ಕೇಂದ್ರ ಗೃಹಸಚಿವ ಅಮಿತ್ ಷಾ ಹಾಗೂ ಮುಖ್ಯಮಂತ್ರಿ ಬಸವರಾಜ
ಬೊಮ್ಮಾಯಿ ಅವರು ಸೆ.2 ರ ಗುರುವಾರದಂದು ಜಿಲ್ಲೆಯ ಗಾಂಧಿ
ಭವನ, ಕೊಂಡಜ್ಜಿ ಬಸಪ್ಪ ಸ್ಮಾರಕ, ಪೊಲೀಸ್ ಪಬ್ಲಿಕ್ ಶಾಲೆ, ಜಿಎಂಐಟಿ
ಕಾಲೇಜಿನ ಲೈಬ್ರರಿ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸುವರು
ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.
ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಸೋಮವಾರ
ಏರ್ಪಡಿಸಿದ್ದ ಕೇಂದ್ರ ಗೃಹಸಚಿವರು ಹಾಗೂ ಮುಖ್ಯಮಂತ್ರಿಗಳ
ಆಗಮನದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ
ಅವರು, ಕೇಂದ್ರ ಗೃಹಸಚಿವರು ಹಾಗೂ ಮುಖ್ಯಮಂತ್ರಿಗಳು ಅಂದು
ಬೆಳಿಗ್ಗೆ ಗಾಂಧಿ ಭವನವನ್ನು ಉದ್ಘಾಟಿಸಿ, ಕೊಂಡಜ್ಜಿಯ ಕೊಂಡಜ್ಜಿ ಬಸಪ್ಪ
ಸ್ಮಾರಕ ಮತ್ತು ಸಮಾಧಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ
ಸಲ್ಲಿಸುವರು. ನಂತರ ಪೊಲೀಸ್ ಪಬ್ಲಿಕ್ ಶಾಲೆ ಹಾಗೂ ನಾಮಫಲಕ,
ಜಿ.ಎಂ.ಐ.ಟಿ ಕಾಲೇಜಿನ ಲೈಬ್ರರಿ ಉದ್ಘಾಟಿಸಿ, ಗಿಡ ನೆಡುವ ಕಾರ್ಯಕ್ರಮದಲ್ಲಿ
ಭಾಗಿಯಾಗುವರು ಎಂದು ತಿಳಿಸಿದ ಅವರು,
ಗಾಂಧೀಭವನ ಉದ್ಘಾಟನೆ ನೆರವೇರಿಸಿ ಅಲ್ಲಿಂದ ಶಾಮನೂರು ಬ್ರಿಡ್ಜ್
ಕೆಳಗೆ ಡಿಸಿ ಸರ್ಕಲ್, ಸಂಗೊಳ್ಳಿ ರಾಯಣ್ಣ ಸರ್ಕಲ್ ಮೂಲಕ ಕೊಂಡಜ್ಜಿಗೆ
ಹೋಗುವ ಕಾರಣ, ಸೆ.1 ರ ಬೆಳಿಗ್ಗೆ 6 ರಿಂದ 9 ಗಂಟೆಯವರೆಗೆ ಜಿಲ್ಲಾ
ಉಸ್ತುವಾರಿ ಸಚಿವರಾದ ಬಿ.ಎ.ಬಸವರಾಜ ಸ್ಥಳ ಪರಿಶೀಲನೆ ಮಾಡಲಿದ್ದು ಆಯಾ
ರಸ್ತೆಗಳಲ್ಲಿ ಹಮ್ಮಿಕೊಂಡಿರುವ ಅನೇಕ ಕೆಲಸಗಳ
ಕಾಮಗಾರಿಯನ್ನು ಆದಷ್ಟು ಬೇಗ ಪೂರೈಸಿ ರಸ್ತೆಯನ್ನು
ತೆರವುಗೊಳಿಸಿ ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಪಾಲಿಕೆ
ಆಯುಕ್ತರು, ಸ್ಮಾರ್ಟ್‍ಸಿಟಿ, ದೂಡಾ ಪ್ರಾಧಿಕಾರ ಹಾಗೂ ಪಿಡಬ್ಲ್ಯೂಡಿ
ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಳೆದ 2 ವರ್ಷದಿಂದ ಸರ್ಕಾರಿ ಯೋಜನೆಗಳು, ಆಯಾ
ಯೋಜನೆಗಳ ಪ್ರಸ್ತುತ ಹಂತ ಹಾಗೂ ಇನ್ನಿತರೆ ಯೋಜನೆಗಳು
ಇತ್ಯರ್ಥವಾಗದೇ ಉಳಿದಿರುವ ಸಮಸ್ಯೆಗಳ ಕುರಿತು ಮಾಹಿತಿ
ಹೊಂದಿರಬೇಕು. ಹೊಸ ಸರ್ಕಾರ ಆಡಳಿತಕ್ಕೆ ಬಂದ ನಂತರ ಜಾರಿಗೊಳಿಸಿದ
ಹೊಸ ಯೋಜನೆಗಳ ಮಾಹಿತಿಗಳನ್ನು ಸಂಬಂಧಪಟ್ಟ ಎಲ್ಲಾ
ಇಲಾಖೆಗಳು ಜಿಲ್ಲಾಡಳಿತಕ್ಕೆ ನೀಡಬೇಕು. ಎಲ್ಲಾ ಸರ್ಕಾರಿ ಇಲಾಖೆಗಳು
ತಮ್ಮ ಇಲಾಖೆಗೆ ಸಂಬಂಧಪಟ್ಟ ಮಾಹಿತಿಯನ್ನು ಹಾಗೂ ಆ.31 ರವರೆಗಿನ
ಅಂಕಿ ಅಂಶಗಳು ಮತ್ತು ದಾಖಲೆಗಳನ್ನು ಕಡ್ಡಾಯವಾಗಿ
ಹೊಂದಿರಬೇಕು ಹಾಗೂ ಆ ಮಾಹಿತಿಯ ಪ್ರತಿಯನ್ನು ಎಡಿಸಿ, ಸಿಇಓ ಗೆ
ಕೊಡಬೇಕು ಎಂದು ತಿಳಿಸಿದರು.
ಜಿಎಂಐಟಿ ಆವರಣದ ಸುತಮುತ್ತ್ತ ಸ್ವಚ್ಛತೆ ಹಾಗೂ ಬ್ಯಾರಿಕೇಡ್
ಹಾಕಬೇಕು. ಎಲಿಪ್ಯಾಡ್ ನಿರ್ಬಂಧಿತ ಪ್ರದೇಶವಾಗಿದ್ದು ಸಂಬಂಧಿಸಿದ
ಅಧಿಕಾರಿಗಳಿಗೆ ಮಾತ್ರ ಅವಕಾಶವಿರುತ್ತದೆ ಮತ್ತು ಅಲ್ಲಿನ ಸ್ಥಳ
ಪರಿಶೀಲನೆಯ ಸಂಪೂರ್ಣ ಜವಬ್ದಾರಿಯನ್ನು ಪಿಡಬ್ಲೂಡಿ ಅಧಿಕಾರಿಗಳು
ನೋಡಿಕೊಳ್ಳಬೇಕು.
ಕೊಂಡಜ್ಜಿಯಲ್ಲಿ ಸ್ಮಾರಕ ಹಾಗೂ ಸಮಾಧಿಯ ಸುತ್ತಮುತ್ತ
ಸ್ವಚ್ಛತೆ ಜೊತೆ ಹೂವಿನ ಅಲಂಕಾರÀ ಮಾಡಿಸಬೇಕು. ಪುಷ್ಪನಮನ
ವೇಳೆ ಹೆಚ್ಚಿನ ಜನ ಸೇರದಂತೆ ನೋಡಿಕೊಳ್ಳಬೇಕು. ಆಂಬ್ಯೂಲೆನ್ಸ್, ಅಗ್ನಿ
ಶಾಮಕದಳದವರು ಕಾರ್ಯಕ್ರಮದ ದಿನದಂದು ಗಾಂಧೀಭವನ
ಹಾಗೂ ಕೊಂಡಜ್ಜಿ ಬಳಿ ಇರಬೇಕು. ಹಾಗೂ ಉದ್ಘಾಟನೆ ನಡೆಯುವ ಎಲ್ಲಾ
ಸ್ಥಳಗಳಲ್ಲೂ 24*7 ರಂತೆ ವಿದ್ಯುತ್ ಪೂರೈಸಬೇಕು. ಕೋವಿಡ್-19
ಮಾರ್ಗಸೂಚಿಯನ್ವಯ ಎಲ್ಲಾ ಕಾರ್ಯಕ್ರಮಗಳು ಸುಗಮವಾಗಿ
ನಡೆಯುವಂತೆ ಸಂಬಂಧಪಟ್ಟ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ
ವಹಿಸಬೇಕು.
ಎಸ್.ಪಿ ಸಿ.ಬಿ.ರಿಷ್ಯಂತ್ ಮಾತನಾಡಿ, ನಗರದ ಸ್ವಚ್ಛತೆ ಕಡೆ ಹೆಚ್ಚು ಕಾಳಜಿ
ವಹಿಸಿ, ಕಸವಿಲ್ಲದಂತೆ ನೋಡಿಕೊಳ್ಳಬೇಕು. ಹಾಗೂ ಕೊಂಡಜ್ಜಿ ರಸ್ತೆಬದಿ
ಇರುವ ಮರಗಿಡಗಳನ್ನು ತೆರವುಗೊಳಿಸಿ ವಾಹನ ಓಡಾಟಕ್ಕೆ
ಯಾವುದೇ ಸಮಸ್ಯೆಯಾಗದಂತೆ ಕೆಲಸ ನಿರ್ವಹಿಸುವ ಜವಬ್ದಾರಿಯನ್ನು
ಮಹಾನಗರ ಪಾಲಿಕೆ ಹಾಗೂ ಪಿಡಬ್ಲೂಡಿ ಅಧಿಕಾರಿಗಳಿಗೆ ವಹಿಸಲಾಗಿದೆ. ಹಾಗೂ
ಹೆಚ್ಚಿನ ವಾಹನಗಳು ಬೇಕಾಗಿರುವುದರಿಂದ ಬೇರೆ ಜಿಲ್ಲೆಯಿಂದ
ಅಧೀಗ್ರಹಣ ಮಾಡಿಕೊಂಡು ಒಂದೇ ರೀತಿಯ ವಾಹನಗಳನ್ನು ತರಿಸುವ
ಜವಾಬ್ದಾರಿ ಆರ್‍ಟಿಒ ಅಧಿಕಾರಿಗಳದ್ದಾಗಿರುತ್ತದೆ. ಅರಣ್ಯ ಅಧಿಕಾರಿಗಳ ಜೊತೆ
ಪೊಲೀಸ್ ಸಿಬ್ಬಂದಿಗಳು ಜೊತೆಗೂಡಿ ಕಾರ್ಯನಿರ್ವಹಿಸಬೇಕು ಹಾಗೂ ಅಲ್ಲಿನ
ವ್ಯವಸ್ಥೆಯ ಬಗ್ಗೆ ಎಚ್ಚರವಹಿಸಬೇಕು.
ಕಾರ್ಯಕ್ರಮದಲ್ಲಿ ಪ್ರತಿಯೊಬ್ಬ ಮಾಧ್ಯಮದವರಿಗೂ
ಪ್ರವೇಶಕೊಡದಂತೆ ಪ್ರತ್ಯೇಕವಾಗಿ ಒಬ್ಬರನ್ನು ನೇಮಿಸಿ ಉಳಿದವರಿಗೆ
ಫೋಟೋ ಹಾಗೂ ವೀಡಿಯೋಗಳನ್ನು ತಲುಪಿಸುವಂತಹ ವ್ಯವಸ್ಥೆ
ಮಾಡಬೇಕು ಎಂದು ವಾರ್ತಾಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಹೆಚ್ಚುವರಿ
ಪೊಲೀಸ್ ಅಧೀಕ್ಷಕ ರಾಜೀವ್ ಎಂ, ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ
ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು
ಉಪಸ್ಥಿತರಿದ್ದರು.