ಶಿಕಾರಿಪುರ: ಪಟ್ಟಣದಲ್ಲಿ ರಾತ್ರೋ ರಾತ್ರಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ತೆರವುಗೊಳಿಸಿರುವುದನ್ನು ಹಾಲುಮತ ಮಹಾಸಭಾ ರಾಜ್ಯ ಮತ್ತು ಜಿಲ್ಲಾ ಘಟಕಗಳು ತೀವ್ರವಾಗಿ ಖಂಡಿಸಿವೆ.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಥಮ ಬಾರಿ ಬ್ರಿಟೀಷರಿಗೆ ಸೋಲಿನ ರುಚಿಯನ್ನು ತೋರಿಸಿದ ದೇಶಕ್ಕಾಗಿ ಪ್ರಾಣವನ್ನೇ ಕೊಟ್ಟ ಹುತಾತ್ಮ, ಸ್ವ್ವಾತಂತ್ರ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರಂತಹ ಮಹಾನ್‍ವೀರ ಹುಟ್ಟಿದ ದಿನ ಆಗಸ್ಟ್ 15, ಅಂದು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ದಿನ. ರಾಯಣ್ಣನವರನ್ನು ಬ್ರಿಟಿಷರು ನೇಣಿಗೆ ಹಾಕಿದ್ದು ಜನವರಿ 26, ಅಂದು ಭಾರತ ದೇಶ ಗಣರಾಜ್ಯವಾದ ದಿನ. ಇಂತಹ ರಾಷ್ಟ್ರವೀರನನ್ನು ಪಡೆದ ಭಾರತ ಧನ್ಯವಾಗಿದೆ. ಇಂತಹ ಮಹಾನ್ ಪುರುಷ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಮೂರ್ತಿಯನ್ನು ಶಿವಮೊಗ್ಗ ಜಿಲ್ಲೆ, ಶಿಕಾರಿಪುರ ನಗರದಲ್ಲಿ ರಾತ್ರೋ ರಾತ್ರಿ ಹೇಡಿಗಳ ರೀತಿಯಲ್ಲಿ ತೆರೆವುಗೊಳಿಸಿರುವುದು ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿರುವ ಘೋರ ಅಪಮಾನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿಕಾರಿಪುರ ಸ್ವಾತಂತ್ರ್ಯ ಹೋರಾಟಕ್ಕೆ ಕಿಚ್ಚು ಹಚ್ಚಿರುವ ಭೂಮಿ, ಇಂತಹ ಭೂಮಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ ಮಾಡಿರುವುದು ಈಸೂರು ದಂಗೆಗೂ ಮಾಡಿರುವ ಅವಮಾನ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಂಗೊಳ್ಳಿ ರಾಯಣ್ಣನವರಿಗೆ ಗೌರವ ಸಲ್ಲಿಸಲು ಆದೇಶ ಹೊರಡಿಸಿದ್ದಾರೆ. ಅದೇ ಸಮಯದಲ್ಲಿ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರ ಸ್ವಕ್ಷೇತ್ರ ಶಿಕಾರಿಪುರದಲ್ಲಿ ದೇಶಭಕ್ತನ ಮೂರ್ತಿ ತೆರವುಗೊಳಿಸಲಾಗಿದೆ.
ಶಿವಮೊಗ್ಗದ ಸಂಸದರಾದ ಬಿ. ವೈ. ರಾಘವೇಂದ್ರರವರು, ಶಾಸಕರಾದ ಬಿ. ಎಸ್. ಯಡಿಯೂರಪ್ಪನವರು ಹಾಗೂ ತಾಲ್ಲೂಕು ಆಡಳಿತ ತನ್ನ ತಪ್ಪಿಗೆ ಕ್ಷಮೆಯಾಚಿಸಿ, ರಾಯಣ್ಣನವರ ಮೂರ್ತಿಯನ್ನು ಅದೇ ಸ್ಥಳದಲ್ಲಿ ಸ್ಥಾಪನೆ ಮಾಡುವಂತೆ ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ, ಉಪಾಧ್ಯಕ್ಷ ಡಾ. ಡಿ.ಟಿ. ಪ್ರಶಾಂತ್, ಜಿಲ್ಲಾ ಸಮಿತಿ ಕಾರ್ಯಾಧ್ಯಕ್ಷ ಗಣೇಶ್ ಬೀಳಗಿ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *