ಈ ಬಾರಿಯ ಗಣೇಶೋತ್ಸವ ಆಚರಣೆಗೆ ಸರ್ಕಾರ ಷರತ್ತು ಬದ್ಧ
ಅನುಮತಿ ಮಾತ್ರ ನೀಡಿದ್ದು, ಅದರಂತೆ ಜಿಲ್ಲೆಯಲ್ಲಿಯೂ ಸರ್ಕಾರದ
ಮಾರ್ಗಸೂಚಿಯನ್ನು ಪಾಲಿಸಿ, ಸಾರ್ವಜನಿಕವಾಗಿ ಅಥವಾ ಮನೆಗಳಲ್ಲಿ
ಗಣೇಶೋತ್ಸವ ಆಚರಿಸಲು ಅವಕಾಶ ನೀಡಲಾಗುವುದು. ಸಾರ್ವಜನಿಕ
ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ವಿವಿಧ ಇಲಾಖೆಗಳಿಂದ
ಪಡೆಯಲಾಗುವ ಅನುಮತಿಯನ್ನು ಒಂದೇ ಕಡೆ ಒದಗಿಸಲು
ಏಕಗವಾಕ್ಷಿ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ
ಮಹಾಂತೇಶ್ ಬೀಳಗಿ ಹೇಳಿದರು.
ಜಿಲ್ಲೆಯಲ್ಲಿ ಗಣೇಶೋತ್ಸವ ಆಚರಣೆ ಸಂಬಂಧ ಜಿಲ್ಲಾಧಿಕಾರಿಗಳ
ಕಚೇರಿ ಸಭಾಂಗಣದಲ್ಲಿ ವಿವಿಧ ಅಧಿಕಾರಿಗಳೊಂದಿಗೆ ಸೋಮವಾರ
ನಡೆಸಿದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗಣೇಶೋತ್ಸವ ಆಚರಣೆ ನಮ್ಮ ದೇಶದಲ್ಲಿ ಭಾವನಾತ್ಮಕ
ಸಂಬಂಧ ಹೊಂದಿದ್ದು, ಸುದೀರ್ಘ ಪರಂಪರೆಯೂ ಇದೆ.
ಭಾವೈಕ್ಯತೆ ಸಾರುವ ಉದ್ದೇಶವೂ ಕೂಡ ಗಣೇಶೋತ್ಸವ
ಹೊಂದಿದೆ. ಅತ್ಯಂತ ವಿಜೃಂಭಣೆಯಿಂದ ಆಚರಿಸಬೇಕಾಗಿದ್ದ
ಗಣೇಶೋತ್ಸವವನ್ನು ಮಹಾಮಾರಿ ಕೊರೊನಾ ಹರಡುವಿಕೆ
ಭೀತಿಯಿಂದ, ಷರತ್ತು ಬದ್ಧವಾಗಿ ಸರಳ ರೀತಿಯಲ್ಲಿ
ಆಚರಿಸಲೇಬೇಕಾದ ಅನಿವಾರ್ಯತೆ ಒದಗಿಬಂದಿದೆ. ಹೀಗಾಗಿ ಸಾರ್ವಜನಿಕವಾಗಿ
ಕೂರಿಸಲಾಗುವ ಗಣೇಶಮೂರ್ತಿಯನ್ನು ಎಷ್ಟು ಸಾಧ್ಯವೋ
ಅಷ್ಟು ಕಡಿಮೆ ಸಂಖ್ಯೆಯಲ್ಲಿ ಪ್ರತಿಷ್ಠಾಪನೆ ಮಾಡಬೇಕು.
ಎರಡ್ಮೂರು ವಾರ್ಡ್‍ನವರು ಸೇರಿ, ಒಂದೆಡೆ ಪ್ರತಿಷ್ಠಾಪಿಸಿ ಆಚರಿಸುವುದು
ಸೂಕ್ತ. ಸರ್ಕಾರದ ಸೂಚನೆಯಂತೆ ಸಾರ್ವಜನಿಕ ಸ್ಥಳಗಳಲ್ಲಿ
ಪ್ರತಿಷ್ಠಾಪಿಸುವ ಗಣೇಶ ಮೂರ್ತಿ ನಾಲ್ಕು ಅಡಿ, ಮನೆಯೊಳಗೆ
ಕೂರಿಸುವ ಮೂರ್ತಿ ಎರಡು ಅಡಿ ಮೀರುವಂತಿಲ್ಲ. ಸಾರ್ವಜನಿಕವಾಗಿ
ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಆಚರಣೆ ಮಾಡುವ ಆಯೋಜಕರು
ಕೋವಿಡ್ 19 ರ ಆರ್‍ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಮತ್ತು ಕನಿಷ್ಟ 01
ಡೋಸ್ ಲಸಿಕೆ ಪಡೆದಿರುವ ಬಗ್ಗೆ ಪ್ರಮಾಣಪತ್ರವನ್ನು
ಹೊಂದಿರುವುದು ಕಡ್ಡಾಯವಾಗಿದೆ. ಗಣೇಶೋತ್ಸವವನ್ನು 5
ದಿನಕ್ಕಿಂತ ಹೆಚ್ಚು ಆಚರಿಸಲು ಯಾವುದೇ ಕಾರಣಕ್ಕೂ ಅವಕಾಶ
ನೀಡುವುದಿಲ್ಲ. ಸಾರ್ವಜನಿಕವಾಗಿ ಗಣೇಶಮೂರ್ತಿ ಪ್ರತಿಷ್ಠಾಪಿಸುವ
ಸ್ಥಳಗಳಲ್ಲಿ ಗರಿಷ್ಟ 20 ಜನಕ್ಕೆ ಸೀಮಿತವಾಗುವ ರೀತಿ ಆವರಣ
ನಿರ್ಮಿಸಬೇಕು, ದರ್ಶನ ಸಂದರ್ಭದಲ್ಲಿ ಸಾಮಾಜಿಕ ಅಂತರ
ಕಾಯ್ದುಕೊಳ್ಳಲು ಪ್ರತಿ ವ್ಯಕ್ತಿಗೆ ಬಣ್ಣದಿಂದ ಬಾಕ್ಸ್
ಗುರುತಿಸಬೇಕು. ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ
ಯಾವುದೇ ಅಡ್ಡಿಯಾಗದಂತಿರಬೇಕು. ಈ ಬಾರಿ ಗಣೇಶೋತ್ಸವ
ಆಚರಣೆ ಅಂಗವಾಗಿ ಯಾವುದೇ ಬಗೆಯ ಸಾಂಸ್ಕøತಿಕ, ಸಂಗೀತ,
ನೃತ್ಯ ಕಾರ್ಯಕ್ರಮ, ಡಿಜೆ ಸಹಿತ ಮನೋರಂಜನೆ
ಕಾರ್ಯಕ್ರಮ ಆಯೋಜನೆ ಅವಕಾಶ ಇರುವುದಿಲ್ಲ. ಗಣೇಶ
ಮೂರ್ತಿ ತರುವಾಗ ಹಾಗೂ ವಿಸರ್ಜಿಸುವ ಸಂದರ್ಭಗಳಲ್ಲಿ
ಮೆರೆವಣಿಗೆ ಹೊರಡಿಸುವಂತಿಲ್ಲ. ಸಾರ್ವಜನಿಕ ದರ್ಶನಕ್ಕೆ ಆಗಮಿಸುವ
ಭಕ್ತಾದಿಗಳಿಗೆ ಸ್ಯಾನಿಟೈಸರ್ ಹಾಗೂ ಥರ್ಮಲ್ ಸ್ಕ್ರೀನಿಂಗ್
ವ್ಯವಸ್ಥೆಯನ್ನು ಆಯೋಜಕರು ಮಾಡಬೇಕು, ಅಲ್ಲದೆ
ಭಕ್ತಾದಿಗಳು ಮತ್ತು ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್
ಧರಿಸಲೇಬೇಕು. ಯಾವುದೇ ಕಾರಣಕ್ಕೂ ನಮ್ಮ ವರ್ತನೆ
ಕೋವಿಡ್ ಸೋಂಕು ಹರಡುವ ರೀತಿ ಇರಬಾರದು. ಒಂದು ವೇಳೆ
ಯಾವುದೇ ಉಲ್ಲಂಘನೆ ಕಂಡುಬಂದಲ್ಲಿ ಅಂತಹವರ ವಿರುದ್ಧ
ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ
ಹೇಳಿದರು.
ಅನುಮತಿಗೆ ಏಕಗವಾಕ್ಷಿ : ಸಾರ್ವಜನಿಕ ಸ್ಥಳಗಳಲ್ಲಿ
ಗಣೇಶಮೂರ್ತಿ ಪ್ರತಿಷ್ಠಾಪನೆ ಮಾಡಲು ಬಯಸುವ
ಆಯೋಜಕರು, ಕೋವಿಡ್ 19 ರ ಆರ್‍ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಮತ್ತು
ಕನಿಷ್ಟ 01 ಡೋಸ್ ಲಸಿಕೆ ಪಡೆದಿರುವ ಬಗ್ಗೆ ಪ್ರಮಾಣಪತ್ರವನ್ನು
ಹೊಂದಿರುವುದು ಕಡ್ಡಾಯ. ಗಣೇಶಮೂರ್ತಿ ಪ್ರತಿಷ್ಠಾಪಿಸಲು
ನಗರ, ಪಟ್ಟಣ, ಗ್ರಾಮ ಮಟ್ಟದಲ್ಲಿ ಸಂಬಂಧಪಟ್ಟ ವಿವಿಧ
ಇಲಾಖೆಗಳಿಂದ ಅನುಮತಿ ಪಡೆಯುವುದು
ಕಡ್ಡಾಯಗೊಳಿಸಲಾಗಿದ್ದು, ದಾವಣಗೆರೆ ನಗರ ವ್ಯಾಪ್ತಿಯಲ್ಲಿ
ಮಹಾನಗರ ಪಾಲಿಕೆ ಕಚೇರಿ, ಉಳಿದಂತೆ ನಗರಸಭೆ, ಪುರಸಭೆ,
ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಆಯಾ ಸ್ಥಳೀಯ ಸಂಸ್ಥೆಯ
ಮುಖ್ಯಾಧಿಕಾರಿಗಳ ಕಚೇರಿ, ಗ್ರಾಮ ಮಟ್ಟದಲ್ಲಿ ಆಯಾ ಗ್ರಾಮ
ವ್ಯಾಪ್ತಿಯ ಗ್ರಾ.ಪಂ. ಪಿಡಿಒ ಗಳಿಂದ ಅನುಮತಿ ಪಡೆಯಬೇಕು.
ಉಳಿದಂತೆ ಮಾಲಿನ್ಯ ನಿಯಂತ್ರಣ ಮಂಡಳಿ, ಪೊಲೀಸ್ ಇಲಾಖೆ,
ಅಗ್ನಿಶಾಮಕ ಇಲಾಖೆ ಹಾಗೂ ಇತರೆ ಇಲಾಖೆಗಳಿಂದ ಪಡೆಯಬೇಕಾದ
ಅನುಮತಿಯನ್ನು ಒಂದೇ ಕಡೆ ಪಡೆಯುವಂತಾಗಲು
ಮಹಾನಗರಪಾಲಿಕೆ ಸೇರಿದಂತೆ ಆಯಾ ಸ್ಥಳೀಯ ಸಂಸ್ಥೆಗಳ
ಕಚೇರಿಯಲ್ಲಿಯೇ ಏಕಗವಾಕ್ಷಿ ವ್ಯವಸ್ಥೆ ಮಾಡಿ, ಅನುಮತಿ
ದೊರಕಿಸಲು ಅವಕಾಶ ಕಲ್ಪಿಸಲಾಗುವುದು. ಅಲ್ಲದೆ ಅನುಮತಿ
ಪಡೆದ ಆಯೋಜಕರು ಸರ್ಕಾರದ ಮಾರ್ಗಸೂಚಿ ಪಾಲಿಸುತ್ತಿರುವ
ಬಗ್ಗೆಯೂ ಇದೇ ಅಧಿಕಾರಿಗಳು ನಿಗಾ ವಹಿಸಿ, ಉಲ್ಲಂಘನೆ ಮಾಡುವವರ
ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು
ಜಿಲ್ಲಾಧಿಕಾರಿಗಳು ಸೂಚಿಸಿದರು.
30 ಕಡೆ ಗಣೇಶ ವಿಸರ್ಜನೆಗೆ ವ್ಯವಸ್ಥೆ : ದಾವಣಗೆರೆ ಮಹಾನಗರ
ಪಾಲಿಕೆ ವ್ಯಾಪ್ತಿಯಲ್ಲಿ ಗಣೇಶಮೂರ್ತಿ ವಿಸರ್ಜನೆಗೆ ಒಟ್ಟು 30
ಕಡೆಗಳಲ್ಲಿ ಸ್ಥಳ ಗುರುತಿಸಲಾಗಿದ್ದು, ಇಲ್ಲಿ ಪಾಲಿಕೆಯಿಂದ ನೀರಿನ
ಟ್ಯಾಂಕ್ ಸಹಿತದ ಟ್ಯಾಂಕರ್ ವ್ಯವಸ್ಥೆ ಮಾಡಲಾಗುವುದು, ಅಲ್ಲದೆ
ಶಿರಮಗೊಂಡನಹಳ್ಳಿ, ಬಾತಿಕೆರೆ ಬಳಿಯೂ ಕೃತಕ ಟ್ಯಾಂಕ್ ನಿರ್ಮಿಸಿ
ಗಣೇಶಮೂರ್ತಿ ವಿಸರ್ಜನೆಗೆ ಅವಕಾಶ ಮಾಡಿಕೊಡಲಾಗುವುದು
ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ
ಜಿಲ್ಲಾಧಿಕಾರಿಗಳು, ಸಾರ್ವಜನಿಕರು ನಿಗದಿತ ಸ್ಥಳಗಳಲ್ಲೇ
ಗಣೇಶಮೂರ್ತಿಯನ್ನು ವಿಸರ್ಜಿಸಬೇಕು. ಗಣೇಶಮೂರ್ತಿ
ವಿಸರ್ಜನೆ ಸ್ಥಳಗಳಲ್ಲಿ ಸಮರ್ಪಕವಾಗಿ ವಿದ್ಯುತ್ ದೀಪದ ವ್ಯವಸ್ಥೆ
ಮಾಡಬೇಕು ಎಂದು ಸೂಚಿಸಿದ ಜಿಲ್ಲಾಧಿಕಾರಿಗಳು, ಮಾಲಿನ್ಯ
ನಿಯಂತ್ರಣ ಮಂಡಳಿಯಿಂದ ಈ ಬಾರಿ ಅರಿಶಿನ ಗಣಪ ಮೂರ್ತಿ
ಪ್ರತಿಷ್ಠಾಪಿಸಲು ಅಭಿಯಾನ ಕೈಗೊಂಡಿದ್ದು, ಸಾರ್ವಜನಿಕರು ಹೆಚ್ಚಿನ
ಸಂಖ್ಯೆಯಲ್ಲಿ ಅರಿಶಿನ ಗಣಪನನ್ನು ಪ್ರತಿಷ್ಠಾಪಿಸಿ, ಫೋಟೋ
ವಿಡಿಯೋವನ್ನು ಇಲಾಖೆಯ ವೆಬ್‍ಸೈಟ್‍ನಲ್ಲಿ ಅಪ್‍ಲೋಡ್ ಮಾಡಬೇಕು
ಎಂದು ಮನವಿ ಮಾಡಿದರು.
ಲಸಿಕೆ ಅಭಿಯಾನ : ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪಿಸುವ
ಸ್ಥಳಗಳಲ್ಲಿ, ಕೋವಿಡ್ ನಿರೋಧಕ ಲಸಿಕೆ ನೀಡುವ ಅಭಿಯಾನ
ಕೈಗೊಳ್ಳಲು ಸರ್ಕಾರ ಮಾರ್ಗಸೂಚಿಯಲ್ಲಿ ಅವಕಾಶ ಕಲ್ಪಿಸಿದ್ದು,
ಇದರನ್ವಯ, ಜಿಲ್ಲೆಯಲ್ಲಿಯೂ ಈ ಅವಕಾಶ ಬಳಸಿಕೊಂಡು ಲಸಿಕೆ
ಅಭಿಯಾನ ಮಾಡಲಾಗುವುದು. ಈ ಬಗ್ಗೆ ಸೂಕ್ತ ಕ್ರಮ
ವಹಿಸುವಂತೆ ಜಿಲ್ಲಾ ಆರ್‍ಸಿಹೆಚ್ ಅಧಿಕಾರಿಗಳಿಗೆ ನಿರ್ದೇಶನ
ನೀಡಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಸಭೆಯಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್, ಅಪರ
ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಉಪವಿಭಾಗಾಧಿಕಾರಿ ಮಮತಾ
ಹೊಸಗೌಡರ್ ಸೇರಿದಂತೆ ತಾಲ್ಲೂಕುಗಳ ತಹಸಿಲ್ದಾರರು,
ನಗರಸಭೆ, ಪುರಸಭೆಗಳ ಮುಖ್ಯಾಧಿಕಾರಿಗಳು
ಭಾಗವಹಿಸಿದ್ದರು.