ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯ ಸ್ಥಾನಕ್ಕೆ ಸ್ಥಳೀಯ
ಸಂಸ್ಥೆಗಳಿಂದ ಚುನಾವಣೆ ನಡೆಸುವ ನಿಮಿತ್ತ ದಾವಣಗೆರೆ
ಜಿಲ್ಲೆಯಾದ್ಯಂತ ಮತದಾನವು ಡಿ.10 ರಂದು ನಿಗಧಿಪಡಿಸಲಾಗಿದ್ದು,
ಸುಗಮ ಹಾಗು ಶಾಂತಿಯುತ ಮತದಾನಕ್ಕಾಗಿ ಡಿ. 07 ರಿಂದ ಡಿ. 10
ರವರೆಗೆ ಜಿಲ್ಲೆಯಾದ್ಯಂತ ಸಿಆರ್‍ಪಿಸಿ ಕಲಂ 144 ರನ್ವಯ ನಿಷೇಧಾಜ್ಞೆ
ಜಾರಿಗೊಳಿಸಲಾಗಿದೆ.
ಚುನಾವಣೆ ನಿಮಿತ್ತ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ
ಹಿತದೃಷ್ಠಿಯಿಂದ ಮತದಾನ ಪ್ರಕ್ರಿಯೆಯನ್ನು ಸುಸೂತ್ರವಾಗಿ
ನಡೆಸುವ ಸಲುವಾಗಿ ಜಿಲ್ಲೆಯಾದ್ಯಂತ ಡಿ.07 ರಂದು ಸಂಜೆ 4
ಗಂಟೆಯಿಂದ ಡಿ.10 ಸಂಜೆ 4 ಗಂಟೆಯವರೆಗೆ ಈ ಕೆಳಗೆ ಕಾಣಿಸಿದ
ಚಟುವಟಿಕೆಗಳಿಗೆ ನಿಷೇದಾಜ್ಞೆ ಜಾರಿ ಮಾಡಲಾಗಿದೆ.
ಜಿಲ್ಲೆಯಾದ್ಯಂತ ನಿಷೇಧಿತ ಅವಧಿಯಲ್ಲಿ ಕಾನೂನು ಬಾಹಿರವಾಗಿ
ಗುಂಪುಗೂಡುವುದು ಮತ್ತು ಸಾರ್ವಜನಿಕ ಸಭೆ
ನಡೆಸುವುದನ್ನು ನಿಷೇಧಿಸಲಾಗಿದೆ. ಮತದಾನ ನಡೆಯುವ
ಪ್ರದೇಶದಲ್ಲಿ 5 ಜನರಿಗಿಂತ ಹೆಚ್ಚಿನ ವ್ಯಕ್ತಿಗಳು
ಗುಂಪುಗೂಡಲು/ಒಟ್ಟಾಗಿ ಓಡಾಡಲು ಅನುಮತಿ ಇರುವುದಿಲ್ಲ.
ಆದಾಗ್ಯೂ ಬಾಗಿಲಿನಿಂದ ಬಾಗಿಲಿಗೆ ಮತ ಯಾಚಿಸುವ ಸಲುವಾಗಿ ಮನೆಯಿಂದ
ಮನೆಗೆ ಭೇಟಿ ನೀಡುವುದಕ್ಕೆ ನಿರ್ಬಂಧ ಇರುವುದಿಲ್ಲ. ಹೊರಗಿನ
ಮತಕ್ಷೇತ್ರದಿಂದ ಕರೆತಂದ ಮತ್ತು ಈ ಕ್ಷೇತ್ರಕ್ಕೆ
ಮತದಾರರಲ್ಲದೇ ಇರುವ ವ್ಯಕ್ತಿಗಳು ಹಾಗೂ ಮುಂತಾದ
ಅನುಮಾನಸ್ಪದ ವ್ಯಕ್ತಿಗಳ ಚಲನವಲನ ಬಗ್ಗೆ ತೀವ್ರ ನಿಗಾ
ವಹಿಸುವುದು. ಇಂತಹ ವ್ಯಕ್ತಿಗಳಿಂದ ಮತದಾರರನ್ನು ಪ್ರಭಾವ
ಬೀರುವ ಚಟುವಟಿಕೆಗಳು ಕಂಡುಬಂದಲ್ಲಿ ನಿಯಮಾನುಸಾರ
ಕ್ರಮ ಕೈಗೊಳ್ಳಲಾಗುವುದು.
ನಿಷೇಧಾಜ್ಞೆಯು ಸದುದ್ದೇಶದ ಶವಸಂಸ್ಕಾರ, ಮದುವೆ,
ಧಾರ್ಮಿಕ ಆಚರಣೆ ನಡೆಸಲು ಹಾಗೂ ದೇವಸ್ಥಾನ, ಚರ್ಚ್ ಹಾಗೂ
ಮಸೀದಿಗಳಿಗೆ ಪ್ರಾರ್ಥನೆಗೆ ತೆರಳುವವರಿಗೆ ಹಾಗೂ ಇನ್ನಿತರೆ
ಸಮಾರಂಭಗಳನ್ನು ನಡೆಸಲು ಸಂಬಂಧಪಟ್ಟ ಪೊಲೀಸ್
ಅಧಿಕಾರಿಗಳಿಂದ ಅನುಮತಿ ಪಡೆದವರಿಗೆ ಹಾಗೂ ಕಾರ್ಯಾಚರಣೆ
ಅಧಿಕಾರಿಗಳಿಗೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ
ಬೀಳಗಿ ಆದೇಶದಲ್ಲಿ ತಿಳಿಸಿದ್ದಾರೆ.