ದಾವಣಗೆರೆ – ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ (ಡೂಡಾ)ದಿಂದ ನಿವೇಶನಕ್ಕಾಗಿ ಸಮೀಕ್ಷೆ ದೃಷ್ಟಿಯಿಂದ ಅರ್ಜಿಗಳನ್ನು ಆಗಸ್ಟ್ 11 ರಿಂದ ಸೆ.9ರವರೆಗೆ ಆಹ್ವಾನಿಸಿದ್ದು, ನಿವೇಶನ ರಹಿತ ಸಾವಿರಾರು ಕುಟುಂಬಗಳು ಮಾಹಿತಿ ಕೊರತೆಯಿಂದ ಉಚಿತ ನಿವೇಶನ ಎಂದು ಅರ್ಜಿ ಸಲ್ಲಿಸುತ್ತಿದ್ದಾರೆ ಮಹಾನಗರ ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್ ಆರೋಪಿಸಿದ್ದಾರೆ.

ಕೋವಿಡ್ 3ನೇ ಅಲೆ ಮುನ್ಸೂಚನೆ ಇದ್ದರೂ ಸಹ ಡೂಡಾ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾವಿರಾರು ಜನರು ಮಾಸ್ಕ್ ಇಲ್ಲದೇ ಪರಸ್ಪರ ಅಂತರ ಕಾಪಾಡಿಕೊಳ್ಳದೇ ಅರ್ಜಿ ಪಡೆಯಲು ಪ್ರತಿ ದಿನ ಕೂಲಿ ಮಾಡಿ ಜೀವನ ನಡೆಸುವ ಜನರು ಕೆಲಸಕ್ಕೆ ರಜೆ ಹಾಕಿ ಬೆಳಗಿನಿಂದಲೇ ಸರತಿ ಸಾಲಿನಲ್ಲಿ ನಿಂತು ಅರ್ಜಿ ಸಲ್ಲಿಸಲು ಹರ ಸಾಹಸ ಪಡುತ್ತಿದ್ದಾರೆ ಎಂದು ಬುಧವಾರದಂದು ಜಿಲ್ಲಾಧಿಕಾರಿಗಳ ಕಛೇರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ದಾವಣಗೆರೆ – ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಅರ್ಜಿ ಸಲ್ಲಿಸಲು ಬರುವ ಜನರಿಗೆ ಸರಿಯಾದ ಮಾಹಿತಿ ನೀಡಿದರೆ ಈ ಸಮಸ್ಯೆ ಉಲ್ಬಣವಾಗುವುದಿಲ್ಲ. ಆದರೆ ಪ್ರಾಧಿಕಾರದವರು ಅರ್ಜಿಗೆ 100ರೂ., ಹಾಗೂ ನೋಂದಣಿಗೆಂದು 1 ಸಾವಿರದಿಂದ 2 ಸಾವಿರದವರೆಗೂ ಹಣ ಕಟ್ಟಿಸಿಕೊಳ್ಳುವ ಹಣದ ದಾಹಕ್ಕೆ ಜನತೆ ಬಲಿಪಶುವಾಗುತ್ತಿದ್ದಾರೆ.

ಈಗ ಕರೋನಾ ಮಾರಾಮಾರಿ ತಂದುಕೊಳ್ಳುವುದರ ಜೊತೆಗೆ ಮುಂದಿನ ದಿನಗಳಲ್ಲಿ ಅರ್ಜಿ ಸಲ್ಲಿಸಿದವರು ಅಭಿವೃದ್ದಿ ಪಡಿಸಿದ ನಿವೇಶನ ವಿಲೇವಾರಿಗೆ ಮತ್ತೆ ಅರ್ಜಿ ಸಲ್ಲಿಸಬೇಕಿದೆ.ಇದು ಬಡವರನ್ನು ದಾರಿ ತಪ್ಪಿಸುವ ಕೆಲಸವಾಗಿದ್ದು, ಜಿಲ್ಲಾಧಿಕಾರಿಗಳು ಈ ಕೂಡಲೇ ಮಧ್ಯೆ ಪ್ರವೇಶಿಸಿ ಬಡವರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುವಂತೆ ದಾವಣಗೆರೆ – ಹರಿಹರ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸೂಚಿಸಬೇಕು ಎಂದು ಮಹಾನಗರ ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್ ಆಗ್ರಹಿಸಿದ್ದಾರೆ.

1999-2004ರ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಮಂತ್ರಿಗಳಾಗಿದ್ದ ಅವಧಿಯಲ್ಲಿ ಸುಮಾರು 15 ಸಾವಿರಕ್ಕೂ ಹೆಚ್ಚು ನಿವೇಶನ ರಹಿತ ಕುಟುಂಬಗಳನ್ನು ಗುರುತಿಸಿ ಆಶ್ರಯ ಮನೆಗಳನ್ನು ನೀಡಲಾಗಿತ್ತು. ಅಂದಿನಿಂದ ಇಂದಿನವರೆಗೂ ದಾವಣಗೆರೆಯ ನಿವೇಶನ ರಹಿತರಿಗೆ ಮನೆ ನೀರ್ಮಿಸಿಲ್ಲ. ಇದರಿಂದ ನಿವೇಶನ ರಹಿತ ಕುಟುಂಬಗಳು ಹೆಚ್ಚಾಗಿವೆ. ಇವರಿಗೆ ನಿವೇಶನ ನೀಡುವುದು ಸರ್ಕಾರದ ಕರ್ತವ್ಯ. ಆದರೆ ಸರ್ಕಾರದ ಅಂಗಸಂಸ್ಥೆಯಾಗಿರುವ ದಾವಣಗೆರೆ – ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಜನರಿಗೆ ಸರಿಯಾದ ಮಾಹಿತಿ ನೀಡದೇ ಅರ್ಜಿಗಳನ್ನು ಪಡೆಯುತ್ತಿರುವುದಕ್ಕೆ ನಾಗರಾಜ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಕೆಪಿಸಿಸಿ ವಕ್ತಾರ ಡಿ.ಬಸವರಾಜ್, ಮಹಾನಗರ ಪಾಲಿಕೆ ಸದಸ್ಯರುಗಳಾದ ಕೆ.ಚಮನ್‍ಸಾಬ್, ಜಿ.ಎಸ್.ಮಂಜುನಾಥ್, ಆಶಾ ಉಮೇಶ್, ಮೀನಾಕ್ಷಿ ಜಗದೀಶ್, ಯುವರಾಜ್ ಮತ್ತಿತರರಿದ್ದರು.

Leave a Reply

Your email address will not be published. Required fields are marked *