ಕಲಬುರಗಿ: ಬಸವ ತತ್ವದ ಹಿನ್ನೆಲೆಯ ಕಾಂಗ್ರೆಸ್ ಪಕ್ಷ ಮಾತ್ರ ಎಲ್ಲ ಸಮುದಾಯಗಳನ್ನು ಜೊತೆಯಾಗಿ ಕರೆದುಕೊಂಡು ಹೋಗುತ್ತದೆ. ಹಾಗಾಗಿ ಸಮಾನತೆ, ಸಹೋದರತೆಯ ಮೇಲೆ ನಂಬಿಕೆಯಿರುವ ಹಲವಾರು ಪ್ರಮುಖ ನಾಯಕರು ಬೇರೆ ಬೇರೆ ಪಕ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಖರ್ಗೆ ಅವರು ಹೇಳಿದರು.
ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಬಸವರಾಜ್ ನಾಶಿ ಹಾಗೂ ಭಾಗಾರೆಡ್ಡಿ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ನಂತರ ಅವರು ಮಾತನಾಡಿದರು.
ಬಸವರಾಜ್ ನಾಶಿ ಹಾಗೂ ಭಾಗಾರೆಡ್ಡಿ ಅವರು ನಮ್ಮ ಪಕ್ಷಕ್ಕೆ ಸೇರಿದ್ದು ಆನೆಬಲ ಬಂದಂತಾಗಿದೆ. ಕಲ್ಯಾಣ ಕರ್ನಾಟಕದ ಅಭಿವೃದ್ದಿಯಾಗಬೇಕಾದರೆ ಎಲ್ಲ ಹಂತಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು ಎಂದು ಅಭಿಪ್ರಾಯಪಟ್ಟರು. ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಎಂದರೆ ಹಾಗೂ ಬಿಜೆಪಿ ಸರ್ಕಾರಕ್ಕೆ ಕಲ್ಯಾಣ ಕರ್ನಾಟಕ ಅಂದರೆ ಅಲರ್ಜಿಯಾಗಿದೆ. ಅಭಿವೃದ್ದಿ ವಿಚಾರದಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದೆ. ಸರ್ಕಾರ ಮಾಡಿರುವ ಅನ್ಯಾಯ ಹಾಗೂ ಜನರ ಕಡೆಗಣನೆ ಕುರಿತು ಬಹಿರಂಗ ಚರ್ಚೆಗೆ ಬಿಜೆಪಿ ನಾಯಕರು ಬಂದರೆ ವಿವರವಾಗಿ ಚರ್ಚಿಸುವುದಾಗಿ ಆಹ್ವಾನ ನೀಡಿದರು.
ಮಾಜಿ ಸಚಿವರಾದ ಶರಣಪ್ರಕಾಶ್ ಪಾಟೀಲ್ ಮಾತನಾಡಿ, ಕಲಬುರಗಿ ನಗರದ ಜನರು ಶಾಂತಿ ನೆಮ್ಮದಿಯಿಂದ ಜೀವನ ನಡೆಸುವ ವಾತಾವರಣ ಇಲ್ಲದಾಗಿದ್ದು, ನಾಗರಿಕರು ತಮಗೆ ಬೇಕಾಗುವ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದು ಅಧಿಕಾರಕ್ಕೆ ಬಂದರೆ ನಾಗರಿಕರಿಗೆ ಅಗತ್ಯ ಸೌಲಭ್ಯ ಒದಗಿಸಲಾಗುವುದು ಎಂದರು.
ಮಾಜಿ ಸಚಿವ ಹಾಗೂ ಶಾಸಕರಾದ ಯು.ಟಿ.ಖಾದರ್ ಮಾತನಾಡಿ, ಕಲಬುರಗಿ ಜಿಲ್ಲೆ ಮಹಾನ್ ನಾಯಕರನ್ನು ರಾಜ್ಯಕ್ಕೆ ಕೊಡುಗೆ ನೀಡಿದೆ, ಹಿರಿಯ ನಾಯಕರಾದ ಹಾಗೂ ರಾಜ್ಯಸಭೆ ವಿರೋಧಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ದಿವಂಗತ ಎನ್ ಧರಂಸಿಂಗ್ ಹಾಗೂ ದಿವಂಗತ ಖಮರುಲ್ ಇಸ್ಲಾಂ ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದೆ ಎಂದ ಅವರು ಜಾತ್ಯಾತೀತ ತತ್ವದ ಅಡಿಪಾಯದಲ್ಲಿ ನಡೆಯುವ ಆಡಳಿತ ಇದ್ದಲ್ಲಿ ಮಾತ್ರ ಅಭಿವೃದ್ದಿಯಾಗುತ್ತದೆ. ಬಿಜೆಪಿಗೆ ಯಾವುದೇ ಸಿದ್ದಾಂತಗಳಿಲ್ಲ. ನಮ್ಮ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಜಾತ್ಯಾತೀತ ತತ್ವಗಳಲ್ಲಿ ನಂಬಿಕೆಯಿರುವ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಮನವಿ ಮಾಡಿದರು.
ರಾಜ್ಯ ಸಭಾ ಸದಸ್ಯರಾದ ಬಿ.ಸಿ. ಚಂದ್ರಶೇಖರ್, ವಿಧಾನಪರಿಷತ್ ವಿರೋಧ ಪಕ್ಷದ ನಾಯಕರಾದ ಎಸ್ ಆರ್ ಪಾಟೀಲ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಜಗದೇವ ಗುತ್ತೇದಾರ್, ಶಾಸಕರಾದ ಎಂ.ವೈ.ಪಾಟೀಲ್, ಖನಿಜಾ ಫಾತೀಮಾ, ಮಾಜಿ ಸಚಿವರಾದ ಶರಣ ಪ್ರಕಾಶ್ ಪಾಟೀಲ್, ಎಚ್ ಕೆ ಇ ಅಧ್ಯಕ್ಷರಾದ ಭೀಮಾಶಂಕರ ಬಿಲಗುಂದಿ ಸೇರಿದಂತೆ ಮತ್ತಿತರಿದ್ದರು.