ಹೊನ್ನಾಳಿ : ರೈತರು ಹಾಗೂ ಯೋಧರು ಇಬ್ಬರೂ ಕೂಡ ದೇಶದ ಎರಡು ಕಣ್ಣುಗಳಿದ್ದಂತೆ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.
ತಾಲೂಕಿನ ನೇರಲಗುಂಡಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ನಿವೃತ್ತ ಯೋಧರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯೋಧರು ಗಡಿಯಲ್ಲಿ ಕಾವಲು ಕಾಯುತ್ತಿರುವುದರಿಂದ ನಾವಿಲ್ಲಿ ನೆಮ್ಮದಿಯಿಂದ ಜೀವನ ಇರಲು ಸಾಧ್ಯವಾಗಿದೆ ಎಂದ ಶಾಸಕರು ಅಂತಹ ಯೋಧರಿಗೆ ನಮನ ಸಲ್ಲಿಸಿದರು.
ಯೋಧರು ದೇಶ ಸೇವೆಯೇ ಈಶ ಸೇವೆ ಎಂದು ತಿಳಿದು ಸೇವೆ ಸಲ್ಲಿಸುತ್ತಿದ್ದು, ಇಂತಹ ಯೋಧರನ್ನು ದೇಶಕ್ಕೆ ನೀಡಿದ ತಂದೆತಾಯಂದಿರಿಗೆ ನಾನು ಶಿರಬಾಗಿ ನಮಸ್ಕರಿಸುತ್ತೇನೆ ಎಂದರು.
ಯೋಧರು ತಮ್ಮ ವೈಯಕ್ತಿಕ ಬದುಕನ್ನು ಬದಿಗೊತ್ತಿ ಗಡಿಯಲ್ಲಿ ಕಾವಲು ಕಾಯುತ್ತಿದ್ದು ನಾವು ಸದಾ ಅವರಿಗೆ ಚಿರಋಣಿ ಎಂದರು.
ಅಧಿಕಾರ ಎಂಬುದು ಶಾಶ್ವತ ಅಲ್ಲಾ, ಅಧಿಕಾರ ಎಂಬುದು ನೀರ ಮೇಲಿನ ಗುಳ್ಳೆ ಇದ್ದಂತೆ, ಆದರೇ ವೈಯಕ್ತಿಕ ಜೀವನ ಮರೆತು ಯೋಧರು ಗಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದು ಅವರ ಸೇವೆ ನಿಜಕ್ಕೂ ಶ್ಲಾಘನೀಯ ಎಂದರು.
ಸೇವಾಲಾಲ್ ಎಂದರೆ ಸೇವಾಮನೋಬಾವನೆ ಎಂದ ಶಾಸಕರು, ಸೇವಾಲಾಲ್ ಸಮಾಜದ ಸಾಕಷ್ಟು ಜನ ಯುವಕರು ಯೋಧರಾಗಿ ಸೇವೆ ಸಲ್ಲಿಸುತ್ತಿದ್ದು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಯೋಧರು,ರೈತರು ಹಾಗೂ ವೈದ್ಯರನ್ನು ಪ್ರತಿಯೊಬ್ಬರೂ ಶಿರಬಾಗಿ ನಮಸ್ಕಾರ ಮಾಡ ಬೇಕೆಂದ ರೇಣುಕಾಚಾರ್ಯ, ನಾವು ಸದಾ ಅವರನ್ನು ಗೌರವಿಸ ಬೇಕು ಎಂದರು.
ಯೋಧರಿಗೆ ಸನ್ಮಾನ : ಕಳೆದ 22 ವರ್ಷಗಳಿಂದ ಸುದೀರ್ಘವಾಗಿ ಭಾರತಾಂಬೆಯ ಸೇವೆ ಸಲ್ಲಿಸಿ ಇಂದು ಹುಟ್ಟೂರಾದ ಹೊನ್ನಾಳಿ ತಾಲೂಕಿನ ನೇರಲಗುಂಡಿ ಗ್ರಾಮಕ್ಕೆ ಆಗಮಿಸಿದ ನಿವೃತ್ತಯೋಧರಾದ ಶ್ರೀನಿವಾಸ್ ನಾಯ್ಕ ಹಾಗೂ ಕೃಷ್ಣ ನಾಯ್ಕರನ್ನು ಗ್ರಾಮಸ್ಥರು ತೆರೆದ ವಾಹನದಲ್ಲಿ ಮೆರವಣಿಗೆ ಮಾಡುವ ಮೂಲಕ ಅದ್ದೂರಿಯಾಗಿ ಬರ ಮಾಡಿಕೊಂಡರು.
ಶ್ರೀನಿವಾಸ್ ನಾಯ್ಕ ವೆಸ್ಟ್ ಬೆಂಗಾಲ್‍ನಲ್ಲಿ, ಕೃಷ್ಣಾನಾಯ್ಕ ಪಂಜಾಬ್ ಗಡಿಭದ್ರತಾ ಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದು ಇಂದು ಗ್ರಾಮಕ್ಕೆ ಆಗಮಿಸಿ ಆವರನ್ನು ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿ ಆತ್ಮೀಯವಾಗಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಶಾಂತನಗೌಡ, ತಾಂಡಾಭಿವೃದ್ದಿ ನಿಗಮದ ನಿದೇರ್ಶಕ ಮಾರುತಿ ನಾಯ್ಕ,ಮಾಜಿ ಜಿಲ್ಲಾಪಂಚಾಯಿತಿ ಸದಸ್ಯರ ಸುರೇಂದ್ರನಾಯ್ಕ ಸೇರಿದಂತೆ ಗ್ರಾಮಪಂಚಾಯಿತಿ ಅಧ್ಯಕ್ಷರ, ಉಪಾಧ್ಯಕ್ಷರು ಸದಸ್ಯರು ಸೇರಿದಂತೆ ಗ್ರಾಮದ ಮುಖಂಡರಿದ್ದರು.