ಶಿವಮೊಗ್ಗ :- ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೇ ನಾನು ಎಲ್ಲವನ್ನೂ ಪರಿಶೀಲಿಸಿದೆ ನಿಮ್ಮ ನಡೆ ಯಾಕೋ ವಿಭಿನ್ನವಾಗಿದೆ ಎಂದೆನಿಸುತ್ತಿದೆ,ನೀವು ನಡೆಸಿಕೊಳ್ಳುವಂತಹ ರೀತಿಯಲ್ಲಿ ಹಾಗೂ ನೀವೀಗ ಕೈಗೊಳ್ಳುತ್ತಿರುವ ತೀರ್ಮಾನಗಳು ಆತುರದಿಂದ ಯಾರ ಮಾತಿಗೂ ಮನ್ನಣೆ ನೀಡದೆ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದು ಸರಿಯಾಗಿಲ್ಲವೆಂದು ನಾನು ಹಾಗೂ ಹಲವು ಸಾಹಿತಿಗಳು ಮತ್ತು ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರುಗಳ ಅಭಿಪ್ರಾಯಗಳನ್ನು ಸಂಗ್ರಹಿಸಿ ಈ ಮಾತು ಹೇಳುತ್ತಿದ್ದೇನೆ..
ಜಿಲ್ಲೆ ಮತ್ತು ಗಡಿನಾಡ ಘಟಕಗಳ ಅಧ್ಯಕ್ಷರಾದ ನಾವುಗಳು ಚುನಾವಣೆಯಲ್ಲಿ ಗೆದ್ದು ನಿಮ್ಮ ಹಾಗೆ ಆಯ್ಕೆ ಆಗಿದ್ದು.
ನಿಮಗೆ ಮತನೀಡಿದ ಕೆಲವು ಆಜೀವ ಸದಸ್ಯರು ನಮಗೂ ಮತ ನೀಡಿದ್ದಾರೆ. ನಮಗೆ ಕನ್ನಡ ಪರವಾದ ಕೆಲಸಮಾಡುವ ಕಾರ್ಯಪಡೆ ನೇಮಿಸಿಕೊಳ್ಳಲು ವಿವೇಚನಾಧಿಕಾರ ನಮಗೂ ಇದೆ.
ನಮ್ಮ ಜಿಲ್ಲೆಯ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳನ್ನು ನೇಮಿಸುವುದರಲ್ಲಿ ನೀವು ತಲೆ ಹಾಕುವುದು ಬಿಟ್ಟು ನಿಮ್ಮ ಕಾರ್ಯವನ್ನು ನೀವು ಮಾಡಿ ನಮ್ಮ ಕಾರ್ಯ ನಮಗೆ ತಿಳಿದಿದೆ, ಸಲಹೆ ನೀಡಬಹುದು ಆದರೆ ಈ ವಿಚಾರದಲ್ಲಿ ತಾವುಗಳು ಆದೇಶ ಮಾಡುವ ರೀತಿ ನಡೆದುಕೊಳ್ಳುವುದು ತಪ್ಪು…
ನೀವು ಈಗ ಕನ್ನಡ ಸಾಹಿತ್ಯ ಪರಿಷತ್ತಿನ ಅಧಿಕಾರವನ್ನು ಹಿಡಿದಿದ್ದೀರಿ, ನಾವು ಈಗಾಗಲೇ ಮೂರು ದಶಕಗಳಿಂದಲೂ ಪರಿಷತ್ತಿನ ಕೆಲಸವನ್ನು ಮಾಡಿಕೊಂಡು ಬಂದಿದ್ದೇವೆ,ನಮ್ಮ ಹಕ್ಕನ್ನು ಕಿತ್ತುಕೊಳ್ಳಲು ಏಕೆ ಹವಣಿಸುತ್ತಿರುವಿರಿ. ನಿಬಂಧನೆಯಲ್ಲಿ ನೀಡಿದ ಅವಕಾಶವನ್ನು ಹತ್ತಿಕ್ಕುವ ನಿಮ್ಮ ಆಲೋಚನೆ ಸರಿಯಿಲ್ಲ.
ನಾವು ನೀವು ನೀಡುವ ಸಂಬಳದ ಉಂಬಳಿಗಳಲ್ಲ.
ನೀವು ನಮಗೆ ಅಧಿಕಾರಿಯಲ್ಲ. ನಿಮ್ಮಷ್ಟೇ ಜವಾಬ್ದಾರಿ ಕರ್ತವ್ಯ ನಮಗೂಯಿದೆ ನೆನಪಿರಲಿ ಸರ್. ನಿಮಗಿರುವ ಸೌಲಭ್ಯಗಳಿಲ್ಲದಿರಬಹುದು. ಆದರೆ ನಿಮಗಿಂತ ಕನ್ನಡ ಸಾಹಿತ್ಯ ಪರಿಷತ್ತಿಗೆ ನಮ್ಮ ಸೇವೆ ನಮಗೆ ಹೆಮ್ಮೆಯಿದೆ. ನಿಮಗೆಷ್ಟು ಗೌರವ ಬಯಸುವಿರೋ ಅದನ್ನು ಆಯ್ಕೆಯಾದ ಎಲ್ಲಾ ಅಧ್ಯಕ್ಷರು ಬಯಸುತ್ತೇವೆ.
ನಾವು ನೇಮಿಸಿದ ಪದಾಧಿಕಾರಿಗಳ ಪಟ್ಟಿಯನ್ನು ಅನುಮೋದನೆ ಪಡೆಯಿರಿ ಎಂದು ತಾವು ಹೇಳೋದು ಅಂದರೆ ಅದು ಸೌಜನ್ಯವಲ್ಲ ಹಾಗೂ ಅದನ್ನು ನಾವು ಸಹಿಸಿಕೊಳ್ಳುವುದಿಲ್ಲ.
ನೆನಪಿರಲಿ ಅಧ್ಯಕ್ಷರೇ ಇದು ಕನ್ನಡ ಸಾಹಿತ್ಯ ಪರಿಷತ್ತು ಪ್ರತಿಯೊಬ್ಬ ಕನ್ನಡಿಗನ ಸ್ವತ್ತು ಸುಖಾಸುಮ್ಮನೆ ತೊಂದರೆ ಕೊಡುವುದು ನಿಮ್ಮಂತವರ ಲಕ್ಷಣವಲ್ಲ ಹಾಗೂ ಅದು ಅಸ್ತ್ರವಲ್ಲ….
ಅದು ಸರ್ಕಾರದ ಇಲಾಖೆಯಂತೆ ವರ್ತಿಸಿದರೆ ಒಳ್ಳೇದು ಸಂಘರ್ಷದ ಹಾದಿ ತುಳಿಯಲು ಪ್ರೇರಣೆ ಮಾಡುತ್ತಿರುವ ಕುಕೃತ್ಯಕ್ಕೆ ತಾವು ಕೈಹಾಕದಿರುವುದು ಯೋಗ್ಯ.
ಕನ್ನಡ ಸಾಹಿತ್ಯ ಪರಿಷತ್ತು ಹಿತಕಾಯುವುದೇ ಆದರೆ ಯೋಚನೆಮಾಡಿ ಎಲ್ಲ ಜಿಲ್ಲಾಧ್ಯಕ್ಷರುಗಳ ಸಭೆಗಳನ್ನು ಕರೆಯಿರಿ ಆಗ ತೀರ್ಮಾನ ಮಾಡಿ ಈಗ ಹೊರಡಿಸಿರುವ ನಿಮ್ಮ ಸುತ್ತೋಲೆ ಹಿಂಪಡೆಯಿರಿ. ಅರೆಬೆಂದ ನಿಮ್ಮ ತೀರ್ಮಾನಗಳು ಸರಿಯಿಲ್ಲ..
ನೀವು ಹಿಟ್ಲರ್ ಅಲ್ಲ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡಮ್ಮನ ಸೇವಕರು ನಾವು…
ನಿಬಂಧನೆಗಳಿಗೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಬೈಲಾಕ್ಕೆ ಬದ್ಧರಾಗಿರುತ್ತೇವೆ. ನಿಮ್ಮ ಪೊಳ್ಳು ಹುನ್ನಾರಕ್ಕೆ ಪರಿಷತ್ತು ಬಲಿಕೊಡಬೇಡಿ. ನಾಲ್ವಡಿ ಕೃಷ್ಣರಾಜ ಒಡೆಯರು ಸ್ಥಾಪಿಸಿ ಹಲವಾರು ಕನ್ನಡದ ಮನಸ್ಸುಗಳು ಕಟ್ಟಿದ ಪರಿಷತ್ತು ತನ್ನದೇ ಆದ ಮಹತ್ವವನ್ನು ಪಡೆದಿದೆ. ಆದರೆ ಇದನ್ನು ನಿವೃತ್ತಿ ಅಧಿಕಾರಿಗಳ ಸಂಧ್ಯಾಕಾಲದ ತಾಣ ಮಾಡಬೇಡಿ. ನಾವು ಪ್ರೊ. ಚಂಪಾ, ಡಾ. ನಲ್ಲೂರು ಪ್ರಸಾದ್, ಶ್ರೀ ಪುಂಡಲೀಕ ಹಾಲಂಬಿ ಜೊತೆಗೆ ಕೆಲಸ ಮಾಡಿರುವೆವು. ಅವರೆಲ್ಲ ಒಳಿತು ಯೋಜನೆ ಮಾಡಿದರು. ನಾವೆಲ್ಲರೂ ಒಳ್ಳೆಯ ಕೆಲಸ ಮಾಡಿದೆವು. ನೀವು ನಮ್ಮನ್ನು ಹತ್ತಿಕ್ಕುವ ಕೃತ್ಯ ಮಾಡುತ್ತಿರುವುದು ಸರಿಯೇ ನೀವೇ ನಿಮ್ಮ ಎದೆತಟ್ಟಿಕೊಂಡು ಹೇಳಿ. ಈ ರೀತಿಯ ಸರ್ವಾಧಿಕಾರ ಸರಿಯಲ್ಲ ಮತ್ತೊಮ್ಮೆ ನಿಮ್ಮಂತವರನ್ನು ಆಯ್ಕೆ ಮಾಡದಿರಿ ಎನ್ನುವ ಸಂದೇಶ ನಮ್ಮ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರಿಗೆ ಸಾರದಿರಿ…..
ಡಿ. ಮಂಜುನಾಥ,
ಅಧ್ಯಕ್ಷರು
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಶಿವಮೊಗ್ಗ