ.ಸುರೇಶ್ ಬಾರ್ಕಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.