ಜಿಲ್ಲೆಯಲ್ಲಿ ರಫ್ತುದಾರರು ಹೆಚ್ಚಿದ್ದು ಕೇವಲ ಜಿಲ್ಲೆ
ಮತ್ತು ರಾಜ್ಯದಲ್ಲಿ ವ್ಯಾಪಾರ ಮಾಡುವುದರಿಂದ
ಅಭಿವೃದ್ಧಿಯಾಗುವುದು ಕಷ್ಟ. ಗುಣಮಟ್ಟದ ರಫ್ತು
ಕೈಗೊಳ್ಳುವ ಮೂಲಕ ಅಂತರಾಷ್ಟ್ರೀಯ
ಮಾರುಕಟ್ಟೆಯಲ್ಲಿ ಉತ್ಪನ್ನಗಳ ಬೇಡಿಕೆಯನ್ನು
ಹೆಚ್ಚಿಸಿಕೊಳ್ಳಬೇಕು. ಹೆಚ್ಚು ಹೆಚ್ಚು ರಫ್ತು
ಮಾಡುವುದರಿಂದ ದೇಶದ ಆದಾಯವು ಹೆಚ್ಚಾಗುತ್ತದೆ
ಎಂದು ಸಂಸದ ಡಾ.ಜಿ.ಎಂ.ಸಿದ್ದೇಶ್ವರ ತಿಳಿಸಿದರು.
75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ
ಅಂಗವಾಗಿ ಜಿಲ್ಲಾ ಕೈಗಾರಿಕಾ ಕೇಂದ್ರ, ದಾವಣಗೆರೆ ಹಾಗೂ
ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ,
ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ನಗರದ
ಪಿ.ಬಿ.ರಸ್ತೆಯಲ್ಲಿರುವ ಹೋಟೆಲ್ ಓಶನ್ ಪಾರ್ಕ್ ಅಲ್ಲಿ ಶನಿವಾರ
ಆಯೋಜಿಸಿದ್ದ ‘ವಾಣಿಜ್ಯ ಸಪ್ತಾಹ -ರಫ್ತುದಾರರ ಸಮಾವೇಶ’
ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಕೈಗಾರಿಕೆ ಮಾಡಲು ಜಮೀನಿನ
ತೊಂದರೆಯಿದ್ದು, ಜಾಗದ ಹುಡುಕಾಟ ನಡೆಸಲಾಗುತ್ತಿದೆ.
ಈಗಾಗಲೇ ಸರ್ಕಾರ ಅನುಮೋದನೆ ನೀಡಿದ್ದು, ಜಿಲ್ಲೆಯಲ್ಲಿ
ಉತ್ತಮ ಭೂಮಿ ಸಿಕ್ಕ ನಂತರ ತುಂಗಭದ್ರ ನದಿಯಿಂದ
ಪೈಪ್‍ಲೈನ್ ಅಳವಡಿಸಿ ನೀರು ಪೂರೈಕೆ ಮಾಡಲಾಗುವುದು.
ವಿದ್ಯುತ್, ಸಾರಿಗೆ ಸಂಪರ್ಕ, ಸೇರಿದಂತೆ ಉದ್ಯಮ ಸೃಷ್ಟಿಗೆ ಬೇಕಾದ
ಮೂಲಭೂತ ಸವಲತ್ತುಗಳನ್ನು ಒದಗಿಸಲಾಗುವುದು.
ವಿಮಾನ ನಿಲ್ದಾಣದ ಕುರಿತು ಅನೇಕ ಜನರ ಬೇಡಿಕೆಯಿದ್ದು,
ಈಗಾಗಲೇ ಪ್ರಣಾಳಿಕೆಯಲ್ಲಿ ಈ ಕುರಿತು ಪ್ರಸ್ತಾಪಿಸಲಾಗಿದೆ.
ಆದರೂ ವಿಮಾನ ನಿಲ್ದಾಣ ಮಾಡಲಾಗಲಿಲ್ಲ ಎಂಬ ಬೇಸರವಿದೆ. ನನ್ನ
ಅವಧಿ ಮುಗಿಯುವುದರೊಳಗಾಗಿ ವಿಮಾನ ನಿಲ್ದಾಣ
ಮಾಡುವಲ್ಲಿ ಹೆಚ್ಚು ಶ್ರಮವಹಿಸುತ್ತೇನೆ ಎಂದರು.
ಜಿಲ್ಲೆಯಿಂದ ನಾನಾ ರಾಜ್ಯಗಳಿಗೆ ಸರಕು ಮತ್ತು
ಸೇವೆಗಳು ರಫ್ತು ಆಗುತ್ತಿದ್ದು, ಬೇರೆ ರಾಷ್ಟ್ರಗಳಿಗೂ
ರಫ್ತು ಮಾಡಲು ಪ್ರಯತ್ನಿಸಬೇಕು. ಈಗಾಗಲೇ ಕೆಲವು
ಕೈಗಾರಿಕೋದ್ಯಮಿಗಳು ರಾಷ್ಟ್ರದ್ಯಂತ ಉತ್ಪನ್ನಗಳನ್ನು
ರಫ್ತು ಮಾಡುತ್ತಿದ್ದಾರೆ. ದಾವಣಗೆರೆ ಹಾಗೂ ಹರಿಹರದ ಕೆಲ
ಕೈಗಾರಿಕೆಗಳಿಂದ ಸುಮಾರು 50 ರಿಂದ 70 ಕೋಟಿ ರೂ. ವ್ಯಾಪಾರ
ವಹಿವಾಟು ಆಗುತ್ತಿದ್ದು, ರಫ್ತುದಾರರಿಗೆ ಹೆಚ್ಚು ಪ್ರೋತ್ಸಾಹ
ನೀಡಿ, ಅವರಲ್ಲಿ ಉತ್ಸಾಹ ತುಂಬಬೇಕು. ಬೃಹತ್ ಕೈಗಾರಿಕೆಗೆ
ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆ ಮಾಡಿಲ್ಲ. ಯಾರಾದರೂ
ಪ್ರಾರಂಭ ಮಾಡುವುದಿದ್ದರೆ ನಾವು ಅದಕ್ಕೆ ಸಂಪೂರ್ಣ
ಉತ್ತೇಜನ ನೀಡುತ್ತೇವೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಜಿಲ್ಲೆಯಲ್ಲಿ
ರಫ್ತುದಾರರು ಹೆಚ್ಚಿದ್ದು ಶೀಘ್ರದಲ್ಲೇ ರಫ್ತು ಕೇಂದ್ರ
(ಎಕ್ಸ್‍ಪೋರ್ಟ್ ಹಬ್) ಕ್ಕೆ ಚಾಲನೆ ನೀಡಲಾಗುವುದು. ವಿಮಾನ
ನಿಲ್ದಾಣದ ಕುರಿತು ಪ್ರಣಾಳಿಕೆಯಲ್ಲಿ ನಮೂದಿಸಿದ್ದು, ಮುಂದಿನ
ದಿನಗಳಲ್ಲಿ ಪ್ರಯತ್ನಿಸಲಾಗುವುದು. ಉದ್ಯಮ ಆರಂಭಕ್ಕೆ
ಪೂರಕವಾಗಿ ಜಿಲ್ಲೆಯಲ್ಲಿ ರೈಲ್ವೆ ಯೋಜನೆಗಳ ಭೂ
ಸ್ವಾಧೀನ ಕಾರ್ಯ ನಡೆಯುತ್ತಿವೆ ಎಂದರು.
ಕಳೆದ ಎರಡು ವರ್ಷಗಳಿಂದ 25 ಸಾವಿರ ಹೆಕ್ಟೆರ್
ಜಮೀನಿನಲ್ಲಿ ಭತ್ತ, ಮೆಕ್ಕೆಜೋಳ ಬೆಳೆಯದೆ ಅಡಿಕೆ ಬೆಳೆಗೆ
ಮಾರುಹೋಗಿದೆ. ಹಾಗೂ ವಿವಿಧ ಕೆರೆ ತುಂಬುವ ಏತ ನೀರಾವರಿ
ಯೋಜನೆ ಜಾರಿ ಆಗುತ್ತಿದ್ದು, ಮುಕ್ತಾಯದ ಹಂತದಲ್ಲಿದೆ.
ಜಗಳೂರಿನ 80 ಎಕರೆಗೆ ನೀರು ಬಂದರೆ ತಾಲ್ಲೂಕಿನಾದ್ಯಂತ
ಅಡಿಕೆ ಬೆಳೆ ಬೆಳೆಯಲು ಹೆಚ್ಚಾಗುತ್ತಾರೆ. ಈ ನಿಟ್ಟಿನಲ್ಲಿ ದಾವಣಗೆರೆ
ಅಡಿಕೆ ನಾಡು ಎಂದು ಪ್ರಸಿದ್ದಿಗೊಳ್ಳುತ್ತದೆ. ಆದರಿಂದ ಸಿರಿಧಾನ್ಯ
ಬೆಳೆಯಲು ಹೆಚ್ಚು ಪ್ರೋತ್ಸಾಹ ನೀಡಬೇಕು ಎಂದರು.
ಜಿಲ್ಲೆಯಲ್ಲಿ 18 ರಿಂದ 20 ರಫ್ತುದಾರರು ಅಮೆರಿಕ,
ಯೂರೋಪ್, ದಕ್ಷಿಣ ಆಫ್ರಿಕಾ, ದುಬೈ ಸೇರಿದಂತೆ ಎಲ್ಲಾ
ರಾಷ್ಟ್ರಗಳಿಗೂ ಉತ್ಪನ್ನಗಳು ರಫ್ತಾಗುತ್ತಿದೆ.
ಕಂಟೇನರ್‍ಗಳು ಏಕಸ್ವಾಮ್ಯ ಪದ್ಧತಿ ಹೊಂದಿದ್ದು,
ಕೊರೊನ ಸಂದರ್ಭದಲ್ಲಿ ಅವರು ಹೇಳಿದ್ದೆ ರೇಟು ಮಾಡಿದ್ದೇ
ಆಟ ಎಂಬುವಂತಾಗಿದೆ ಎಂದು ಹರಿಹರ ಹಾಗೂ ದಾವಣಗೆರೆ
ಇಂಡಸ್ಟ್ರೀಯಲ್ ಏರಿಯಾ ರಫ್ತುದಾರರು ತಮ್ಮ ಅಳಲನ್ನು
ತೋಡಿಕೊಳ್ಳುತ್ತಿದ್ದು, ವಾಣಿಜ್ಯ ಮತ್ತು ಕೈಗಾರಿಕೆ
ಇಲಾಖೆಯಿಂದ ಈ ಕುರಿತು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ.
ಇದನ್ನು ಶೀಘ್ರವಾಗಿ ಪರಿಹರಿಸಬೇಕು ಎಂದು ಮನವಿ ಮಾಡಿದರು.
ರಫ್ತುದಾರರಿಗೆ ಹಾಗೂ ಕೈಗಾರಿಕ ಚಟುವಟಿಕೆಗಳಿಗೆ
ಹೊಂದಣಿಕೆಯಾಗುವಂತಹ ಜಿಲ್ಲೆಯಾಗಿದ್ದು, ಅನೇಕ
ಸೌಲಭ್ಯಗಳನ್ನು ಹೊಂದಿದೆ. ತುಮಕೂರು, ಚಿತ್ರದುರ್ಗ,
ದಾವಣಗೆರೆಯವರೆಗೆ ಪಿ.ಬಿ.ರಸ್ತೆಗೆ ಸಮನಾಂತರವಾಗಿ ರೈಲ್ವೆ
ಲೈನ್ ಆಗುತ್ತಿದ್ದು, ಮುಗಿಯುವ ಹಂತಕ್ಕೆ ತಲುಪಿದೆ. ಇನ್ನೂ
ಭೂಮಿಯನ್ನು ಹಸ್ತಾಂತರ ಮಾಡುವುದು ಬಾಕಿ ಉಳಿದಿದೆ.
ಕಮ್ಯೂನಿಕೇಷನ್ ನೆಟ್‍ವರ್ಕ್ ಇದೆ. ಕೈಗಾರಿಕೋದ್ಯಮಿಗಳಿಗೆ
ಜಮೀನು ಹುಡುಕಿ ಸಿದ್ಧತೆ ಮಾಡಿಕೊಂಡಿದ್ದೇವೆ. ಹೀಗೆ ಎಲ್ಲಾ
ಸಿದ್ಧತೆ ಮಾಡಿಕೊಂಡಿದ್ದು ಸರ್ಕಾರದ ಮಟ್ಟದಲ್ಲಿ
ಪ್ರಯತ್ನಿಸಿದರೆ ಹಾಕಿಕೊಂಡ ಎಲ್ಲಾ ಯೋಜನೆಗಳನ್ನು
ಶೀಘ್ರವಾಗಿ ಮುಗಿಸಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ
ಎಸ್.ಎ.ರವೀಂದ್ರನಾಥ್ ಮಾತನಾಡಿ, ಜಿಲ್ಲೆಯಿಂದ ರಫ್ತು
ಆಗುತ್ತಿರುವ ಉತ್ಪನ್ನಗಳು ಮೊಸ ಆಗದಂತೆ
ನೋಡಿಕೊಳ್ಳುವುದು ಹಾಗೂ ಅವುಗಳನ್ನು ಸಂರಕ್ಷಣೆ
ಮಾಡುವುದು ಮೇಲಾಧಿಕಾರಿಗಳ ಕರ್ತವ್ಯವಾಗಿದ್ದು, ಮೋಜಿ
ಮಸ್ತಿ ಮಾಡಿಕೊಂಡು ಕಾಲಹರಣ ಮಾಡದೇ ಉತ್ಪನ್ನಗಳ
ಕುರಿತು ಹೆಚ್ಚಿನ ಗಮನಹರಿಸಬೇಕು. ಕಾರ್ಮಿಕ ಕಚೇರಿ ಬಂದ
ನಂತರ ಕಾಟನ್ ಮಿಲ್, ಶೇಂಗಾ ಎಣ್ಣೆ ಮಿಲ್ ಗಳ 50 ವರ್ಷಗಳ
ದಾಖಲೆಗಳು ದಿವಾಳಿಯಾಗಿದ್ದು, ಹೂಡಿಕೆ ಮಾಡಲು ಯಾರು
ಮುಂದೆ ಬರುತ್ತಿಲ್ಲ. ರಫ್ತು ರಂಗದಲ್ಲಿ ಜಿಲ್ಲೆಗೆ ವಿಫುಲ
ಅವಕಾಶಗಳಿದ್ದು ಅವುಗಳನ್ನು ಸೃಜನಾತ್ಮಕವಾಗಿ
ಉಪಯೋಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ
ಹೆಚ್.ಎಸ್.ಜಯಪ್ರಕಾಶ್ ನಾರಾಯಣ ಅವರು ಪ್ರಾಸ್ತಾವಿಕವಾಗಿ
ಮಾತನಾಡಿದರು. ಹಾಗೂ ಸರಕು ರಫ್ತುದಾರರಿಗೆ
ಎದುರಾಗುವ ಸಮಸ್ಯೆ, ಸವಾಲು, ಬದಲಾವಣೆ, ಕೇಂದ್ರ ಮತ್ತು
ರಾಜ್ಯ ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಕುರಿತು ಜಿಲ್ಲಾ
ಕೈಗಾರಿಕೋದ್ಯಮಿಗಳಿಗೆ ತಜ್ಞರು ಮಾಹಿತಿ ನೀಡಿದರು.
ಈ ವೇಳೆ ರಫ್ತು ಕೈಗಾರಿಕೋದ್ಯಮಿಗಳಾದ
ಎಂ.ಆರ್.ಸತ್ಯನಾರಾಯಣ, ಜಿ.ಗಿರೀಶ್, ಕರಿಬಸಪ್ಪ, ಪ್ರಕಾಶ್ ಅವರನ್ನು
ಸನ್ಮಾನಿಸಿ ಗೌರವಿಸಲಾಯಿತು. ಹಾಗೂ ಜಿಲ್ಲಾ ರಫ್ತು ಕೈಪಿಡಿ
ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್,
ಮಹಾನಗರ ಪಾಲಿಕೆ ಮಹಾಪೌರರಾದ ಎಸ್.ಟಿ.ವೀರೇಶ್, ದಾವಣಗೆರೆ-
ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ
ದೇವರಮನೆ ಶಿವಕುಮಾರ್, ಜನರಲ್ ಆಫ್ ಫಾರೀನ್ ಟ್ರೇಡ್
ಬೆಂಗಳೂರು ಉಪಮಹಾನಿರ್ದೇಶಕ ಅಕ್ಷಯ್.ಎಸ್.ಸಿ, ಜವಳಿ ಪಾರ್ಕ್
ಅಧ್ಯಕ್ಷ ವೃಷಬೇಂದ್ರಪ್ಪ ಸೇರಿದಂತೆ ಕೈಗಾರಿಕೆ ಸಂಘ, ಸ್ವ-
ಸಹಾಯ ಸಂಘದ ಪದಾಧಿಕಾರಿಗಳು, ಎನ್.ಜಿ.ಓ ಗಳು
ಪಾಲ್ಗೊಂಡಿದ್ದರು.