ಮಂಗಳೂರು: ರಾಜ್ಯದಲ್ಲಿ ಸರಕಾರ ಇದ್ಯೋ, ಇಲ್ಲವೋ ಯಾರಿಗೂ ಕೂಡ ಗೊತ್ತಿಲ್ಲ. ಹೀಗಾಗಿ ಸರಕಾರ ಇದಿಯಾ ಎಂಬ ಆಲೋಚನೆ ಮಾಡುವ ಪರಿಸ್ಥಿತಿಯಲ್ಲಿ ಜನರಿದ್ದಾರೆ ಎಂದು ಮಂಗಳೂರಲ್ಲಿ ಮಾಜಿ ಸಚಿವ ಯು.ಟಿ.ಖಾದರ್ ಹೇಳಿಕೆ ನೀಡಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಟಿ ಕರೆದು ಮಾತನಾಡಿದ ಅವರು, ಕೊರೊನಾ ನಿಯಂತ್ರಿಸುವಲ್ಲಿ ಹಿಂದಿನ ಬಿ.ಎಸ್.ವೈ ಸರಕಾರ ವಿಫಲವಾಗಿದೆ. ನೂತನ ಮುಖ್ಯಮಂತ್ರಿ ಎಷ್ಟು ಯಶಸ್ವಿಯಾಗುತ್ತಾರೆ ನಾವು ನೋಡಬೇಕು. ಅವರಿಗೆ ಬೇಕಾಗುವ ಮಂತ್ರಿ ಸ್ಥಾನ ಮಾಡಿಕೊಳ್ಳುವ ಅವಕಾಶ ಕೂಡ ಇಲ್ಲ. ಕೊರೋನಾ ಹೆಚ್ಚು ಉಲ್ಬಣಗೊಂಡಿದೆ. ಅಧಿಕಾರಿಗಳು ಗೊಂದಲದಲ್ಲಿದ್ದಾರೆ. ಪ್ರವಾಹ ಪರಿಸ್ಥಿತಿಯಲ್ಲಿ ಜನರ ಕಷ್ಟ ಆಲಿಸಲು ಮಂತ್ರಿಗಳು ಕೂಡ ಇಲ್ಲ. ಇವೆಲ್ಲ ರಾಜಕೀಯ ಗೊಂದಲ ಮುಖ್ಯಮಂತ್ರಿ ಬದಲಾವಣೆ, ಈ ಸಮಯದಲ್ಲಿ ಬೇಕಿತ್ತಾ ಎಂದು ಪ್ರಶ್ನಿಸಿದರು. ಇನ್ನು ಬಿ.ಎಸ್ ವೈ ಅವರಿಗೆ ಕಾಂಗ್ರೆಸ್ ನವರು ಅತ್ಯಂತ ಗೌರವ ಕೊಟ್ರು. ಬಿಜೆಪಿಯವರೇ ಯಡಿಯೂರಪ್ಪನವರಿಗೆ ಅತ್ಯಂತ ಕೆಟ್ಟ ಶಬ್ದಗಳಲ್ಲಿ ಟೀಕೆ ಮಾಡಿದ್ರು. ಬಿ.ಜೆ.ಪಿ ಶಾಸಕರು, ಬಿ.ಜೆ.ಪಿ ಮಂತ್ರಿಗಳು ಹಿಂದಿನ ಮುಖ್ಯಮಂತ್ರಿ ಅವರಿಗೆ ತೊಂದರೆ ಕೊಟ್ರು. ಆ ರೀತಿಯಲ್ಲಿ ಪ್ರಸ್ತುತ ಮುಖ್ಯಮಂತ್ರಿ ಅವರಿಗೆ ತೊಂದರೆ ಕೊಡಬೇಡಿ. ಬಸವರಾಜ್ ಬೊಮ್ಮಾಯಿ ಅವರಿಗೆ ನಾವು ಸಂಪೂರ್ಣ ಬೆಂಬಲ ನೀಡುತ್ತೇವೆ. ಅತ್ಯಂತ ಭ್ರಷ್ಟ ಮುಖ್ಯಮಂತ್ರಿ ಎಂದು ಕೇಂದ್ರಕ್ಕೆ ಪತ್ರ ಬರೆದವರು ಬಿ.ಜೆ.ಪಿಯವರೆ. ಓಪನ್ ಆಗಿ ಸಿ.ಎಂ ವಿರುದ್ಧ ಸ್ಟೇಟ್ ಮೆಂಟ್ ಕೊಟ್ಟವರು ಬಿ.ಜೆ.ಪಿ ಮಂತ್ರಿಗಳೇ. ಮುಖ್ಯಮಂತ್ರಿ ವಿರುಧ್ದ ರಾಜ್ಯಪಾಲರಿಗೆ ಪತ್ರ ಬರೆದವರು ಆವರ ನಾಯಕರುಗಳು. ಈಗಿನ ಮುಖ್ಯಮಂತ್ರಿಗಳಿಗೆ ಆ ತೊಂದರೆ ಕೊಡಬೇಡಿ ಎಂದು ಮನವಿ ಮಾಡಿದರು.