ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವತಿಯಿಂದ ಶನಿವಾರ
ದೇವರಬೆಳಕೆರೆ ಹಾಗೂ ಕೆ.ಬೇವಿನಹಳ್ಳಿ ಪ್ರಾಥಮಿಕ ಆರೋಗ್ಯ
ಕೇಂದ್ರದ ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರಿಗೆ
ತಂಬಾಕು ಮುಕ್ತ ಆಶಾ ಕಾರ್ಯಕರ್ತೆಯರ ಮನೆ ಎಂಬ ಗುರಿ
ಇಟ್ಟುಕೊಂಡು ಜಾಗೃತಿ ಮೂಡಿಸಲಾಯಿತು.
ತಂಬಾಕು ನಿಯಂತ್ರಣ ಕೋಶದ ಸಲಹೆಗಾರರಾದ ಸತೀಶ
ಕಲಹಾಳ ಮಾತನಾಡಿ ಮಾನವನ ದೇಹದ ಪ್ರತಿಯೊಂದು
ಅಂಗಗಳಿಗೂ ಖಾಯಿಲೆ ತರುವ ಏಕೈಕ ಗ್ರಾಹಕ ಪದಾರ್ಥವೆಂದರೆ
ತಂಬಾಕು. ತಂಬಾಕು ಸೇವನೆಯಿಂದ ಬರುವಂತಹ ಖಾಯಿಲೆಗಳಿಂದ
ಪ್ರತಿ ವರ್ಷ ಜಗತ್ತಿನಾದ್ಯಾಂತ 80 ಲಕ್ಷ ಜನ ಬಲಿಯಾಗುತ್ತಿದ್ದು,
ಅದರಲ್ಲಿ ಸುಮಾರು 10 ಲಕ್ಷ ಜನ ಪರೋಕ್ಷ ಧೂಮಪಾನದಿಂದ
ಮರಣವನ್ನಪ್ಪುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ತಂಬಾಕು ಮುಕ್ತ ಸಮಾಜವನ್ನಾಗಿ ಮಾಡಲು ಸರ್ಕಾರವು
ತಂಬಾಕು ಮುಕ್ತ ಸಮಾಜ-2025 ಎಂಬ ಶೀರ್ಷಿಕೆಯಡಿ ಯೋಜನೆ
ಆಯೋಜಿಸಿದ್ದು, ನಾವು ಮೊದಲು ಆಶಾ ಕಾರ್ಯಕರ್ತೆಯರ
ಮನೆಯಲ್ಲಿರುವ ಎಲ್ಲಾ ವ್ಯಸನಿಗಳನ್ನು ಆಪ್ತಸಮಾಲೊಚನೆ,
ನಿಕೋಟಿನ್ ಗಮ್ಸ್ ನೀಡುವ ಮೂಲಕ ತಂಬಾಕು ಮುಕ್ತರನ್ನಾಗಿ
ಮಾಡಿ ಅವರನ್ನೆ ಮಾದರಿಯಾಗಿಟ್ಟುಕೊಂಡು ಅಕ್ಕ ಪಕ್ಕದವರಿಗೆ,
ತದನಂತರ ಗ್ರಾಮದ ಎಲ್ಲ ಜನತೆಗೆ ತಂಬಾಕು ಸೇವನೆಯಿಂದ
ಆಗುವಂತಹ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ ತಂಬಾಕು
ಮುಕ್ತ ಸಮಾಜವನ್ನಾಗಿ ಮಾಡುವುದು ನಮ್ಮ ಧೈಯವಾಗಿದೆ
ಎಂದರು.
ಜಿಲ್ಲಾ ಆರೋಗ್ಯ ಮೇಲ್ವಿಚಾರಣಾಧಿಕಾರಿ ಎಂ.ವಿ.ಹೋರಕೆರಿ ಮಾತನಾಡಿ
ನಮ್ಮ ದೇಹಕ್ಕೆ ಪ್ರಕೃತಿಯಲ್ಲಿ ಸಿಗುವ ಒಳ್ಳೆಯ ನೀರು,
ಆಹಾರವನ್ನು ಹೇಗೆ ಸೇವನೆ ಮಾಡುವೆವೊ ಅದೇ ರೀತಿ ಒಳ್ಳೆಯದನ್ನೆ
ಆಯ್ಕೆ ಮಾಡುವುದು ನಮ್ಮ ಕೈಯಲ್ಲಿರುತ್ತದೆ. ಅದು ಬಿಟ್ಟು
ವಿಷಕಾರಿ ತಂಬಾಕು ಸೇವನೆ ಮಾಡಿ ಜೀವನವನ್ನು ಹಾಳು
ಮಾಡಿಕೊಳ್ಳುವ ಬದಲು ಒಳ್ಳೆಯದನ್ನೆ ಸೇವಿಸಿ
ಆರೋಗ್ಯವಂತರಾಗಿರುವಂತೆ ಜಾಗೃತಿ ಮೂಡಿಸಬೇಕೆಂದು ಆಶಾ
ಕಾರ್ಯಕರ್ತೆಯರಿಗೆ ತಿಳಿಸಿದರು.
ಈ ವೇಳೆ ಆಡಳಿತ ವೈದ್ಯಾಧಿಕಾರಿಗಳಾದ ಡಾ.ಪ್ರಶಾಂತ,
ಡಾ.ನಿವೇದಿತ, ಎಪಿಡಮಾಲಾಜಿಸ್ಟ್, ಹಿರಿಯ ಆರೋಗ್ಯ ನೀರಿಕ್ಷಣಾಧಿಕಾರಿ
ಹಾಲಪ್ಪ, ಸಮಾಜ ಕಾರ್ಯಕರ್ತ ದೇವರಾಜ ಕೆ.ಪಿ, ಕಿರಿಯ ಆರೋಗ್ಯ
ನೀರಿಕ್ಷಣಾಧಿಕಾರಿ ಆದರ್ಶ, ಪರಶುರಾಮ, ತಾಲ್ಲೂಕು ಕಾರ್ಯಕ್ರಮ
ವ್ಯವಸ್ಥಾಪಕಿ ಸ್ಮೀತಾ, ದೇವರಬೆಳಕೆರೆ ಮತ್ತು ಬೇವಿನಹಳ್ಳಿ
ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಹಾಗೂ ಗ್ರಾಮಸ್ಥರು
ಉಪಸ್ಥಿತರಿದ್ದರು.