ಯಡಿಯೂರಪ್ಪ ಹೇಳಿದ ಎಲ್ಲವೂ ನಡೆಯಲ್ಲ; ಬಿಎಸ್ವೈ ವಿರುದ್ಧ ಮತ್ತೆ ಗುಡುಗಿದ ಯತ್ನಾಳ್

ವಿಜಯಪುರ: ಮಾಜಿ ಸಿಎಂ ಬಿಎಸ್ವೈ ಅವರು ಹೇಳಿದ್ದೆಲ್ಲವೂ ನಡೆಯಲ್ಲ. ಪಕ್ಷಕ್ಕೂ ಸಹ ಒಳ್ಳೆಯ ಮಂತ್ರಿಗಳನ್ನು, ಪ್ರಾಮಾಣಿಕರನ್ನು, ಹಿಂದುತ್ವ ಉಳ್ಳವರನ್ನು, ಮುಂದಿನ ದಿನಗಳಲ್ಲಿ ಬಿಜೆಪಿಯನ್ನು ತರುವ ಶಕ್ತಿಯುಳ್ಳವರನ್ನು ಮಂತ್ರಿ ಮಾಡಬೇಕು ಎನ್ನುವ ಇರಾದೆಯಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಬಿಎಸ್ವೈ ವಿರುದ್ಧ ಗುಡುಗಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು ಮಂತ್ರಿಗಿರಿಗಾಗಿ ದೆಹಲಿಗೆ ಹೋಗಿ ಲಾಬಿ ಮಾಡುವ ಅವಶ್ಯಕತೆ ಇಲ್ಲ. ನನಗೆ ಹೈಕಮಾಂಡ್ ಮೇಲೆ ವಿಶ್ವಾಸವಿದೆ. ಯಡಿಯೂರಪ್ಪನವರು ಹೇಳಿದ್ದೇ ಎಲ್ಲವೂ ಆಗೋದಿಲ್ಲ. ಅವರು ಹೇಳಿದ್ದೇ ಆಗೋದಿದ್ರೆ ಅವರನ್ನು ತೆಗೆಯುವ ಅವಶ್ಯಕತೆಯೂ ಇರಲಿಲ್ಲ. ಬಿ ಎಸ್ ವೈ ಅವರು ಹೇಳಿದವರನ್ನೇ ಮುಖ್ಯಮಂತ್ರಿ ಮಾಡಿದ್ದಾರೆ.

ಪ್ರಾಣ ಹೋದರೂ ಪರವಾಗಿಲ್ಲ, ಯತ್ನಾಳನನ್ನು ಸಿಎಂ ಮಾಡಬಾರದು ಎಂದು ಬಿ ಎಸ್ ವೈ ಕಂಡೀಷನ್ ಇತ್ತು. ಹಾಗಾಗಿ ಯತ್ನಾಳ ಸಿಎಂ ಆಗಿಲ್ಲ. ಇನ್ನು ಇಡಿ ಸಚಿವ ಸಂಪುಟದಲ್ಲಿ ನಿಷ್ಠಾವಂತರು, ಪಕ್ಷದ ಕಾರ್ಯಕರ್ತರು, ಬಿಜೆಪಿ ಕಟ್ಟಿ ಬೆಳೆಸಿದವರು, ಹಿಂದುತ್ವ ಉಳ್ಳವರಿಗೆ ಮಾಡಬೇಕು ಎಂದು ನನ್ನ ಆಗ್ರಹವಿದೆ. ಸಚಿವ ಸಂಪುಟದಲ್ಲಿ ವಿಜಯಪುರ ಜಿಲ್ಲೆಯನ್ನು ಕಡೆಗಣಿಸಿದ್ರೆ ಮುಂದಿನ ದಿನಗಳಲ್ಲಿ ಅದರ ಗಂಭೀರ ಪರಿಣಾಮ ಆಗುತ್ತದೆ.

ಇನ್ನು ಪಂಚಮಸಾಲಿ ಹೋರಾಟದಿಂದಾಗಿ ಯತ್ನಾಳ ಹಾಗೂ ನಿರಾಣಿಗೆ ಹಿನ್ನೆಡೆ ಆಯ್ತಾ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಜಾತಿಗೂ ಇದಕ್ಕೂ ಸಂಭಂದವಿಲ್ಲ, ಅವರವರ ಜನಪ್ರಿಯತೆ, ಅನುಭವದ ಮೇಲೆ ಅಳೆಯಬೇಕು. ಅನುಭವ ಇಲ್ಲದವರನ್ನು ತಂದು ಏನೋ ಮಾಡಿದ್ರೆ ಪಕ್ಷ ಮುಂದಿನ ದಿನಗಳಲ್ಲಿ ಅದರ ಪರಿಣಾಮ ಎದುರಿಸಬೇಕಾಗುತ್ತದೆ. ಯತ್ನಾಳನನ್ನು ಮುಗಿಸಬೇಕು ಎಂದು ಯಾವನೋ ಅನನುಭವಿಯನ್ನು ತಂದ್ರೆ ಆಗುತ್ತಾ?.

ಯತ್ನಾಳಗೆ ಇರುವಂತಹ ಸಿನಿಯಾರಿಟಿ ಯಾರಿಗಾದರೂ ಇದೆಯಾ ಬಿಜೆಪಿಯಲ್ಲಿ?* ಅಂತ ಪ್ರಶ್ನೆ ಮಾಡಿದ ಅವರು, ಅನಂತಕುಮಾರ, ಯಡಿಯೂರಪ್ಪ, ಈಶ್ವರಪ್ಪ ಬಿಟ್ಟರೆ ಬೇರೆ ಯಾರಿದ್ದಾರೆ?. ನಾವು ವಾಜಪೇಯಿ ಸರ್ಕಾರದಲ್ಲಿ ಮಂತ್ರಿಯಾದವರು, ಐದು ಬಾರಿ ಆರಿಸಿ ಬಂದವರು ಎಂದರು.

ಇನ್ನು ಯತ್ನಾಳ ಬಿಜೆಪಿ ಬಿಟ್ಟು ಹೋಗಿದ್ದರು ಎಂಬ ವಿಚಾರವಾಗಿ ಮಾತನಾಡಿದ ಅವರು, ಯಡಿಯೂರಪ್ಪ ಹೋಗಿರಲಿಲ್ಲವಾ? ಬೊಮ್ಮಾಯಿ ಮೂಲ ಬಿಜೆಪಿಗರಾ? ಅಥವಾ ಆರ್ ಎಸ್ ಎಸ್ ನಲ್ಲಿ ಧ್ವಜ ಪ್ರಣಾಮ ಮಾಡಿದ್ದಾರಾ?. ಅದೆಲ್ಲಾ ನೆಪಮಾತ್ರ, ನೆಪದಿಂದ ಏನೂ ಅಗೋದಿಲ್ಲ. ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕಾದರೆ, ಹಿಂದುತ್ವ ಉಳಿಯಬೇಕಾದರೆ, ನಿಷ್ಠಾವಂತರು ಉಳಿಯಬೇಕಾದರೆ ಪಕ್ಷ ನಿರ್ಣಯ ತೆಗೆದುಕೊಳ್ಳಬೇಕು.

ದುರ್ದೈವವೆಂದರೆ ಮಠಾಧೀಶರನ್ನು ಹಿಡಿದು ಮಂತ್ರಿಯಾಗಬೇಕಾದ ಪರಿಸ್ಥಿತಿ ಹಿರಿಯ ನಾಗರಿಕರಿಗೂ ಬಂದಿದೆ. ಬಿಜೆಪಿಯಲ್ಲಿ ಹೈಕಮಾಂಡ್ ನೇ ಇಲ್ಲವಾ?, ಹಾಗಾದ್ರೆ ಹೈ ಕಮಾಂಡ್ ಯಾಕೆ ಬೇಕು, ದೆಹಲಿಗೆ ಯಾಕೆ ಹೋಗಬೇಕು?. ಚಿತ್ರದುರ್ಗ ಸ್ವಾಮೀಜಿ ಬಳಿ ಸೇರಿದಂತೆ ಮಠಾಧೀಶರ ಬಳಿ ಹೋದರೆ ಸಾಕು. ದಿಂಗಾಲೇಶ್ವರ ಸ್ವಾಮೀಜಿ ಮಠದಲ್ಲಿ ಕುಳಿತು ಬಿಜೆಪಿ ನಾಶವಾಗ್ತದೆ ಎಂದು ಹೇಳ್ತಾರೆ. ಮಠದಲ್ಲಿ ಕುಳಿತು ಧರ್ಮ ಭೋದನೆ ಮಾಡಬೇಕು, ಲವ್ ಜಿಹಾದ, ಗೋ ಹತ್ಯೆ ಬಗ್ಗೆ ಮಾತಾಡಬೇಕು. ಸಮಾನ ನಾಗರಿಕತೆಗಾಗಿ, ಎರಡು ಮಕ್ಕಳು ಇದ್ದವರಿಗೆ ಸಬ್ಸಿಡಿ ಕೊಡುವ ಪರವಾಗಿ, ಅರಮನೆ ಮೈದಾನದಲ್ಲಿ ಮಠಾಧೀಶರು ಹೋರಾಟ ಮಾಡಲಿ. ಕೆಲ ಮಠಾಧೀಶರೇ ಯಡಿಯೂರಪ್ಪನವರ ಚೇಲಾಗಳಾಗಿ ಕೆಲಸ ಮಾಡ್ತೀರಾ?. ಎಂದು ಮಠಾಧೀಶರ ವಿರುದ್ಧವೂ ಆಕ್ರೋಶ ಹೊರಹಾಕಿದರು.

ಯಡಿಯೂರಪ್ಪ ಅವರ ಮನೆಯಲ್ಲಿ ಹತ್ತು ಸಾವಿರ ರೂಪಾಯಿ ಪ್ಯಾಕೇಟ್ ನಲ್ಲಿ ಹಾಕಿ ಕೊಟ್ಟರು. ಅದರಲ್ಲಿ ಎರಡು ಸಾವಿರ ಒಬ್ಬ ಲೀಡರ್ ಕತ್ತರಿಸಿದ, ಇನ್ನೊಬ್ಬ ಸ್ವಾಮೀ ಅದನ್ನು ಹಂಚುತ್ತೇನೆ ಎಂದು ಎರಡು ಸಾವಿರ ಕತ್ತರಿಸಿದ, ಮಠಾಧೀಶರಿಗೆ ಹೋಗಿದ್ದು ಆರು ಸಾವಿರ ರೂಪಾಯಿ. ಕತ್ತರಿಸುವ ಕಂಪನಿಯೇ ನಿಗಮ ಮಂಡಳಿ ಅಧ್ಯಕ್ಷರಾಗಿದ್ದಾರೆ. ಯಡಿಯೂರಪ್ಪನವರ ಚಾಕರಿ ಮಾಡೋರು, ವಿಜಯೇಂದ್ರಗೆ ರಾತ್ರಿ ವ್ಯವಸ್ಥೆ ಮಾಡೋರು, ಬಿಜೆಪಿ ಕಟ್ಟದವರು ಇವತ್ತು ನಿಗಮ ಮಂಡಳಿ ಅಧ್ಯಕ್ಷರಾಗಿದ್ದಾರೆ.* ಇದೇ ರೀತಿ ಮುಂದುವರೆದರೆ ನಾವೇ ಕಾಂಗ್ರೆಸ್ ಗೆ ತಾಂಬೂಲ ಕೊಟ್ಟು ಮುಖ್ಯಮಂತ್ರಿ ಆಗಬನ್ನಿ ಎನ್ನುವ ಅನಿವಾರ್ಯ ಪರಿಸ್ಥಿತಿ ಉಂಟಾಗಲಿದೆ ಎಂದು ತಮ್ಮ ಸ್ವಪಕ್ಷದ ವಿರುದ್ಧವೇ ವ್ಯಂಗ್ಯವಾಡಿದರು.

Leave a Reply

Your email address will not be published. Required fields are marked *