ಬೆಂಗಳೂರು: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಎತ್ತಿನ ಗಾಡಿಯಲ್ಲೇ ವಿಧಾನಸೌಧದ ಆವರಣ ಪ್ರವೇಶಿಸಿದ್ದಾರೆ.
ಸೋಮವಾರ ಬೆಳಿಗ್ಗೆಯಿಂದ ವಿಧಾನಮಂಡಲ ಅಧಿವೇಶನ ಆರಂಭವಾಗುತ್ತಿದೆ. ಇದೇ ಸಂದರ್ಭದಲ್ಲಿ ಬೆಲೆ ಏರಿಕೆ ವಿರುದ್ಧ ಎತ್ತಿನ ಬಂಡಿಯ ಮೆರವಣಿಗೆ ನಡೆಸಲು ಕಾಂಗ್ರೆಸ್ ನಿರ್ಧರಿಸಿತ್ತು.
ಸಿದ್ದರಾಮಯ್ಯ, ಶಿವಕುಮಾರ್ ಮತ್ತಿತರರು ತಮ್ಮ ಮನೆಗಳಿಂದ ಎತ್ತಿನ ಬಂಡಿಯಲ್ಲಿ ವಿಧಾನಸೌಧದ ಕಡೆಗೆ ಹೊರಟಿದ್ದರು. ವಿಂಡ್ಸರ್ ಮ್ಯಾನರ್ ವೃತ್ತದಲ್ಲಿ ಪೊಲೀಸರು ತಡೆದರು. ಎರಡು ಎತ್ತಿನ ಬಂಡಿಗಳಿಗೆ ಮಾತ್ರ ವಿಧಾನಸೌಧದತ್ತ ತೆರಳಲು ಅವಕಾಶ ನೀಡಿದ್ದರು.
ವಿಧಾನಸೌಧದ ಪ್ರವೇಶ ದ್ವಾರದ ಬಳಿ ಬರುತ್ತಿದ್ದಂತೆ ಎತ್ತಿನ ಬಂಡಿಗಳನ್ನು ತಡೆದ ಪೊಲೀಸರು, ಒಳಕ್ಕೆ ಪ್ರವೇಶ ನಿರಾಕರಿಸಿದರು. ಎತ್ತಿನ ಬಂಡಿಯಲ್ಲಿ ಒಳಕ್ಕೆ ಹೋಗಲು ಅನುಮತಿ ನೀಡುವಂತೆ ಕಾಂಗ್ರೆಸ್ ನಾಯಕರು ಮತ್ತು ಶಾಸಕರು ಪಟ್ಟು ಹಿಡಿದರು. ಸಿದ್ದರಾಮಯ್ಯ ಪೊಲೀಸರ ವಿರುದ್ಧ ಹರಿಹಾಯ್ದರು.
ಒತ್ತಾಯಕ್ಕೆ ಮಣಿದ ಪೊಲೀಸರು ಪ್ರವೇಶದ್ವಾರದ ಬಾಗಿಲು ತೆರೆದರು. ಎತ್ತಿನ ಬಂಡಿಯಲ್ಲೇ ವಿಧಾನಸೌಧದ ಆವರಣ ಪ್ರವೇಶಿಸಿದ ಸಿದ್ದರಾಮಯ್ಯ ಮತ್ತಿತರರು, ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಸಿದರು.