ಡಿಜಿಟಲ್ ತಂತ್ರಜ್ಞಾನ ಬಳಸಿಕೊಂಡು ಶಾಲಾ ಕಾಲೇಜುಗಳಲ್ಲಿ
ಅಳವಡಿಸಲಾಗುತ್ತಿರುವ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಬಳಕೆಯಿಂದ
ವಿದ್ಯಾರ್ಥಿಗಳ ಆಲೋಚನಾ ಮತ್ತು ಕಲ್ಪನಾ ಶಕ್ತಿ ಹೆಚ್ಚಿಸಲು
ಸಹಕಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು
ಹೇಳಿದರು.
ದಾವಣಗೆರೆ ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ನಗರದ ವಿವಿಧ
ಶಾಲೆಗಳು ಹಾಗೂ ಕಾಲೇಜುಗಳಲ್ಲಿ ಡಿಜಿಟಲ್ ತಂತ್ರಜ್ಞಾನ ಆಧಾರಿತ
ಸ್ಮಾರ್ಟ್ ವ್ಯವಸ್ಥೆ ಅಳವಡಿಕೆ ಕುರಿತು ಹಲವು ಶಾಲೆಗಳಿಗೆ
ಗುರುವಾರ ಭೇಟಿ ನೀಡಿ ಪರಿಶೀಲನೆ ಬಳಿಕ ಅವರು ವಿದ್ಯಾರ್ಥಿಗಳೊಂದಿಗೆ
ಸಂವಹನ ನಡೆಸಿದರು.
ಸ್ಮಾರ್ಟ್ ಕ್ಲಾಸ್ನ ಉಪಯುಕ್ತತೆ ಹಾಗೂ ಡಿಜಿಟಲ್
ತಂತ್ರಜ್ಞಾನವನ್ನು ವಿದ್ಯಾರ್ಥಿಗಳು ಅರ್ಥೈಸಿಕೊಂಡ ಬಗೆಯನ್ನು
ವಿದ್ಯಾರ್ಥಿಗಳೊಂದಿಗೆ ನೇರ ಸಂವಹನ ನಡೆಸಿ ಮಾತನಾಡಿದ ಅವರು,
‘ಸ್ಮಾರ್ಟ್ ಕ್ಲಾಸ್’ ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಮಟ್ಟವನ್ನು
ಉತ್ತಮಗೊಳಿಸುವ ಒಂದು ಅತ್ಯುತ್ತಮ ಮಾಧ್ಯಮವಾಗಿದ್ದು,
ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರಗತಿಯ ಹಾದಿಯಲ್ಲಿ ಸಾಗಬೇಕು.
ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ವಿದ್ಯಾರ್ಥಿಗಳ ಆಲೋಚನಾ ಮತ್ತು
ಕಲ್ಪನಾಶಕ್ತಿಯನ್ನು ಹೆಚ್ಚಿಸುವಲ್ಲಿ ಮಹತ್ತರ ಪಾತ್ರವಹಿಸುತ್ತದೆ
ಎಂದು ತಿಳಿಸಿದರು.
ದಾವಣಗೆರೆ ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ನಗರದ 61 ಶಾಲೆಗಳು
ಮತ್ತು 9 ಕಾಲೇಜುಗಳಲ್ಲಿ ಡಿಜಿಟಲ್ ತಂತ್ರಜ್ಞಾನ ಆಧಾರಿತ ಸ್ಮಾರ್ಟ್
ತರಗತಿಗಳನ್ನು ಅಳವಡಿಸಲಾಗಿದೆ. ಸ್ಮಾರ್ಟ್ಕ್ಲಾಸ್
ವೈಶಿಷ್ಟ್ಯತೆಯೆಂದರೆ, ಕ್ಲಾಸ್ ಶಿಕ್ಷಣ ವ್ಯವಸ್ಥೆಯು, ಕಂಪ್ಯೂಟರ್
ತಂತ್ರಜ್ಞಾನ ಆಧಾರಿತ ಪರಿಕರಗಳನ್ನು ಒಳಗೊಂಡಿದ್ದು,
ಪ್ರೊಜೆಕ್ಟರ್, ಸಿಸ್ಟಮ್, ಸ್ಪೀಕರ್, ಇಂಟರಾಕ್ಟಿವ್ ವೈಟ್ ಬೋರ್ಡ್,
ಇಂಟರಾಕ್ಟಿವ್ ಪ್ಯಾನೆಲ್, ಆನ್ ಲೈನ್ ಕ್ಲಾಸ್ ರೂಮ್ ಸೆಟಪ್, ಆಲ್-ಇನ್-ಒನ್
ಕಂಪ್ಯೂಟರ್ ಇತ್ಯಾದಿಗಳು ಸ್ಮಾರ್ಟ್ಕ್ಲಾಸ್ನ ಹಾರ್ಡ್ವೇರ್ ಘಟಕಗಳಾಗಿವೆ
ಎಂದರು.
ಈ ಸಂದರ್ಭದಲ್ಲಿ ಸ್ಮಾರ್ಟ್ ಸಿಟಿ ಲಿಮಿಟೆಡ್ನ ವ್ಯವಸ್ಥಾಪಕ
ನಿರ್ದೇಶಕರಾದ ರವೀಂದ್ರ ಬಿ. ಮಲ್ಲಾಪುರ,
ಮುಖ್ಯ ಅಭಿಯಂತರರಾದ ಸತೀಶ್, ಐಸಿಟಿ ಉಪ-ಪ್ರಧಾನ
ವ್ಯವಸ್ಥಾಪಕರಾದ ಸುನೀಲ್ ಕೆ. ವಿ., ವ್ಯವಸ್ಥಾಪಕರಾದ ಬಿ. ಮಾಲತೇಶ್
ಹಾಗೂ ಆಯಾ ಕಾಲೇಜಿನ ಪ್ರಾಂಶುಪಾಲರು,
ಮುಖ್ಯೋಪಾಧ್ಯಾಯರು, ಬೋಧಕ ಹಾಗೂ ಬೋಧಕೇತರ
ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ನಗರದ ಆಂಜನೇಯ ಬಡಾವಣೆಯ ಮಹಿಳಾ ಪದವಿ ಕಾಲೇಜು, ಐಟಿಐ
ಕಾಲೇಜು, ಕೆ.ಬಿ. ಬಡಾವಣೆಯ ಡಿ.ಜೆ.ವಿ. ಪ್ರೌಢಶಾಲೆ ಹಾಗೂ
ಕಾವೇರಮ್ಮ ಶಾಲೆಗಳಿಗೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಸ್ಮಾರ್ಟ್ ಕ್ಲಾಸ್
ಅಳವಡಿಕೆ ಕುರಿತು ಪರಿಶೀಲಿಸಿ ವಿದ್ಯಾರ್ಥಿಗಳೊಂದಿಗೆ ಸಂವಹನ
ನಡೆಸಿದರು.