ಕೊರೋನ ರೋಗಿಗಳಿಗೆ ತುರ್ತು ಸೇವೆ ಒದಗಿಸುವ
ನಿಟ್ಟಿನಲ್ಲಿ ಶಾಸಕರುಗಳ ನಿಧಿ ಅನುದಾನದಡಿ ಶಾಸಕರಾದ
ಎಸ್.ಎ.ರವೀಂದ್ರನಾಥ್, ಪ್ರೊ.ಲಿಂಗಣ್ಣ ಹಾಗೂ ಮಾಡಳ್
ವಿರೂಪಾಕ್ಷಪ್ಪ ಅವರು ಒದಗಿಸಿರುವ ನಾಲ್ಕು ಸುಸಜ್ಜಿತವಾದ
ಆಂಬ್ಯುಲೆನ್ಸ್ ಗಳನ್ನು ಶನಿವಾರ ಜಿಲ್ಲಾಡಳಿತಕ್ಕೆ
ಹಸ್ತಾಂತರಿಸಲಾಯಿತು.
ದಾವಣಗೆರೆ ಶಾಸಕ ಎಸ್.ಎ.ರವೀಂದ್ರನಾಥ್ ಅವರು ಜಿಲ್ಲಾ
ಚಿಗಟೇರಿ ಆಸ್ಪತ್ರೆಗೆ, ಶಾಸಕ ಪ್ರೊ.ಲಿಂಗಣ್ಣ ಮಾಯಕೊಂಡ
ಮತ್ತು ಬಸವಪಟ್ಟಣದ ಪ್ರಾಥಮಿಕ ಆರೋಗ್ಯ
ಕೇಂದ್ರಗಳಿಗೆ ಹಾಗೂ ಶಾಸಕ ಮಾಡಳ್ ವಿರೂಪಾಕ್ಷಪ್ಪ
ಅವರ ನಿಧಿಯಿಂದ ಪಡೆದ ಆಂಬ್ಯೂಲೆನ್ಸ್ ಅನ್ನು ಚನ್ನಗಿರಿ
ತಾಲ್ಲೂಕು ಆಸ್ಪತ್ರೆಗೆ ಸೇರಿದಂತೆ ಒಟ್ಟು 4 ಆಂಬ್ಯೂಲೆನ್ಸ್ ಗಳ
ಸೇವೆಗೆ ಜಿಲ್ಲಾಡಳಿತ ಭವನದಲ್ಲಿ ಸಮರ್ಪಿಸಿದರು.
ಶಾಸಕ ಎಸ್.ಎ.ರವೀಂದ್ರನಾಥ್ ಮಾತನಾಡಿ, ಶಾಸಕರ
ನಿಧಿಯಿಂದ ಆಕ್ಸಿಜನ್ ಪ್ಲ್ಯಾಂಟ್ ಹಾಗೂ ಮೆಗಾ ಘಟಕಗಳಿಗೆ 25
ಲಕ್ಷ ರೂ ಬಿಡುಗಡೆ ಮಾಡಿದ್ದು, ರೋಗಿಗಳ ಅನುಕೂಲಕ್ಕಾಗಿ
ಜಿಲ್ಲಾ ಚಿಗಟೇರಿ ಆಸ್ಪತ್ರೆಗೆ ಆಂಬ್ಯೂಲೆನ್ಸ್ ಸೇವೆ ಒದಗಿಸಲಾಗಿದೆ.
ಸಾರ್ವಜನಿಕರು ಇದರ ಸದುಪಯೋಗ
ಪಡೆದುಕೊಳ್ಳಬೇಕು ಎಂದರು.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು ಮಾತನಾಡಿ,
ಶಾಸಕರ ಅನುದಾನದಡಿಯಲ್ಲಿ ಒಟ್ಟು 6 ಆಂಬ್ಯುಲೆನ್ಸ್ ಗಳನ್ನು
ಖರೀದಿ ಮಾಡಿದ್ದು ಆಯಾ ತಾಲ್ಲೂಕುಗಳಿಗೆ ಕಳಿಸಿಕೊಡುವ
ವ್ಯವಸ್ಥೆ ಮಾಡಿದ್ದೇವೆ. ಅದರಲ್ಲಿ ನಾಲ್ಕು ಬಸವಪಟ್ಟಣ,
ಮಾಯಕೊಂಡ ಆಸ್ಪತ್ರೆಗಳಿಗೆ ಹಾಗೂ ಚನ್ನಗಿರಿ ಮತ್ತು
ದಾವಣಗೆರೆ ಜಿಲ್ಲಾಸ್ಪತ್ರೆಗಳಿಗೆ ನೀಡಿದ್ದು, ಉಳಿದ ಎರಡು
ಆಂಬ್ಯುಲೆನ್ಸ್ಗಳನ್ನು ನ್ಯಾಮತಿ ಹಾಗೂ ಹೊನ್ನಾಳಿ
ತಾಲ್ಲೂಕುಗಳಿಗೆ ಆಯಾ ಶಾಸಕರ ಅನುಮತಿ ಮೇರೆಗೆ
ಕಳಿಸಿಕೊಡಲಾಗುವುದು ಎಂದರು.
ಶಾಸಕರ ನಿಧಿಯನ್ನು ಸದ್ಬಳಕೆ ಮಾಡಿಕೊಂಡು
ಕೊರೊನ ಸಂಕಷ್ಟ ಸಮಯದಲ್ಲಿ ಜನರ ಸಮಸ್ಯೆಗೆ
ಸ್ಪಂದಿಸಿದ ಶಾಸಕರನ್ನು ಅಭಿನಂಧಿಸಿದ ಅವರು, 3ನೇ ಅಲೆ
ಎದುರಿಸುವುದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಜಿಲ್ಲಾಡಳಿತ
ಮಾಡಿಕೊಂಡಿದ್ದು, ಸಾರ್ವಜನಿಕರು ಮೈಮರೆಯದೇ
ಎಚ್ಚರವಹಿಸಬೇಕು. ಹಾಗೂ ವಾರಾಂತ್ಯದಲ್ಲಿ ದೇವಸ್ಥಾನಗಳಿಗೆ
ಪ್ರವೇಶ ನಿಷೇಧಿಸಿದ್ದು ಸಾರ್ವಜನಿಕರು ದೇವಸ್ಥಾನದ
ಹೊರಭಾಗದಿಂದ ದರ್ಶನ ಪಡೆಯಬಹುದು ಎಂದರು.
ವಾರಾಂತ್ಯದ ಕಫ್ರ್ಯೂ ಇದ್ದರೂ ಸಾರ್ವಜನಿಕರು
ದೇವಸ್ಥಾನಗಳಿಗೆ ಪ್ರವೇಶಿಸುತ್ತಿದ್ದಾರೆ ಎಂಬ ಪತ್ರಕರ್ತರ
ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿಗಳು, ಎಲ್ಲಾ ತಾಲ್ಲೂಕು
ತಹಸೀಲ್ದಾರ್ಗಳು, ಪೊಲೀಸ್ ಹಾಗೂ ಸ್ಥಳೀಯ
ಪ್ರಾಧಿಕಾರಿಗಳಿಗೆ ಕಟ್ಟುನಿಟ್ಟಿನ ಜಾರಿಗೆ ಸೂಚನೆ
ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಶಾಸಕರಾದ ಎಸ್.ಎ.ರವೀಂದ್ರನಾಥ್,
ಪ್ರೊ.ಲಿಂಗಣ್ಣ, ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಜಿಲ್ಲಾ
ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ.ರಿಷ್ಯಂತ್, ಡಿಹೆಚ್ಒ ಡಾ.ನಾಗರಾಜ್, ಜಿಲ್ಲಾ
ಸರ್ಜನ್ ಡಾ.ಜಯಪ್ರಕಾಶ್ ಸೇರಿದಂತೆ ಮತ್ತಿತರರು
ಉಪಸ್ಥಿತರಿದ್ದರು.