ಹೊನ್ನಾಳಿ ತಾಲ್ಲೂಕಿನ ಕುಂದೂರು ಹಾಗೂ ಸುರಹೊನ್ನೆ
ಗ್ರಾಮಗಳಲ್ಲಿ ಅ. 16 ರಂದು ಗ್ರಾಮವಾಸ್ತವ್ಯ ಕಾರ್ಯಕ್ರಮ
ಆಯೋಜಿಸಲಾಗಿದ್ದು, ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು
ಹಾಗೂ ಕಂದಾಯ ಸಚಿವರು ಆಗಮಿಸಲಿದ್ದಾರೆ. ಹೀಗಾಗಿ ಅವಳಿ
ತಾಲ್ಲೂಕುಗಳಿಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳಿಂದ ವಿವಿಧ
ಯೋಜನೆಗಳಡಿ ಫಲಾನುಭವಿಗಳಿಗೆ ನೀಡಲಾಗುವ
ಸವಲತ್ತುಗಳ ವಿತರಣೆ, ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ
ಸೇರಿದಂತೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಅಧಿಕಾರಿಗಳಿಗೆ ಸೂಚನೆ
ನೀಡಿದರು.
ಅವಳಿ ತಾಲ್ಲೂಕುಗಳಲ್ಲಿ ಅ. 16 ರಂದು ನಡೆಸಲಾಗುವ ಗ್ರಾಮ
ವಾಸ್ತವ್ಯ ಕಾರ್ಯಕ್ರಮದ ಸಿದ್ಧತೆ ಕುರಿತಂತೆ ಜಿಲ್ಲಾಧಿಕಾರಿಗಳ
ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಪೂರ್ವಭಾವಿ
ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಜಿಲ್ಲಾಧಿಕಾರಿಗಳ ನಡೆ,
ಹಳ್ಳಿಯ ಕಡೆ, ಗ್ರಾಮ ವಾಸ್ತವ್ಯ ಕಾರ್ಯಕ್ರಮ ಈ ಹಿಂದೆಯೇ
ಆರಂಭಿಸಲಾಗಿತ್ತು. ಕೋವಿಡ್ ಕಾರಣದಿಂದಾಗಿ ಸ್ಥಗಿತಗೊಳಿಸಲಾಗಿತ್ತು.
ಇದೀಗ ಈ ಕಾರ್ಯಕ್ರಮವನ್ನು ಪುನರಾರಂಭಿಸಿದ್ದು, ಅ. 16 ರಂದು
ಹೊನ್ನಾಳಿ ತಾಲ್ಲೂಕಿನ ಕುಂದೂರು ಗ್ರಾಮದಲ್ಲಿ ಬೆಳಿಗ್ಗೆ
ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಮಧ್ಯಾಹ್ನದ
ನಂತರ ನ್ಯಾಮತಿ ತಾಲ್ಲೂಕಿನ ಸುರಹೊನ್ನೆ ಗ್ರಾಮದಲ್ಲಿ
ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮಕ್ಕೆ
ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಹಾಗೂ ಕಂದಾಯ
ಸಚಿವರಾದ ಆರ್. ಅಶೋಕ್ ಅವರು ಆಗಮಿಸಲಿದ್ದಾರೆ. ಹೀಗಾಗಿ
ಕಾರ್ಯಕ್ರಮ ಅಚ್ಚುಕಟ್ಟಾಗಿ ಜರುಗಬೇಕು. ಈಗಾಗಲೆ ಅ. 06
ರಂದು ಎರಡೂ ಗ್ರಾಮಗಳಿಗೆ ಸಿಇಒ, ಉಪವಿಭಾಗಾಧಿಕಾರಿ, ಎಸ್‍ಪಿ,
ತಹಸಿಲ್ದಾರ್ ಸೇರಿದಂತೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ
ಕಾರ್ಯಕ್ರಮ ಏರ್ಪಡಿಸಲಾಗುವ ಸ್ಥಳ ಮತ್ತಿತರ
ವ್ಯವಸ್ಥೆಯನ್ನು ಪರಿಶೀಲಿಸಲಾಗಿದೆ. ಸರ್ಕಾರದ ವಿವಿಧ ಇಲಾಖೆಗಳು,
ಅದರಲ್ಲೂ ಪ್ರಮುಖವಾಗಿ ಕೃಷಿ, ತೋಟಗಾರಿಕೆ, ಕಾರ್ಮಿಕ, ಆರೋಗ್ಯ,
ಆಹಾರ ಇಲಾಖೆಗಳೂ ಸೇರಿದಂತೆ ವಿವಿಧ ಅಭಿವೃದ್ಧಿ ನಿಗಮಗಳು
ಫಲಾನುಭವಿಗಳಿಗೆ ವಿವಿಧ ಯೋಜನೆಗಳಡಿ ನೀಡಲಾಗುವ
ಸವಲತ್ತುಗಳು, ಸೌಲಭ್ಯ, ಸಾಲ ಮಂಜೂರಾತಿ ಸೇರಿದಂತೆ ವಿವಿಧ
ಸೌಲಭ್ಯ ವಿತರಣೆಗಾಗಿ ಫಲಾನುಭವಿಗಳ ಪಟ್ಟಿಯನ್ನು ಸಿದ್ಧ
ಮಾಡಿಟ್ಟುಕೊಳ್ಳಬೇಕು. ಅಲ್ಲದೆ ಆಯಾ ತಾಲ್ಲೂಕು ವ್ಯಾಪ್ತಿಯಲ್ಲಿ
ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ
ನೆರವೇರಿಸುವುದಿದ್ದಲ್ಲಿ, ಇದಕ್ಕೆ ಸಂಬಂಧಿಸಿದ ವಿವರವಾದ
ವರದಿಯನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಎರಡು ದಿನಗಳ
ಒಳಗಾಗಿ ಸಲ್ಲಿಸಬೇಕು. ಆಯಾ ಇಲಾಖೆಯ ಕಾಮಗಾರಿಗಳ ಉದ್ಘಾಟನೆ,
ಶಂಕುಸ್ಥಾಪನೆ ಸಂಬಂಧ ಆಯಾ ಸಚಿವರನ್ನು ಕೂಡ
ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು. ಕಾರ್ಯಕ್ರಮದ
ದಿನದಂದು ಫಲಾನುಭವಿಗಳನ್ನು ಕಾರ್ಯಕ್ರಮದ ಸ್ಥಳಕ್ಕೆ
ಕರೆತಂದು, ವಾಪಸ್ ಕರೆದುಕೊಂಡು ಹೋಗುವ ಜವಾಬ್ದಾರಿ ಆಯಾ
ಇಲಾಖೆ ಅಧಿಕಾರಿಗಳದ್ದಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಅಗತ್ಯ
ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಎಂದು ಜಿಲ್ಲಾಧಿಕಾರಿಗಳು
ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೋವಿಡ್‍ನಿಂದ ಮೃತಪಟ್ಟ ಕುಟುಂಬಗಳಿಗೆ ಪರಿಹಾರ : ಕೋವಿಡ್
ಸೋಂಕಿನಿಂದಾಗಿ ಮೃತಪಟ್ಟವರಿಗೆ ರಾಜ್ಯ ಸರ್ಕಾರದಿಂದ 01 ಲಕ್ಷ
ಮತ್ತು ಕೇಂದ್ರ ದಿಂದ 50 ಸಾವಿರ ಸೇರಿದಂತೆ 1.5 ಲಕ್ಷ ರೂ.
ಪರಿಹಾರವನ್ನು ಮೃತ ಕುಟುಂಬಗಳಿಗೆ ನೀಡುವ ಯೋಜನೆ ಜಾರಿಗೆ
ಬಂದಿದ್ದು, ಕುಂದೂರು ಗ್ರಾಮದಲ್ಲಿ 05 ಹಾಗೂ ಸುರಹೊನ್ನೆ
ಗ್ರಾಮದಲ್ಲಿ 15 ಜನ ಕೋವಿಡ್‍ನಿಂದ ಮೃತಪಟ್ಟಿರುವ ಬಗ್ಗೆ ಮಾಹಿತಿ
ಇದೆ. ಹೀಗಾಗಿ ಈ ಎಲ್ಲ 20 ಕುಟುಂಬಗಳಿಗೂ ಸರ್ಕಾರದ ಪರಿಹಾರ
ಮೊತ್ತವನ್ನು ಮುಖ್ಯಮಂತ್ರಿಗಳಿಂದಲೇ ವಿತರಣೆ ಆಗುವ ರೀತಿ
ಎಲ್ಲ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು
ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅ. 09 ರಿಂದಲೇ ಆರೋಗ್ಯ ತಪಾಸಣೆ ಶಿಬಿರ : ಆರೋಗ್ಯ ಇಲಾಖೆಯಿಂದ
ಕುಂದೂರು ಮತ್ತು ಸುರಹೊನ್ನೆ ಗ್ರಾಮಗಳಲ್ಲಿ ಉಚಿತ
ಆರೋಗ್ಯ ತಪಾಸಣೆ ಶಿಬಿರವನ್ನು ಅ. 09 ರಿಂದಲೇ
ಪ್ರಾರಂಭಿಸಬೇಕು, ಇದಕ್ಕೆ ಅಗತ್ಯ ವೈದ್ಯರು, ಸಿಬ್ಬಂದಿಗಳನ್ನು
ಶಿಬಿರಕ್ಕೆ ನಿಯೋಜಿಸಿ, ಶಿಬಿರದಲ್ಲಿ ಸಾರ್ವಜನಿಕರ ಆರೋಗ್ಯ ತಪಾಸಣೆ
ಕಾರ್ಯವನ್ನು ಅ. 16 ರವರೆಗೂ ಕೈಗೊಳ್ಳಬೇಕು. ಎರಡೂ
ಗ್ರಾಮಗಳಲ್ಲಿ ಶೇ. 100 ರಷ್ಟು ಕೋವಿಡ್ ಲಸಿಕೆ ಕಾರ್ಯ
ಪೂರ್ಣಗೊಳ್ಳಬೇಕು, ಅಲ್ಲದೆ ಎಲ್ಲ ಅರ್ಹ ಫಲಾನುಭವಿಗಳಿಗೂ
ಎಬಿಎಆರ್‍ಕೆ ಆರೋಗ್ಯ ಕಾರ್ಡ್ ಸಿದ್ಧಪಡಿಸಿ, ವಿತರಿಸುವ ಕಾರ್ಯ ಆಗಬೇಕು
ಎಂದು ಜಿಲ್ಲಾಧಿಕಾರಿಗಳು ಡಿಹೆಚ್‍ಒ ಡಾ. ನಾಗರಾಜ್ ಅವರಿಗೆ ಸೂಚನೆ
ನೀಡಿದರು.
ಅಮೃತ ಗ್ರಾ.ಪಂ. ಯೋಜನೆಗೆ ಚಾಲನೆ : ಮುಖ್ಯಮಂತ್ರಿಗಳು ಅ.
16 ರಂದು ಜಿಲ್ಲೆಗೆ ಆಗಮಿಸುವುದರಿಂದ ಹೊನ್ನಾಳಿ ಮತ್ತು ನ್ಯಾಮತಿ
ತಾಲ್ಲೂಕು ವ್ಯಾಪ್ತಿಯಲ್ಲಿ ಅಮೃತ ಗ್ರಾಮಪಂಚಾಯತ್ ಯೋಜನೆಗೆ
ಆಯ್ಕೆಯಾಗಿರುವ ಗ್ರಾಮಗಳಲ್ಲಿ ಯೋಜನೆಗೆ ಚಾಲನೆ ನೀಡುವ
ಕಾರ್ಯ ಹಾಗೂ ಘನತ್ಯಾಜ್ಯ ವಿಲೇವಾರಿ ವಾಹನಗಳನ್ನು ಉದ್ಘಾಟಿಸುವ
ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಜಿ.ಪಂ. ಮುಖ್ಯ
ಕಾರ್ಯನಿರ್ವಾಹಕ ಅಧಿಕಾರಿ ಡಾ. ವಿಜಯಮಹಾಂತೇಶ್ ಹೇಳಿದರು.
ವಸ್ತುಪ್ರದರ್ಶನ ಮಳಿಗೆ : ಗ್ರಾಮ ವಾಸ್ತವ್ಯ ಸಂದರ್ಭದಲ್ಲಿ ವಿವಿಧ
ಇಲಾಖೆಗಳು ತಮ್ಮ ಇಲಾಖೆ ವ್ಯಾಪ್ತಿಯಲ್ಲಿ ಇರುವ
ಯೋಜನೆಗಳನ್ನು ಸಾರ್ವಜನಿಕರಿಗೆ ತಿಳಿಸುವಂತಾಗಲು
ಕಾರ್ಯಕ್ರಮ ಸ್ಥಳದಲ್ಲಿ ವಸ್ತುಪ್ರದರ್ಶನ ಮಳಿಗೆ ತೆರೆದು,
ಸೂಕ್ತ ಪ್ರಚಾರ ಕಾರ್ಯ ಹಾಗೂ ಜನಜಾಗೃತಿ ಕಾರ್ಯಕ್ರಮ
ಆಯೋಜಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಸಭೆಯಲ್ಲಿ ಜಿ.ಪಂ. ಸಿಇಒ ಡಾ. ವಿಜಯಮಹಾಂತೇಶ್ ದಾನಮ್ಮನವರ್,
ಎಸ್‍ಪಿ ಸಿ.ಬಿ. ರಿಷ್ಯಂತ್, ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ,
ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್ ಸೇರಿದಂತೆ ವಿವಿಧ
ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಹೊನ್ನಾಳಿ ಮತ್ತು
ನ್ಯಾಮತಿ ತಾಲ್ಲೂಕುಗಳ ತಹಸಿಲ್ದಾರರು, ತಾ.ಪಂ. ಇಒಗಳು
ಭಾಗವಹಿಸಿದ್ದರು.