ರಾಜ್ಯ ಸರ್ಕಾರ ಸಾವಯವ ಕೃಷಿಯನ್ನು ಉತ್ತೇಜಿಸುವ
ದೃಷ್ಟಿಯಿಂದ ರೈತ ಬಂಧು ಅಭಿಯಾನದಡಿ ಎರೆಹುಳು ಘಟಕ
ನಿರ್ಮಾಣ ಮಾಡಲು ಅವಕಾಶ ಕಲ್ಪಿಸಿದ್ದು, ರೈತರು ಇದರ
ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ
ಪ್ರೊ.ಲಿಂಗಣ್ಣ ಹೇಳಿದರು.
75ನೇ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ
ಅಂಗವಾಗಿ ಗ್ರಾಮೀಣಾಭಿವೃದ್ಧಿ ಇಲಾಖೆ ವತಿಯಿಂದ
ತೋಳಹುಣಸೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರೈತ
ಬಂಧು ಅಭಿಯಾನವನ್ನು ಗ್ರಾಮದ ಫಲಾನುಭವಿ
ಪ್ರಗತಿಪರ ರೈತ ಮಹಾಂತೇಶ್ ಇವರ ಕ್ಷೇತ್ರದಲ್ಲಿ
ಎರೆಹುಳು ಘಟಕ ನಿರ್ಮಾಣ ಮಾಡಿ ಎರೆಹುಳುಗಳನ್ನು
ತೊಟ್ಟಿಗೆ ತುಂಬಿಸುವ ಮೂಲಕ ಚಾಲನೆ ನೀಡಿ ಅವರು
ಮಾತನಾಡಿದರು.
       ರಾಜ್ಯ ಸರ್ಕಾರವು ಸಾವಯವ ಕೃಷಿಯನ್ನು ಉತ್ತೇಜಿಸುವ
ಸಲುವಾಗಿ ಶೇ.100ರಷ್ಟು ಸಹಾಯಧನದಲ್ಲಿ ‘ರೈತ ಬಂಧು’
ಅಭಿಯಾನದಡಿ ಎರೆಹುಳು ಘಟಕ ನಿರ್ಮಾಣ ಮಾಡಲು ಅವಕಾಶ
ಕಲ್ಪಿಸಿದೆ. ಹಾಗೂ ಕೋವಿಡ್-19 ನಂತಹ ವಿಷಮ ಪರಿಸ್ಥಿತಿಯಲ್ಲೂ
ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಬೀಜ,
ರಸಗೊಬ್ಬರ ಇತ್ಯಾದಿಗಳ ಸಮಗ್ರ ಪೂರೈಕೆಯೊಂದಿಗೆ
ಅನೇಕ ಜನಪರ ಯೋಜನೆಗಳನ್ನು ನೀಡುತ್ತಿದ್ದು,
ರೈತರು ಇಲಾಖೆಯ ಸಂಪರ್ಕ ಪಡೆದುಕೊಂಡು
ಅನುಕೂಲ ಪಡೆದುಕೊಳ್ಳಬೇಕು ಎಂದು ಮನವಿ
ಮಾಡಿದರು.
       ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಆನಂದ್. ಬಿ ಮಾತನಾಡಿ
‘ರೈತ ಬಂಧು’ ಅಭಿಯಾನದಡಿ ನಿರ್ಮಿಸಿಕೊಳ್ಳುವ ಘಟಕಕ್ಕೆ

ಸುಮಾರು ರೂ.21 ಸಾವಿರ ವೆಚ್ಚವಿದ್ದು, ಶೇ.100ರಷ್ಟು
ಸರ್ಕಾರವೇ ಭರಿಸುತ್ತಿದೆ. ಆದ್ದರಿಂದ ರೈತರು ಅಗತ್ಯ
ದಾಖಲೆಗಳೊಂದಿಗೆ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ
ಅನುಕೂಲ ಪಡೆಯಬೇಕೆಂದು ತಿಳಿಸಿದರು.
      ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ಮಾತನಾಡಿ, ರೈತ
ಬಂಧು ಅಭಿಯಾನಕ್ಕೆ ಸಂಬಂಧಿಸಿದಂತೆ ತಾಂತ್ರಿಕ ಮಾಹಿತಿ ನೀಡಿ,
ಕೃಷಿ ಉತ್ಪನ್ನಗಳಲ್ಲಿ ರಾಸಾಯನಿಕಗಳ ಉಳಿಯುವಿಕೆಯಿಂದ
ಉತ್ಪನ್ನಗಳ ಗುಣಮಟ್ಟ ಕಡಿಮೆಯಾಗುತ್ತಿರುವುದರಿಂದ
ರೈತರು ಸಾವಯವ ಕೃಷಿಗೆ ಮರಳುತ್ತಿದ್ದಾರೆ. ಕಪ್ಪು
ಬಂಗಾರವೆಂದೇ ಕರೆಯಲ್ಪಡುವ ಎರೆಹುಳು ಗೊಬ್ಬರ
ಒಂದು ಸ್ಥಿರವಾದ ಸಾವಯವ ಗೊಬ್ಬರವಾಗಿದ್ದು ಇದರ
ಬಳಕೆಯಿಂದ ಬೆಳೆಗಳಿಗೆ ಅಗತ್ಯವಿರುವ ಪೋಷಕಾಂಶಗಳ
ಪೂರೈಕೆಯಾಗುವುದಲ್ಲದೆ ಮಣ್ಣಿನ ಗುಣಮಟ್ಟ ಮತ್ತು
ಸೂಕ್ಷ್ಮಾಣು ಜೀವಿಗಳನ್ನು ಹೆಚ್ಚಿಸುತ್ತದೆ. ಹಾಗೂ ಎರೆಹುಳು
ಕೃಷಿ ಅಳವಡಿಕೆಯಿಂದ ಮಣ್ಣಿನ ರಚನೆ, ನೀರು ಹೀರುವ ಗುಣ,
ಗಾಳಿಯಾಡುವ ಗುಣ ಮತ್ತು ಉಷ್ಣತೆಯನ್ನು
ಸಮತೋಲನದಲ್ಲಿಡುವುದರ ಜೊತೆಗೆ ಮಣ್ಣಿನಲ್ಲಿರುವ
ಹಾನಿಕಾರಕ ಲವಣಗಳನ್ನು ಕಡಿಮೆ ಮಾಡುತ್ತದೆ ಮತ್ತು
ಎರೆಹುಳು ಗೊಬ್ಬರವನ್ನು ಸ್ವಂತ ಉತ್ಪಾದನೆ ಮಾಡಿ
ಉಪಯೋಗಿಸುವುದರಿಂದ ಶೇ.25-30% ಉತ್ಪಾದನೆ ವೆಚ್ಚ
ಕಡಿಮೆಗೊಳಿಸಬಹುದು. ಈ ನಿಟ್ಟಿನಲ್ಲಿ ರೈತರು ಇದರ
ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
       ಕಾರ್ಯಕ್ರಮದಲ್ಲಿ ಉಪ ಕೃಷಿ ನಿರ್ದೇಶಕ
ಆರ್.ತಿಪ್ಪೇಸ್ವಾಮಿ, ಸಹಾಯಕ ಕೃಷಿ ನಿರ್ದೇಶಕ
ರೇವಣಸಿದ್ದನಗೌಡ.ಹೆಚ್.ಕೆ., ತೋಟಗಾರಿಕೆ ಇಲಾಖೆ ಹಿರಿಯ
ಸಹಾಯಕ ನಿರ್ದೇಶಕಿ ಟಿ.ಆರ್.ಶಶಿಕಲಾ ಹಾಗೂ ಗ್ರಾಮ
ಪಂಚಾಯತ್ ಅಧ್ಯಕ್ಷರು, ಸದಸ್ಯರುಗಳು
ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *