ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಶನಿವಾರ ನಗರದ ಮೆಹಬೂಬ್
ನಗರ, ಬೀಡಿ ಲೇಔಟ್ ಹಾಗೂ ಭಾಷಾ ನಗರಗಳಲ್ಲಿ ಲಸಿಕಾ
ಕೇಂದ್ರಗಳಿಗೆ ದಿಢೀರ್ ಭೇಟಿ ನೀಡಿ ಲಸಿಕಾ ಕಾರ್ಯದ ಪ್ರಗತಿ
ವೀಕ್ಷಿಸಿದರು.
ಈ ಭಾಗಗಳ ಮಸೀದಿ ಮುಂಭಾಗ ಆಯೋಜಿಸಿದ್ದ ಲಸಿಕಾ
ಕೇಂದ್ರಗಳಿಗೆ ಭೇಟಿ ಕೊಟ್ಟು ಲಸಿಕೆ ಪಡೆಯಲು ಬಂದವರಿಗೆ ಹಾಗೂ
ಸ್ಥಳೀಯ ಯುವಕರಿಗೆ ಲಸಿಕಾ ಅರಿವು ಹಾಗೂ ಔಚಿತ್ಯದ ಬಗೆಗೆ
ಮನವರಿಕೆ ಮಾಡಿಕೊಟ್ಟರು.
ಲಸಿಕೆ ಹಾಕಿಸಿಕೊಳ್ಳುವುದರಿಂದ ದೇಹಕ್ಕೆ ರೋಗನಿರೋಧಕ
ಶಕ್ತಿ ಹೆಚ್ಚುವುದರೊಂದಿಗೆ ಒಂದು ವೇಳೆ ಕೊರೊನಾ ಬಂದರು
ಹೆಚ್ಚು ಪರಿಣಾಮ ಬೀರುವುದಿಲ್ಲ ಎಂದು ಮನದಟ್ಟು
ಮಾಡುವುದರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಪಡೆಯಲು
ಪ್ರೇರೇಪಿಸಿದರು. ನಂತರ ಸ್ಥಳೀಯ ಮುಖಂಡರನ್ನು ಉದ್ದೇಶಿಸಿ
ಮಾತನಾಡಿ, ತಾವು ಲಸಿಕೆ ಪಡೆಯುವುದರೊಂದಿಗೆ ತಮ್ಮ
ಕುಟುಂಬದವರಿಗೂ ಹಾಗೂ ಅಕ್ಕ-ಪಕ್ಕದ ಮನೆಯವರಿಗೂ ಲಸಿಕೆ
ಹಾಕಿಸಿಕೊಳ್ಳುವಂತೆ ಮನದಟ್ಟು ಮಾಡಬೇಕು. ಕೆಲವರು ಒಂದು
ಡೋಸ್ ಲಸಿಕೆ ಪಡೆದಿದ್ದು, ಹಲವರು ಒಂದು ಡೋಸ್ ಲಸಿಕೆ ಪಡೆದಿಲ್ಲ.
ಹಾಗಾಗಿ ಈ ಭಾಗದಲ್ಲಿ ಲಸಿಕಾಕರಣ ಕುಂಠಿತವಾಗಿದ್ದು, ಹೆಚ್ಚು ಹೆಚ್ಚು
ಪ್ರೇರೇಪಿಸುವ ಮೂಲಕ ಲಸಿಕೆ ಹಾಕಿಸಿಕೊಳ್ಳಿ ಎಂದರು. ಮಸೀದಿಗಳಲ್ಲಿ
ಆಜಾನ್ ವೇಳೆ ಹಾಗೂ ನಂತರ ಲಸಿಕ ಬಗೆಗೆ ಹೆಚ್ಚಿನ ತಿಳಿವಳಿಕೆ ನೀಡುವ
ಮೂಲಕ ಲಸಿಕಾಕರಣಕ್ಕೆ ಕೈಜೋಡಿಸಿ ಎಂದರು.
ಈ ಭಾಗದ ಮುಖಂಡರು, ಯುವಕರು ಲಸಿಕೆ ಹಾಕಿಸುವ
ಸಂಬಂಧ ಜಿಲ್ಲಾಡಳಿತದೊಂದಿಗೆ ಸಹಕರಿಸುತ್ತಿರುವುದಕ್ಕೆ
ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅಲ್ಪ ಸಂಖ್ಯಾತರ ನಿಗಮದ ಜಿಲ್ಲಾ ಮ್ಯಾನೇಜರ್
ಸಲೀಂ ಪಾಷ, ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿ ಅಮಿತ್ ಬಿದರಿ ವಕ್ಫ್ ಅಧಿಕಾರಿ
ಸೈಯದ್ ಮೌಸಫ್ ಪಾಷ ಹಾಗೂ ಸ್ಥಳೀಯ ಮುಖಂಡರು ಇದ್ದರು.