ಸಮಾಜದಲ್ಲಿ ಪಿಡುಗಾಗಿರುವ ಬಾಲ್ಯ ವಿವಾಹ ಹಾಗೂ ಬಾಲ ಕಾರ್ಮಿಕ
ಪ್ರಕರಣಗಳನ್ನು ತಡೆಗಟ್ಟುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ
ಮಹತ್ವದ್ದಾಗಿದೆ ಎಂದು ಬಾಲ ನ್ಯಾಯಮಂಡಳಿ ಅಧ್ಯಕ್ಷರು ಹಾಗೂ
ಎರಡನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ನಿವೇದಿತಾ ಟಿ.ಎಂ.
ಅವರು ಹೇಳಿದರು.
75 ನೇ ಸ್ವಾತಂತ್ರದ ಅಮೃತ ಮಹೋತ್ಸವದ ಅಂಗವಾಗಿ (ಆಜಾದಿ
ಕ ಅಮೃತ್ ಮಹೋತ್ಸವ್) ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ,
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ
ರಕ್ಷಣಾ ಘಟಕ ಹಾಗೂ ಸಖಿ ಒನ್ ಸ್ಟಾಪ್ ಸೆಂಟರ್, ವತಿಯಿಂದ ಮಹಿಳಾ
ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರ
ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ ಬಾಲ್ಯವಿವಾಹ ನಿಷೇಧ ಕಾಯ್ದೆ
ಮತ್ತು ಬಾಲಕಾರ್ಮಿಕ ನಿಷೇಧ ಕಾಯ್ದೆ, ಕುರಿತು ಕಾನೂನು ಅರಿವು
ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಸಂಬಂಧಿಸಿದಂತೆ ಪೋಕ್ಸೋ,
ಬಾಲ್ಯ ವಿವಾಹ ಹಾಗೂ ಬಾಲಕಾರ್ಮಿಕ ಪ್ರಕರಣಗಳು ಹೆಚ್ಚು ಹೆಚ್ಚು
ವರದಿಯಾಗುತ್ತಿವೆ. ಇವುಗಳನ್ನು ತಡೆಗಟ್ಟುವುದು
ಅಗತ್ಯವಾಗಿದ್ದು, ಇದರಲ್ಲಿ ಶಿಕ್ಷಕರ ಪಾತ್ರ ತುಂಬಾ
ಪ್ರಮುಖವಾಗಿರುತ್ತದೆ. ಹೀಗಾಗಿ ಶಿಕ್ಷಕರು ಇಂತಹ
ಪ್ರಕರಣಗಳನ್ನು ತಡೆಯುವಲ್ಲಿ ಹೆಚ್ಚಿನ ಗಮನ ಹರಿಸಬೇಕು,
ಯಾವುದೇ ಮಾಹಿತಿ ದೊರೆತ ಕೂಡಲೆ, ಸಂಬಂಧಪಟ್ಟ
ಅಧಿಕಾರಿಗಳಿಗೆ ಮಾಹಿತಿ ನೀಡುವ ನಿಟ್ಟಿನಲ್ಲಿ
ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಿವಿಲ್ ನ್ಯಾಯಾಧೀಶರಾದ
ಪ್ರವೀಣ್ನಾಯಕ್ ಮಾತನಾಡಿ, ಬಾಲ್ಯವಿವಾಹಗಳು ಪುರಾತನ
ಕಾಲದಿಂದಲೂ ನಡೆಯುತ್ತಿದ್ದು, ಅಂತಹ ಬಾಲ್ಯವಿವಾಹಗಳಿಂದ ಅನೇಕ
ತೊಂದರೆಗಳು ಕಂಡುಬರುತ್ತಿವೆ. ಮೊದಲಿನಿಂದಲೂ
ಇಂತಹದ್ದನ್ನು ಅನೇಕರು ವಿರೋಧಿಸುತ್ತಲೇ ಬಂದಿರುತ್ತಾರೆ.
ಅದರೂ ಕೂಡ ಬಾಲ್ಯವಿವಾಹಗಳನ್ನು ತಡೆಯುವಲ್ಲಿ
ಪ್ರಯತ್ನಗಳು ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಂಡಿಲ್ಲ. ಹೀಗಾಗಿ
ಕೇಂದ್ರ ಸರ್ಕಾರವು 2006 ರಲ್ಲಿ ಬಾಲ್ಯವಿವಾಹ ನಿಷೇಧ ಕಾಯ್ದೆ ಜಾರಿಗೆ
ತಂದು, ಕಾಯ್ದೆಯಲ್ಲಿ ಬಾಲ್ಯವಿವಾಹ ಮಾಡುವವರ ವಿರುದ್ದ ಕಠಿಣ
ಕ್ರಮ ತೆಗೆದುಕೊಳ್ಳುವಂತೆ ಉಲ್ಲೇಖಿಸಲಾಗಿದೆ. ಈ ಕಾನೂನನ್ನು
ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕಾದಲ್ಲಿ ಬಾಲ್ಯವಿವಾಹ
ಪ್ರಕರಣಗಳ ಮಾಹಿತಿ ಸರಿಯಾದ ಸಮಯದಲ್ಲಿ ಸಂಬಂಧಪಟ್ಟ
ಅಧಿಕಾರಿಗಳಿಗೆ ತಿಳಿದಲ್ಲಿ ಮಾತ್ರ ಸಾಕಾರವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
ಇಲಾಖೆ ಉಪನಿರ್ದೇಶಕ ಕೆ.ಹೆಚ್.ವಿಜಯಕುಮಾರ್, ಜಿಲ್ಲಾ ವಕೀಲರ
ಸಂಘದ ಅಧ್ಯಕ್ಷ ಡಿ.ಪಿ.ಬಸವರಾಜು, ಸಾಂಸ್ಥಿಕ ಮಕ್ಕಳ ರಕ್ಷಣಾಧಿಕಾರಿ
ಕಿರಣ್ಕುಮಾರ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ಆರ್.ಎಲ್. ಕಾನೂನು ಕಾಲೇಜಿನ
ಸಹಾಯಕ ಪ್ರಾಧ್ಯಾಪಕ ಬಸವನಗೌಡ ಪಾಟೀಲ್ ಬಾಲ್ಯ ವಿವಾಹ ನಿಷೇಧ
ಕಾಯ್ದೆ ಕುರಿತು ಹಾಗೂ ವಿದ್ಯಾಧರ ವೇದವರ್ಮ ಅವರು
ಬಾಲಕಾರ್ಮಿಕ ನಿಷೇಧ ಕಾಯ್ದೆ ಕುರಿತು ವಿಶೇಷ ಉಪನ್ಯಾಸ ನೀಡಿದರು.