ಚಾಲನೆ
75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ನರೇಗ
ಯೋಜನೆಯಡಿ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ
ಗ್ರಾಮಗಳಲ್ಲಿ ಎರೆಹುಳು ತೊಟ್ಟಿ ಕಟ್ಟಿಸಿಕೊಳ್ಳಲು ರೈತ
ಬಂಧು ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದ್ದು,
ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕು
ಎಂದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಆನಂದ್.ಬಿ
ತಿಳಿಸಿದರು.
ಗುರುವಾರ ಕಾಡಜ್ಜಿ ಗ್ರಾಮದ ಜಿಲ್ಲಾ ಕೃಷಿ ತರಬೇತಿ
ಕೇಂದ್ರದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ
ಉದ್ಯೋಗ ಖಾತರಿ ಯೋಜನೆಯಡಿ ಹಮ್ಮಿಕೊಂಡಿದ್ದ ರೈತ
ಬಂಧು ಅಭಿಯಾನ ಉದ್ಘಾಟಿಸಿ ಮಾತನಾಡಿದ ಅವರು, ರೈತ ಬಂಧು
ಅಭಿಯಾನವು ರೈತರಲ್ಲಿ ಉತ್ಪಾದನೆ ವೆಚ್ಚ ಕಡಿಮೆಗೊಳಿಸಿ
ಆರ್ಥಿಕವಾಗಿ ಸದೃಢರನ್ನಾಗಿ ಮಾಡುವುದರೊಂದಿಗೆ
ಮಳೆಗಾಲದಲ್ಲಿ ನಿರಂತರವಾಗಿ ಉದ್ಯೋಗ ಸೃಷ್ಠಿಸುವ
ಗುರಿಯನ್ನು ಹೊಂದಿದೆ ಎಂದರು.
ರೈತರು ಎರೆಹುಳು ಗೊಬ್ಬರ ತಯಾರಿಕೆಯನ್ನು
ಉತ್ತೇಜಿಸುವ ದೃಷ್ಠಿಯಿಂದ ಮಹಾತ್ಮಗಾಂಧಿ ನರೇಗಾ
ಯೋಜನೆಯಡಿ ಶೇ.100 ರಷ್ಟು ಸಹಾಯಧನದಲ್ಲಿ
ಎರೆಹುಳು ತೊಟ್ಟಿಗಳನ್ನು ನಿರ್ಮಾಣ ಮಾಡಿಕೊಳ್ಳಲು
ಅವಕಾಶ ನೀಡಿರುತ್ತಾರೆ. ಈ ಯೋಜನೆಗೆ ಪರಿಶಿಷ್ಟ ಜಾತಿ, ಪರಿಶಿಷ್ಟ
ಪಂಗಡ, ಸ್ತ್ರೀ ಪ್ರಧಾನ ಕುಟುಂಬಗಳು, ಬಡತನ ರೇಖೆ
ಕೆಳಮಟ್ಟದಲ್ಲಿರುವ ಕುಟುಂಬಗಳು, ವಿಕಲಚೇತನ
ಪ್ರಧಾನ ಕುಟುಂಬಗಳು ಅರ್ಹರಿದ್ದು, ದಾಖಲೆಯಾಗಿ ಪಹಣಿ,
ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ಉದ್ಯೋಗ ಕಾರ್ಡ್ (ಜಾಬ್
ಕಾರ್ಡ್), ರೇಷನ್ ಕಾರ್ಡ್, ಪೋಟೋ, ಜಾತಿ ಪ್ರಮಾಣ ಪತ್ರ
ಇಷ್ಟು ದಾಖಲೆ ಸಲ್ಲಿಸಿದರೆ ಸಾಕು. ಗ್ರಾಮ ಪಂಚಾಯತಿಯ
ಸರ್ವಾಂಗೀಣ ಅಭಿವೃದ್ಧಿಯಾಗಬೇಕೆಂದರೆ ಗ್ರಾಮದ
ಪ್ರತಿಯೊಬ್ಬರೂ ಸರ್ಕಾರದ ಕಾರ್ಯಕ್ರಮಗಳಲ್ಲಿ
ಭಾಗಿಯಾಗಿ ಯಶಸ್ವಿಗೊಳಿಸಿದಾಗ ಮಾತ್ರ ಸಾಧ್ಯ. ಸರ್ಕಾರದ
ಈ ವಿನೂತನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸೌಲಭ್ಯ
ಪಡೆದುಕೊಂಡು ಯಶಸ್ವಿ ಮಾಡಿಕೊಳ್ಳಬೇಕೆಂದು
ತಿಳಿಸಿದರು.
ಉಪ ಕೃಷಿ ನಿರ್ದೇಶಕ ಆರ್.ತಿಪ್ಪೇಸ್ವಾಮಿ ಅವರು ರೈತ
ಬಂಧು ಅಭಿಯಾನ ಕುರಿತು ತಾಂತ್ರಿಕ ಮಾಹಿತಿ ನೀಡಿ, ಕೃಷಿ
ಉತ್ಪನ್ನಗಳಲ್ಲಿ ರಾಸಾಯನಿಕಗಳ ಉಳಿಯುವಿಕೆಯಿಂದ
ಉತ್ಪನ್ನಗಳ ಗುಣಮಟ್ಟ ಕಡಿಮೆಯಾಗುತ್ತಿದ್ದು, ಇತ್ತೀಚಿನ
ದಿನಗಳಲ್ಲಿ ರೈತರು ಸಾವಯವ ಕೃಷಿಗೆ ಮರಳುತ್ತಿದ್ದಾರೆ.
ಸಾವಯವ ಕೃಷಿಯಲ್ಲಿ ಎರೆಹುಳು ಗೊಬ್ಬರದ ಬಳಕೆ
ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ. ಕಪ್ಪು
ಬಂಗಾರವೆಂದೇ ಕರೆಯಲ್ಪಡುವ ಎರೆಹುಳು ಗೊಬ್ಬರ
ಒಂದು ಸ್ಥಿರವಾದ ಸಾವಯವ ಗೊಬ್ಬರವಾಗಿದ್ದು, ಇದರ
ಬಳಕೆಯಿಂದ ಬೆಳೆಗಳಿಗೆ ಅಗತ್ಯವಿರುವ ಪೋಷಕಾಂಶಗಳ
ಪೂರೈಕೆಯಾಗುವುದಲ್ಲದೆ ಮಣ್ಣಿನ ಗುಣಮಟ್ಟ ಮತ್ತು
ಸೂಕ್ಷ್ಮಾಣು ಜೀವಿಗಳನ್ನು ಹೆಚ್ಚಿಸುತ್ತದೆ. ಹಾಗೂ ಎರೆಹುಳು
ಕೃಷಿ ಅಳವಡಿಕೆಯಿಂದ ಮಣ್ಣಿನ ರಚನೆ, ನೀರು ಹೀರುವ ಗುಣ,
ಗಾಳಿಯಾಡುವ ಗುಣ ಮತ್ತು ಉಷ್ಣತೆಯನ್ನು
ಸಮತೋಲನದಲ್ಲಿಡುವುದರ ಜೊತೆಗೆ ಮಣ್ಣಿನಲ್ಲಿರುವ
ಹಾನಿಕಾರಕ ಲವಣಗಳನ್ನು ಕಡಿಮೆ ಮಾಡುತ್ತದೆ. ಎರೆಹುಳು
ಗೊಬ್ಬರವನ್ನು ಸ್ವಂತ ಉತ್ಪಾದನೆ ಮಾಡಿ
ಉಪಯೋಗಿಸುವುದರಿಂದ ಶೇ.25-30 ರಷ್ಟು ಉತ್ಪಾದನೆ ವೆಚ್ಚ
ಕಡಿಮೆಗೊಳಿಸಬಹುದು. ಆ ನಿಟ್ಟಿನಲ್ಲಿ ರೈತ ಬಂಧು ಯೋಜನೆ
ಒಂದು ವಿನೂತನ ಯೋಜನೆಯಾಗಿದ್ದು, ಇದರ
ಸದುಪಯೋಗವನ್ನು ಪ್ರತಿಯೊಬ್ಬ ಅರ್ಹ ರೈತರು
ಪಡೆದುಕೊಳ್ಳಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹರ್ಷ
ಅವರು, ರೈತ ಬಂಧು ಅಭಿಯಾನ ಒಂದು ವಿನೂತನ
ಯೋಜನೆಯಾಗಿದ್ದು, ಆಸಕ್ತರು ಎಲ್ಲಾ ದಾಖಲಾತಿಗಳೊಂದಿಗೆ
ಆಯಾ ಗ್ರಾಮ ಪಂಚಾಯಿತಿಯನ್ನು ಸಂರ್ಪಕಿಸಿ ಯೋಜನೆಯ
ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಸಹಾಯಕ ಕೃಷಿ ನಿರ್ದೇಶಕ
ರೇವಣಸಿದ್ದನಗೌಡ.ಹೆಚ್.ಕೆ, ತಾಲ್ಲೂಕಿನ ಎಲ್ಲಾ ಪಂಚಾಯತ್
ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯತ್
ಅಧ್ಯಕ್ಷರುಗಳು, ತಾಲ್ಲೂಕಿನ ವಿವಿಧ ಸಂಘ ಸಂಸ್ಥೆಗಳು
ಭಾಗವಹಿಸಿದ್ದರು.