ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ
ಜಿಲ್ಲೆಯ ಜನರ ಜೀವನಾಡಿಯಾಗಿರುವ ಭದ್ರಾ ಜಲಾಶಯ
ಸಂಪೂರ್ಣ ಭರ್ತಿಯಾದ ಹಿನ್ನೆಲೆಯಲ್ಲಿ ಜಲಸಂಪನ್ಮೂಲ ಸಚಿವ
ಗೋವಿಂದ ಕಾರಜೋಳ, ನಗರಾಭಿವೃದ್ಧಿ ಹಾಗೂ ದಾವಣಗೆರೆ
ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ. ಬಸವರಾಜ ಅವರೂ ಸೇರಿದಂತೆ
ಸಂಸದರು, ಶಾಸಕರುಗಳು, ವಿವಿಧ ಜನಪ್ರತಿನಿಧಿಗಳು
ತುಂಬಿದ ಭದ್ರಾ ಜಲಾಶಯಕ್ಕೆ ಶನಿವಾರದಂದು ಬಾಗಿನ
ಸಮರ್ಪಿಸಿದರು.
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಲಕ್ಕವಳ್ಳಿ ಬಳಿಯ
ಭದ್ರಾ ಜಲಾಶಯ ಗರಿಷ್ಟ 186 ಅಡಿ ಭರ್ತಿಯಾದ ಹಿನ್ನೆಲೆಯಲ್ಲಿ
ಗಣ್ಯಾತಿಗಣ್ಯರು ಭದ್ರೆಗೆ ಹೂವು, ಹಣ್ಣು ಸಹಿತ
ಸಾಂಪ್ರದಾಯಿಕವಾಗಿ ಬಾಗಿನ ಅರ್ಪಿಸಿದರು.
ಬಾಗಿನ ಸಮರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ
ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು
ಮಾತನಾಡಿ, ಈ ವರ್ಷ ಉತ್ತಮ ಮಳೆಯಾದ ಕಾರಣ
ಇತಿಹಾಸದಲ್ಲಿಯೇ ಮೊದಲ ಬಾರಿಗೆ ಜುಲೈ ತಿಂಗಳಿನಲ್ಲಿಯೇ
ಭದ್ರಾ ಜಲಾಶಯ ಸಂಪೂರ್ಣ ಭರ್ತಿಯಾಗಿರುವುದು ಸಂತಸ
ತಂದಿದೆ ಎಂದರು.
ನಮ್ಮ ಸರ್ಕಾರವು ಪ್ರಸ್ತುತ ಆರ್ಥಿಕ ಇತಿ-ಮಿತಿಯೊಳಗೆ
ನೀರಾವರಿ ಕಾಮಗಾರಿಗಳನ್ನು ಹಮ್ಮಿಕೊಳ್ಳುತ್ತಿದ್ದು, ಕಳೆದ
2 ವರ್ಷದಲ್ಲಿ ಅನೇಕ ಕಾರ್ಯಕ್ರಮಗಳನ್ನು
ಹಮ್ಮಿಕೊಂಡಿದ್ದೇವೆ. ಸುಮಾರು 4900 ಕೋಟಿ ರೂ.
ಅನುದಾನವನ್ನು ನೀರಾವರಿ ಯೋಜನೆಗೆ ಸರ್ಕಾರ ನೀಡಿದ್ದು,
ಕೆರೆಗಳನ್ನು ತುಂಬಿಸುವ ಕಾರ್ಯವನ್ನು ಆದ್ಯತೆಯಾಗಿ
ಮಾಡಲಾಗುತ್ತಿದೆ. ಕೆಆರ್‍ಎಸ್ ಹಾಗೂ ಆಲಮಟ್ಟಿ ಉದ್ಯಾನವನ
ಮಾದರಿಯಲ್ಲಿ ಭದ್ರಾ ವನ ನಿರ್ಮಿಸಬೇಕು ಎನ್ನುವ ಬೇಡಿಕೆ
ಕಳೆದ 2009 ರಿಂದಲೂ ಇದ್ದು, ಇದನ್ನು ಪ್ರವಾಸೋದ್ಯಮ
ಇಲಾಖೆಗೆ ವಹಿಸಲಾಗಿತ್ತು. ಆದರೆ ಇದೀಗ ಜಲಸಂಪನ್ಮೂಲ
ಇಲಾಖೆಯಿಂದಲೇ ಭದ್ರಾ ವನ ನಿರ್ಮಿಸಲು ನಿರ್ಧರಿಸಲಾಗಿದ್ದು,
ಇದಕ್ಕಾಗಿ ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುವಂತೆ
ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೆ ಇದಕ್ಕಾಗಿ 20 ಲಕ್ಷ
ರೂ. ಮಂಜೂರು ಮಾಡಲು ತೀರ್ಮಾನಿಸಲಾಗಿದೆ. ಅಲ್ಲದೆ

ದಾವಣಗೆರೆ ಸಂಸದರಾದ ಡಾ. ಜಿ.ಎಂ. ಸಿದ್ದೇಶ್ವರ್ ಅವರು ಭದ್ರಾ
ಜಲಾಶಯ ಬಳಿ ಸುಸಜ್ಜಿತವಾದ ಹೊಸ ಪ್ರವಾಸಿ ಮಂದಿರ
ನಿರ್ಮಿಸುವಂತೆ ಮನವಿ ಮಾಡಿದ್ದು, ಅವರ ಮನವಿಯನ್ನು
ಪುರಸ್ಕರಿಸಿ, ನೂತನ ಐಬಿ ನಿರ್ಮಿಸಲು 2 ಕೋಟಿ ರೂ. ಅನುದಾನ
ಮಂಜೂರು ಮಾಡಲಾಗುವುದು. ಭದ್ರಾ ಮೇಲ್ದಂಡೆ
ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ
ಘೋಷಿಸಲು ಈಗಾಗಲೆ ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ
ನೀಡಿದ್ದು, ಶೀಘ್ರದಲ್ಲಿಯೇ ಕೇಂದ್ರ ಸಂಪುಟ ಸಭೆಯಲ್ಲಿ
ಅನುಮೋದನೆ ದೊರೆಯುವ ವಿಶ್ವಾಸವಿದೆ ಎಂದರು.
ಜಲಾಶಯ ನಿರ್ಮಾಣಗೊಂಡು 69 ವರ್ಷ ಕಳೆದಿದ್ದು, ಈ ಪೈಕಿ
ಜಲಾಶಯ ಸಂಪೂರ್ಣ ಭರ್ತಿಯಾಗಿರುವುದು 33 ವರ್ಷ
ಮಾತ್ರ. ನೀರಿನ ಮಹತ್ವ ಅರಿತಿದ್ದ ನಮ್ಮ ಪೂರ್ವಜರ
ದೂರದೃಷ್ಟಿ ಯೋಜನೆಯಿಂದಾಗಿ ಭದ್ರಾ ಜಲಾಶಯ
ನಿರ್ಮಾಣವಾಗಿದೆ. ಆದರೆ ಕೆರೆ, ಕಟ್ಟೆ, ಹಳ್ಳ-ಕೊಳ್ಳ, ನದಿ
ಪಾತ್ರದ ಭೂಮಿ ಒತ್ತುವರಿಯಾಗುತ್ತಿದ್ದು, ಹೀಗಾಗಿ ಹೆಚ್ಚಿನ
ಮಳೆಯಾದಾಗ ಪ್ರವಾಹ, ಊರುಗಳಿಗೆ ನೀರು
ನುಗ್ಗುವುದು ಸಂಭವಿಸುತ್ತಿದೆ. ಇದಕ್ಕೆ ಪ್ರಕೃತಿ ಅಥವಾ
ಸರ್ಕಾರ ಕಾರಣವಲ್ಲ, ಇಂದಿನ ಪೀಳಿಗೆಯ ಜನರ ದುರಾಸೆಯೇ
ಕಾರಣವಾಗಿದೆ. ಹೀಗಾಗಿ ಉತ್ತಮ ಭವಿಷ್ಯದ ದೃಷ್ಟಿಯಿಂದ ಕೆರೆ,
ಕಟ್ಟೆಗಳು, ಹಳ್ಳ, ನದಿಗಳ ನೀರಿನ ಸಂರಕ್ಷಣೆ
ಮಾಡುವುದು ನಮ್ಮೆಲ್ಲರ ಹೊಣೆಯಾಗಿದೆ. ಭದ್ರಾ
ಜಲಾಶಯದಿಂದಾಗಿ ಸುಮಾರು 2.61 ಲಕ್ಷ ಎಕರೆ ಭೂಮಿಗೆ
ನೀರಾವರಿಯಾಗುತ್ತಿದ್ದು, ಅಡಿಕೆ, ಭತ್ತ, ಕಬ್ಬು ಬೆಳೆದು
ಶ್ರೀಮಂತರಾಗುತ್ತಿರುವ ರೈತರು ಮಾತ್ರ, ಅಲ್ಪ
ಪ್ರಮಾಣದ ನೀರಿನ ಕರವನ್ನು ಪಾವತಿಸದಿರುವುದು ಬೇಸರದ
ಸಂಗತಿಯಾಗಿದೆ. ನೀರಾವರಿ ಯೋಜನೆಗಳಿಗೆ ಸರ್ಕಾರ
ಕೋಟ್ಯಾಂತರ ಹಣ ಖರ್ಚು ಮಾಡುತ್ತಿದೆ. ಆದರೆ
ನಿರ್ವಹಣೆಗಾಗಿಯಾದರೂ, ರೈತರು ಸ್ವಲ್ಪ
ಪ್ರಮಾಣದಲ್ಲಾದರೂ ತಮ್ಮ ಪಾಲಿನ ಹಣ ಕೊಡಬೇಕು ಎಂದು
ಸಚಿವ ಗೋವಿಂದ ಕಾರಜೋಳ ಮನವಿ ಮಾಡಿದರು.
ನಗರಾಭಿವೃದ್ಧಿ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.
ಬಸವರಾಜ ಮಾತನಾಡಿ, ಶಿವಮೊಗ್ಗ, ದಾವಣಗೆರೆ ಜಿಲ್ಲೆಯ
ಜೀವನಾಡಿಯಾಗಿರುವ ಭದ್ರಾ ಜಲಾಶಯ ಈ ಬಾರಿ ಬೇಗ ತುಂಬಿದೆ.
ಕುಡಿಯುವ ನೀರು ಪೂರೈಕೆ ಹಾಗೂ ನೀರಾವರಿಗಾಗಿ ನೀರು
ಒದಗಿಸುತ್ತಿರುವ ಭದ್ರಾ ಜಲಾಶಯದ ನಿರ್ಮಾತೃಗಳಿಗೆ
ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು. ನಮ್ಮ ಸರ್ಕಾರ
ಭದ್ರಾ ಮೇಲ್ದಂಡೆ ಯೋಜನೆಗೆ ವಿಶೇಷ ಒತ್ತು ನೀಡಿದೆ.
ಶಿವಮೊಗ್ಗ ಹಾಗೂ ದಾವಣಗೆರೆ ಭಾಗದ ರೈತರು ಸೇರಿದಂತೆ
ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಉಳಿದ ಜಿಲ್ಲೆಗಳಿಗೂ
ನೀರನ್ನು ಸಮರ್ಪಕವಾಗಿ ಪೂರೈಸಬೇಕಿದೆ. ತುಂಗಾ
ನೀರನ್ನು ಭದ್ರಾ ಜಲಾಶಯಕ್ಕೆ ಲಿಫ್ಟ್ ಮಾಡಿ, ದಾವಣಗೆರೆ
ಜಿಲ್ಲೆಯ ಜಗಳೂರು ಹಾಗೂ ಚಿತ್ರದುರ್ಗ ಜಿಲ್ಲೆಗೆ ಹರಿಸುವ
ಕಾಮಗಾರಿ ತ್ವರಿತವಾಗಿ ಆಗಬೇಕು ಎನ್ನುವುದು ನಮ್ಮ
ಸದಾಶಯವಾಗಿದೆ. ಈ ವರ್ಷ ಇಡೀ ರಾಜ್ಯದಲ್ಲಿ ಸಮೃದ್ಧಿಯಾಗಿ
ಮಳೆಯಾಗಿದ್ದು, ಪ್ರಕೃತಿಯೂ ಕೂಡ ನಮ್ಮ ಮೇಲೆ
ಮುಂದೆಯೂ ಇದೇ ರೀತಿ ಕೃಪೆ ತೋರಲಿ, ಉತ್ತಮ ಮಳೆ,
ಬೆಳೆಯಾಗಿ, ರೈತರು ಬೆಳೆದ ಬೆಳೆಗೆ ಒಳ್ಳೆಯ ದರ ಸಿಗಲಿ
ಎಂದು ಪ್ರಾರ್ಥಿಸುತ್ತೇನೆ. ಕೋವಿಡ್ ಭೀತಿ ಇನ್ನೂ ಇದ್ದು,
ಸಾರ್ವಜನಿಕರು ಯಾರೂ ಕೂಡ ಮೈಮರೆಯುವಂತಿಲ್ಲ,

ಮುಂಜಾಗ್ರತಾ ಕ್ರಮಗಳನ್ನು ತಪ್ಪದೆ ಪಾಲಿಸುವಂತೆ
ಸಚಿವರು ಮನವಿ ಮಾಡಿಕೊಂಡರು.


ದಾವಣಗೆರೆ ಸಂಸದ ಡಾ. ಜಿ.ಎಂ. ಸಿದ್ದೇಶ್ವರ ಅವರು ಮಾತನಾಡಿ,
ಹಲವಾರು ಜಿಲ್ಲೆಗಳಿಗೆ ಭದ್ರೆ ವರದಾನವಾಗಿದೆ. ಬೇರೆ
ಜಿಲ್ಲೆಗಳಿಗೆ ಭದ್ರಾ ನೀರು ಕೊಡಬಾರದು ಎಂಬ ಯಾವುದೇ
ಉದ್ದೇಶ ನಾನು ಹೊಂದಿಲ್ಲ. ಆದರೆ ಭದ್ರಾ ಮೇಲ್ದಂಡೆ
ಯೋಜನೆಯಡಿ ಹಂಚಿಕೆಯಾಗಿರುವ ರೀತಿಯಲ್ಲಿ, ತುಂಗಾದಿಂದ
ಭದ್ರೆಗೆ ನೀರು ಲಿಫ್ಟ್ ಮಾಡುವ ಕಾಮಗಾರಿಯನ್ನು
ತ್ವರಿತವಾಗಿ ಪೂರ್ಣಗೊಳಿಸಲಿ. ಭದ್ರಾ ಜಲಾಶಯ ಸಂಪೂರ್ಣ
ತುಂಬಿದಲ್ಲಿ, ಹೆಚ್ಚುವರಿ ನೀರನ್ನು ಉಳಿದ ಜಿಲ್ಲೆಗಳಿಗೆ ನೀಡಲಿ.
ಒಟ್ಟಾರೆ ಶಿವಮೊಗ್ಗ ಹಾಗೂ ದಾವಣಗೆರೆ ಜಿಲ್ಲೆಗೆ
ತೊಂದರೆಯಾಗದ ರೀತಿಯಲ್ಲಿ ಬೇರೆ ಜಿಲ್ಲೆಗಳಿಗೂ ನೀರು
ಹರಿಸುವ ಕಾರ್ಯ ಆಗಲಿ ಎಂದರು.
ಜಗಳೂರು ಶಾಸಕ ಎಸ್.ವಿ. ರಾಮಚಂದ್ರ ಮಾತನಾಡಿ, ಬರದ
ನಾಡು ಎನಿಸುತ್ತಿದ್ದ ಜಗಳೂರು ಭಾಗಕ್ಕೆ ಭದ್ರೆ ನೀರು
ಶೀಘ್ರದಲ್ಲಿಯೇ ಹರಿಯಲಿದೆ. 57 ಕೆರೆಗಳನ್ನು ತುಂಬಿಸುವ
ಕಾಮಗಾರಿ ಕೈಗೆತ್ತಿಕೊಂಡಿದ್ದು, ಸುಮಾರು 40 ಸಾವಿರ ಎಕರೆ
ಭೂಮಿಗೆ ನೀರು ದೊರೆಯಲಿದೆ. ಕೆಲ ವರ್ಷಗಳಲ್ಲೇ ಬರದ
ನಾಡಾಗಿರುವ ಜಗಳೂರು ತಾಲ್ಲೂಕು ಹಸಿರು ನಾಡು ಆಗಲಿದೆ
ಎಂದರು.
ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ
ಕಾರ್ಯಕ್ರಮದಲ್ಲಿ ಮಾತನಾಡಿದರು. ದಾವಣಗೆರೆ ಉತ್ತರ
ಕ್ಷೇತ್ರ ಶಾಸಕ ಎಸ್.ವಿ. ರವೀಂದ್ರನಾಥ್, ಹೊನ್ನಾಳಿ ಶಾಸಕ ಎಂ.ಪಿ.
ರೇಣುಕಾಚಾರ್ಯ, ಮಾಯಕೊಂಡ ಶಾಸಕ ಪ್ರೊ. ಲಿಂಗಣ್ಣ,
ಚನ್ನಗಿರಿ ಶಾಸಕ ಮಾಡಾಳ್ ವಿರುಪಾಕ್ಷಪ್ಪ, ಕಾಡಾ ಅಧ್ಯಕ್ಷೆ
ಪವಿತ್ರಾ ರಾಮಯ್ಯ, ದಾವಣಗೆರೆ ಮಹಾನಗರಪಾಲಿಕೆ
ಮೇಯರ್ ಎಸ್.ಟಿ. ವೀರೇಶ್, ಶಿವಮೊಗ್ಗ ಗ್ರಾಮೀಣ ಶಾಸಕ ಕೆ.ಬಿ.
ಅಶೋಕ ನಾಯಕ್, ವಿಧಾನಪರಿಷತ್ ಸದಸ್ಯ ರುದ್ರೇಗೌಡ,
ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಪಂ ಸಿಇಒ ಡಾ. ವಿಜಯ
ಮಹಾಂತೇಶ್, ಎಸ್‍ಪಿ ಸಿ.ಬಿ. ರಿಷ್ಯಂತ್ ಮುಂತಾದವರು
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *