ಕೋವಿಡ್ ನಂತಹ ಮಹಾಮಾರಿಯನ್ನು ತಡೆಗಟ್ಟಲು ಲಸಿಕೆ
ನೀಡಿಕೆ ಕಾರ್ಯಕ್ಕೆ ವೇಗ ದೊರೆತಿದ್ದು, ಇನ್ನೆರಡು
ದಿನಗಳಲ್ಲಿ 100 ಕೋಟಿ ಜನರಿಗೆ ಕೋವಿಡ್ ನಿರೋಧಕ ಲಸಿಕೆ
ನೀಡಿಕೆ ಪೂರ್ಣಗೊಳ್ಳಲಿದ್ದು, ವಿಶ್ವದ್ದೇ ಇಷ್ಟೊಂದು ದೊಡ್ಡ
ಪ್ರಮಾಣದಲ್ಲಿ ಲಸಿಕೆ ನೀಡಿರುವ ದೇಶಗಳಲ್ಲಿ ಭಾರತ ಮೊದಲ
ದೇಶ ಆಗಲಿದೆ ಎಂದು ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ
ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದರು.
ನ್ಯಾಮತಿ ಪಟ್ಟಣದ ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜು
ಆವರಣದಲ್ಲಿ ಏರ್ಪಡಿಸಲಾದ ಕೊರೊನಾ ವಾರಿಯರ್ಸ್ ಗಳಿಗೆ
ಸನ್ಮಾನ ಹಾಗೂ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ
ಅವರು ಮಾತನಾಡಿದರು.
ಕೋವಿಡ್ ನಂತಹ ಸಾಂಕ್ರಾಮಿಕ ರೋಗವನ್ನು
ತಡೆಗಟ್ಟಲು ತಮ್ಮ ಜೀವದ ಹಂಗನ್ನು ತೊರೆದು ಅಹರ್ನಿಶಿ
ಶ್ರಮಿಸಿದ ಕೊರೊನಾ ವಾರಿಯರ್ಸ್‍ಗಳಿಗೆ ಸನ್ಮಾನ ಹಾಗೂ
ಅಭಿನಂದನೆ ಸಮಾರಂಭವನ್ನು ದಾವಣಗೆರೆ ಜಿಲ್ಲೆಯಲ್ಲಿ
ಆಯೋಜಿಸಿರುವುದು ನಿಜಕ್ಕೂ ಇದೊಂದು ಅಪರೂಪದ
ಕಾರ್ಯಕ್ರಮವಾಗಿದೆ. ಮುಖ್ಯಮಂತ್ರಿಗಳ ರಾಜಕೀಯ
ಕಾರ್ಯದರ್ಶಿಗಳು ಹಾಗೂ ಹೊನ್ನಾಳಿ ಶಾಸಕ ಎಂ.ಪಿ.
ರೇಣುಕಾಚಾರ್ಯ ಅವರು ಇಂತಹ ಕಾರ್ಯಕ್ರಮ
ಏರ್ಪಡಿಸಿರುವುದು ಶ್ಲಾಘನೀಯ. ಕೋವಿಡ್ ಮೊದಲ ಮತ್ತು
ಎರಡನೆ ಅಲೆಯಲ್ಲಿ ಜನಸಾಮಾನ್ಯರಿಗೆ ಯಾವ ರೀತಿ
ಸ್ಪಂದಿಸಬೇಕು ಎಂಬುದಕ್ಕೆ ರೇಣುಕಾಚಾರ್ಯ ಅವರು ಮಾದರಿ
ಹಾಗೂ ಇತರರಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ಸೋಂಕಿತರಿಗೆ
ಮನೆ ಮಗನಾಗಿ, ಸಹೋದರನಾಗಿ ನಡೆದುಕೊಂಡಿದ್ದಾರೆ.
ದೇಶದಲ್ಲಿ ಇನ್ನೂ ಕೋವಿಡ್ ಸಂಪೂರ್ಣ ಹೋಗಿಲ್ಲ. ದೇಶದಲ್ಲಿ
100 ಕೋಟಿ ಲಸಿಕೆ ನೀಡುವ ಕಾರ್ಯ ಇನ್ನೆರಡು ದಿನಗಳಲ್ಲಿ
ಪೂರ್ಣಗೊಳ್ಳಲಿದ್ದು, ವಿಶ್ವದಲ್ಲೇ ಭಾರತ ದೇಶ ಅತಿ ಹೆಚ್ಚು
ಲಸಿಕೆ ನೀಡಿದ ಮೊದಲ ದೇಶವಾಗಲಿದೆ. ಮಾಜಿ
ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರ
ಅಧಿಕಾರಾವಧಿಯಲ್ಲಿ ಖುದ್ದು ತಾವೇ 2 ಬಾರಿ ಸೋಂಕಿಗೆ
ಒಳಗಾದರೂ, ಆಸ್ಪತ್ರೆಗೆ ದಾಖಲಾದರೂ, ಅಲ್ಲಿಂದಲೇ ಆಡಳಿತ
ನಿರ್ವಹಣೆಯನ್ನು ಮಾಡಿದ್ದರು. ಕೊರೊನಾ ತಡೆಯಲು
ಮುಂಚೂಣಿಯಲ್ಲಿದ್ದ ಆಶಾ ಕಾರ್ಯಕರ್ತೆಯರು,
ನರ್ಸ್‍ಗಳು, ವೈದ್ಯರು ಅಲ್ಲದೆ ಕೋವಿಡ್ ಸಂತ್ರಸ್ತರಿಗೂ
ಮನೋಸ್ಥೈರ್ಯ ತುಂಬಲು ಹಗಲಿರುಳು ಶ್ರಮಿಸಿದರು.
ಅಂತಹವರಿಗೆ ಸೂಪರ್ ಕೊರೊನಾ ವಾರಿಯರ್ ಪ್ರಶಸ್ತಿ

ನೀಡುತ್ತಿರುವುದು ಅತ್ಯಂತ ಸೂಕ್ತವಾಗಿದೆ. ರಾಜ್ಯದಲ್ಲಿ
ಈಗಾಗಲೆ ಶೇ. 79 ರಷ್ಟು ಜನರಿಗೆ ಮೊದಲನೆ ಡೋಸ್ ಹಾಗೂ
ಶೇ. 30 ರಷ್ಟು ಜನರಿಗೆ 2ನೇ ಡೋಸ್ ಲಸಿಕೆ ನೀಡಲಾಗಿದೆ.
ಮೊದಲನೆ ಡೋಸ್ ಲಸಿಕೆ ಪಡೆದವರು, ಸದ್ಯ ಕೊರೊನಾ
ಕಡಿಮೆಯಾಗಿದೆ ಎಂದು ನಿರ್ಲಕ್ಷ್ಯ ತೋರದೆ, ಕಡ್ಡಾಯವಾಗಿ
ಎರಡನೆ ಡೋಸ್ ಲಸಿಕೆ ಪಡೆಯಬೇಕು, ಅಂದಾಗ ಮಾತ್ರ,
ಕೋವಿಡ್‍ನಿಂದ ರಕ್ಷಣೆ ಪಡೆಯಬಹುದು. ಈ ಮೂಲಕ
ರಾಜ್ಯದಲ್ಲಿ ಕೋವಿಡ್ ಅನ್ನು ಸಂಪೂರ್ಣ ನಿರ್ಮೂಲನೆ ಮಾಡಲು
ಎಲ್ಲರೂ ಸಹಕರಿಸಬೇಕು ಎಂದು ಡಾ. ಕೆ. ಸುಧಾಕರ್ ಮನವಿ
ಮಾಡಿದರು.


ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು
ಸೂಪರ್ ಕೊರೊನಾ ವಾರಿಯರ್ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ,
ಕೊರೊನಾ ಇನ್ನೂ ಸಂಪೂರ್ಣವಾಗಿ ಹೋಗಿಲ್ಲ,
ಪ್ರಧಾನಮಂತ್ರಿಗಳ ಸೂಚನೆಯಂತೆ, ಇನ್ನೂ ನಾವು
ಎಚ್ಚರ ವಹಿಸುವುದು ಅಗತ್ಯವಾಗಿದೆ. ಕೊರೊನಾ
ನಿಯಂತ್ರಣದಲ್ಲಿ ಶ್ರಮಿಸಿದ ಕೊರೊನಾ ವಾರಿಯರ್ಸ್‍ಗಳ
ಪ್ರಶಂಸೆಗೆ ಶಬ್ದಗಳು ಸಾಲುವುದಿಲ್ಲ. ವೈದ್ಯಕೀಯ
ಜಗತ್ತಿಗೆ ಸವಾಲಾದ ಕೋವಿಡ್ ನಿರ್ವಹಣೆಯಲ್ಲಿ ಅವರು ಜೀವ
ಪಣಕ್ಕಿಟ್ಟು ಹೋರಾಡಿದ್ದರು. ಪ್ರಸ್ತುತ ನಾವು ನೆಮ್ಮದಿಯಿಂದ
ಇದ್ದೇವೆ ಎಂದರೆ ಅವರೆಲ್ಲರ ಪರಿಶ್ರಮವೇ ಕಾರಣ. ಕೊರೊನಾ
ನಿಯಂತ್ರಣ ಹಾಗೂ ನಿರ್ವಹಣೆಯಲ್ಲಿ ಎಂ.ಪಿ. ರೇಣುಕಾಚಾರ್ಯ
ಅವರು ಮಾಡಿರುವ ಸೇವೆ ಪ್ರಶಂಸನೀಯವಾಗಿದ್ದು, ಅವರು
ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕುಗಳನ್ನು ಮಾದರಿ
ತಾಲ್ಲೂಕುಗಳನ್ನಾಗಿಸಲು ಶ್ರಮ ವಹಿಸುತ್ತಿದ್ದಾರೆ ಎಂದರು.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ
ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಮಾತನಾಡಿ, ಎಲ್ಲರ
ಸಹಕಾರದಿಂದ ಪ್ರಧಾನಮಂತ್ರಿಗಳು ಹಾಗೂ
ಮುಖ್ಯಮಂತ್ರಿಗಳ ಮಾರ್ಗದರ್ಶನದಲ್ಲಿ ಕೋವಿಡ್
ನಿಯಂತ್ರಣಕ್ಕೆ ಶ್ರಮಿಸುತ್ತಿದ್ದೇವೆ. ಹೊನ್ನಾಳಿ ತಾಲ್ಲೂಕು
ಆಸ್ಪತ್ರೆಯನ್ನು 100 ಹಾಸಿಗೆಗಳಿಂದ 200 ಹಾಸಿಗೆಗೆ ಹಾಗೂ
ನ್ಯಾಮತಿಯ ಆಸ್ಪತ್ರೆಯನ್ನು 30 ರಿಂದ 100 ಹಾಸಿಗೆ
ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವಂತೆ ಆರೋಗ್ಯ
ಸಚಿವರಿಗೆ ಈ ಸಂದರ್ಭದಲ್ಲಿ ಮನವಿ ಮಾಡಿದರು. ಕೋವಿಡ್‍ನಿಂದ
ಮೃತಪಟ್ಟ ಬಡ ಕುಟುಂಬಗಳಿಗೆ ಸರ್ಕಾರದಿಂದ 1.5 ಲಕ್ಷ ರೂ.
ಪರಿಹಾರ ಒದಗಿಸಲಾಗುತ್ತಿದ್ದು, ತಾವೂ ಸಹ ವೈಯಕ್ತಿಕವಾಗಿ 10
ಸಾವಿರ ರೂ. ನೀಡುತ್ತಿರುವುದಾಗಿ ಹೇಳಿದರು.
ಕಾರ್ಯಕ್ರಮದ ಅಂಗವಾಗಿ ಸಂಸದ ಡಾ. ಜಿ.ಎಂ.
ಸಿದ್ದೇಶ್ವರ, ವಿಧಾನಪರಿಷತ್ ಸದಸ್ಯ ಆಯನೂರು
ಮಂಜುನಾಥ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಎಸ್‍ಪಿ ಸಿ.ಬಿ. ರಿಷ್ಯಂತ್
ಅವರು ಕೊರೊನಾ ವಾರಿಯರ್ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಅಲ್ಲದೆ ಜಿ.ಪಂ. ಸಿಇಒ ಡಾ. ವಿಜಯಮಹಾಂತೇಶ್ ಸೇರಿದಂತೆ ವಿವಿಧ
ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ವೈದ್ಯರಿಗೆ ಸನ್ಮಾನಿಸಿ
ಗೌರವಿಸಲಾಯಿತು. ಸಮಾರಂಭದಲ್ಲಿ ನರ್ಸ್‍ಗಳು, ಅಂಗನವಾಡಿ,

ಆಶಾ ಕಾರ್ಯಕರ್ತೆಯರು, ಪೌರಕಾರ್ಮಿಕರು ಸೇರಿದಂತೆ
ಕೊರೊನಾ ನಿಯಂತ್ರಣದಲ್ಲಿ ಪರಿಶ್ರಮವಹಿಸಿ ಕಾರ್ಯ
ನಿರ್ವಹಿಸಿದವರಿಗೆ ಹೂಮಳೆಗೆರೆದು ಗೌರವಿಸಲಾಯಿತು.

Leave a Reply

Your email address will not be published. Required fields are marked *