ಬೆಂಗಳೂರು: ರಾಜ್ಯದಲ್ಲಿ ಶಿಕ್ಷಕ ವೃತ್ತಿ ಆಕಾಂಕ್ಷಿಗಳಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿಸಿ ನಾಗೇಶ್ ಸಿಹಿಸುದ್ಧಿ ನೀಡಿದ್ದಾರೆ.
ರಾಜ್ಯದಲ್ಲಿ 3,590 ಪ್ರೌಢಶಾಲೆ ಸಹಶಿಕ್ಷಕ ಹುದ್ದೆಗಳು ಖಾಲಿಯಿದ್ದು, 1801 ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.
ವಿಧಾನಸಭೆ ಕಲಾಪದ ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್ ಶಾಸಕ ಟಿ.ಎನ್.ಬಾಲಕೃಷ್ಣ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಬಿಸಿ ನಾಗೇಶ್, 1801 ಶಿಕ್ಷಕರ ಹುದ್ದೆ ಭರ್ತಿ ಮಾಡಲು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹಣಕಾಸು ಇಲಾಖೆಯ ಅನುಮತಿ ಪಡೆದು ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಶೇ.100ಕ್ಕೆ ನೂರರಷ್ಟು ಎಸ್ಸೆಸ್ಸೆಲ್ಸಿ ಫಲಿತಾಂಶ: ಹೆಚ್ಚುವರಿ ಸೆಕ್ಷನ್ ತೆರೆಯಲು ಅನುಮತಿ.
ಕೊರೋನಾ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷದಲ್ಲಿ ಶೇ.100ಕ್ಕೆ ನೂರರಷ್ಟು ಎಸ್ಸೆಸ್ಸೆಲ್ಸಿ ಫಲಿತಾಂಶ ಬಂದಿದ್ದು, ಈ ಹಿನ್ನೆಲೆಯಲ್ಲಿ ಕಾಲೇಜುಗಳಲ್ಲಿ ಹೆಚ್ಚುವರಿ ಸೆಕ್ಷನ್ ಗಳನ್ನು ತೆರೆಯಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದರು.
ಶಾಸಕ ಸುಬ್ಬಾರೆಡ್ಡಿ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಾರಿ ನಾವು ಕೋವಿಡ್ ಕಾರಣದಿಂದ ಎಸ್ಸೆಸ್ಸೆಲ್ಸಿಯಲ್ಲಿ 100ಕ್ಕೆ ನೂರು ಫಲಿತಾಂಶವನ್ನು ಪ್ರಕಟಿಸಿದ್ದೇವೆ. ಹೀಗಾಗಿ ವಿದ್ಯಾರ್ಥಿಗಳ ಪ್ರವೇಶಾತಿ ಸಂಖ್ಯೆ ಹೆಚ್ಚಾಗಿದೆ .70ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದರೆ ಎರಡು ವರ್ಗಗಳನ್ನು ತೆರೆಯಲು ಅನುಮತಿ ನೀಡಿದ್ದೇವೆ. ಒಂದು ವರ್ಗದಲ್ಲಿ 50 ವಿದ್ಯಾರ್ಥಿಗಳು ಮಾತ್ರ ಇರಬೇಕು ಎಂದು ತಿಳಿಸಿದರು.