ಬೆಂಗಳೂರು: ಅಫ್ಘಾನಿಸ್ತಾನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಜನ ಸಿಲುಕಿದ್ದಾರೆ. ಅಫ್ಘಾನಿಸ್ತಾನದಲ್ಲಿ ಕನ್ನಡಿಗರು ಮಾನಸಿಕ ಒತ್ತಡದಲ್ಲಿದ್ದಾರೆ. ಕನ್ನಡಿಗರನ್ನು ರಾಜ್ಯಕ್ಕೆ ಕರೆತರುವ ಕೆಲಸ ಮಾಡಬೇಕು, ಅದಕ್ಕಾಗಿ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಕ ಮಾಡಬೇಕು, ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಮನವಿ ಮಾಡಲಾಗಿದೆ ಎಂದು ವಿಧಾನಸೌಧದಲ್ಲಿ ಮಾಜಿ ಸಚಿವ ಯು.ಟಿ. ಖಾದರ್ ಹೇಳಿಕೆ ನೀಡಿದ್ದಾರೆ, ನಮ್ಮ ಮನವಿಗೆ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನಲ್ಲಿನ ಭಾರತದ ರಾಯಭಾರಿ ಕಚೇರಿಯ ಎಲ್ಲ ಸಿಬ್ಬಂದಿ ವರ್ಗವನ್ನು ಸುರಕ್ಷಿತವಾಗಿ ನಿನ್ನೆ (ಆಗಸ್ಟ್ 17) ಭಾರತಕ್ಕೆ ಕರೆತರಲಾಗಿದೆ. ಭಾರತೀಯ ವಾಯುಸೇನೆಯ ವಿಶೇಷ ವಿಮಾನವೊಂದು ರಾಯಭಾರಿ ಕಚೇರಿ ಸಿಬ್ಬಂದಿ ಮತ್ತು ಇಂಡೋ-ಟಿಬೆಟನ್ ಬಾರ್ಡರ್ ಪೊಲೀಸ್ ಪಡೆಯನ್ನು ಸ್ವದೇಶಕ್ಕೆ ಕರೆತಂದಿತ್ತು. ಒಂದು ನಿರ್ದಿಷ್ಟ ಅಪಾಯದಿಂದ ಪಾರಾಗಿ ಸ್ವದೇಶಕ್ಕೆ ಮರಳುವ ಮತ್ತು ಕುಟುಂಬದ ಸದಸ್ಯರೊಂದಿಗೆ ಬೆರೆಯುವ ಸಂಭ್ರಮದ ಕುರುಹು ಅವರ ಮುಖದಲ್ಲಿ ಕಾಣುತ್ತಿತ್ತು.
ಆದರೆ ತಾಲಿಬಾನಿಗಳು 20 ವರ್ಷಗಳಾದ ಮೇಲೆ ಅಧಿಕಾರಕ್ಕೆ ಬಂದ ನಂತರ ಅಲ್ಲಿ ಸೃಷ್ಟಿಯಾಗಿರುವ ಅರಾಜಕತೆ, ಹಾಹಾಕಾರದ ನಡುವೆ ಭಾರತೀಯರನ್ನು ವಾಪಸ್ಸು ಕರೆತರುವುದು ಅಷ್ಟು ಸುಲಭವಾಗಿಲ್ಲ. ಸಿಬ್ಬಂದಿಯನ್ನು ಹೊತ್ತ ವಿಮಾನ ಮಂಗಳವಾರ ಗುಜರಾತಿನ ಜಾಮ್ನಗರದಲ್ಲಿ ಬಂದಿಳಿದ ಬಳಿಕ ಅಫಘಾನಿಸ್ತಾನದಲ್ಲಿ ಭಾರತದ ರಾಯಭಾರಿ ರುದ್ರೇಂದ್ರ ಟಂಡನ್ ಅವರು ಐ ಎ ಎಫ್ಗೆ ಧನ್ಯವಾದಗಳನ್ನು ಸಲ್ಲಿಸಿದ್ದರು.