ಶಿವಮೊಗ್ಗ : ಸೆಪ್ಟಂಬರ್ 15 : ಉತ್ತಮ ಗುಣಮಟ್ಟದ, ಸುರಕ್ಷಿತ ಹಾಗೂ ಶುಚಿಯಾದ ಆಹಾರವನ್ನು ನೀಡುವುದು ಪ್ರತಿಯೊಬ್ಬ ಆಹಾರ ಪದಾರ್ಥ ಮಾರಾಟಗಾರನ ಕರ್ತವ್ಯವಾಗಿದ್ದು, ತಮ್ಮಲ್ಲಿಗೆ ಬರುವ ಗ್ರಾಹಕರಿಗೆ ಶುಚಿ, ರುಚಿಯಾದ, ಪೌಷ್ಠಿಕ ಹಾಗೂ ರಿಯಾಯಿತಿ ದರದ ಆಹಾರವನ್ನು ನೀಡುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಹೇಳಿದರು.
ಅವರು ಇಂದು ಸ್ಮಾರ್ಟ್‍ಸಿಟಿ ಯೋಜನೆಯಡಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಸಹಯೋಗದೊಂದಿಗೆ ಸ್ಮಾರ್ಟ್‍ಸಿಟಿ ಸಭಾಂಗಣದಲ್ಲಿ ನಗರದ ಫುಡ್‍ಕೋರ್ಟ್‍ನ ವ್ಯಾಪಾರಿಗಳಿಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದುಕೊಳ್ಳುವುದರ ಕುರಿತು ಏರ್ಪಡಿಸಲಾಗಿದ್ದ ಸಮಾಲೋಚನಾ ಸಭೆಯಲ್ಲಿ ಆಹಾರ ಗುಣಮಟ್ಟ ಪ್ರಮಾಣಪತ್ರ ವಿತರಿಸಿ ಮಾತನಾಡುತ್ತಿದ್ದರು. ಶುಚಿತ್ವ ಕಾಯ್ದುಕೊಳ್ಳುವುದರ ಜೊತೆಗೆ ಆಹಾರ ಕಲುಷಿತಗೊಳ್ಳದಂತೆ ಗಮನಹರಿಸಬೇಕು ಎಂದ ಅವರು, ಫುಡ್‍ಕೋರ್ಟ್‍ನಲ್ಲಿ ಸಾರ್ವಜನಿಕರಿಗೆ ಲಭ್ಯವಾಗುತ್ತಿರುವ ಆಹಾರ ಸೇವೆಯ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಂಗಡಿಗಳ ಮಾಲೀಕರು ಜನಸಾಮಾನ್ಯರ ಆರೋಗ್ಯದ ಬಗ್ಗೆಯೂ ಕಾಳಜಿ ಹೊಂದಬೇಕು. ಕಲುಷಿತ ಆಹಾರದಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾದಲ್ಲಿ ಲಕ್ಷಾಂತರ ರೂಪಾಯಿಗಳನ್ನು ಸಾರ್ವಜನಿಕರು ಚಿಕಿತ್ಸೆಗಾಗಿ ವ್ಯಯ ಮಾಡಬೇಕಾದ ಅನಿವಾರ್ಯತೆ ಎದುರಾಗಬಹುದು. ಆದ್ದರಿಂದ ತಾವು ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸುವಂತೆ ಸಲಹೆ ನೀಡಿದರು.
ಆಹಾರ ಉದ್ಯಮದಲ್ಲಿರುವವರು ಎಫ್.ಎಸ್.ಎಸ್.ಎ.ಐ. ಸಂಸ್ಥೆಯ ಪರವಾನಿಗೆ ಅಥವಾ ನೋಂದಣಿ ಸಂಖ್ಯೆ ಹೊಂದಬೇಕಾದುದು ಕಡ್ಡಾಯವಾಗಿದ್ದು, ಜಿಲ್ಲೆಯಲ್ಲಿನ ಎಲ್ಲಾ ಆಹಾರೋದ್ಯಮಿಗಳು ನೋಂದಣಿ ಮಾಡಿಸಿಕೊಳ್ಳಬೇಕು. ಈಗಾಗಲೇ ನೋಂದಣಿ ಮಾಡಿಸಿಕೊಂಡ ವ್ಯಾಪಾರಿಗಳು ಸಕಾಲದಲ್ಲಿ ನವೀಕರಣ ಮಾಡಿಸಿಕೊಳ್ಳುವಂತೆ ಹಾಗೂ ಸರ್ಕಾರದ ಮಾನದಂಡಗಳನ್ನು ಕಡ್ಡಾಯವಾಗಿ ಅನುಸರಿಸುವಂತೆ ಸೂಚಿಸಿದರು.
ಈ ಬಗ್ಗೆ ಜನರಲ್ಲಿಯೂ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ. ಈಗಾಗಲೇ ಈ ವಿಷಯದ ಕುರಿತು ತರಬೇತಿ ಕಾರ್ಯಾಗಾರಗಳನ್ನು ಕೈಗೊಳ್ಳಲಾಗಿದೆ ಎಂದ ಅವರು ಆಹಾರೋದ್ಯಮಿಗಳು ಗ್ರಾಹರಿಗೆ ರಿಯಾಯಿತಿ ನೀಡುವುದು ಮಾತ್ರವಲ್ಲ ಅವರ ಆರೋಗ್ಯದ ಹಿತ ಕಾಪಾಡುವುದು ಬಹು ಮುಖ್ಯವಾಗಿದೆ ಎಂದರು. ಇದೇ ಸಂದರ್ಭದಲ್ಲಿ ಫುಡ್ ಕೋರ್ಟ್‍ನ ಪದಾರ್ಥ ಮಾರಾಟಗಾರರಿಗೆ ಪ್ರಮಾಣಪತ್ರ ವಿತರಿಸಿದರು.
ಈ ಸಂದರ್ಭದಲ್ಲಿ ಸ್ಮಾರ್ಟ್‍ಸಿಟಿ ವ್ಯವಸ್ಥಾಪಕ ಚಿದಾನಂದ ವಟಾರೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ರಾಜೇಶ್ ಸುರಗೀಹಳ್ಳಿ, ಎಫ್.ಎಸ್.ಎಸ್.ಎ.ಐ.ನ ಅಧಿಕಾರಿ ಡಾ|| ಮಧು, ಸ್ಮಾರ್ಟ್‍ಸಿಟಿ ವ್ಯವಸ್ಥಾಪಕ ಶ್ರೀನಿವಾಸ್ ಮತ್ತಿತತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *