ದಾವಣಗೆರೆ: ಪಕ್ಷದ ಸಿದ್ದಾಂತಕ್ಕೆ ಬದ್ದರಾಗಿ ಪಕ್ಷದಲ್ಲಿ
ತೊಡಗಿಕೊಳ್ಳುವುದರ ಜೊತೆಗೆ ಪಕ್ಷದ ಕಾರ್ಯಕರ್ತರು
ಒಗ್ಗಟ್ಟಾಗಿ ಪಕ್ಷ ಸಂಘಟನೆ ಮಾಡುವಂತೆ ಮಾಜಿ ಸಚಿವರಾದ
ಎಸ್.ಎಸ್.ಮಲ್ಲಿಕಾರ್ಜುನ್ ಅವರು ಕರೆ ನೀಡಿದರು.
ನಗರದ ಬಾಪೂಜಿ ಸಮುದಾಯ ಭವನದಲ್ಲಿ
ಗುರುವಾರದಂದು ಜಿಲ್ಲಾ ಕಾಂಗ್ರೆಸ್ ಪಕ್ಷದ ಕಾರ್ಯಕಾರಿಣಿ
ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮುಂಬರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್
ಹಾಗೂ ವಿಧಾನಸಭೆ ಚುನಾವಣೆಗಳಲ್ಲಿ ಪಕ್ಷವನ್ನು
ಗೆಲ್ಲಿಸುವ ಮೂಲಕ ಅಧಿಕಾರಕ್ಕೆ ತರಲು ಈಗಿನಿಂದಲೇ
ಉತ್ಸುಕತೆ ತೋರಿಸಿ ಎಂದ ಅವರು ಇಂದು ಸಭೆಯಲ್ಲಿ
ಭಾಗವಹಿಸಿದ ಹುಮ್ಮಸ್ಸು ಪಕ್ಷವನ್ನು ಅಧಿಕಾರಕ್ಕೆ
ತರೋವರೆಗೂ ಇರಲಿ ಎಂದು ತಿಳಿಸಿದರು.
ಈ ಹಿಂದೆ ಪಕ್ಷದ ಚಿಹ್ನೆಯಡಿ ಗೆದ್ದ ಶಾಸಕರು,
ಮಹಾನಗರ ಪಾಲಿಕೆ ಸದಸ್ಯರು ಪಕ್ಷವನ್ನು ತೊರೆದಿದ್ದಾರೆ.
ಅಂತಹವರನ್ನು ಪಕ್ಷದಿಂದ ದೂರವಿಟ್ಟು ಕಾಂಗ್ರೆಸ್ ಪಕ್ಷದ
ತತ್ವ ಸಿದ್ದಾಂತಕ್ಕೆ ಬದ್ಧರಾಗಿರುವವರನ್ನು ಗುರುತಿಸುವಂತೆ
ತಿಳಿಸಿದರು.
ನನ್ನ ಕಣಕಣದಲ್ಲೂ ಕಾಂಗ್ರೆಸ್ ಪಕ್ಷದ ಸಿದ್ದಾಂತವನ್ನು
ರೂಢಿಸಿಕೊಂಡಿದ್ದು, ಕೆಲವರು ಹೊಂದಾಣಿಕೆ ರಾಜಕಾರಣ
ಮಾಡುತ್ತಿದ್ದು, ಅಂತಹವರನ್ನು ಪಕ್ಷದಲ್ಲಿ ಮಾನ್ಯತೆ
ನೀಡಬಾರದು ಎಂದ ಅವರು ಸಾಮಾಜಿಕ ಜಾಲತಾಣದ ಹರೀಶ್
ಕೆ.ಎಲ್.ಬಸಾಪುರ ವಾರದಲ್ಲಿ 2-3 ದಿನ ಸರ್ಕಾರದ ಜನವಿರೋಧಿ
ನೀತಿಗಳ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿ ಪತ್ರಿಕೆಗಳಿಗೆ
ಹೇಳಿಕೆ ನೀಡುತ್ತಿದ್ದು, ಪ್ರತಿಯೊಂದು ಘಟಕದವರು
ಇದನ್ನು ಸ್ಫೂರ್ತಿಯಾಗಿ ಪಡೆದುಕೊಂಡು ಸರ್ಕಾರದ
ಜನವಿರೋಧಿ ನೀತಿಗಳನ್ನು ಖಂಡಿಸಬೇಕೆಂದು ಕರೆ ನೀಡಿದರು.