ಮಂಜೂರು- ವಸತಿ ಸಚಿವ

ಪ್ರಸಕ್ತ ವರ್ಷ ಬಸವ ವಸತಿ ಯೋಜನೆಯಡಿ ರಾಜ್ಯದಲ್ಲಿ ಒಟ್ಟು 04
ಲಕ್ಷ ಮನೆಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗುತ್ತಿದ್ದು, ಪ್ರತಿ
ಗ್ರಾಮ ಪಂಚಾಯತಿಗೆ ಕನಿಷ್ಟ 50 ಮನೆಗಳನ್ನು ಮಂಜೂರು
ಮಾಡಲಾಗುವುದು, ಜಾತಿ ಬೇಧವಿಲ್ಲದೆ ಅರ್ಹರಿಗೆ ಮಾತ್ರ ಮನೆ
ಮಂಜೂರಾತಿಗೆ ಫಲಾನುಭವಿಗಳನ್ನು ಗುರುತಿಸುವಂತೆ ವಸತಿ
ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಖಾತೆ ಸಚಿವ ವಿ. ಸೋಮಣ್ಣ ಅವರು
ಶಾಸಕರುಗಳಿಗೆ ಮನವಿ ಮಾಡಿದರು.
ವಸತಿ ಯೋಜನೆಗಳಿಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಭವನದ
ತುಂಗಭದ್ರಾ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಲಾದ ಪ್ರಗತಿ
ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಳೆದ ಸಾಲಿನಲ್ಲಿ ಪ್ರತಿ ಗ್ರಾಮ ಪಂಚಾಯತಿಗೆ ತಲಾ 20
ಮನೆಗಳನ್ನು ಮಂಜೂರು ಮಾಡಲಾಗಿತ್ತು. ಈ ವರ್ಷ ಬಸವ ವಸತಿ
ಯೋಜನೆಯಡಿ ರಾಜ್ಯದಲ್ಲಿ ಒಟ್ಟು 04 ಲಕ್ಷ ಮನೆಗಳನ್ನು
ಮಂಜೂರು ಮಾಡಲಾಗುತ್ತಿದ್ದು, ಪ್ರತಿ ಗ್ರಾಮ ಪಂಚಾಯತಿಗೆ
ಕನಿಷ್ಟ 40 ರಿಂದ 50 ಮನೆಗಳನ್ನು ಮಂಜೂರು
ಮಾಡಲಾಗುವುದು. ಜಾತಿ ವರ್ಗಗಳ ಬೇಧವಿಲ್ಲದೆ, ಸೂರು ರಹಿತ
ಹಾಗೂ ಅವಶ್ಯಕತೆ ಇರುವಂತಹ ಅರ್ಹ ಫಲಾನುಭವಿಗಳನ್ನು
ಆಯ್ಕೆ ಮಾಡಬೇಕು. ಈಗಾಗಲೆ ಬೇರೆ ಯೋಜನೆಯಡಿ
ಆಯ್ಕೆಯಾದಂತಹವರಿಗೆ, ಅಥವಾ ಅವಶ್ಯಕತೆ ಇಲ್ಲದವರಿಗೆ ಮನೆ
ನೀಡಬಾರದು. ಪಾರದರ್ಶಕತೆಗೆ ಯಾವುದೇ ಅಪಚಾರವಾಗದ
ರೀತಿಯಲ್ಲಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು, ತಾ.ಪಂ.
ಕಾರ್ಯನಿರ್ವಾಹಕ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಈ ಬಗ್ಗೆ
ಆಯಾ ಕ್ಷೇತ್ರದ ಶಾಸಕರೊಂದಿಗೆ ಚರ್ಚಿಸಿ ಫಲಾನುಭವಿಗಳ ಪಟ್ಟಿ
ಸಿದ್ಧಪಡಿಸಬೇಕು ಎಂದರು. ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ವಸತಿ
ರಹಿತರಿಗಾಗಿ ಈ ವರ್ಷ 70 ಎಕರೆ ಭೂಮಿ ಖರೀದಿಗೆ ಪ್ರಸ್ತಾವನೆ ಸಲ್ಲಿಸಿದಲ್ಲಿ
ಅನುಮೋದನೆ ನೀಡಲಾಗುವುದು. ಆದರೆ ಭೂಮಿಗೆ ಸರ್ಕಾರದ
ನಿಯಮಾನುಸಾರ ದರ ನಿಗದಿಪಡಿಸಲಾಗುವುದು. ಭೂಮಾಲೀಕರು
ಹೆಚ್ಚಿನ ದರ ಕೇಳಿದರೆ ಕೊಡಲು ಆಗುವುದಿಲ್ಲ, ಈ ಬಗ್ಗೆ
ಮದ್ಯವರ್ತಿಗಳ ಅವಶ್ಯಕತೆ ಇಲ್ಲ, ರಾಜ್ಯದಲ್ಲಿ ಭೂಮಿ ನೀಡಿಕೆಗೆ
ಸಂಬಂಧಿಸಿದಂತೆ ಮದ್ಯವರ್ತಿಗಳ ಹಾವಳಿಯನ್ನು ತಡೆಗಟ್ಟಲಾಗಿದೆ
ಎಂದು ವಸತಿ ಸಚಿವರು ಹೇಳಿದರು.
ಸ್ಲಂ ಪ್ರದೇಶದ 9000 ಕುಟುಂಬಗಳಿಗೆ ಶೀಘ್ರ ಹಕ್ಕುಪತ್ರ :
ದಾವಣಗೆರೆ ದಕ್ಷಿಣ ಮತ್ತು ದಾವಣಗೆರೆ ಉತ್ತರ, ಚನ್ನಗಿರಿ, ಹೊನ್ನಾಳಿ,
ಜಗಳೂರು ಹಾಗೂ ಹರಿಹರ ಸೇರಿದಂತೆ ಒಟ್ಟು 06 ನಗರ, ಪಟ್ಟಣ,

ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 68 ಘೋಷಿತ ಕೊಳಚೆ
ಪ್ರದೇಶಗಳಿದ್ದು, 11546 ಕುಟುಂಬಗಳು ವಾಸವಾಗಿವೆ. ಕೊಳಗೇರಿ
ಪ್ರದೇಶದ ನಿವಾಸಿಗಳ ಪೈಕಿ ಈ ವರ್ಷ 9000 ಕುಟುಂಬಗಳಿಗೆ ಒಟ್ಟು 170
ಎಕರೆ ಪ್ರದೇಶದಲ್ಲಿ ನಿವೇಶನಗಳನ್ನು ಒದಗಿಸಲಾಗುತ್ತಿದ್ದು,
ಶೀಘ್ರದಲ್ಲಿಯೇ ಮುಖ್ಯಮಂತ್ರಿಗಳನ್ನು ಜಿಲ್ಲೆಗೆ ಕರೆಯಿಸಿ, ಈ
ಕುಟುಂಬಗಳಿಗೆ ಹಕ್ಕುಪತ್ರ ನೀಡುವ ಕಾರ್ಯಕ್ರಮ
ಹಮ್ಮಿಕೊಳ್ಳಲಾಗುವುದು. ಜಿಲ್ಲೆಯಲ್ಲಿ ಈಗಾಗಲೆ 1303 ಮನೆಗಳ
ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, 3376 ಮನೆಗಳು ವಿವಿಧ
ಹಂತಗಳಲ್ಲಿವೆ. ಈ ವರ್ಷ ರಾಜ್ಯದಲ್ಲಿ ಘೋಷಿತ ಕೊಳಗೇರಿ
ಪ್ರದೇಶಗಳ ಕುಟುಂಬಗಳಿಗೆ ಇನ್ನೂ 50 ಸಾವಿರ ಮನೆಗಳನ್ನು
ನೀಡುತ್ತೇವೆ, ಮೂಲ ಸೌಕರ್ಯಕ್ಕಾಗಿ 500 ಕೋಟಿ ರೂ. ಅನುದಾನ
ಒದಗಿಸಿದ್ದೇವೆ. ಅಲೆಮಾರಿ, ಅರೆ ಅಲೆಮಾರಿ, ಸುಡುಗಾಡು ಸಿದ್ಧರು,
ಕಾಡುಗೊಲ್ಲರು, ಬುಡಬುಡಿಕೆ ಸಮುದಾಯದವರು ತಮ್ಮ
ಜೀವನದಲ್ಲಿ ಸಾಕಷ್ಟು ಅಲೆದಾಡಿದ್ದು, ಅವರ ನೆಮ್ಮದಿಯ ಬದುಕಿಗಾಗಿ,
ಇಂತಹ ಸಮುದಾಯದವರಿಗೂ ಮನೆಗಳನ್ನು ನಿರ್ಮಿಸಿಕೊಡಲು
ಇಲಾಖೆ ಮುಂದಾಗಿದೆ ಎಂದರು. ಕೊಳಗೇರಿ ಅಭಿವೃದ್ಧಿ ಮಂಡಳಿಯ
ಕಾರ್ಯಪಾಲಕ ಅಭಿಯಂತರ ಕಬಿನಿಗೌಡ ಅವರಿಗೆ ಎಚ್ಚರಿಕೆ ನೀಡಿದ
ವಸತಿ ಸಚಿವರು, ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಿ,
ಕೊಳಚೆ ಪ್ರದೇಶಗಳಿಗೆ ಭೇಟಿ ನೀಡಿ, ತಳಸಮುದಾಯದ ಜನರಿಗೆ
ಅಗತ್ಯವಿರುವ ಸೌಲಭ್ಯಗಳ ಬಗ್ಗೆ ಆಯಾ ಶಾಸಕರೊಂದಿಗೆ ಚರ್ಚಿಸಿ,
ವರದಿ ಸಲ್ಲಿಸುವಂತೆ ಸೂಚನೆ ನೀಡಿದರು. ಅಲ್ಲದೆ ಮನೆಗಳ ನಿರ್ಮಾಣ
ಕಾರ್ಯ ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ತಾಕೀತು
ಮಾಡಿದರು.
ಅಮೃತ ಯೋಜನೆಯಡಿ 750 ಗ್ರಾ.ಪಂ.ಗಳು ಮೇಲ್ದರ್ಜೆಗೇರಿಕೆ :
ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿದ್ದು, ಅಮೃತ
ಮಹೋತ್ಸವದ ಅಂಗವಾಗಿ ಮುಖ್ಯಮಂತ್ರಿಗಳು ಅಮೃತ
ಯೋಜನೆಯಡಿ ರಾಜ್ಯದ 750 ಗ್ರಾಮ ಪಂಚಾಯತ್‍ಗಳಿಗೆ ವಸತಿ,
ನೀರು, ವಿದ್ಯುತ್, ರಸ್ತೆ ಸೇರಿದಂತೆ ವಿವಿಧ ಮೂಲ ಸೌಲಭ್ಯ ಕಲ್ಪಿಸಿ,
ಮೇಲ್ದರ್ಜೆಗೇರಿಸಲು ನಿರ್ಧರಿಸಿ ಯೋಜನೆ ಜಾರಿಗೊಳಿಸಿದ್ದಾರೆ. ಇಂತಹ
ಗ್ರಾಮಗಳಲ್ಲಿ ಸೂರಿಲ್ಲದವರಿಗೆ ಮನೆ, ಶಾಲೆಗಳು, ಕುಡಿಯುವ
ನೀರು ಪೂರೈಕೆ, ನರ್ಸರಿ, ರಸ್ತೆ ಅಭಿವೃದ್ಧಿ ಸೇರಿದಂತೆ ಮೂಲ
ಸೌಲಭ್ಯಗಳ ಅಭಿವೃದ್ಧಿ ಪರ್ವವನ್ನು ಕೈಗೊಳ್ಳಲಿದ್ದಾರೆ. ಕಳೆದ
25 ವರ್ಷಗಳಲ್ಲಿ ಆಗದಂತಹ ಅಭಿವೃದ್ಧಿ ಕಾರ್ಯ ಈ ಯೋಜನೆಯಡಿ
ಆಗಲಿದ್ದು, ಅರ್ಹರನ್ನು ಗುರುತಿಸಿ, ಮನೆ ಮಂಜೂರು
ಮಾಡಲಾಗುವುದು. 750 ಗ್ರಾಮ ಪಂಚಾಯತಿಗಳಿಗೂ ಕ್ರಿಯಾ
ಯೋಜನೆ ರೂಪಿಸಿ, ಅನುದಾನ ಬಿಡುಗಡೆ ಮಾಡಲಾಗುವುದು ಎಂದು
ಸಚಿವರು ಹೇಳಿದರು. ಜಿ.ಪಂ. ಮುಖ್ಯ ಯೋಜನಾಧಿಕಾರಿ ಮಾತನಾಡಿ,
ಜಿಲ್ಲೆಯಲ್ಲಿ ವಿವಿಧ ವಸತಿ ಯೋಜನೆಗಳಡಿ ಒಟ್ಟು 11760 ಮನೆಗಳು
ಪ್ರಗತಿಯಲ್ಲಿದ್ದು, ಈಗಾಗಲೆ ವಿವಿಧ ಹಂತಗಳಲ್ಲಿವೆ. 2094
ಮನೆಗಳಿಗೆ ಅನುದಾನ ಬಿಡುಗಡೆ ಬಾಕಿ ಇದೆ. 9046 ಮನೆಗಳಿಗೆ 03
ಹಂತಗಳಲ್ಲಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು. ಇದಕ್ಕೆ
ಪ್ರತಿಕ್ರಿಯಿಸಿದ ವಸತಿ ಸಚಿವರು, ವಸತಿ ಯೋಜನೆಯಡಿ ಒಮ್ಮೆ ಜಿಪಿಎಸ್ ಆದ
ಬಳಿಕ ಪ್ರತಿ ಹಂತದಲ್ಲಿಯೇ ಜಿಪಿಎಸ್ ಮಾಡುವ ಅಗತ್ಯವಿಲ್ಲ. ಈಗಾಗಲೆ
ಯಾವ ಮನೆಗಳಿಗೆ ವಸತಿ ವಿಜಿಲ್ ಆ್ಯಪ್, ಜಿಪಿಎಸ್ ಮಾಡಿ ಆಧಾರ್ ಲಿಂಕ್ ಆಗಿರುವ
ಯಾವುದಾದರೂ ಮನೆಗೆ ಹಣ ಬಿಡುಗಡೆ ಮಾಡುವುದು ಬಾಕಿ
ಇದ್ದಲ್ಲಿ, ಅಂತಹ ಮಾಹಿತಿ ನೀಡಿದ ತಕ್ಷಣ ಹಣ ಬಿಡುಗಡೆ
ಮಾಡಲಾಗುವುದು. ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು
ವಸತಿ ಯೋಜನೆಗಳಡಿ ಫಲಾನುಭವಿಗಳಿಗೆ ಹಣ ಬಿಡುಗಡೆ
ಮಾಡುವುದಕ್ಕೆ ಸಂಬಂಧಿಸಿದಂತೆ ವಿನಾ ಕಾರಣ ವಿಳಂಬ ಮಾಡಿದರೆ
ಸಹಿಸುವುದಿಲ್ಲ ಎಂದರು. ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು

ಮಾತನಾಡಿ, ಜಿಲ್ಲೆಯಲ್ಲಿ ವಸತಿ ರಹಿತರಿಗಾಗಿ ಮನೆ ನಿರ್ಮಿಸಲು ಒಟ್ಟು 173
ಎಕರೆ ಸರ್ಕಾರಿ ಭೂಮಿಯನ್ನು ಗುರುತಿಸಿದ್ದೇವೆ. ಅಲ್ಲದೆ ಒಟ್ಟು 277
ಎಕರೆ ಪ್ರದೇಶದಲ್ಲಿ ಲೇಔಟ್ ರಚನೆಗಾಗಿ ಹಣ ಬಿಡುಗಡೆ
ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
   ಸಂಸದ ಜಿ.ಎಂ. ಸಿದ್ಧೇಶ್ವರ ಮಾತಮಾಡಿ, ಇ.ಒ ಗಳು ನಿಜವಾದ
ನಿರಾಶ್ರಿತರನ್ನು ಗುರುತಿಸಿ ಸಮರ್ಪಕವಾಗಿ ಮನೆ ನೀಡಬೇಕು.
ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಮನೆ ನೀಡಲು
ಲಂಚ ಪಡೆಯುತ್ತಾರೆ ಎಂಬ ದೂರುಗಳು ಕೇಳಿಬರುತ್ತಿವೆ, ಹೀಗಾಗಿ
ಮನೆ ವಿತರಣೆಯಲ್ಲಿ ಅಕ್ರಮ ಕಂಡುಬಂದಲ್ಲಿ ಕ್ರಿಮಿನಲ್ ದಾವೆ
ಹೂಡಲಾಗುತ್ತದೆ. ಗ್ರಾಮದಲ್ಲಿ  ಸೈಟ್ ಖರೀದಿಸಿ ವಸತಿರಹಿತರಿಗೆ
ನೀಡಬೇಕು. ಈಗಾಗಲೆ ಕಾಮಗಾರಿ ಹಂತದಲ್ಲಿರುವ ಹಾಗೂ ಬ್ಲಾಕ್
ಆಗಿರುವ 1346 ಮನೆಗಳನ್ನು ಅನ್‍ಬ್ಲಾಕ್ ಮಾಡಿ ಹಣ ಬಿಡುಗಡೆ
ಮಾಡಬೇಕು ಎಂದರು.
ಮಾಯಕೊಂಡ ಕ್ಷೇತ್ರದ ಶಾಸಕ ಪ್ರೊ.ಲಿಂಗಣ್ಣ ಮಾತನಾಡಿ,
ನಿವೇಶನ ರಹಿತರು ಹಾಗೂ ಬಡವರನ್ನು ಗುರುತಿಸಿ ಅವರಿಗೆ ಮನೆ
ನೀಡುವ ಕಾರ್ಯವಾಗಬೇಕು. ಅಧಿಕಾರಿಗಳು ಪ್ರಾಮಾಣಿಕವಾಗಿ
ಕೆಲಸ ಮಾಡಬೇಕು. ಫಲಾನುಭವಿಗಳಿಗೆ ವಿನಾಕಾರಣ ಯಾವುದೇ
ಸೌಲಭ್ಯ ವಿತರಣೆಯಲ್ಲಿ ವಿಳಂಬವಾಗಬಾರದು ಎಂದರು.
    ಜಗಳೂರು ಕ್ಷೇತ್ರದ ಶಾಸಕ ಎಸ್.ವಿ ರಾಮಚಂದ್ರಪ್ಪ
ಮಾತನಾಡಿ, ಜಗಳೂರು ತಾಲ್ಲೂಕಿನಲ್ಲಿ ಸುಮಾರು 24 ಸಾವಿರ ಅಲೆಮಾರಿ,
ಅರೆ ಅಲೆಮಾರಿ, ಸಿದ್ದರು, ಕಾಡುಗೊಲ್ಲ ಸಮುದಾಯದ
ಕುಟುಂಬಗಳಿದ್ದು ಇವರಿಗೆ ನಿವೇಶನದ ಅಗತ್ಯವಿದ್ದು ಸಚಿವರು
ಮತ್ತು ಅಧಿಕಾರಿಗಳು ಗಮನ ಹರಿಸಿ ಸೂರಿನ ವ್ಯವಸ್ಥೆ
ಮಾಡಿಕೊಡಬೇಕೆಂದು ಮನವಿ ಮಾಡಿದರು.


    ಚನ್ನಗಿರಿ ಕ್ಷೇತ್ರದ ಶಾಸಕ ಮಾಡಾಳು ವಿರುಪಾಕ್ಷಪ್ಪ ಮಾತನಾಡಿ,
ಚನ್ನಗಿರಿ ತಾಲ್ಲೂಕಿನಲ್ಲಿ ಸುಮಾರು 10964 ವಸತಿ ರಹಿತ ಹಾಗೂ 9030
ನಿವೇಶನ ರಹಿತ ಕುಟುಂಬಗಳಿದ್ದು, ಇವರಿಗೆಲ್ಲ ಸೂರಿನ
ವ್ಯವಸ್ಥೆಯಾಗಬೇಕಿದೆ. ನಿವೇಶನ ರಹಿತರಿಗಾಗಿ 47 ಎಕರೆ ಸರ್ಕಾರಿ
ಜಮೀನನ್ನು ಚನ್ನಗಿರಿ, ಕಾಕನೂರು, ದೇವರಹಳ್ಳಿ ಹಾಗೂ
ದೊಡ್ಡಬ್ಬಿಗೆರೆ ವ್ಯಾಪ್ತಿಯಲ್ಲಿ ಗುರುತಿಸಲಾಗಿದೆ. ಈ
ಪ್ರದೇಶಗಳನ್ನು ಅಭಿವೃದ್ಧಿ ಮಾಡುವಂತೆ ವಿನಂತಿಸಿದರು.
   ಹರಿಹರ ತಾಲ್ಲೂಕು ಕ್ಷೇತ್ರದ ಶಾಸಕ ರಾಮಣ್ಣ ಮಾತನಾಡಿ,
ಕ್ಷೇತ್ರಕ್ಕೆ 1500 ಮನೆಗಳು ಅಗತ್ಯವಿದ್ದು, ತಾಲ್ಲೂಕಿಗೆ
ನಿಗದಿಯಾಗಿದ್ದ 800 ಮನೆಗಳನ್ನು ಹಿಂತೆದುಕೊಳ್ಳಲಾಗಿದೆ. ಬೀಡಿ
ಕಾರ್ಮಿಕರು ಹಾಗೂ ಹಮಾಲಿ ಕಾರ್ಮಿಕರಿಗೆ ಸೈಟ್ ಹಂಚಿಕೆಯಾಗಿಲ್ಲ
ಹಾಗೂ ರುದ್ರಭೂಮಿ ಜಾಗವು ಹೊಳೆಯು ತುಂಬಿದಾಗ
ಮುಚ್ಚಿಹೊಗುವುದರಿಂದ ರುದ್ರಭೂಮಿಗಾಗಿ ಬೇರೆ ಕಡೆ ಜಾಗ
ಖರೀದಿಸಿಕೊಡಬೇಕೆಂದು ಮನವಿ ಮಾಡಿದರು.
   ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ.ರವೀಂದ್ರನಾಥ
ಮಾತನಾಡಿ, ಸತತ ಮೂರು ನಾಲ್ಕು ವರ್ಷಗಳಿಂದ ಕ್ಷೇತ್ರದ
ಅಭಿವೃದ್ಧಿ ಕುಂಟಿತವಾಗಿದೆ. ಕ್ಷೇತ್ರದಲ್ಲಿ 25000 ಕುಟುಂಬಗಳಿಗೆ
ನಿವೇಶದ ಅಗತ್ಯವಿದೆ. ಇದಕ್ಕಾಗಿ ಸುಮಾರು 180 ಎಕರೆ ಭೂಮಿಯ
ಅಗತ್ಯವಿದ್ದು, ಮಂಜೂರು ಮಾಡಬೇಕು, ಅಧಿಕಾರಿಗಳು ಬಾಕಿ
ಇರುವ ಮನೆ ಕಂತು ಹಣವನ್ನು ಆದಷ್ಟು ಬೇಗ ಬಿಡುಗಡೆ
ಮಾಡಬೇಕು ಎಂದರು.
ಸಭೆಯಲ್ಲಿ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ, ಜಿಲ್ಲಾಧಿಕಾರಿ
ಮಹಾಂತೇಶ್ ಬೀಳಗಿ, ಕೊಳಗೇರಿ ಅಭಿವೃದ್ಧಿ ಮಂಡಳಿ ಆಯುಕ್ತ

ವೆಂಕಟೇಶ್, ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ,
ಸೇರಿದಂತೆ ಜಿಲ್ಲಾ ಪಂಚಾಯತ್, ಗೃಹಮಂಡಳಿ, ನಗರಾಭಿವೃದ್ಧಿ
ಕೋಶದ ಅಧಿಕಾರಿಗಳು, ತಾ.ಪಂ. ಇಒ ಗಳು ಉಪಸ್ಥಿತರಿದ್ದರು.

ವಿ. ಸೋಮಣ್ಣ

Leave a Reply

Your email address will not be published. Required fields are marked *