ದಾವಣಗೆರೆ ಆ. 15 :
ಇಡೀ ವಿಶ್ವವೇ ಮಹಾಮಾರಿ ಕೊರೊನಾ ವೈರಸ್ ದಾಳಿಯಿಂದ
ಆತಂಕದಲ್ಲಿದ್ದು, ನಾವು ಎದೆಗುಂದದೆ, ಸುತ್ತಲೂ
ಕವಿಯುವ ಕತ್ತಲೆಯೊಳಗೆ ಪ್ರೀತಿಯ ಹಣತೆ
ಹಚ್ಚುವಂತೆ, ಸಂಕಷ್ಟವನ್ನು ನಿವಾರಿಸಿ, ನಾಗರಿಕರಿಗೆ ಪ್ರೀತಿಯ
ಮಾತುಗಳ ಮೂಲಕ ಧೈರ್ಯ ತುಂಬಿ
ಪ್ರಧಾನಮಂತ್ರಿಗಳ ಕರೆಯಂತೆ ಆತ್ಮನಿರ್ಭರ ಭಾರತ
ಹಾಗೂ ಆತ್ಮನಿರ್ಭರ ಕರ್ನಾಟಕ ನಿರ್ಮಾಣಕ್ಕೆ ಪಣತೊಡಬೇಕಿದೆ
ಎಂದು ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.
ಬಸವರಾಜ್ ಹೇಳಿದರು.
ಜಿಲ್ಲಾಡಳಿತದ ವತಿಯಿಂದ ಭಾನುವಾರದಂದು ಬೆಳಿಗ್ಗೆ 9
ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ಸ್ವಾತಂತ್ರ್ಯ
ದಿನಾಚರಣೆ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ
ಅವರು ರಾಷ್ಟ್ರ ಧ್ವಜಾರೋಹಣೆ ನೆರವೇರಿಸಿ, ಸ್ವಾತಂತ್ರ್ಯ
ದಿನಾಚರಣೆಯ ಸಂದೇಶ ನೀಡಿದರು.
ಸುಮಾರು 150 ವರ್ಷಗಳ ಕಾಲ ಬ್ರಿಟೀಷರ ಆಡಳಿತ
ವಿರುದ್ದ ನಡೆದ ನಿರಂತರ ಹೋರಾಟದ ಫಲವಾಗಿ 1947 ರ
ಆಗಸ್ಟ್ 15 ರಂದು ಸರ್ವಸ್ವತಂತ್ರ ರಾಷ್ಟ್ರವೆಂದು
ಘೋಷಿಸಲ್ಪಟ್ಟಿತು. ಇತಿಹಾಸದಲ್ಲಿಯೇ ಸಾಮ್ರಾಜ್ಯ ಶಾಹಿ ಆಡಳಿತ
ಮತ್ತು ಗುಂಡುಗಳಿಗೆ ಎದುರಾಗಿ ಅಹಿಂಸಾತ್ಮಕ ಹೋರಾಟ
ನಡೆಸಿ ಸ್ವಾತಂತ್ರ್ಯ ಗಳಿಸಿದ ಪ್ರಥಮ ದೇಶ ಭಾರತ. ನಮ್ಮ
ದೇಶ ಸ್ವತಂತ್ರವಾಗಿ ಇಂದಿಗೆ 75 ವರ್ಷಗಳಾಗಿದ್ದು, ನಾವೀಗ
ಅಮೃತ ಮಹೋತ್ಸವ ಸಂಭ್ರಮವನ್ನು ಆಚರಿಸುತ್ತಿದ್ದೇವೆ.
300 ವರ್ಷಗಳ ಕಾಲ ನಮ್ಮತನ ಮರೆತು
ಗುಲಾಮರಂತಿದ್ದ ನಮ್ಮೊಳಗೆ ಸ್ವಾತಂತ್ರ್ಯದ ಹಣತೆ
ಚೈತನ್ಯಗೊಳ್ಳುತ್ತಿದ್ದಂತೆ ಸ್ವಾತಂತ್ರ್ಯ ಪ್ರೇಮ
ದೇಶಭಕ್ತಿ ಎಲ್ಲರೊಳಗೆ ಮೊಳಕೆಯೊಡೆದು ತನ್ನ
ಅಭಿವೃದ್ಧಿಯನ್ನು ಕಂಡುಕೊಳ್ಳುತ್ತಾ ಸಾಗಿಬಂದಿದೆ. ಮಹಾತ್ಮಾ
ಗಾಂಧಿಯವರೂ ಸೇರಿದಂತೆ ಹಲವಾರು ಸ್ವಾತಂತ್ರ್ಯ
ಯೋಧರ ಅವಿರತ ಹೋರಾಟದ ಫಲವಾಗಿ ನಮಗೆ
ಸ್ವಾತಂತ್ರ್ಯ ಲಭಿಸಿದೆ. ಸ್ವಾತಂತ್ರ್ಯ ಹೋರಾಟಗಾರರಿಗೆ
ಸರ್ಕಾರ ಗೌರವ ಸಲ್ಲಿಸುವ ಕೆಲಸ ಮಾಡುತ್ತಿದ್ದು, ಆಗಸ್ಟ್ 15
ಮತ್ತು ಜನವರಿ 26 ಎರಡು ದಿನಗಳನ್ನು ಸಂಗೊಳ್ಳಿ ರಾಯಣ್ಣ
ಸಂಸ್ಮರಣೆಯ ದಿನಗಳೆಂದು ಗೌರವ ಸಮರ್ಪಣೆಯ
ಆದೇಶ ಹೊರಡಿಸಿದೆ ಎಂದರು.
ಮುಖ್ಯಮಂತ್ರಿಗಳು ಅಧಿಕಾರ ಸ್ವೀಕರಿಸಿದ ತಕ್ಷಣವೇ
ಘೋಷಿಸಿದಂತೆ ಆಗಸ್ಟ್ ಒಂದರಿಂದಲೇ ಅನ್ವಯವಾಗುವಂತೆ
ವಿಧವಾವೇತನ ಹಾಗೂ ಅಂಗವಿಕಲರ ವೇತನವನ್ನು 600 ರೂ.
ಗಳಿಂದ 800 ಕ್ಕೆ, ಸಂಧ್ಯಾಸುರಕ್ಷ ವೇತನವನ್ನು 1000 ರೂ.
ಗಳಿಂದ 1200 ರೂ.ಗೆ ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಲಾಗಿದೆ.
ಕೋವಿಡ್ ನಿಯಂತ್ರಣ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಈವರೆಗೆ 5.72 ಲಕ್ಷ
ಮೊದಲನೆ ಡೋಸ್, 1.38 ಲಕ್ಷ ಎರಡನೆ ಡೋಸ್, ಒಟ್ಟಾರೆ 7.11
ಲಕ್ಷ ಡೋಸ್ ಕೋವಿಡ್ ನಿರೋಧಕ ಲಸಿಕೆ ನೀಡಲಾಗಿದೆ.
ಚಿಗಟೇರಿ ಜಿಲ್ಲಾಸ್ಪತ್ರೆ, ಇಎಸ್ಐ ಆಸ್ಪತ್ರೆ ಹಾಗೂ ಜಿಲ್ಲೆಯ 04
ಸಾರ್ವಜನಿಕ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪ್ಲಾಂಟ್ ಸ್ಥಾಪಿಸಲಾಗಿದೆ.
ಮೂರನೆ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯ
ಅಂಗನವಾಡಿಯ 66203 ಮಕ್ಕಳು ಹಾಗೂ 49226 ಶಾಲಾ
ಮಕ್ಕಳಿಗೆ ಆರೋಗ್ಯ ತಪಾಸಣೆ ಮಾಡಲಾಗಿದೆ. ಕೋವಿಡ್ನಿಂದ
ಸಂಕಷ್ಟಕ್ಕೆ ಒಳಗಾದ ಹೂವು, ಹಣ್ಣು, ತರಕಾರಿ ಬೆಳೆಯುವ
278 ರೈತರಿಗೆ 1.53 ಕೋಟಿ ರೂ. ಪರಿಹಾರ ನೀಡಲಾಗಿದೆ. ಅಲ್ಲದೆ
ನಿರ್ಗತಿಕರು, ಕೂಲಿ ಕಾರ್ಮಿಕರು, ಬಡವರಿಗೆ ಕಳೆದ ಜೂನ್. 25
ರವರೆಗೆ ಇಂದಿರಾ ಕ್ಯಾಂಟೀನ್ ಮೂಲಕ ಉಚಿತವಾಗಿ ಉಪಹಾರ ಹಾಗೂ
ಊಟ ಪೂರೈಕೆ ಮಾಡಲಾಗಿದೆ. ಕೋವಿಡ್ ಲಾಕ್ಡೌನ್ ಕಾರಣ ಆರ್ಥಿಕ
ನಷ್ಟ ಅನುಭವಿಸಿದ 498 ಕೈಮಗ್ಗ ನೇಕಾರರಿಗೆ ತಲಾ 2 ಸಾವಿರ
ರೂ. ಗಳಂತೆ ಒಟ್ಟು 9.96 ಲಕ್ಷ ಪರಿಹಾರ, 67537 ಕಟ್ಟಡ
ಕಾರ್ಮಿಕರಿಗೆ 3 ಸಾವಿರದಂತೆ 20.26 ಕೋಟಿ ರೂ. ಪರಿಹಾರ. 5005
ಆಟೋರಿಕ್ಷಾ ಮೋಟಾರು ಮತ್ತುಮ್ಯಾಕ್ಸಿಕ್ಯಾಬ್ ಚಾಲಕರಿಗೆ 1.50
ಕೋಟಿ ರೂ. ಪರಿಹಾರ ನೀಡಿದ್ದು, 80000 ಕಾರ್ಮಿಕರಿಗೆ ಆಹಾರ
ಸಾಮಗ್ರಿಗಳ ಕಿಟ್ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ.
ಕೋವಿಡ್-19 ರ ವಿರುದ್ಧದ ಯುದ್ಧ ಇನ್ನೂ ಮುಗಿದಿಲ್ಲ.
ಹೀಗಾಗಿ ನಾವೆಲ್ಲರೂ ಸಾಕಷ್ಟು ಮುಂಜಾಗ್ರತಾ
ಕ್ರಮಗಳನ್ನು ಅನುಸರಿಸುವ ಮೂಲಕ ಸಂಭಾವ್ಯ 3ನೇ
ಅಲೆ ಬಾರದಂತೆ ತಡೆಗಟ್ಟಬೇಕಿದೆ ಎಂದರು.
ಜಗಳೂರು ಕ್ಷೇತ್ರದಲ್ಲಿ 660 ಕೋಟಿ ರೂ. ಅನುದಾನದಲ್ಲಿ
57 ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆ,
ಚನ್ನಗಿರಿ ತಾಲ್ಲೂಕು ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆ
ಮುಂದುವರೆದ ಭಾಗಕ್ಕೆ 167 ಕೋಟಿ ರೂ. ಅನುದಾನದಲ್ಲಿ
ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಹೊನ್ನಾಳಿ ಮತ್ತು
ನ್ಯಾಮತಿ ತಾಲ್ಲೂಕುಗಳ ವ್ಯಾಪ್ತಿಯ 130 ಕೆರೆಗಳ ನೀರು
ತುಂಬಿಸುವ 518 ಕೋಟಿ ರೂ. ಗಳ ಯೋಜನೆಗೆ ಡಿಪಿಆರ್
ತಯಾರಿಸಲಾಗುತ್ತಿದೆ. ಜಿಲ್ಲೆಯಲ್ಲಿ ಕಿಸಾನ್ ಸಮ್ಮಾನ್
ಯೋಜನೆಯಡಿ ಕೇಂದ್ರದ 164.76 ಕೋಟಿ ಹಾಗೂ ರಾಜ್ಯದ
ಪಾಲು 54.71 ಕೋಟಿ ಸೇರಿದಂತೆ ಒಟ್ಟು 219.47 ಕೋಟಿ ರೂ. ಗಳ
ನೆರವನ್ನು ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ.
ಜಲಜೀವನ್ ಮಿಷನ್ ಯೋಜನೆಯಡಿ ಪ್ರತಿ ಮನೆ ಮನೆಗೆ ಶುದ್ಧ
ನೀರು ಪೂರೈಸುವ 166.74 ಕೋಟಿ ರೂ. ಯೋಜನೆಯಡಿ 225
ಕಾಮಗಾರಿ ಪ್ರತಿಯಲ್ಲಿದ್ದು, 9 ಕಾಮಗಾರಿ ಪೂರ್ಣಗೊಂಡಿವೆ.
ದಾವಣಗೆರೆಯಲ್ಲಿ ಜಲಸಿರಿ ಯೋಜನೆಯಡಿ 24*7 ನೀರು
ಪೂರೈಸುವ ಕಾಮಗಾರಿ 2022 ರ ಆಗಸ್ಟ್ ವೇಳೆಗೆ
ಪೂರ್ಣಗೊಳಿಸಿ, ದಾವಣಗೆರೆ ಮಹಾನಜನತೆಗೆ ನಿರಂತರ ನೀರು
ಪೂರೈಸುವ ವ್ಯವಸ್ಥೆ ಕಲ್ಪಿಸಲಾಗುವುದು. ಸ್ಮಾರ್ಟ್ ಸಿಟಿ
ಯೋಜನೆಯಡಿ 1014 ಕೋಟಿ ರೂ. ಮೊತ್ತದಲ್ಲಿ 95 ಕಾಮಗಾರಿ
ಕೈಗೊಂಡಿದ್ದು, ಈವರೆಗೆ 445 ಕೋಟಿ ರೂ. ವೆಚ್ಚದಲ್ಲಿ 37
ಕಾಮಗಾರಿ ಪೂರ್ಣಗೊಳಿಸಿದೆ. 3.10 ಕೋಟಿ ರೂ. ವೆಚ್ಚದಲ್ಲಿ
ನಗರದ ಕಲ್ಯಾಣಿಯನ್ನು ಆಕರ್ಷಕ ಪುಷ್ಕರಣಿಯಾಗಿ
ನಿರ್ಮಿಸಲಾಗುತ್ತಿದೆ ಎಂದರು.
ಬಹುಜನರ ಒಳಿತಿಗಾಗಿ, ಬಹುಜನರ ಕಲ್ಯಾಣಕ್ಕಾಗಿ ಜಗಜ್ಯೋತಿ
ಬಸವೇಶ್ವರರ ಮಹಾಮನೆಯ ಮಂತ್ರವನ್ನು ಸಾರುತ್ತ,
ಭವ್ಯ ಭಾರತ ಕಟ್ಟುವ ಸಂಕಲ್ಪ ಮಾಡೋಣ, ಸಕಲ ಜಾತಿ,
ಧರ್ಮ, ಭಾಷೆ, ಪ್ರದೇಶಗಳ ಜನರೆಲ್ಲ ಒಟ್ಟಾಗಿ ಬೃಹತ್
ಪ್ರಜಾಪ್ರಭುತ್ವದ ಯಶಸ್ವಿಗಾಗಿ ಶ್ರಮಿಸೋಣ ಎಂದು ಜಿಲ್ಲಾ
ಉಸ್ತುವಾರಿ ಸಚಿವ ಬಿ.ಎ. ಬಸವರಾಜ್ ನುಡಿದರು.
ಆಕರ್ಷಕ ಪಥ ಸಂಚಲನ : ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ
ವಿದ್ಯಾರ್ಥಿಗಳ ತಂಡಗಳು ಪಥಸಂಚಲನದಲ್ಲಿ
ಭಾಗವಹಿಸಿರಲಿಲ್ಲ, ಹೀಗಾಗಿ ಸರ್ಕಾರದ ವತಿಯಿಂದ ಹೊರತುಪಡಿಸಿ
ಸರ್ಕಾರಿಯ 6 ತಂಡಗಳು ಶಿಸ್ತಿನ ಮತ್ತು ಆಕರ್ಷಕ ಪಥ
ಸಂಚಲನದಲ್ಲಿ ಪಾಲ್ಗೊಂಡವು. ಜಿಲ್ಲಾ ಸಶಸ್ತ್ರ ಮೀಸಲು
ಪಡೆಯ ಸಂಗಮೇಶ್ ಅವರು ಪಥಸಂಚಲನದ ನೇತೃತ್ವ
ವಹಿಸಿದ್ದರು. ನಗರ ಉಪವಿಭಾಗದ ಅರವಿಂದ್ ನೇತೃತ್ವದ
ತಂಡ, ಸಂತೋಷ್ ಬಾಗೋಜಿ ನೇತೃತ್ವದ ಗ್ರಾಮಾಂತರ
ನಾಗರಿಕ ಪೊಲೀಸ್ ತಂಡ, ಅಮರೇಶ್ ನೇತೃತ್ವದಲ್ಲಿ
ಗೃಹರಕ್ಷಕ ದಳ, ಅವಿನಾಶ್ ಮುಂದಾಳತ್ವದಲ್ಲಿ ಅಗ್ನಿಶಾಮಕ
ದಳ, ಆಂಜನೇಯ ನೇತೃತ್ವದಲ್ಲಿ ಅರಣ್ಯ ರಕ್ಷಕದಳ
ಆಕರ್ಷಕ ಪಥಸಂಚಲನ ನಡೆಸಿದರು. ಡಿಎಆರ್ನ ಬ್ಯಾಂಡ್
ಮಾಸ್ಟರ್ ಹೊನ್ನೂರಪ್ಪ ವಾದ್ಯ ತಂಡದಿಂದ ರಾಷ್ಟ್ರಗೀತೆ
ಸಹಿತ, ಶುಶ್ರಾವ್ಯ ವಾದ್ಯ ಪ್ರಸ್ತುತಪಡಿಸಿದರು.
ಸನ್ಮಾನ : ಈ ಬಾರಿಯ ಸಮಾರಂಭದಲ್ಲಿ ಸರ್ಕಾರದ
ಆದೇಶದಂತೆ ಸನ್ಮಾನಿತರಿಗೆ, ಗಣ್ಯರಿಗೆ ಹೂವು, ಹಾರ, ಸ್ಮರಣಿಕೆ
ವಿತರಣೆಗೆ ನಿರ್ಬಂಧ ವಿಧಿಸಿ, ಪುಸ್ತಕಗಳನ್ನು
ವಿತರಿಸಲಾಯಿತು. ಪ್ರಸಕ್ತ ವರ್ಷದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ
625 ಕ್ಕೆ 625 ಅಂಕ ಗಳಿಸಿದ 04 ವಿದ್ಯಾರ್ಥಿಗಳಿಗೆ ಸನ್ಮಾನಿಸಿ
ಗೌರವಿಸಲಾಯಿತು. ಅಲ್ಲದೆ ಉತ್ತಮ ಸೇವೆಗೈದ ಅಗ್ನಿಶಾಮಕ
ದಳದ ಅಧಿಕಾರಿ, ಸಿಬ್ಬಂದಿಗಳು. ಮುಖ್ಯಮಂತ್ರಿ ಪದಕ ಪಡೆದ
ಗೃಹರಕ್ಷಕ ದಳದ ನಿವೃತ್ತ ಸಮಾದೇಷ್ಠ ಡಾ. ಬಿ.ಹೆಚ್.
ವೀರಪ್ಪ, ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ
ಯೋಜನೆ ಉತ್ತಮ ಅನುಷ್ಠಾನಕ್ಕಾಗಿ ಜಿಲ್ಲಾ ಸರ್ಜನ್ ಡಾ.
ಜಯಪ್ರಕಾಶ್, ಎಸ್ಎಸ್ ವೈದ್ಯಕೀಯ ಆಸ್ಪತ್ರೆಯ
ವೈದ್ಯಕೀಯ ನಿರ್ದೇಶಕ ಡಾ. ಎನ್.ಕೆ. ಕಾಳಪ್ಪನವರ್
ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ರಾಷ್ಟ್ರಗೀತೆ, ಧ್ವಜವಂದನೆ ಕುರಿತು ಜಾಗೃತಿ ಮೂಡಿಸುವ
ಮಹತ್ವದ ಕಾರ್ಯ ನಿರ್ವಹಿಸಿದ ನಾಲ್ವರು ಶಿಕ್ಷಕರು, ಕೋವಿಡ್
ನಿಯಂತ್ರಣದಲ್ಲಿ ಉತ್ತಮ ಸೇವೆಗೈದ ಸರ್ಕಾರಿ ಆಸ್ಪತ್ರೆಗಳ
07 ತಜ್ಞ ವೈದ್ಯರು, 04 ಶುಶ್ರೂಷಕರು, ಶವಾಗಾರ ನಿರ್ವಹಿಸಿದ
ಓರ್ವ ಗ್ರೂಪ್-ಡಿ ಸಿಬ್ಬಂದಿ, ಕಿರಿಯ ಪ್ರಯೋಗಶಾಲಾ
ತಂತ್ರಜ್ಞರು, 05 ಜನ ಆಶಾ ಕಾರ್ಯಕರ್ತೆಯರಿಗೆ ಸನ್ಮಾನಿಸಿ
ಗೌರವ ಸಲ್ಲಿಸಲಾಯಿತು. ಅಲ್ಲದೆ ಕೋವಿಡ್ನಿಂದ ಮೃತಪಟ್ಟ
ಮಲೆಬೆನ್ನೂರಿನ ಆಶಾಕಾರ್ಯಕರ್ತೆ ಸ್ವಪ್ನ, ಜಗಳೂರು
ಆಸ್ಪತ್ರೆಯ ಆಂಬುಲೆನ್ಸ್ ಚಾಲಕ ಅಜ್ಮತ್ ಉಲ್ಲಾ ಅವರನ್ನು ಸ್ಮರಿಸಿ,
ಗೌರವಿಸಲಾಯಿತು. ಕೋವಿಡ್ ನಿಯಂತ್ರಣದಲ್ಲಿ ಅತ್ಯುತ್ತಮ
ಸೇವೆ ಸಲ್ಲಿಸಿದ ಅಂಗನವಾಡಿ ಕಾರ್ಯಕರ್ತೆಯರು,
ಪೌರಕಾರ್ಮಿಕರನ್ನು ಸನ್ಮಾನಿಸಿ ಗೌರವ ಸಲ್ಲಿಸಲಾಯಿತು.
ಸಮಾರಂಭದಲ್ಲಿ ಸಂಸದ ಡಾ. ಜಿ.ಎಂ. ಸಿದ್ದೇಶ್ವರ, ದಾವಣಗೆರೆ
ಉತ್ತರ ಕ್ಷೇತ್ರ ಶಾಸಕ ಎಸ್.ಎ. ರವೀಂದ್ರನಾಥ್, ದಾವಣಗೆರೆ
ಮಹಾನಗರಪಾಲಿಕೆ ಮೇಯರ್ ಎಸ್.ಟಿ. ವೀರೇಶ್, ದೂಡಾ
ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಜಿಲ್ಲಾಧಿಕಾರಿ ಮಹಾಂತೇಶ್
ಬೀಳಗಿ, ಜಿಪಂ ಸಿಇಒ ಡಾ. ವಿಜಯ ಮಹಾಂತೇಶ್, ಅಪರ ಜಿಲ್ಲಾಧಿಕಾರಿ
ಪೂಜಾರ್ ವೀರಮಲ್ಲಪ್ಪ, ಪೊಲೀಸ್ ಇಲಾಖೆಯ ಐಜಿಪಿ ರವಿ, ಎಸ್ಪಿ ಸಿ.ಬಿ.
ರಿಷ್ಯಂತ್, ಎಎಸ್ಪಿ ಎಂ. ರಾಜೀವ್, ಡಿವೈಎಸ್ಪಿಗಳಾದ ನಾಗೇಶ್ ಐತಾಳ್,
ಪ್ರಕಾಶ್ ಸೇರಿದಂತೆ ವಿವಿಧ ಗಣ್ಯರು, ಅಧಿಕಾರಿಗಳು
ಭಾಗವಹಿಸಿದ್ದರು.
ಕೋವಿಡ್ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ
ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ನಿರ್ಬಂಧ ವಿಧಿಸಲಾಗಿತ್ತು.
ಆದರೂ ಸಾರ್ವಜನಿಕರು ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಿದ
ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದಲ್ಲಿ
ಉತ್ಸುಕದಿಂದ ಭಾಗವಹಿಸಿದ್ದರು.