ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ತನ್ನ ಕುಟುಂಬ
ವರ್ಗಕ್ಕೂ ಅಷ್ಟಾಗಿ ಆದ್ಯತೆ ನೀಡದೆ ತಾನು ದುಡಿವ ಎಲ್ಲವನ್ನೂ
ದೇಶಕ್ಕೆ ನೀಡಿರುವ ರೈತಾಪಿ ವರ್ಗದವರು ಸ್ವಾತಂತ್ರ್ಯ ಬಂದು
ಇಷ್ಟು ವರ್ಷಗಳಾದರೂ ಇಂದು ಕೂಡ ಕತ್ತಲಲ್ಲಿ ಜೀವನ
ಸಾಗಿಸುತ್ತಿದ್ದು, ನೀವು ಎಲ್ಲಿಯವರೆಗೂ ಪ್ರಬುದ್ಧರಾಗಿ ನಿಮ್ಮ
ಹಕ್ಕನ್ನು ನೀವು ಚಲಾಯಿಸುವುದಿಲ್ಲವೋ, ನಿಮಗೆ ಮೋಸ
ಮಾಡುತ್ತಿರುವ ವರ್ಗ ಯಾವುದೆಂದು
ತಿಳಿದುಕೊಳ್ಳುವುದಿಲ್ಲವೋ ಅಲ್ಲಿಯವರೆಗೂ ನಿಮ್ಮ ಪಡಿಫಟಾಲು
ತಪ್ಪುವುದಿಲ್ಲ ಎಂದು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ
ಪ್ರಾಧಿಕಾರದ ಅಧ್ಯಕ್ಷರಾದ ಪವಿತ್ರ ರಾಮಯ್ಯ ಅವರು
ಹೇಳಿದರು.
ದಾವಣಗೆರೆ ತಾಲ್ಲೂಕು ಕಾಶಿಪುರ ಗ್ರಾಮದಲ್ಲಿ ಶ್ರೀ ಕಾಶಿಲಿಂಗಶ್ವೇರ
ನೀರು ಬಳಕೆದಾರರ ಸಹಕಾರ ಸಂಘ ಹಮ್ಮಿಕೊಂಡಿದ್ದ ವಾರ್ಷಿಕ
ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಪ್ರಸ್ತುತ ಅಡಿಕೆ ಬೆಳೆಗೆ ಉತ್ತಮ ಬೆಲೆ ಬಂದಿದ್ದು, ಅದೇ ರೀತಿ
ರೈತರು ಬೆಳೆಯುವ ಆಯಾ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಕ್ಕರೆ
ರಾಜ್ಯ ಸರ್ಕಾರ ಸಾಲ ಮನ್ನಾವಾಗಲಿ ಇನ್ನಿತರ ಯೋಜನೆಗಳಾಗಲಿ
ಘೋಷಿಸುವ ಅವಶ್ಯಕತೆ ಬೀಳುವುದಿಲ್ಲ. ಬದಲಿಗೆ ರೈತರು
ಬೇರೊಬ್ಬರಿಗೆ ಸಾಲ ನೀಡುವ ಮೂಲಕ ಆರ್ಥಿಕ ಸ್ಥಿತಿವಂತರಾಗುತ್ತಾರೆ ಈ
ನಿಟ್ಟಿನಲ್ಲಿ ಸರ್ಕಾರ ಆಲೋಚನೆ ಮಾಡಬೇಕು ಎಂದು ಮನವಿ
ಮಾಡಿದರು.
ಕೊರೊನಾ ಬಂದಂತಹ ಸಂದರ್ಭದಲ್ಲಿ ದೇಶದ ಎಲ್ಲಾ
ರಂಗಗಳು ಬಾಗಿಲು ಮುಚ್ಚಿದವು, ಆದರೆ ರೈತರು ಮಾಡುವ
ಕಾಯಕ ನಿಂತಿರಲಿಲ್ಲ. ಒಂದು ವೇಳೆ ಅವರು ತಮ್ಮ
ಕಾಯಕವನ್ನು ನಿಲ್ಲಿಸಿದ್ದರೆ ಕೊರೊನಾ ಮಾರಕ ರೋಗದಿಂದ
ಸಂಭವಿಸಿದ ಸಾವಿಗಿಂತ ಹಸಿವಿನಿಂದ ಸಂಭವಿಸುವ ಸಾವಿನ ವರದಿ
ಹೆಚ್ಚಾಗುತ್ತಿತ್ತು. ಹಾಗಾಗಿ ಇ ದೇಶದ ಮಾಲೀಕರು ರೈತಾಪಿ
ವರ್ಗದವರಾದ ನಾವಲ್ಲದೆ ಬೇರೆ ಯಾರು ಆಗಲು ಸಾಧ್ಯ ಎಂದು
ಹೆಮ್ಮೆ ಪಟ್ಟರು.
ಭಗವಂತ ಕೊರೊನಾ ಮಹಾಮಾರಿಯನ್ನು ನಮ್ಮೆಲ್ಲರ
ಅಹಂಕಾರವನ್ನು, ಕೆಟ್ಟ ಮನಸ್ಥಿತಿಯನ್ನು, ಆಡಂಬರದ ಜೀವನ
ಶೈಲಿಯನ್ನು, ಅತೀವ ಭ್ರಷ್ಟಚಾರವನ್ನು ತೊಲಗಿಸಲು ನೀಡಿರುವ
ಶಿಕ್ಷೆ ಎಂದು ನಂಬಿದ್ದೇನೆ. ಹಾಗಾಗಿ ನಾವೆಲ್ಲರೂ ಇದನ್ನು ಅರಿತು ಇರುವ
ನಾಲ್ಕು ದಿನಗಳಲ್ಲಿ ಸಮಾಜಕ್ಕಾಗಿ ಒಳ್ಳೆಯ ಕೆಲಸಗಳನ್ನು
ಮಾಡಬೇಕು, ಎಷ್ಟೇ ಆಸ್ತಿ ಅಂತಸ್ತು ಮಾಡಿದರು ಕೊನೆಗೆ
ನಮ್ಮನ್ನು ಉಳುವುದು ಆರಡಿ ಜಾಗದಲ್ಲಿ, ಹಾಗಾಗಿ ನಾವೆಲ್ಲರೂ
ಭೂಮಿಗೆ ಬರುವುದಕ್ಕೆ ಸಮಯ ನಿಗದಿ ಮಾಡಿಕೊಳ್ಳಬಹುದು,
ಆದರೆ ಹೋಗುವುದಕ್ಕೆ ನಿಗದಿಯಿಲ್ಲ ಎಂದು ಕಿವಿ ಮಾತು ಹೇಳಿದರು.
ನಿಕಟ ಪೂರ್ವ ಮುಖ್ಯಮಂತ್ರಿಗಳಾದ ಯಡಿಯೂರಪ್ಪ
ಅವರನ್ನು ನಾನು ಈ ಸಂದರ್ಭದಲ್ಲಿ ನೆನಪು
ಮಾಡಿಕೊಳ್ಳಲೇಬೇಕು. ಏಕೆಂದರೆ ಭದ್ರಾ ಕಾಡಾ ಇತಿಹಾಸದಲ್ಲಿ ಒಬ್ಬ
ಹೆಣ್ಣು ಮಗಳಿಗೆ ಅಧ್ಯಕ್ಷ ಗಾದಿ ನೀಡಿರಲಿಲ್ಲ. ಆದರೆ ಅವರು ನನ್ನ
ಹೋರಾಟವನ್ನು ಗುರುತಿಸಿ ಸೂಕ್ತ ಸ್ಥಾನ ಮಾನ ನೀಡಿ ನಿಮ್ಮ ಸೇವೆ
ಮಾಡಲು ಅವಕಾಶ ಕಲಿಸಿದ್ದಾರೆ. ಒಂದು ವೇಳೆ ಅವರು ಕೂಡ
ಗುರುತಿಸದಿದ್ದರೆ ನನ್ನ ಪ್ರತಿಭೆಯನ್ನು ತೋರಿಸಲು ವೇದಿಕೆ
ಸಿಗುತ್ತಿರಲಿಲ್ಲ ನನ್ನ ಕೊನೆಯ ಉಸಿರು ಇರುವವರೆಗೂ ನಾನು
ಅವರಿಗೆ ಋಣಿಯಾಗಿರುತ್ತೇನೆ ಎಂದು ನೆನಪು ಮಾಡಿಕೊಂಡರು.
ಸಹಕಾರ ಸಂಘದ ಅಧ್ಯಕ್ಷರಾದ ಗುರುಮೂರ್ತಿ ಅವರು
ಮಾತನಾಡಿ, ನೀವು ಅಧ್ಯಕ್ಷರಾದ ನಂತರ ಕಾಡಾ ಅಭಿವೃದ್ದಿ
ಪ್ರಾಧಿಕಾರದ ಕಾರ್ಯ ಚಟುವಟಿಕೆಗಳನ್ನು ರಾಜ್ಯಕ್ಕೆ ಪರಿಚಯಿಸಿದ್ದೀರಿ,
ಭದ್ರಾ ಜಲಾಶಯ ನಿರ್ಮಾಣವಾದ ನಂತರ ನೀರು ತಲುಪದ
ಜಾಗಗಳಿಗೆ ನೀರು ತಲುಪುವಂತೆ ಮಾಡಿ ರೈತ ಸ್ನೇಹಿಯಾಗಿದ್ದೀರಿ,
ನಿಮ್ಮನ್ನು ನೇಮಕ ಮಾಡಿ ನಮ್ಮ ಸೇವೆ ಮಾಡಲು ಕಳುಹಿಸಿಕೊಟ್ಟ
ಯಡಿಯೂರಪ್ಪ ಅವರಿಗೆ ಈ ಮೂಲಕ ಕೃತಜ್ಞತೆ ಅರ್ಪಿಸುತ್ತೇವೆ
ಎಂದು ಧನ್ಯತಾ ಭಾವ ಸಮರ್ಪಿಸಿದರು.
ನಮ್ಮ ಸಂಘದ ವ್ಯಾಪ್ತಿಯಲ್ಲಿ ಜಮೀನುಗಳಿಗೆ ಹೋಗುವ
ಅಚ್ಚುಕಟ್ಟು ರಸ್ತೆಗಳು ದುರಸ್ತಿಯ ಕಾರಣ ನಿತ್ಯ ಕೆಲಸಗಳಿಗೆ
ತೊಂದರೆಯಾಗಿದ್ದು, ರಸ್ತೆಗಳು ಅಭಿವೃದ್ಧಿ ಮಾಡಲು
ಆಧ್ಯತೆಯ ಮೇರೆಗೆ ಅನುದಾನ ನೀಡುವಂತೆ ಒತ್ತಾಯಿಸಿದಾಗ,
ಬರುವ ದಿನಗಳಲ್ಲಿ ನೂತನ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ
ಭದ್ರಾ ಅಚ್ಚುಕಟ್ಟು ಪ್ರಾಧಿಕಾರವನ್ನು ಮಾದರಿಯಾಗಿ ಅಭಿವೃದ್ಧಿ
ಮಾಡಲು ಸೂಕ್ತ ಅನುದಾನ ನೀಡುವಂತೆ ಮನವರಿಕೆ
ಮಾಡುತ್ತೇನೆ, ಒಂದು ವೇಳೆ ತಡವಾಗುವ ಮುನ್ಸೂಚನೆ
ಕಂಡುಬಂದರೆ ನಾಲೆಗಳಿಗೆ ಹರಿಸುತ್ತಿರುವ ನೀರನ್ನು ನಿಲ್ಲಿಸಿ
ಘಳಿಗೆಯ ದಿನದಿಂದ ಮತ್ತೊಮ್ಮೆ ನಮ್ಮ ವ್ಯಾಪ್ತಿಯ ಜಿಲ್ಲಾ
ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರನ್ನು ಭೇಟಿ ಮಾಡಿ
ಕೇಂದ್ರ ಸರ್ಕಾರದ ನರೇಗಾ ಅನುದಾನವನ್ನು ಬಳಸಿಕೊಂಡು
ರಸ್ತೆ ಅಭಿವೃದ್ಧಿ, ನಾಲಾ ಸ್ವಚ್ಚತೆಗೆ ಚಾಲನೆ ನೀಡುತ್ತೇನೆ ಎಂದು
ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕಾಶಿ ಲಿಂಗೇಶ್ವರ ನೀರು ಬಳಕೆದಾರರ
ಸಂಘದ ಅಧ್ಯಕ್ಷರಾದ ಗುರುಮೂರ್ತಿ ಅವರು, ನೀರಾವರಿ
ಇಲಾಖೆಯ ಅಧಿಕಾರಿಗಳಾದ ವಿಜಯ್, ಪರಮೇಶ್ವರಪ್ಪ ಹಾಗೂ
ಭದ್ರಾ ಕಾಡಾ ಸಹಾಯಕ ಕಾರ್ಯಪಾಲಕ ಅಭಿಯಂತರರಾದ
ನಾಗೇಂದ್ರ ಅವರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.