ಮಂಗಳೂರು; ಕೇರಳದವರು ಕರ್ನಾಟಕಕ್ಕೆ ಪ್ರವೇಶಿಸುವುದರ ಮೇಲೆ ನಿರ್ಬಂಧ ಹೇರಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ , ಕೇರಳ ರಾಜ್ಯ ಭಾರತದಲ್ಲಿರುವುದಲ್ಲವೇ ? ಎಂದು ಪ್ರಶ್ನಿಸಿದ್ದಾರೆ.
ಕೇರಳದಿಂದ ಕರ್ನಾಟಕ ಪ್ರವೇಶಿಸುವ ಜನರು ಕೊರೋನಾ ಲಸಿಕೆ ಪಡೆದರೂ ಒಂದು ವಾರ ಸಾಂಸ್ಥಿಕ ಕ್ವಾರಂಟೈನ್ ನಲ್ಲಿರಬೇಕು ಮತ್ತು ನೆಗೆಟಿವ್ ಆರ್ ಟಿ-ಪಿಸಿಆರ್ ಪರೀಕ್ಷಾ ವರದಿಯನ್ನು ಹೊಂದಿರಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಯು.ಟಿ.ಖಾದರ್ ಮಂಗಳೂರಿನಲ್ಲಿಂದು ಈ ಪ್ರತಿಕ್ರಿಯೆ ನೀಡಿದ್ದಾರೆ.
ಎರಡು ಡೋಸ್ ಕೋವಿಡ್ ಲಸಿಕೆ ಆದವರು ಯಾವುದೇ ರಾಜ್ಯಕ್ಕೆ ಹೋಗಬಹುದು ಎಂದು ಸುಪ್ರೀಂ ಕೋರ್ಟ್ ಸಹ ಹೇಳಿದೆ. ಆದರೆ ಕರ್ನಾಟಕ ಸರಕಾರ ಕೇರಳದವರನ್ನು ಕರ್ನಾಟಕ ರಾಜ್ಯದೊಳಗೆ ಬರಲು ಬಿಡುತ್ತಿಲ್ಲ ಎಂದು ಖಾದರ್ ಆಕ್ಷೇಪಿಸಿದರು.
ಈ ವಿಚಾರದಲ್ಲಿ ಜನಪ್ರತಿನಿಧಿಗಳ ಜೊತೆ ಚರ್ಚಿಸಿ ಸೂಕ್ತ ನಿರ್ಧಾರಕ್ಕೆ ಬರಲು ಜಿಲ್ಲಾಡಳಿತಕ್ಕೇನು ಸಮಸ್ಯೆ ಎಂದು ಪ್ರಶ್ನಿಸಿದ ಅವರು, ಗಡಿಭಾಗದ ಎರಡು ಜಿಲ್ಲಾಧಿಕಾರಿಗಳು, ಆರೋಗ್ಯಾಧಿಕಾರಿಗಳು ಕುಳಿತು ಚರ್ಚಿಸದೆ ಸಮಸ್ಯೆ ಬಗೆಹರಿಯುವುದಿಲ್ಲ. ಕೇರಳದವರು ಭಾರತದಲ್ಲಿರುವುದಲ್ಲವೇ ? ಎಂದು ಕಿಡಿಕಾರಿದರು.
ರಾಜ್ಯದಲ್ಲಾಗಲೀ, ದೇಶದಲ್ಲಾಗಲೀ ಜನರು ನೆಮ್ಮದಿಯ ಜೀವನ ಸಾಗಿಸಲು ಯಾವುದೇ ಯೋಜನೆಗಳಿಲ್ಲ. ಇದನ್ನು ಗಮನಿಸುವಾಗ ಅಗ್ಲೀ ಬಾರ್ ಅಂತ್ಯ ಸಂಸ್ಕಾರ್ ಎನ್ನುವಂತಾಗಿದೆ .ಸರಕಾರದ ಯಾವುದೇ ಯೋಜನೆ ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಇರಬೇಕು. ಅದು ಬಿಟ್ಟು ಮಾರಕವಾಗುವಂತಿರಬಾರದು ಎಂದು ಹೇಳಿದರು.
108 ಆಂಬ್ಯುಲೆನ್ಸ್ ಗೇ ಚಾಲಕ, ನರ್ಸ್ ಗಳಿಲ್ಲದೆ ಬಳಕೆಗೆ ಸಿಗುತ್ತಿಲ್ಲ. ಇದರ ಬಗ್ಗೆ ಯಾವುದೇ ಚರ್ಚೆ ನಡೆಯುತ್ತಿಲ್ಲ. ಮುಖ್ಯ ಮಂತ್ರಿಯವರೇ ಜಿಲ್ಲೆಗೆ ಬಂದು ಅನುದಾನ ಬಿಡುಗಡೆ ಬಗ್ಗೆ ಹೇಳಿದರೂ ಇನ್ನೂ ಅನುಷ್ಠಾನಕ್ಕೆ ತಂದಿಲ್ಲ. ಆಶಾ ಕಾರ್ಯಕರ್ತೆಯರಿಗೆ ಸೌಕರ್ಯ ಕಲ್ಪಿಸಿಲ್ಲ. ಈ ವಿಚಾರದಲ್ಲಿ ಸರಕಾರ ಚಕಾರ ಎತ್ತುತ್ತಿಲ್ಲ ಎಂದು ಖಾದರ್ ಅಸಮಾಧಾನ ವ್ಯಕ್ತಪಡಿಸಿದರು.