೧. ನವರಾತ್ರಿಯ ವ್ರತ ಮತ್ತು ಪೂಜೆ

ನವರಾತ್ರಿಯ ಆರಂಭದ ತಿಥಿಯ ಕುರಿತು ದೇವಿಪುರಾಣದಲ್ಲಿ ಮುಂದಿನ ಸಂದರ್ಭವನ್ನು ಕೊಡಲಾಗಿದೆ,

ಅಮಾಯುಕ್ತಾ ನ ಕರ್ತವ್ಯಾ ಪ್ರತಿಪತ್ಪೂಜನೆ ಮಮ |
ಮುಹೂರ್ತಮಾತ್ರಾ ಕರ್ತವ್ಯಾ ದ್ವವಿತೀಯಾದಿಗುಣಾನ್ವಿತಾ ||

ಅರ್ಥ : ಅಮವಾಸ್ಯೆಯನ್ನೊಳಗೊಂಡ ಪಾಡ್ಯದಂದು ನವರಾತ್ರಿಯ ವ್ರತ ಮತ್ತು ಪೂಜೆಯನ್ನು ಮಾಡಬಾರದು. ಇಂತಹ ಸಮಯದಲ್ಲಿ ಪಾಡ್ಯಯುಕ್ತ ಬಿದಿಗೆಯಂದು ವ್ರತವನ್ನು ಪ್ರಾರಂಭಿಸಿ ಪೂಜೆಯನ್ನು ಮಾಡುವುದು ಉತ್ತಮ.

೨. ಕಲಶ ಸ್ಥಾಪನೆ

ಹಸ್ತ ನಕ್ಷತ್ರಯುಕ್ತ ಪಾಡ್ಯದಂದು ಕಲಶವನ್ನು ಸ್ಥಾಪನೆ ಮಾಡುವುದು ಉತ್ತಮ.

೩. ಹವನ

ತಮ್ಮ ಕುಲದ ಆಚರಣೆಗೆ ಆನುಸಾರ ಅಷ್ಟಮಿ ಅಥವಾ ನವಮಿ ತಿಥಿಗೆ ಹವನವನ್ನು ಮಾಡಬೇಕು. ಅನಂತರ ಅನ್ನಗ್ರಹಣ (ಭೋಜನ) ಮಾಡಬೇಕು.

೪. ವಿಸರ್ಜನೆ

ಸಂಪೂರ್ಣ ಪೂಜಾಸಾಮಗ್ರಿಗಳ, ಹಾಗೆಯೇ ದೇವಿಯ ಪ್ರತಿಮೆಯನ್ನು ಅದೇ ದಿನ ವಿಸರ್ಜನೆ ಮಾಡಬೇಕು.

೫. ದೇವಿಯ ಪೂಜೆ

ದೇವಿಯ ಪೂಜೆಯಲ್ಲಿ ಅರಿಶಿಣ-ಕುಂಕುಮ, ಬಿಲ್ವಪತ್ರೆ ಮುಂತಾದವುಗಳಿರುವುದು ಉತ್ತಮ. ದೇವಿಯ ಪೂಜೆಯಲ್ಲಿ ತುಳಸಿ ಮತ್ತು ಗರಿಕೆಗಳನ್ನು ಉಪಯೋಗಿಸುವಂತಿಲ್ಲ.

೬. ದೇವಿಯ ಉಪಾಸನೆ

ಕೆಳಗಿನಂತೆ ಯಾವುದಾದರೊಂದು ಪ್ರಕಾರದ ಉಪಾಸನೆಯನ್ನು ಮಾಡಬಹುದು.

ಅ. ಶ್ರೀ ದುರ್ಗಾಸಪ್ತಶತಿಯನ್ನು ಪಠಿಸಬೇಕು.

ಆ. ಪ್ರತಿದಿನ ೧೫ ಬಾರಿ ಶ್ರೀಸೂಕ್ತದ ಪಠಣವನ್ನು ಮಾಡಬೇಕು. ಅದಕ್ಕಿಂತ ಮೊದಲು ಸೂರ್ಯಮಂತ್ರದ ಒಂದು ಮಾಲೆ ಜಪವನ್ನು ಮಾಡಬೇಕು.

೭. ಶ್ರೀಸೂಕ್ತದ ತಾಂತ್ರಿಕ ಉಪಾಸನೆ

ಈ ಉಪಾಸನೆಯನ್ನು ಪ್ರತಿದಿನ ಮುಂಜಾನೆ ೨.೩೦ ಕ್ಕೆ ಪ್ರಾರಂಭ ಮಾಡಬೇಕು.

ಅ. ಮೊದಲು ವಿನಿಯೋಗ, ನ್ಯಾಸ ಮುಂತಾದವುಗಳನ್ನು ಮಾಡಬೇಕು. (ಕೆಲವೊಂದು ವಿಧಿಗಳನ್ನು ಮಾಡುವ ಮೊದಲು ಮಂತ್ರ ಸಿದ್ಧವಾಗಲು ಬೇರೆ ಮಂತ್ರಜಪ ಅಥವಾ ಇತರ ಕೆಲವು ಕೃತಿಗಳನ್ನು ಮಾಡಲು ಹೇಳಲಾಗುತ್ತದೆ. ಅದಕ್ಕೆ ವಿನಿಯೋಗ ಎನ್ನುತ್ತಾರೆ.)

ಆ. ಅನಂತರ ಶ್ರೀಯಂತ್ರದ ಮೇಲೆ ಶ್ರೀಲಕ್ಷ್ಮಿಯ (ಕಮಲದಲ್ಲಿ ಕುಳಿತ / ನಿಂತಿರುವ) ಮೂರ್ತಿಯನ್ನು ಇಟ್ಟು ಶ್ರೀಸೂಕ್ತವನ್ನು ೨೧ ಬಾರಿ ಪಠಿಸಿ ಅಭಿಷೇಕ ಮಾಡಬೇಕು.

ಇ. ಬಳಿಕ ೧೧ ಬಾರಿ ಶ್ರೀಸೂಕ್ತವನ್ನು ಪಠಿಸಿ ತುಪ್ಪ ಮತ್ತು ಗುಗ್ಗುಳಗಳಿಂದ ( ಧೂಪದ ಹಾಗೆ ಇರುವ ವಸ್ತು ) ಹವನವನ್ನು ಮಾಡಬೇಕು. ಇದರಿಂದ ಲಕ್ಷ್ಮೀಮಾತೆಯು ಪ್ರತ್ಯಕ್ಷ ದರ್ಶನ ನೀಡುವಳು. ಅವಳಿಗೆ ಪ್ರತಿನಿತ್ಯವೂ ತಮ್ಮ ಮನೆಯಲ್ಲಿಯೇ ಉಳಿಯಲು ಪ್ರಾರ್ಥನೆ ಮಾಡಬೇಕು.

೮. ಮಂತ್ರಜಪ

೮ ಅ. ಮಂತ್ರಜಪದ ಪದ್ಧತಿ : ಗುರುಗಳು ಯಾವುದೇ ದೇವಿಯ ಮಂತ್ರವನ್ನು ಕೊಟ್ಟಿದ್ದರೂ, ಅದನ್ನು ಪ್ರತಿದಿನ ೧ ಮಾಲೆ ಜಪವನ್ನು ರಕ್ತಚಂದನದ ಮಾಲೆಯಿಂದ ಮಾಡಬೇಕು. ಎರಡು ಮಂತ್ರಜಪಗಳಲ್ಲಿ ಸ್ವಲ್ಪ ಅಂತರವನ್ನು ಇಡಬೇಕು.

೮ ಆ. ಜಪದ ಸಮಯದಲ್ಲಿ ಇಡಬೇಕಾದ ಭಾವ : ಜಪವನ್ನು ಮಾಡುವಾಗ ನಾನೇ ಅವ್ಯಯ ಅವಿನಾಶಿ ಭಗವತಿಯಾಗಿದ್ದೇನೆ ( ಭಗವಂತನೊಂದಿಗೆ ಏಕರೂಪವಾಗಿದ್ದೇನೆ ) , ಎಂಬ ಭಾವವನ್ನು ಇಟ್ಟುಕೊಳ್ಳಬೇಕು. ಎರಡು ಮಂತ್ರಜಪಗಳ ನಡುವಿನ ಅಂತರ ಎಷ್ಟು ಹೆಚ್ಚಿಗೆ ಇಡಲು ಸಾಧ್ಯವಾಗುತ್ತದೆಯೋ, ಅಷ್ಟು ಹೆಚ್ಚಿಗೆ ಇಡಬೇಕು, ಇದರಿಂದ ಭಾವವೃದ್ಧಿಯಾಗುತ್ತದೆ ಮತ್ತು ತಾನು ಸ್ವತಃ ಜಗದಂಬೆಯಾಗಿದ್ದೇನೆ ಎಂಬ ಅನುಭೂತಿ ಬರುತ್ತದೆ. ಶಕ್ತಿ ( ದೇವಿಯ ) -ಉಪಾಸಕರು ( ಆರಾಧನೆ ಮಾಡುವವರು ) ಇದೇರೀತಿ ಉಪಾಸನೆಯನ್ನು ಮಾಡಿ ಅನುಭೂತಿಯನ್ನು ಪಡೆಯುತ್ತಿರುತ್ತಾರೆ; ಆದರೆ ಅವರು ವಿನಿಯೋಗ, ನ್ಯಾಸ, ಮುದ್ರೆ ಮುಂತಾದ ಕಠಿಣ ಕ್ರಿಯೆಗಳನ್ನು ಮೊದಲು ಮಾಡುತ್ತಾರೆ. ಭಗವತಿಯ ಸಾನ್ನಿಧ್ಯವನ್ನು ಪ್ರಾಪ್ತ ಮಾಡಿಕೊಂಡು ಸಂಪೂರ್ಣ ದೇಹವನ್ನು ಮಂತ್ರಮಯಗೊಳಿಸಿ ಅವರು ಈ ಉಪಾಸನೆಯನ್ನು ಮಾಡುತ್ತಾರೆ

೯. ಮಂತ್ರದೀಕ್ಷೆ

ಅ. ನವಾರ್ಣ ಮಂತ್ರದ (”ಓಂ ಐo ಹ್ರೀಂ ಕ್ಲೀಂ ಚಾಮುಂಡಾಯೈ ವಿಚ್ಚೇ|”) ದೀಕ್ಷೆಯನ್ನು ಪಡೆದಿದ್ದರೆ, ಅದನ್ನು ಪ್ರತಿದಿನ ೧ ಸಾವಿರ ಸಲ ಪಠಿಸಬೇಕು.

ಆ. ದೀಕ್ಷೆ ಪಡೆಯದಿರುವವರು, ಮಂತ್ರದ ಉತ್ಕೀಲನ (ಜಾಗೃತಗೊಳಿಸುವ) ಮತ್ತು ಸಂಜೀವನ ಕ್ರಿಯೆಗಳನ್ನು ಮೊದಲು ಮಾಡಿ ನಂತರ ಜಪ ಮಾಡಬೇಕು. ನವರಾತ್ರಿಯಲ್ಲಿ ನವನಾಥ ಪಂಥದವರು ನವನಾಥರ ಉಪಾಸನೆಯನ್ನು ಮಾಡುತ್ತಾರೆ.

(ಹೆಚ್ಚಿನ ಮಾಹಿತಿಗಾಗಿ : ಸನಾತನ ನಿರ್ಮಿತ ಗ್ರಂಥ “ಶಕ್ತಿಯ ಪ್ರಾಸ್ತಾವಿಕ ವಿವೇಚನೆ” ಮತ್ತು “ಶಕ್ತಿಯ ಉಪಾಸನೆ” )

ಸಂಗ್ರಹ
ಶ್ರೀ. ವಿನೋದ ಕಾಮತ,
ವಕ್ತಾರರು, ಸನಾತನ ಸಂಸ್ಥೆ, ಕರ್ನಾಟಕ,
ಸಂಪರ್ಕ : 9342599299

Leave a Reply

Your email address will not be published. Required fields are marked *