ಸೂಕ್ಷ್ಮವಾಗಿ ಗಮನಿಸಿ- ನವೀನ್‍ರಾಜ್ ಸಿಂಗ್
ತಹಸಿಲ್ದಾರರು ಭೂ ಪರಿವರ್ತನೆಗೆ ಸಂಬಂಧಿಸಿದ
ವರದಿಗಳನ್ನು ಸಲ್ಲಿಸುವಾಗ ಕಡತಗಳನ್ನು
ಸೂಕ್ಷ್ಮವಾಗಿ ಪರಿಶೀಲಿಸಿ, ಬಳಿಕವೇ ವರದಿ ಸಲ್ಲಿಸಬೇಕು ಎಂದು
ಪ್ರಾದೇಶಿಕ ಆಯುಕ್ತ ನವೀನ್‍ರಾಜ್ ಸಿಂಗ್ ಅವರು
ತಹಸಿಲ್ದಾರ್‍ಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ
ಏರ್ಪಡಿಸಲಾಗಿದ್ದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ
ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭೂ ಪರಿವರ್ತನೆ ಮಾಡಿಕೊಡುವುದಕ್ಕೆ ಸಂಬಂಧಿಸಿದಂತೆ
ಹೈಕೋರ್ಟ್ ಇತ್ತೀಚೆಗೆ ಕೆಲವು ತೀರ್ಪುಗಳನ್ನು ನೀಡಿದ್ದು,
ಈ ತೀರ್ಪುಗಳನ್ನು ತಹಸಿಲ್ದಾರರು ಸಮರ್ಪಕವಾಗಿ
ಗಮನಿಸಬೇಕು. ಭೂಪರಿವರ್ತನೆ ಅರ್ಜಿಗಳಿಗೆ ಸಂಬಂಧಿಸಿದಂತೆ
ಸ್ಥಳ ಪರಿಶೀಲನೆ ಮಾಡಿ ವರದಿಯನ್ನು ತಹಸಿಲ್ದಾರರು
ನೀಡಬೇಕಿರುತ್ತದೆ. ಇಂತಹ ಸಂದರ್ಭದಲ್ಲಿ ತಹಸಿಲ್ದಾರರು
ಪ್ರತಿ ಪ್ರಕರಣಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು.
ಬಳಿಕವೇ ಆಯಾ ಪ್ರಕರಣಗಳಿಗೆ ಅನುಗುಣವಾಗಿ
ವರದಿಯನ್ನು ಸಲ್ಲಿಸಬೇಕು ಎಂದು ಪ್ರಾದೇಶಿಕ
ಆಯುಕ್ತರು ಸೂಚನೆ ನೀಡಿದರು. ಜಿಲ್ಲೆಯಲ್ಲಿ ಈ ವರ್ಷ ಒಟ್ಟು
14 ಕಂದಾಯ ಅದಾಲತ್‍ಗಳನ್ನು ನಡೆಸಲಾಗಿದ್ದು, ಅದಾಲತ್‍ನಲ್ಲಿ
ಪಹಣಿ ತಿದ್ದುಪಡಿಗೆ ಸಂಬಂಧಿಸಿದಂತೆ ಒಟ್ಟು 969 ಅರ್ಜಿಗಳು
ಸ್ವೀಕೃತಗೊಂಡಿದ್ದು, 882 ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದೆ,
34 ತಿರಸ್ಕøತಗೊಂಡಿದ್ದು, ಇನ್ನೂ 53 ಅರ್ಜಿಗಳು ಇತ್ಯರ್ಥಕ್ಕೆ
ಬಾಕಿ ಉಳಿದಿವೆ. ಖಾತೆ ಬದಲಾವಣೆಗೆ ಒಟ್ಟು 598 ಅರ್ಜಿಗಳು
ಸ್ವೀಕೃತಗೊಂಡಿದ್ದು, 551 ಅರ್ಜಿಗಳನ್ನು ಇತ್ಯರ್ಥಪಡಿಸಿದೆ, 14
ತಿರಸ್ಕøತಗೊಂಡಿದ್ದು, 33 ಇತ್ಯರ್ಥಕ್ಕೆ ಬಾಕಿ ಇವೆ. ಇತ್ಯರ್ಥಕ್ಕೆ
ಬಾಕಿ ಇರುವ ಅರ್ಜಿಗಳಿಗೆ ಸಂಬಂಧಿಸಿದಂತೆ ಕೂಡಲೆ ಕ್ರಮ
ವಹಿಸುವಂತೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಒಟ್ಟು 73 ಕಂದಾಯ ಗ್ರಾಮಗಳ ರಚನೆ
ಕಾರ್ಯ ಆಗಬೇಕಿದ್ದು, ಈಗಾಗಲೆ 24 ಗ್ರಾಮಗಳಿಗೆ
ಸಂಬಂಧಿಸಿದಂತೆ ಆಕಾರ್‍ಬಂದ್ ಸಿದ್ಧಪಡಿಸಿ, ಹೊಸ ಸರ್ವೆ ನಂಬರ್
ರಚಿಸಲಾಗಿದೆ, ಅಲ್ಲದೆ ಅಂತಿಮ ಅಧಿಸೂಚನೆ ಹೊರಡಿಸಲು
ಸಿದ್ಧವಾಗಿವೆ ಎಂದು ಭೂದಾಖಲೆಗಳ ಉಪನಿರ್ದೇಶಕರು
ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಾದೇಶಿಕ
ಆಯುಕ್ತರು ಹೊಸ ಕಂದಾಯ ಗ್ರಾಮಗಳ ಆಕಾರ್‍ಬಂದ್
ಸಿದ್ಧಪಡಿಸಿದ ಬಳಿಕ ಅವುಗಳನ್ನು ಡಿಜಿಟಲೈಸೇಷನ್ ಮಾಡುವಂತೆ
ಸೂಚನೆ ನೀಡಿದರು.
ಸರ್ಕಾರಿ ಜಮೀನುಗಳ ಒತ್ತುವರಿ ತೆರವುಗೊಳಿಸುವುದಕ್ಕೆ
ಸಂಬಂಧಿಸಿದಂತೆ ದಾವಣಗೆರೆ ತಾಲ್ಲೂಕಿನಲ್ಲಿ ಒಟ್ಟು 3095 ಎಕರೆ 21
ಗುಂಟೆಗಳ ಪೈಕಿ ಈಗಾಗಲೆ 2447 ಎಕರೆ ಒತ್ತುವರಿ
ತೆರವುಗೊಳಿಸಲಾಗಿದೆ, 342 ಎಕರೆ ಸಾರ್ವಜನಿಕ ಬಳಕೆ, ಶಾಲೆ,
ಸರ್ಕಾರಿ ಕಟ್ಟಡ, ದೇವಸ್ಥಾನ ಮುಂತಾದ ಕಾರಣಗಳಿಗಾಗಿ
ತೆರವುಗೊಳಿಸಲು ಸಾಧ್ಯವಾಗಿಲ್ಲ, ಇನ್ನೂ 306 ಎಕರೆ
ತೆರವುಗೊಳಿಸುವುದು ಬಾಕಿ ಇದೆ. ಹರಿಹರ ತಾಲ್ಲೂಕಿನಲ್ಲಿ 336.
18 ಎಕರೆ, ಚನ್ನಗಿರಿ ತಾಲ್ಲೂಕಿನಲ್ಲಿ 482.12 ಎಕರೆ, ಜಗಳೂರು
ತಾಲ್ಲೂಕಿನಲ್ಲಿ 469.24 ಎಕರೆ ಒತ್ತುವರಿ ತೆರವು ಬಾಕಿ ಇದೆ ಎಂದು
ಆಯಾ ತಹಸಿಲ್ದಾರರು ವರದಿ ಸಲ್ಲಿಸಿದರು. ಇದಕ್ಕೆ
ಪ್ರತಿಕ್ರಿಯಿಸಿದ ಪ್ರಾದೇಶಿಕ ಆಯುಕ್ತರು ಸರ್ಕಾರಿ ಜಮೀನು
ತೆರವುಗೊಳಿಸುವುದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು
ವಿಶೇಷ ಸಭೆ ಕರೆದು, ಕೂಡಲೆ ಒತ್ತುವರಿ
ತೆರವುಗೊಳಿಸುವುದಕ್ಕೆ ಸಂಬಂಧಿಸಿದಂತೆ ಕ್ರಮ
ವಹಿಸಬೇಕು ಎಂದು ನವೀನ್‍ರಾಜ್ ಸಿಂಗ್ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಲ್ಲಾ ಪೊಲೀಸ್
ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಉಪವಿಭಾಗಾಧಿಕಾರಿ ಮಮತಾ
ಹೊಸಗೌಡರ್, ಕಂದಾಯ ಇಲಾಖೆಯ ಇಸ್ಲಾಮುದ್ದೀನ್
ಸೇರಿದಂತೆ ಜಿಲ್ಲೆಯ ಎಲ್ಲ ತಹಸಿಲ್ದಾರರು ಭಾಗವಹಿಸಿದ್ದರು.